– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಎಕ್ಕ
ನಿರ್ದೇಶನ: ರೋಹಿತ್ ಪದಕಿ
ನಿರ್ಮಾಣ: ಪಿ.ಆರ್.ಕೆ., ಜಯಣ್ಣ ಕಂಬೈನ್ಸ್ ಹಾಗೂ ಕೆ.ಆರ್.ಜಿ.
ತಾರಾಂಗಣ: ಯುವ ರಾಜ್ಕುಮಾರ್, ಸಂಜನಾ ಆನಂದ್, ಸಂಪದಾ, ಅತುಲ್ ಕುಲಕರ್ಣಿ, ಆದಿತ್ಯ, ಶ್ರುತಿ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು ಮುಂತಾದವರು.
ರೇಟಿಂಗ್: 3.5/5
ಯುವ ರಾಜ್ ಕುಮಾರ್, ಸಂಜನಾ ಹಾಗೂ ಸಂಪದಾ.. ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ರೋಹಿತ್ ಪದಕಿ ರವರ ನಿರ್ದೇಶನದ ‘ಎಕ್ಕ’ ಚಿತ್ರ ಈ ವಾರ (ಜುಲೈ ೧೮) ಬಿಡಿಗಡೆ ಆಗಿದೆ. ಚಿತ್ರವು ದೊಡ್ಡ ಮಟ್ಟದಲ್ಲಿಯೇ ಅದ್ದೂರಿಯಾಗಿ ತೆರೆಗೆ ಬಂದಿದ್ದು, ಒಳ್ಳೆಯ ಓಪನಿಂಗ್ ಸಹ ಪಡೆದುಕೊಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಹಳ್ಳಿಯಲ್ಲಿ ತನ್ನ ಪಾಡಿಗೆ ತಾನಿದ್ದ ಕಥಾ ನಾಯಕ ಮುತ್ತುವಿನ ಕಥೆಯನ್ನು ಬೆಂಗಳೂರಿಗೆ ತಂದು, ನೈಜತೆಗೆ ಹತ್ತಿರ ಎನಿಸುವ ಭೂಗತ ಲೋಕವನ್ನು ಪರದೆ ಮೇಲೆ ಸೃಷ್ಟಿ ಮಾಡಿದ್ದಾರೆ ನಿರ್ದೇಶಕರು. ಕಥಾ ನಾಯಕ ಮುತ್ತುವಿನ ಎರಡು ರೀತಿಯಲ್ಲಿನ ಬದುಕಿಗೆ ನಾಯಕಿಯರಾಗಿ ನಟಿಸಿರುವ ಸಂಜನಾ ಹಾಗೂ ಸಂಪದಾ.. ಇಬ್ಬರೂ ಇಷ್ಟವಾಗುತ್ತಾರೆ.
ವಾರಣಾಸಿಯಲ್ಲಿ ಶುರು ಆಗುವ ಚಿತ್ರದ ಕಥೆ, ನಂತರ ಪಾರ್ವತಿಪುರ ಎಂಬ ಹಳ್ಳಿ, ಆಮೇಲೆ ಬೆಂಗಳೂರು, ಅಲ್ಲಿನ ಮಿಡಲ್ ಕ್ಲಾಸ್ ಜೀವನ ಶೈಲಿ, ಭೂಗತ ಜಗತ್ತು.. ಎಲ್ಲವೂ ಚಂದ ಇದೆ.. ಹಳ್ಳಿಯಲ್ಲಿ ಇರುವ ಹೀರೋ ಬಡತನದ ಕುಟುಂಬದವನು. ದುಡಿಯಬೇಕು ಎಂದು ಬೆಂಗಳೂರಿಗೆ ಬಂದು ಅನಿವಾರ್ಯ ಕಾರಣದಿಂದ ಭೂಗತ ಲೋಕಕ್ಕೆ ಎಂಟ್ರಿ ಪಡೆಯುತ್ತಾನೆ. ಹಳ್ಳಿಯಲ್ಲಿರುವ ತಾಯಿಗೆ ಮಗ ಈ ರೀತಿ ರೌಡಿ ಆಗಿದ್ದಾನೆ ಎಂಬುದರ ಅರಿವು ಇರುವುದಿಲ್ಲ. ಕೆಟ್ಟದ್ದನ್ನು ನೋಡಬೇಡ, ಕೇಳಬೇಡ, ಮಾತನಾಡಬೇಡ ಎಂದು ಹೇಳಿ ಹೇಳಿ ಅಮ್ಮ ಬೆಳೆಸಿರುತ್ತಾಳೆ. ಒಳ್ಳೆತನದಿಂದ ಜೀವನದ ಸಾಗಿಸೋಕೆ ಹೊರಟವರಿಗೆ ನೂರಾರು ಅಗ್ನಿಪರೀಕ್ಷೆ. ಇಂತಹ ಪರೀಕ್ಷೆಗಳನ್ನು ಎದುರಿಸುತ್ತಾ ಸಾಗುವ ಹಾದಿಯಲ್ಲೇ ಮುತ್ತು ಕೈಗೆ ರಕ್ತ ಅಂಟುತ್ತದೆ. ಬೆಂಗಳೂರಿನ ಭೂಗತಲೋಕದಲ್ಲಿ ಗುರುತಿಸಿಕೊಂಡಿರುವ ನಾಯಕ, ಮುತ್ತು ವಾರಣಾಸಿಯಲ್ಲಿ ತಲೆ ಮರೆಸಿಕೊಂಡಿರುತ್ತಾನೆ. ಪ್ರೇಯಸಿಯಿಂದಲೇ ಪೊಲೀಸರ ಕೈಗೆ ಸಿಕ್ಕಿಬೀಳುವಂತಾಗುತ್ತದೆ. ಬಳಿಕ ಅವನ ಹಳೆಯ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮಗುವಿನಂತ ಮನಸ್ಸಿನ ಮುತ್ತು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ಮೃಗದಂತಾಗುತ್ತಾನೆ. ಅದಕ್ಕೆ ಕಾರಣ ಏನು? ಪೊಲೀಸರಿಂದ ಬಂಧನವಾದ ಆತನ ಮುಂದಿನ ಕಥೆ ಏನು ಅಂತ ತೆರೆಯ ಮೇಲೆ ನೋಡಬೇಕು.
ಈ ನಡುವೆ ಮುತ್ತಿವಿಗೆ ನಂದಿನಿ(ಸಂಜನಾ ಆನಂದ್) ಜೊತೆ ಲವ್ ಆಗುತ್ತದೆ. ಆದರೆ ಭೂಗತ ಲೋಕದ ಸಂಪರ್ಕದೊಡನೆ ಅವನ ಈ ಪ್ರೀತಿ ಹೆಚ್ಚು ದಿನ ಉಳಿಯುವುದಿಲ್ಲ ನಂದಿನಿ ಬದಲಾಗಿ ಅವನ ಬಾಳಲ್ಲಿ ಮಲ್ಲಿಕಾ(ಸಂಪದಾ) ಆಗಮನವಾಗುತ್ತದೆ.
ಇದು ಈ ಹಿಂದೆ ಬಂದಿದ್ದ “ಜೋಗಿ”, “ವಂಶಿ” ಚಿತ್ರಗಳ ಸಾಲಿನಲ್ಲಿ ನಿಲ್ಲಬಹುದಾದ ಸಿನಿಮಾ ಕಥೆಯಾಗಿದೆ. ಯುವ ರಾಜ್ಕುಮಾರ್ ಅವರು ಎರಡು ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಹುಡುಗನ ಮುಗ್ದತೆ ಹಾಗೂ ಭೂಗತ ಲೋಕದ ರೌಡಿಯಾಗಿ ಅವರು ಅಭಿನಯಿಸಿದ್ದಾರೆ. ಇದರೊಡನೆ ಅವರು ಲವರ್ ಬಾಯ್ ಕೂಡ ಹೌದು. ಮೊದಲ ಚಿತ್ರಕ್ಕೆ ಹೋಲಿಸಿದರೆ ಯುವ ಅವರ ಅಭಿನಯ ತುಸು ಪಕ್ವವಾಗಿದೆ. ಡ್ಯಾನ್ಸ್ ಹಾಗೂ ಫೈಟ್ಸ್ ವಿಚಾರದಲ್ಲಿ ಜಬರ್ದಸ್ತ್ ಪರ್ಫಾರ್ಮನ್ಸ್ ನೀಡಿದ್ದಾರೆ.
