ಮಾನ್‌ ಸೂನ್‌ ಶುರುವಾದ ಮೇಲೆ ವಿಶೇಷವಾಗಿ ಮಕ್ಕಳನ್ನು ಕಾಡು ರೋಗಗಳು ಹೆಚ್ಚುತ್ತವೆ. ಈ ಸಂದರ್ಭದಲ್ಲಿ ಮನೆಯ ಅಕ್ಕಪಕ್ಕ ಜಮೆಗೊಂಡ ನೀರಲ್ಲಿ ಸೊಳ್ಳೆ ಕ್ರಮೇಣ ಹೆಚ್ಚತೊಡಗುತ್ತದೆ. ಇದರಿಂದ ಡೆಂಗೂ, ಮಲೇರಿಯಾ, ಚಿಕನ್‌ ಗುನ್ಯಾ ಇತ್ಯಾದಿ ರೋಗಗಳು ಮಹಾಮಾರಿಯಾಗಿ ಹಬ್ಬುತ್ತವೆ. ಮತ್ತೊಂದು ಕಡೆ ಬಟ್ಟೆ, ಗೋಡೆ, ವಾತಾವರಣದಲ್ಲಿ ಹರಡಿದ ಆರ್ದ್ರತೆಯಿಂದಾಗಿ ಬ್ಯಾಕ್ಟೀರಿಯಾ ಸಹ ಬೇಗ ಹೆಚ್ಚುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಹೈಜೀನ್‌ ಉಳಿಸಿಕೊಳ್ಳಲು, ಸೊಳ್ಳೆಗಳ ವಿರುದ್ಧ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಬೇಕು. ಅದರಲ್ಲೂ ಈ ಮಳೆಗಾಲದಲ್ಲಿ ಸಣ್ಣ ಮಕ್ಕಳ ಆರೋಗ್ಯ ರಕ್ಷಣೆ ದೊಡ್ಡ ಸವಾಲೇ ಸರಿ.

ಈ ಕುರಿತಾಗಿ ಮಕ್ಕಳ ತಜ್ಞರ ಸಲಹೆಗಳ ಬಗ್ಗೆ ತಿಳಿಯೋಣ. ಸೊಳ್ಳೆ ಓಡಿಸಲು ಕಾಯಿಲ್, ಸ್ಪ್ರೇಗಳು ಪರಿಣಾಮಕಾರಿ ನಿಜ, ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಕಟ್ಟಿಟ್ಟ ಬುತ್ತಿ! ಹೀಗಾಗಿ ಮಕ್ಕಳನ್ನು ಎಚ್ಚರಿಕೆಯಿಂದ ಹೀಗೆ ಕಾಪಾಡಿಕೊಳ್ಳಿ : 6 ತಿಂಗಳು ಹಾಗೂ ಇನ್ನೂ ಚಿಕ್ಕ ಕೂಸನ್ನು ಸೊಳ್ಳೆ, ಕೀಟಗಳಿಂದ ರಕ್ಷಿಸಲು ಸದಾ ಬೆಚ್ಚಗಿನ ಮೈ ತುಂಬು ಉಡುಗೆ, ಸೊಳ್ಳೆಪರದೆ ಬಳಸಿರಿ. ಇಂಥ ಮಕ್ಕಳನ್ನು ಎತ್ತಿಕೊಳ್ಳುವ ಮೊದಲು, ನಿಮ್ಮ ಕೈಯನ್ನು ಸ್ಯಾನಿಟೈಸರ್‌ ನಿಂದ ಶುಚಿಗೊಳಿಸಿ. ಆಗಾಗ ಉತ್ತಮ ಲಿಕ್ವಿಡ್‌ ಸೋಪಿನಿಂದ ಕೈಗಳನ್ನು ತೊಳೆಯುತ್ತಿರಿ. ಮಕ್ಕಳ ಇಮ್ಯುನಿಟಿ ಸಹಜವಾಗಿಯೇ ಕಡಿಮೆ ಇರುತ್ತದೆ, ಈ ಕಾರಣ ಅವು ಬೇಗ ರೋಗಕ್ಕೆ ತುತ್ತಾಗುತ್ತವೆ. ಹಾಗೆಯೇ ಸಾಧ್ಯವಾದಷ್ಟೂ ಮಕ್ಕಳ ಕೈಗಳು ಶುಭ್ರವಾಗಿರುವಂತೆ ಮಾಡಿ. ಮಕ್ಕಳು ಯಾವ ವಸ್ತುವನ್ನು ಕಂಡರೂ ತಕ್ಷಣ ಬಾಯಿಗೆ ಹಾಕಿಕೊಳ್ಳುತ್ತವೆ. ಹೀಗಾಗಿ ಮಕ್ಕಳ ಕೈಗಳನ್ನು ಆಗಾಗ ಮೆಡಿಕೇಟೆಡ್‌ ಸೋಪ್‌ ಸಲ್ಯೂಶನ್‌ ನಿಂದ ಶುಚಿಗೊಳಿಸಿ, ಬೆಚ್ಚನೆ ಟವೆಲ್ ‌ನಿಂದ ಒರೆಸುತ್ತಿರಿ.

