– ರಾಘವೇಂದ್ರ ಅಡಿಗ ಎಚ್ಚೆನ್.
ಚಂದನವನದಲ್ಲಿ ಮತ್ತೆ ಶುಕ್ರ ದೆಸೆ ಆರಂಭವಾದಂತಾಗಿದೆ. ಖ್ಯಾತ ಉದ್ಯಮಿ ವಿಜಯ್ ಟಾಟಾ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಲು ಮುಂದಾಗಿದ್ದಾರೆ. ಬಹಳ ಅಚ್ಚುಕಟ್ಟಾಗಿ ಶರ್ಟನ್ ಹೋಟೆಲ್ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ರಾಜ್ಯದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆಗಮಿಸಿ, ಚಿತ್ರೋದ್ಯಮಕ್ಕೆ ಅನುಕೂಲ ವಾಗುವಂತಹ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆರು ಚಿತ್ರ ನಿರ್ಮಾಣ ಮಾಡುತ್ತಿರುವ ಇವರು ನಿರಂತರವಾಗಿ ಸಿನಿಮಾಗಳನ್ನ ಮಾಡಲಿ, ಚಿತ್ರೋದ್ಯಮಕ್ಕೆ ಸಹಕಾರಿಯಾಗಿ ನಿಲ್ಲಲಿ ಎಂದು ಶುಭ ಕೋರಿದರು.
ಇನ್ನು ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ರೋರಿಂಗ್ ಸ್ಟಾರ್ ಶ್ರೀಮುರಳಿ, ನಾದಬ್ರಹ್ಮ ಹಂಸಲೇಖ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಚಂದನವನದ ತಾರೆಯರಾದ ಕೃಷ್ಣ ಅಜಯ್ ರಾವ್, ಶರಣ್, ರಾಗಿಣಿ ದಿವೇದಿ, ಸಾಧು ಕೋಕಿಲಾ, ನಿರೂಪ ಭಂಡಾರಿ, ರಾಜವರ್ಧನ್ ಧೀರನ್ ರಾಮ್ ಕುಮಾರ್, ಶಶಾಂಕ್, ಆ ದಿನಗಳು ಚೇತನ್, ADGP ಡಿ .ರೂಪ, ಸೇರಿದಂತೆ ಹಿರಿಯ ಅಧಿಕಾರಿಗಳು, ಗಣ್ಯರು, ಸ್ನೇಹಿತರು ಉಪಸ್ಥಿರಿದ್ದರು.
ಖ್ಯಾತ ಉದ್ಯಮಿ ವಿಜಯ್ ಟಾಟಾ ಅವರ ಪತ್ನಿ ಅಮೃತ ಟಾಟಾ 2025ರ Mien ಮಿಸಸ್ ಇಂಡಿಯಾ ಪ್ರಶಸ್ತಿಯ ಕಿರೀಟವನ್ನು ಪುಣೆ hyatt ನಲ್ಲಿ ಪಡೆದುಕೊಂಡರು. ಪಂಜಾಬ್ ಮೂಲದ ಅಮೃತ ರವರಿಗೆ ಕರ್ನಾಟಕ ಬಹಳಷ್ಟು ಕೊಟ್ಟಿದೆಯಂತೆ. ಇಲ್ಲಿನ ಭಾಷೆ ಹಾಗೂ ಜನರ ಮೇಲೆ ಅಪಾರ ಪ್ರೀತಿ, ಗೌರವವಿದ್ದು, ಮೀಡಿಯಾ ಹಾಗೂ ಸಿನಿಮಾ ಕ್ಷೇತ್ರದಲ್ಲೂ ದೊಡ್ಡ ಸಾಧನೆ ಮಾಡಲು ಸಿದ್ಧರಾಗಿದ್ದಾರೆ. ಹಾಗೆ ತಮಗೆ ಸಿಕ್ಕ ಈ ಕ್ರೌನ್ ಅನ್ನ ಕ್ರೇಜಿಸ್ಟಾರ್ ರವಿಚಂದ್ರನ್ ಕೈಯಲ್ಲೇ ಮತ್ತೊಮ್ಮೆ ತಮ್ಮ ಮುಡಿಗೆ ಹಾಕಿಸಿಕೊಳ್ಳಬೇಕೆಂಬ ಆಸೆ ನೆರವೇರಿಸಿಕೊಂಡರು ಜೊತೆಗೆ ರಾಂಪ್ ವಾಕ್ ಕೂಡ ಮಾಡಿದರು. ವಿಶೇಷ ಎಂದರೆ ಮಿಸ್ ಇಂಡಿಯಾ ಆಗಿದ್ದ ಸುಂದರಿ ಜೂಲಿ ಚಾವ್ಲಾ ರನ್ನ ಪ್ರೇಮಲೋಕ ಚಿತ್ರಕ್ಕೆ ಕರೆತಂದಿದ್ದು ಕ್ರೇಜಿಸ್ಟಾರ್, ಹಾಗೆಯೇ ಮಿಸ್ ವರ್ಲ್ಡ್ ಆಗಿದ್ದ ಐಶ್ವರ್ಯ ರೈಗೂ ಬೆಂಗಳೂರಿನಲ್ಲಿ ಮತ್ತೊಮ್ಮೆ ಕ್ರೌನ್ ಧರಿಸಿದ್ದು ಕೂಡ ಕನಸುಗಾರ ರವಿಚಂದ್ರನ್. ಆರಂಭದಲ್ಲಿ ಯಶಸ್ಸಿನ ಕಿರೀಟವನ್ನು ಹೊತ್ತುಕೊಂಡು ಬಂದಂತಹ ಅಮೃತ ಟಾಟಾ ರವರ ಸಾಧನೆ, ಆಲೋಚನೆ ಬಗ್ಗೆ ಬಂದಂತಹ ಗಣ್ಯರಿಂದ ಮೆಚ್ಚುಗೆಯ ಜೊತೆ ಶುಭಾಶಯಗಳು ವ್ಯಕ್ತವಾಗಿತ್ತು. ಇದೇ ಸಂದರ್ಭದಲ್ಲಿ ಅಮೃತ ಟಾಟಾ ರವರ ಸುಪುತ್ರಿ ಫುಟ್ಬಾಲ್ ಆಟಗಾತಿ ಸಾಂಚಿ ಟಾಟಾ, ಕುಟುಂಬ ವರ್ಗ, ಸ್ನೇಹಿತರು, ಹಾಜರಿದ್ದರು.
ಇಡೀ ಕಾರ್ಯಕ್ರಮದ ಪ್ರಮುಖ ಗಣ್ಯರಾದಂತಹ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ರವರು ಖ್ಯಾತ ಉದ್ಯಮಿ ವಿಜಯ್ ಟಾಟಾ ಅವರ ನೂತನ ನಿರ್ಮಾಣ ಸಂಸ್ಥೆಯಾದ ಅಮೃತ ಸಿನಿ ಕ್ರಾಫ್ಟ್ ಉದ್ಘಾಟಿಸುವುದರ ಮೂಲಕ ಚಿತ್ರರಂಗಕ್ಕೆ ಅವರನ್ನ ಬರಮಾಡಿಕೊಂಡರು. ಅದರಲ್ಲೂ ವಿಶೇಷ ಎಂದರೆ ಒಟ್ಟೊಟ್ಟಿಗೆ ಒಂದೇ ದಿನ ಗುರುಪೂರ್ಣಿಮೆಯ ವಿಶೇಷ ದಿನದಂದು ಆರು ಚಿತ್ರಗಳ ನಿರ್ಮಾಣ ಮಾಡಲು ಸಜ್ಜಾಗಿದೆ.