ಯುವ ರಾಜ್ಕುಮಾರ್ ಅವರ ಪಾತ್ರ ಹೈಲೈಟ್ ಆಗಿದ್ದರೆ ಅವರ ತಾಯಿಯಾಗಿ ಶ್ರುತಿ ಪಾತ್ರವು ಗಮನ ಸೆಳೆಯುತ್ತದೆ. ನಾಯಕಿಯರಾದ ಸಂಜನಾ ಆನಂದ್ ಮತ್ತು ಸಂಪದಾ ಅಭಿನಯ ಸೊಗಸಾಗಿದೆ. ಸಂಜನಾ ಕೆಲವೊಂದು ಕಡೆಗಳಲ್ಲಿ “ಲೇಡಿ ಡಾನ್” ಎನ್ನುವಂತೆ ಕಾಣಿಸಿಕೊಂಡಿದ್ದಾರೆ. ಸಂಪದಾ ಓರ್ವ ಬಾರ್ ಗರ್ಲ್ ಆಗಿ ಕಾಣಿಸಿಕೊಂಡಿದ್ದು ಚಿತ್ರ ಪ್ರಾರಂಭವಾಗುವುದು ಹಾಗೂ ಮುಕ್ತಾಯವಾಗುವುದು ಇವರ ಪಾತ್ರದೊಡನೆ ಎನ್ನುವುದು ವಿಶೇಷ. ಕಥೆಗೆ ತಿರುವು ನೀಡುವಂತಹ ಪಾತ್ರದಲ್ಲಿ ಡಾನ್ ಮಸ್ತಾನ್ ಭಾಯ್ (ಅತುಲ್ ಕುಲಕರ್ಣಿ) ಮತ್ತು ಎಸಿಪಿ ರುದ್ರ ಪ್ರತಾಪ್ (ಡೆಡ್ಲಿ ಆದಿತ್ಯ) ಇದ್ದರೆ ಕಾಮಿಡಿ ಟಚ್ ಕೊಡಲು ಸಾಧು ಕೋಕಿಲ ಇದ್ದಾರೆ. ಪೂರ್ಣಚಂದ್ರ ಮೈಸೂರು, ಹರಿಣಿ ಹಾಗೂ ಸೂರಿ ಸಹ ತಮ್ಮ ಪಾತ್ರಗಳಲ್ಲಿ ಉತ್ತಮವಾಗಿ ಕಾಣಿಸಿದ್ದಾರೆ.
ಚರಣ್ ರಾಜ್ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಸಿನಿಮಾದ ಪ್ಲಸ್ ಪಾಯಿಂಟ್. ಈಗಾಗಲೇ ವೈರಲ್ ಆಗಿರುಇವ ‘ಬ್ಯಾಂಗಲ್ ಬಂಗಾರಿ..’ ತೆರೆ ಮೇಲೆ ನೋಡಲು ಸೊಗಸಾದ ಅನುಭವ ಕೊಡುತ್ತದೆ ಸತ್ಯ ಹೆಗಡೆ ಅವರ ಛಾಯಾಗ್ರಹಣ ಉತ್ತಮವಾಗಿದೆ. ಬೆಂಗಳೂರಿನ ಗಲ್ಲಿಯಿಂದ ವಾರಣಾಸಿ ಘಾಟ್‌ವರೆಗೂ ಚೆಂದವಾಗಿರುವುದನ್ನೆಲ್ಲಾ ಸೆರೆ ಹಿಡಿದಿದೆ. “ಅನ್ನಕ್ಕೆ ಎಲೆ ಇಲ್ಲ ಅಂದ್ರು ಬೆಲೆ ಇದೆ”, “ಎಲ್ಲಕ್ಕಿಂತ ದೊಡ್ಡಾಟ ಉಸಿರಾಟ” ಎನ್ನುವ ಸಣ್ಣ ಸಣ್ಣ ಡೈಲಾಗ್ಸ್ ಗಮನ ಸೆಳೆಯುತ್ತೆ.
ಲವ್, ಸೆಂಟಿಮೆಂಟ್, ಆ್ಯಕ್ಷನ್, ಕಾಮಿಡಿ ಮುಂತಾದ ಅಂಶಗಳ ಪ್ಯಾಕೇಜ್ ರೀತಿ ಫಸ್ಟ್ ಹಾಫ್ ಮೂಡಿ ಬಂದಿದ್ದು, ಸೆಕೆಂಡ್ ಹಾಫ್ ನಲ್ಲಿ ಕಥೆ ಮಾಸ್ ಆಗುತ್ತದೆ. ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ನಿರ್ದೇಶಕರು ಹೇಳಿದ್ದು, ಚಿತ್ರವನ್ನು ಒಂದೇ ಜಾನರ್ ನಲ್ಲಿ ಇಡಲು ಸಾಧ್ಯವಿಲ್ಲ, ನಂದಿನಿ ಪಾತ್ರ ಹಠಾತ್ತನೆ ಮರೆಯಾಗುತ್ತದೆ. ಕ್ಲೈಮ್ಯಾಕ್ಸ್ ಸಹ ಹಠಾತ್ತನೆ ಸಿನಿಮಾ ಕೊನೆಯಾದಂತೆ ಭಾಸ ನೀಡುತ್ತದೆ. ಹಾಗಾಗಿ ಚಿತ್ರಕಥೆ ಇನ್ನಷ್ಟು ಬಿಗುವಾಗಿದ್ದರೆ ಚೆನ್ನಾಗಿತ್ತು ಎನಿಸುತ್ತದೆ. ಒಟ್ಟಾರೆಯಾಗಿ ಇದೊಂದು ಮನರಂಜನೆ ನೀಡುವ ಕಥೆ. ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ ಮಿಸ್ ಮಾಡದೇ ನೋಡಿ…