ಮಕ್ಕಳಿಗೆ ಈ ಸಂದರ್ಭದಲ್ಲಿ ಲೂಸ್‌ ಫಿಟ್‌ ನ ಕಾಟನ್‌ ಡ್ರೆಸ್ಸೇ ಸರಿ. ಇದು ಅವರ ಕೈ ಕಾಲುಗಳನ್ನು ಸಂಪೂರ್ಣ ಕವರ್ ಮಾಡುವಂತಿರಲಿ. ಆಗ ಸೊಳ್ಳೆ ಅವರನ್ನು ಕಚ್ಚಲಾಗದು. ಮಗುವಿಗೆ ಬಟ್ಟೆ ತೊಡಿಸುವ ಮೊದಲು, ಅದರ ಮೈ ಪೂರ್ತಿ ಒಣಗಿದೆ ತಾನೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಒದ್ದೆ ಚರ್ಮದ ಮೇಲೆ ಬ್ಯಾಕ್ಟೀರಿಯಾ ಬೇಗ ಬೆಳೆಯುತ್ತದೆ, ಇದರಿಂದ ಮಗುವಿನ ಚರ್ಮಕ್ಕೆ ಬೇಗ ಫಂಗಲ್ ಇನ್‌ ಫೆಕ್ಷನ್‌ ಆಗಬಹುದು. ಮಸ್ಕಿಟೋ ಪ್ಯಾಚೆಸ್‌ ಸೊಳ್ಳೆಗಳನ್ನು ಮಕ್ಕಳಿಂದ ದೂರವಿರಿಸಲು ಬಲು ಉಪಕಾರಿ. ಇದನ್ನು ನೀವು ಮಗುವಿನ ಬಟ್ಟೆ, ಕ್ರಿಬ್‌, ಬೆಡ್‌, ಸ್ಟ್ರೋಲರ್‌ ಗಳ ಮೇಲೆ ಬಳಸಿಕೊಳ್ಳಿ.

ಸೊಳ್ಳೆಗಳನ್ನು ದೂರ ಓಡಿಸಲು ಮಸ್ಕಿಟೋ ರೆಪ್ಲೆಂಟ್‌ ಬಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ನೈಸರ್ಗಿಕ ಘಟಕಗಳಿಂದ ತಯಾರಾದ ರೆಪ್ಲೆಂಟ್‌ ಇದ್ದು, ಸುಲಭವಾಗಿ ಅದು ಸೊಳ್ಳೆ ಓಡಿಸುತ್ತದೆ. ಆದರೆ ಇದರ ಸತತ ಬಳಕೆಯಿಂದ ಮಗುವಿನ ಮೈ ಮೇಲೆ ಗಂಧೆ, ದದ್ದು, ಮೆಮೊರಿ ಲಾಸ್‌, ಉಸಿರಾಟದ ತೊಂದರೆ ಇತ್ಯಾದಿ ಆಗಬಹುದು. ಹೀಗಾಗಿ ಮಗುವಿನ ಸುರಕ್ಷತೆಗೋಸ್ಕರ ಲೆಮೆನ್‌ ಗ್ರಾಸ್‌, ಸಿಟ್ರೊನೆಲಾ, ನೀಲಗಿರಿ ತೈಲ, ಲ್ಯಾವೆಂಡರ್‌ ಅಂಶಗಳುಳ್ಳ ರೆಪ್ಲೆಂಟ್ಸ್ ಮಾತ್ರ ಖರೀದಿಸಿ.

ನಿಮ್ಮ ಮಗುವಿನ ಸ್ಟ್ರೋಲರ್‌, ಕ್ಯಾರಿಯರ್‌ಯಾ ಕ್ರಿಬ್‌ ನ್ನು ಸೊಳ್ಳೆಪರದೆಯಿಂದ ಸದಾ ಕವರ್‌ ಮಾಡಿ. ಆಗ ಸೊಳ್ಳೆಯಿಂದ ಕಾಟವೇ ಇರದು. ನೀವು ಮನೆಯಲ್ಲಿರಲಿ ಅಥವಾ ಹೊರಗೇ ಹೋಗಿರಲಿ, ಸೊಳ್ಳೆಪರದೆಯ ಬಳಕೆ ಅನಿವಾರ್ಯ. ಹೀಗೆ ಮಾಡಿ ಮಕ್ಕಳನ್ನು ಸೊಳ್ಳೆಯಿಂದ ರಕ್ಷಿಸಿ. ಮನೆಯ ಸ್ವಚ್ಛತೆ, ಶುಭ್ರತೆ ಕಡೆ ಸದಾ ಹೆಚ್ಚಿನ ಗಮನಹರಿಸಿ. ತೊಟ್ಟಿಕ್ಕುವ ನೀರಿನ ಟ್ರೇ, ಗಿಡಗಳ ಕುಂಡಗಳಲ್ಲಿನ ನೀರು ಇತ್ಯಾದಿ ಜಮೆಗೊಳ್ಳಲು ಬಿಡಬೇಡಿ. ಬಾತ್‌ ರೂಮಿನಲ್ಲಿ ಸಹ ನೀರು ನಿಲ್ಲದಂತೆ ಎಚ್ಚರವಹಿಸಿ. ಎಲ್ಲೂ ನೀರು ಲೀಕ್‌ ಆಗದಂತೆ ಎಚ್ಚರವಹಿಸಿ. ಇಂಥ ನೀರಿನಿಂದ ಸೊಳ್ಳೆಯ ಸಂತತಿ ಬೇಗ ಹೆಚ್ಚುತ್ತದೆ.