ಉದ್ಯಮಿ ವಿಜಯ್ ಟಾಟಾ ಅವರು, ನಾವು ಚಿತ್ರರಂಗಕ್ಕೆ ಬರಲು ಕಾರಣವೇ ನಮ್ಮ ಗಂಡ ಹೆಂಡ್ತಿ ಜಗಳ. ಅದರಲ್ಲೂ ವಿಶೇಷವಾಗಿ ನಮ್ಮ ಜಗಳ ಆರಂಭಗೊಳ್ಳುವುದೇ ಪ್ರೇಮಲೋಕ ಹಾಡಿನಿಂದ ಅಂತ್ಯವಾಗುವುದು ಅದೇ ಹಾಡಿನಿಂದ. ನನ್ನ ಹೆಂಡತಿ ಇತ್ತೀಚಿಗೆ ಈ ಪ್ರಶಸ್ತಿಗಳನ್ನು ಪಡೆದು ಬಂದ ನಂತರ ನಮ್ಮ ಮಾತುಕತೆ ನಿರಂತರವಾಗಿ ನಡೆಯುತ್ತಿತ್ತು, ಚಿತ್ರಗಳ ಬಗ್ಗೆ ಚರ್ಚೆ ಮಾಡುತ್ತಿರುವಾಗ ಬಹಳಷ್ಟು ಚಿತ್ರಗಳು ಬರುತ್ತವೆ, ಆದರೆ ಚಿತ್ರ ಬಿಡುಗಡೆ ಹಂತದ ಸಮಯದಲ್ಲಿ ಮಾರ್ಕೆಟಿಂಗ್ ವಿಚಾರದಲ್ಲಿ ಎಲ್ಲೋ ಸೋಲುತ್ತಿದ್ದಾರೆ ಎಂಬ ಅನುಮಾನ ಬಂದಿತ್ತು. ಒಂದಷ್ಟು ರಿಸರ್ಚ್ ಮಾಡಿದ ಮೇಲೆ ನಾವು ಕನ್ನಡ ಚಿತ್ರೋದ್ಯಮಕ್ಕೆ ಬರಬೇಕು, ಒಳ್ಳೆಯ ಚಿತ್ರಗಳನ್ನು ನಿರ್ಮಾಣ ಮಾಡಬೇಕು ಜೊತೆಗೆ ಚಿತ್ರೀಕರಣ ಅರ್ಧಕ್ಕೆ ನಿಂತಿರುವ ಚಿತ್ರಗಳಿಗೂ ಸಾಥ್ ಕೊಡಬೇಕು, ಹೊಸ ನಿರ್ದೇಶಕ, ಕಲಾವಿದರಿಗೆ ಅವಕಾಶ ಸಿಗುವಂತಾಗಬೇಕು, ಹಾಗೆಯೇ ಚಿತ್ರವನ್ನ ವಿತರಣೆ ಮಾಡುವುದಕ್ಕೂ ನಿರ್ಧಾರ ಮಾಡಿದ್ದೇವೆ ಎಂದರು.
ಅವಶ್ಯಕತೆ ಇರುವ ಚಿತ್ರ ನಿರ್ಮಾಪಕರಿಗೂ ಕೂಡ ಸಾಥ್ ನೀಡುವ ಉದ್ದೇಶವಿದೆ. ನಮ್ಮ ಉದ್ದೇಶ ಬಂದು ನಾಲ್ಕು, ಐದು ಚಿತ್ರ ಮಾಡುವುದಲ್ಲ ನಿರಂತರವಾಗಿ ಚಿತ್ರೋದ್ಯಮದಲ್ಲಿ ನಮ್ಮನ್ನ ನಾವು ತೊಡಗಿಸಿಕೊಳ್ಳಬೇಕೆಂಬುದು ನಿರ್ಧರಿಸಿದ್ದೇವೆ. ಈ ವಿಚಾರವಾಗಿ ಈಗಾಗಲೇ ಒಂದೆರಡು ಚಿತ್ರಗಳ ಜೊತೆ ಮಾತುಕತೆ ನಡೆದಿದೆ. ಮಾರ್ಕೆಟಿಂಗ್ ಸ್ಟ್ರಾಂಗ್ ಮಾಡಿಕೊಂಡು ಒಂದು ದೊಡ್ಡ ಮಟ್ಟದ ವೈಬ್ರೇಶನ್ ಮಾಡುವುದೇ ನಮ್ಮ ಉದ್ದೇಶ. ನಾವು ಕೂಡ ಬಿಸಿನೆಸ್ ಮಾಡಲು ಬಂದಿದ್ದೇವೆ. ಪ್ರತಿ ಶುಕ್ರವಾರವೂ ನಮ್ಮ ಸಂಸ್ಥೆಯು ಒಂದಲ್ಲ ಒಂದು ಕನ್ನಡ ಚಿತ್ರಗಳ ಜೊತೆ ಇದ್ದೇ ಇರುತ್ತೇವೆ. ಹಾಗೆಯೆ ಪರಭಾಷಾ ಚಿತ್ರಗಳಿಗೆ ಕಾಂಪಿಟೇಷನ್ ಕೊಡಲು ಸಿದ್ಧರಿದ್ದೇವೆ. ಒಳ್ಳೆಯ ಬೆಳವಣಿಗೆಗೆ ಚಿತ್ರೋದ್ಯಮ ಹಾಗೂ ಮಾಧ್ಯಮದವರ ಸಹಕಾರ, ಬೆಂಬಲ ಇರಲಿ ಎಂದು ಉದ್ಯಮಿ ವಿಜಯ್ ಟಾಟಾ ಅವರು ಕೇಳಿಕೊಂಡರು.
ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ವಿಶೇಷ ಗಣ್ಯರನ್ನು ಕರೆಸುವ ಮೂಲಕ ಒಂದೊಂದು ಪ್ರೊಡಕ್ಷನ್ ಯಾರು ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದರು.
1. ಪ್ರೊಡಕ್ಷನ್ 01 ಕೃಷ್ಣ ಅಜಯ್ ರಾವ್ ಹೀರೋ, ಹಾಗೂ ನಿರ್ದೇಶಕ.
2. ಪ್ರೊಡಕ್ಷನ್ 02 ಡಿ.ಎಸ್.ಪಿ ವರ್ಮ ನಿರ್ದೇಶಕ, ನಟ ವಿನಯ್ ರಾಜಕುಮಾರ್
3. ಪ್ರೊಡಕ್ಷನ್ 03 ನಿರ್ದೇಶಕ ಸಿಂಪಲ್ ಸುನಿ
4. ಪ್ರೊಡಕ್ಷನ್ 04 ರಿಷಬ್ ಆರ್ಯ ನಿರ್ದೇಶಕ, ನಟ ವಿಕ್ರಂ ರವಿಚಂದ್ರನ್
5. ಪ್ರೊಡಕ್ಷನ್ 05 ಪ್ರಶಾಂತ್ ಸಿದ್ಧಿ ನಿರ್ದೇಶಕ , ನಟ ವಿಕಿ ವರುಣ್
6. ಪ್ರೊಡಕ್ಷನ್ 06 ಮಂಜು ಸ್ವರಾಜ್ ನಿರ್ದೇಶಕ.
ಈ ಆರು ಚಿತ್ರಗಳು ಅಧಿಕೃತವಾಗಿ ಘೋಷಣೆಯಾಗಿದ್ದು, ವಿಶೇಷವಾಗಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ರವರಿಗಾಗಿ ವಿಜಯ್ ಟಾಟಾ 07ನೇ ಚಿತ್ರ ನಿರ್ಮಾಣ ಮಾಡಲು ಸಿದ್ದರಾಗಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರು, ನಮ್ಮ ಚಿತ್ರೋದ್ಯಮದಲ್ಲಿ ಉತ್ತಮ ಚಿತ್ರಗಳು ನಿರಂತರವಾಗಿ ಬರುತ್ತಿದೆ. ಎಲ್ಲೋ ಕೆಲವೊಮ್ಮೆ ಚಿತ್ರಗಳು ಸೋತಿರಬಹುದು, ಗೆಲುವಿನ ಉಮ್ಮಸಿನಲ್ಲಿ ನಾವು ಸಾಗಬೇಕು, ಇವತ್ತು ವಿಜಯ್ ಟಾಟಾ ಒಟ್ಟುಗೆ ಆರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದು, ಇದು ಫಿಲಂ ಇಂಡಸ್ಟ್ರಿಗೆ ಒಳ್ಳೆಯ ಬೆಳವಣಿಗೆ. ಇವತ್ತಿನ ಹೊಸ ಪೀಳಿಗೆಯ ನಿರ್ದೇಶಕರು, ನಟರು ಆಸಕ್ತಿಯಿಂದ ಕೆಲಸ ಮಾಡಿ ಎನ್ನುತ್ತಾ, ನಿರ್ಮಾಣ ಸಂಸ್ಥೆಯ ಪರವಾಗಿ ನಾನು ಎಲ್ಲಾ ನಿರ್ದೇಶಕರಿಗೆ ಒಂದು ಗಡುವನ್ನ ನೀಡುತ್ತೇನೆ, ಚಿತ್ರ ಶೂಟಿಂಗ್ ದಿನದಿಂದ ಆರು ತಿಂಗಳಲ್ಲಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಬೇಕು. ನಿರ್ಮಾಣ ಸಂಸ್ಥೆ ಸಾಲು ಸಾಲು ಚಿತ್ರಗಳನ್ನು ಮಾಡುವಂತಾಗಬೇಕು, ನೀವು ಪೇಪರ್ ವರ್ಕ್ ಮಾಡಿ ಹರಿದು ಬಿಸಾಕಿ, ಆದರೆ ಖರ್ಚು ಮಾಡುವ ಹಣವನ್ನು ಹರಿಯಬೇಡಿ, ಎಚ್ಚರಿಕೆಯಿಂದ ಕೆಲಸ ಮಾಡಿ ಎಂದರು.
