– ರಾಘವೇಂದ್ರ ಅಡಿಗ ಎಚ್ಚೆನ್
ಚಿತ್ರರಂಗಕ್ಕೆ ಪ್ರತಿಭಾನ್ವಿತ ನಿರ್ದೇಶಕರು, ಕಲಾವಿದರ ಎಂಟ್ರಿ ಮುಂದುವರಿದಿದೆ. ಕೆಲವರಿಗೆ ಬಣ್ಣದ ಲೋಕ ಕೈಹಿಡಿದರೆ, ಹಲವರು ಒಂದೆರಡು ಸಿನಿಮಾ ಮಾಡಿ ಸುಮ್ಮನಾಗುತ್ತಾರೆ. ನಿರಂತರ ಪರಿಶ್ರಮ, ವಿಶ್ವಾಸ ಅತ್ಯಗತ್ಯ. ಇದೀಗ ‘ಹಚ್ಚೆ’ ಅನ್ನೋ ಶೀರ್ಷಿಕೆಯ ಹೊಸ ಚಿತ್ರತಂಡವೊಂದು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ. ನಿರ್ದೇಶಕ ಯಶೋಧರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಅಭಿಮನ್ಯು ನಾಯಕರಾಗಿ ನಟಿಸಿರುವ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ತಂಡ ಸಜ್ಜಾಗುತ್ತಿದೆ.
ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಹೊತ್ತಲ್ಲಿ ನಿರ್ದೇಶಕ ಯಶೋಧರ ಅವರೇ ಬರೆದಿರುವ “ವಿಘ್ನೇಶ್ವರಾಯ” ಎಂಬ ಹಾಡು ಅನಾವರಣಗೊಂಡಿದೆ. ವಿವೇಕ್ ಚಕ್ರವರ್ತಿ ಸಂಗೀತ ನೀಡಿರುವ ಹಾಗೂ ಶಿವಂ ಅವರು ಹಾಡಿರುವ ಈ ಸುಮಧುರ ಹಾಡನ್ನು ಮಾಧ್ಯಮದ ಮಿತ್ರರೆಲ್ಲ ಸೇರಿ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಬಿಡುಗಡೆಯಾದ ಕ್ಷಣದಿಂದಲೇ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬಳಿಕ ನಿರ್ದೇಶಕ ಯಶೋಧರ ಮಾತನಾಡಿ, ಹಚ್ಚೆ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ. “ಹಚ್ಚೆ” ಹೆಸರಿನಲ್ಲೇ ಕುತೂಹಲವಿದೆ. ನಮ್ಮ ಚಿತ್ರಕ್ಕೆ ಈ ಶೀರ್ಷಿಕೆ ಇಟ್ಟಿರುವುದೇಕೆ ಎನ್ನುವುದನ್ನು ಚಿತ್ರದಲ್ಲಿ ತಿಳಿಸಿದ್ದೇವೆ. ಇದು ಒಂದು ನಿರ್ದಿಷ್ಟ ಜಾನರ್ನ ಚಿತ್ರವಲ್ಲ. ಲವ್, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಅಭಿಮನ್ಯು ಎಂಬ ನವನಟ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ ಅವರ ಅಭಿನಯ ನೋಡಿದವರು ಇದು ಅವರ ಮೊದಲ ಚಿತ್ರ ಅಂತಾ ಹೇಳುವುದಿಲ್ಲ.
ಇನ್ನೂ ನಾಯಕಿ ಆದ್ಯ ಪ್ರಿಯ, ನಟಿ ಅನುಪ್ರೇಮ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ತುಂಬಾ ಸೊಗಸಾಗಿದೆ. ತಂತ್ರಜ್ಞರ ಸಹಕಾರವಂತೂ ಅಪಾರ. ನಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಸೆಟ್ನಲ್ಲೇ ನಡೆದಿದೆ. ಕಲಾ ನಿರ್ದೇಶಕ ಶಂಕರ್ ಅವರ ನೇತೃತ್ವದಲ್ಲಿ ಏಳು ಅದ್ದೂರಿ ಸೆಟ್ಗಳನ್ನು ನಿರ್ಮಿಸಲಾಗಿತ್ತು. ಆದರೆ ಶಂಕರ್ ಅವರು ಇಂದು ನಮ್ಮೊಂದಿಗಿಲ್ಲ. ಅದೊಂದು ಬೇಸರದ ಸಂಗತಿ. ನಮ್ಮ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದರು.
ಯುವ ನಟ ಅಭಿಮನ್ಯು ಮಾತನಾಡಿ, ನಾನು ಮೂಲತಃ ಮೈಸೂರಿನವನು. ರಂಗಭೂಮಿ ನಟ. ಸಾಕಷ್ಟು ಜನಪ್ರಿಯ ನಾಟಕಗಳಲ್ಲಿ ಅಭಿನಯಿಸಿದ್ದೇನೆ. “ಅಂಜನಿ ಪುತ್ರ” ಸೇರಿದಂತೆ ಅನೇಕ ಚಿತ್ರಗಳಲ್ಲೂ ಸಹ ಕಲಾವಿದನಾಗಿ ನಟಿಸಿದ್ದೇನೆ. ನನ್ನ ಪ್ರತಿಭೆ ಗುರುತಿಸಿ ಯಶೋಧರ ಅವರು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿದ್ದಾರೆ. ನನ್ನ ಪಾತ್ರವಂತೂ ತುಂಬಾ ಚೆನ್ನಾಗಿದೆ. ಹೊಸತಂಡದ ಹೊಸಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ಕೇಳಿಕೊಂಡರು.
ಅಶ್ವ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಾಣ ಆಗಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡಿದ್ದಾರೆ. ಯಾಸಿನ್ ಕ್ಯಾಮರಾ ವರ್ಕ್ ಇದ್ದು, ಸ್ಟಾರ್ ನಾಗಿ ಈ ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಂದ್ರು ಅವರ ಸಾಹಸ ನಿರ್ದೇಶನವಿದೆ. ಶೂಟಿಂಗ್ ಮುಗಿಸಿರೋ ಹಚ್ಚೆ ಚಿತ್ರ ಮುಂದಿನ ತಿಂಗಳು ಬಿಡುಗಡೆ ಆಗಲಿದೆ.