ಯಾವುದೇ ಒಂದು ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಮತ್ತು ಅದನ್ನು ಯಶಸ್ವಿಗೊಳಿಸಲು ಪ್ರೀತಿಗಿಂತಲೂ ಹೆಚ್ಚಿನ ಅವಶ್ಯಕತೆ ಏನಿದೆ, ಅದನ್ನು ತಿಳಿದುಕೊಳ್ಳುವ ಆಸಕ್ತಿ ನಿಮಗಿಲ್ಲವೇ.....?
ಅನನ್ಯಾ 22 ವರ್ಷದ ಸುಂದರ, ಟ್ಯಾಲೆಂಟೆಡ್ ಹಾಗೂ ಸ್ವತಂತ್ರ ವಿಚಾರದ ಯುವತಿ. ಬಾಲ್ಯದಿಂದ ಹಿಡಿದು ಈವರೆಗೂ ಅವಳು ತನ್ನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುತ್ತಾ ಬಂದಿದ್ದಾಳೆ. ಆ ಬಳಿಕ ಬೇರೆ ಯುವಕ ಯುವತಿಯರಿಗೆ ಆಗುವಂತೆ ಅವಳಿಗೂ ಪ್ರೀತಿ ಉಂಟಾಯಿತು. ಸ್ವತಂತ್ರ ಮನೋಭಾವದ ಅನನ್ಯಾ ಪ್ರೀತಿಯ ಸಂಕೋಲೆಯಲ್ಲಿಯೇ ತನ್ನ ಗುರುತನ್ನು ಹುಡುಕತೊಡಗಿದಳು.
ತನ್ನ ಬಾಯ್ ಫ್ರೆಂಡ್ ಜೊತೆಗೆ ಅನನ್ಯಾ ಸಪ್ತವರ್ಣದ ಕನಸನ್ನು ಹೆಣೆಯಲು ಆರಂಭಿಸಿದ್ದಳು. ತನ್ನ ಹವ್ಯಾಸ, ಬಟ್ಟೆ ಧರಿಸುವ ವಿಧಾನ ಹೀಗೆ ಎಲ್ಲವನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿ ಬದಲಿಸಿಕೊಂಡಳು. ಆ ಬಳಿಕ ಒಡೆದ ಹೃದಯದೊಂದಿಗೆ ಖಿನ್ನತೆಗೆ ತುತ್ತಾದಳು.
ದಿವ್ಯಾ ಬಾಲ್ಯದಿಂದಲೇ ಒಂದು ಕನಸು ಕಾಣುತ್ತಾ ಬಂದಿದ್ದಾಳೆ. ಅದೆಂದರೆ ತನ್ನ ಜೀವನದಲ್ಲಿ ಒಬ್ಬ ರಾಜಕುಮಾರ ಬಂದೇ ಬರುತ್ತಾನೆಂಬ ನಂಬಿಕೆ ಅವಳಿಗಿತ್ತು. ಅಕ್ಕಪಕ್ಕದಲ್ಲಿ ಸಂಬಂಧಿಕರಲ್ಲಿ ಅನೇಕ ಪ್ರೇಮ ಪ್ರಕರಣಗಳನ್ನು ಅವಳು ಕಂಡಿದ್ದಳು. ಬಾಯ್ ಫ್ರೆಂಡ್ ಇಲ್ಲದ ತನ್ನ ಜೀವನ ವ್ಯರ್ಥ ಎಂದು ಅವಳಿಗೆ ಅನಿಸತೊಡಗಿತು. ಇದೇ ವಿಚಾರಧಾರೆಯ ಕಾರಣದಿಂದ ಅವಳೊಬ್ಬ ವಿಚಿತ್ರ ಖಯಾಲಿಯ ಹುಡುಗನೊಬ್ಬನ ಸುಳಿಗೆ ಸಿಲುಕಿದಳು.
ಪ್ರತಿಯೊಬ್ಬ ಹುಡುಗಿ ಅವಳು ಗ್ರಾಮೀಣ ಭಾಗದವಳೇ ಆಗಿರಬಹುದು ಅಥವಾ ನಗರಪ್ರದೇಶದವಳು, ತನಗೊಬ್ಬ ಸಂಗಾತಿ ಇದ್ದರಷ್ಟೇ ತನ್ನ ಜೀವನ ಪೂರ್ಣ ಎಂದು ಅವಳಿಗೆ ಏಕೆ ಅನಿಸುತ್ತಿರುತ್ತದೆ? ಇದರ ಹಿಂದೆ ಅಡಗಿರುವುದು ಅದೇ ಹಳೆಯ ಯೋಚನೆ, ಎಲ್ಲಿಯವರೆಗೆ ಅವಳು ವಿವಾಹವಾಗುವುದಿಲ್ಲಿ, ಅಲ್ಲಿಯವರೆಗೆ ಅವಳ ಜೀವನ ಪೂರ್ಣಗೊಳ್ಳುವುದಿಲ್ಲ ಎಂದು ಅಂದುಕೊಳ್ಳಾಗುತ್ತದೆ.
ಬಹಳಷ್ಟು ಹಳ್ಳಿಗಳಲ್ಲಿ ಈಗಲೂ ಕೂಡ ಅನೇಕ ಹುಡುಗಿಯರು ಓದುಲ ಉದ್ದೇಶ ಮದುವೆಯಾಗಲೆಂದೇ. ತಾವು ಓದದಿದ್ದರೆ ಒಳ್ಳೆಯ ಹುಡುಗ ಸಿಗುವುದಿಲ್ಲ ಎನ್ನುವುದು ಅವರ ಅನಿಸಿಕೆ ಆಗಿರುತ್ತದೆ. ಅದೇ ಮಹಾನಗರದಲ್ಲಿ ಹುಡುಗಿಯೊಬ್ಬಳು ನೌಕರಿ ಮಾಡುವುದು ಒಬ್ಬ ಒಳ್ಳೆಯ ಹುಡುಗನ ಜೊತೆ ಮದುವೆಯಾಗಲು ಅತ್ಯಾವಶ್ಯಕವಾಗಿದೆ.
ಅಂದರೆ ಹುಡುಗಿಯರ ಜೀವನ ಪಯಣದಲ್ಲಿ ಪುರುಷನೆಂಬ ಜೀವಕ್ಕೆ ಮಹತ್ವವಿದೆ. ಅವರ ಹೆಚ್ಚಿನ ಕಾರ್ಯಕಲಾಪ ಪುರುಷ ಸ್ನೇಹಿತರು, ಪ್ರೇಮಿ ಅಥವಾ ಗಂಡನ ಆಸುಪಾಸು ಸುತ್ತುತ್ತಿರುತ್ತದೆ. ಪುರುಷನೆಂಬ ಸೂತ್ರ ಅವರಿಂದ ದೂರವಾಗುತ್ತಿದ್ದಂತೆ ಅವರ ಅಸ್ತಿತ್ವವೇ ಗೌಣವಾಗುತ್ತದೆ.
ಒಂದು ವಿಫಲ ಪ್ರೇಮ ಪ್ರಕರಣದ ಕಾರಣದಿಂದ ಹುಡುಗಿಯರು ತಮ್ಮ ಜೀವನವನ್ನು ಅಂತ್ಯಗೊಳಿಸುತ್ತಾರೆ. ಇದರ ಹಿಂದಿದೆ ಅದೇ ಕಂದಾಚಾರದ ಯೋಚನೆ, ಮಹಿಳೆ ಒಬ್ಬಳೇ ತನ್ನನ್ನು ತಾನು ನೋಡಿಕೊಳ್ಳಲು ಸಾಧ್ಯವೇ ಎಂದು. ಏಕಾಂಗಿ ಮಹಿಳೆಯ ಜೊತೆ `ಪಾಪ' ಎಂಬ ಶಬ್ದ ಏಕೆ ಸೇರಿಕೊಳ್ಳುತ್ತೋ ಏನೋ? ನಾವು ನಮ್ಮ ಹುಡುಗಿಯರ ಮನಸ್ಸಿನಲ್ಲಿ ನೀವು ಮಹಿಳೆಯರಾಗಿರುವುದು ಯಾವಾಗ ಸಾರ್ಥಕವಾಗುತ್ತದೆಯೆಂದರೆ, ನಿಮ್ಮ ಜೀವನದಲ್ಲಿ ಪುರುಷನೊಬ್ಬ ಜೊತೆ ಇದ್ದಾಗ, ಮಾತ್ರ ಎಂದು ಏಕೆ ಒತ್ತಿ ಒತ್ತಿ ಹೇಳುತ್ತಿದ್ದೇವೋ ಏನೋ?
ಒಂದಿಷ್ಟು ಆಳವಾಗಿ ಯೋಚಿಸುವುದಾದರೆ, ಮದುವೆಯ ಬಳಿಕ ಹುಡುಗಿಯರಷ್ಟೇ ತಮ್ಮನ್ನು ತಾವು ಅಡಿಯಿಂದ ಮುಡಿಯವರೆಗೆ ಬದಲಾವಣೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಅವರಿಗೆ ಬಾಲ್ಯದಿಂದಲೇ ಪ್ರೀತಿಯೆಂದರೆ ತ್ಯಾಗ, ಅದರಿಂದ ಒಂದಿಷ್ಟು ಅವಮಾನವಾದರೂ ಸಹಿಸಿಕೊಳ್ಳಲು ಸಿದ್ಧರಾಗಬೇಕು ಎಂದು ಕಲಿಸಿಕೊಡಲಾಗುತ್ತದೆ.