ನಂತರ ನಾನೇ ಈ ಒಂದು ಸಂಸ್ಥೆಗೆ ದೊಡ್ಡ ಚಿತ್ರವನ್ನ ನನ್ನ ಸಾರಥ್ಯದಲ್ಲಿ ಮಾಡಿಕೊಡುತ್ತೇನೆ ಎನ್ನುತ್ತಾ ವಿಜಯ್ ಟಾಟಾ ರವರಿಗೆ ವಿಜಯ ನಿಮ್ಮದಾಗಲಿ ಯಾರಿಗೂ ಟಾಟಾ ಮಾಡುವುದು ಬೇಡ ಎಂದು ಹೇಳಿದರು. ಈ ಮಾತಿಗೂ ಒಂದು ಕಾರಣವಿದೆ, ಈಗಾಗಲೇ ಹಲವಾರು ನಿರ್ಮಾಣ ಸಂಸ್ಥೆಗಳು 05 ರಿಂದ 10 ಚಿತ್ರಗಳನ್ನು ಏಕಕಾಲದಲ್ಲಿ ನಿರ್ಮಾಣ ಮಾಡುತ್ತೇವೆ ಎಂದಿದ್ದನ್ನು ನೆನಪಿಸಿಕೊಳ್ಳಬಹುದು. ಹಾಗೆಯೇ ನಟ ಶ್ರೀಮುರಳಿ ಕೂಡ ಅಮೃತ ಸಿನಿ ಕ್ರಾಫ್ಟ್ ನಿರ್ಮಾಣ ಸಂಸ್ಥೆಯವರ ಆಲೋಚನೆ ಅದ್ಭುತವಾಗಿದೆ, ಒಳ್ಳೆ ಉದ್ದೇಶದಿಂದ ಬಂದಿದ್ದಾರೆ. ಅದನ್ನ ಎಲ್ಲರೂ ಸದುಪಯೋಗ ಪಡಿಸಿಕೊಂಡು ಮುಂದೆ ಸಾಗುವಂತಾಗಲಿ. ಚಿತ್ರರಂಗವನ್ನು ನಾವೆಲ್ಲರೂ ಸೇರಿ ಬೆಳೆಸೋಣ ಎಂದು ಕೇಳಿಕೊಂಡರು. ಇನ್ನು ಈ ಕಾರ್ಯಕ್ರಮಕ್ಕೆ ಬಂದಂತ ವಾಣಿಜ್ಯ ಮಂಡಳಿಯ ಅಧ್ಯಕ್ಷರು ನರಸಿಂಹಲು, ನಿರ್ಮಾಪಕರ ಸಂಘದ ಅಧ್ಯಕ್ಷರು ಉಮೇಶ್ ಬಣಕಾರ್, ನಿರ್ಮಾಪಕ ಕೆ. ಮಂಜು ಸೇರಿದಂತೆ ಹಲವರು ಈ ಒಂದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.