ನಾವು ಮನೆಯನ್ನು ಎಷ್ಟೇ ಕ್ಲೀನಾಗಿ ಇಟ್ಟುಕೊಂಡಿದ್ದರೂ, ಮಗು ನಮ್ಮ ಕಣ್ಣು ತಪ್ಪಿಸಿ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳದೆ ಇರದು. ಹೀಗಾಗಿ ನಿಮ್ಮ ಮಗುವಿನ ಸಂಪರ್ಕಕ್ಕೆ ಬರುವ ಪ್ರತಿ ಪದಾರ್ಥ ಶುಭ್ರವಾಗಿರುವಂತೆ ನೋಡಿಕೊಳ್ಳಿ. ಮುಖ್ಯವಾಗಿ ಆಟಿಕೆ, ಮನೆಯ ಹಾಲ್ ನಲ್ಲಿ ಹರಡಿರಬಹುದಾದ ಸಣ್ಣ ಪುಟ್ಟ ಪದಾರ್ಥ…. ಇತ್ಯಾದಿ ಆಟಿಕೆಗಳನ್ನು ತೊಳೆದು, ಒರೆಸಿ ನಂತರವೇ ಆಡಲು ಕೊಡಿ.

ಬೇಬಿ ವೈಪ್ಸ್ ಜೊತೆ ನಿಮ್ಮ ಮಗುವಿನ ನಾಜೂಕಾದ ಚರ್ಮಕ್ಕೆ ಹೊಂದುವಂಥ ಮೈಲ್ಡ್ ಬೇಬಿ ಸೋಪ್‌ ಮಾತ್ರ ಬಳಸಿರಿ. ನವಜಾತ ಶಿಶುವಿಗಂತೂ ಆಲ್ಕೋಹಾಲ್ ‌ಫ್ರೀ ನೀರನ್ನು ಆಧರಿಸಿದ ವೈಪ್ಸ್ ಮಾತ್ರವೇ ಕಡ್ಡಾಯವಾಗಿ ಬಳಸಬೇಕು. ಇಂಥ ವೈಪ್ಸ್ ಮಾತ್ರವೇ ಮಕ್ಕಳಿಗೆ ಹೆಚ್ಚಿನ ಪೋಷಣೆ, ರಕ್ಷಣೆ ಒದಗಿಸಬಲ್ಲದು.

ಇಷ್ಟೆಲ್ಲ ಮಾಡಿಯೂ ಮಗುವಿಗೆ ಡೆಂಗೂ ಆಗಿಹೋದರೆ, ಅದರ ಲಕ್ಷಣಗಳನ್ನು ಚೆನ್ನಾಗಿ ಗುರುತಿಸಿಕೊಂಡು, ಆದಷ್ಟು ಬೇಗ ಚಿಕಿತ್ಸೆ ಕೊಡಿಸಿರಿ. ಜ್ವರ, ವಾಂತಿಭೇದಿ, ತಲೆನೋವು, ತುಟಿಗಳ ಒಣಗುವಿಕೆ, ಮೂತ್ರ ವಿಸರ್ಜನೆಯಲ್ಲಿ ಕೊರತೆ, ರಾಶೆಸ್‌, ಊತಗಳು ಇತ್ಯಾದಿ ಡೆಂಗೂವಿನ ಮಾಮೂಲಿ ಲಕ್ಷಣಗಳಾಗಿವೆ. ಇದನ್ನು ನಿರ್ಲಕ್ಷಿಸದೆ, ತಕ್ಷಣ ಮಗುವನ್ನು ವೈದ್ಯರ ಬಳಿ ಕರೆದೊಯ್ಯಿರಿ.

ಸಣ್ಣ ಮಕ್ಕಳಾದ ಕಾರಣ ಅವು ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಲಾರವು. ಹೀಗಾಗಿ ರೋಗಗಳಿಂದ ದೂರವಿಡಲು ಮಗುವಿನ ಸಂಪೂರ್ಣ ಯೋಗಕ್ಷೇಮ ಮನೆಯವರೆಲ್ಲರದು. ಹೀಗಾಗಿ ಮಳೆಗಾಲದಲ್ಲಿ ಈ ಮೇಲಿನ ಸಲಹೆ ಅನುಸರಿಸಿ, ನಿಮ್ಮ ಮಗುವನ್ನು ಡೆಂಗೂ, ಮಲೇರಿಯಾ ಕಾಡದಂತೆ ಕಾಪಾಡಿಕೊಳ್ಳಿ!

ಜಿ. ಸುಮಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