ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಜೂನಿಯರ್
ನಿರ್ದೇಶಕ: ರಾಧಾಕೃಷ್ಣ ರೆಡ್ಡಿ
ನಿರ್ಮಾಣ: ರಜನಿ ಕೊರ್ರಪಾಟ
ತಾರಾಂಗಣ: ಕಿರೀಟಿ ರೆಡ್ಡಿ, ಶ್ರೀಲೀಲಾ, ಜೆನಿಲಿಯಾ ಡಿಸೋಜಾ, ರವಿಚಂದ್ರನ್, ಅಚ್ಯುತ್ ಕುಮಾರ್, ರಾವ್ ರಮೇಶ್ ಮೊದಲಾದವರು
ರೇಟಿಂಗ್: 3/5
ಕಿರೀಟಿ ರೆಡ್ಡಿ-ಶ್ರೀಲೀಲಾ ನಟನೆಯ ‘ಜೂನಿಯರ್’ ಸಿನಿಮಾ ಇಂದು(ಜುಅಲಿ ೧೮) ಬಿಡುಗಡೆ ಆಗಿದೆ. ಸಿನಿಮಾ ಹೇಗಿದೆ? ಇಲ್ಲಿ ಓದಿ..
ಕಾಲೇಜಿನಲ್ಲಿ, ಉದ್ಯೋಗದಲ್ಲಿ ಜೂನಿಯರ್ ಆಗಿರುವ ಅಭಿ (ಕಿರೀಟಿ ರೆಡ್ಡಿ) ತನ್ನ ಬುದ್ದಿವಂತಿಕೆಯಿಂದ ಎದುರಾಳಿಗಳನ್ನು ಮಣಿಸುವಯುವಕ, ಕೋದಂಡಪಾಣಿ (ರವಿಚಂದ್ರನ್) ಹಾಗೂ ಶ್ಯಾಮಲಾ (ಸುಧಾರಾಣಿ) ಮಗನಾದ ಅಭಿ ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಳ್ಳುತ್ತಾನೆ. ಅಪ್ಪನ ಆಶ್ರಯದಲ್ಲೇ ಬೆಳೆಯುವ ಅಭಿಗೆ ಅಪ್ಪನ ಅತಿಯಾದ ಪ್ರೀತಿ, ಕಾಳಜಿ ಕಿರಿಕಿರಿಯಾಗುತ್ತದೆ. ಅದಕ್ಕಾಗಿ ಅವನು ಕಾಲೇಜು ವ್ಯಾಸಂಗದ ಸಮಯದಲ್ಲಿ ತಂದೆಯಿಂದ ದೂರವಾಗಲು ತೀರ್ಮಾನಿಸುತ್ತಾನೆ. ಆ ಸಮಯಲ್ಲೇ ಅವನಿಗೆ ಸ್ಫೂರ್ತಿ (ಶ್ರೀಲೀಲಾ) ಪರಿಚಯವಾಗುತ್ತದೆ, ಪ್ರೀತಿಯಾಗುತ್ತದೆ. ಮುಂದೆ ಉದ್ಯೋಗಕ್ಕೆ ಸೇರಿದಾಗ ವಿಜಯ ಸೌಜನ್ಯ (ಜೆನಿಲಿಯಾ) ಅವನ ಸಂಸ್ಥೆಯ ಮುಖ್ಯಸ್ಥೆಯಾಗಿರುತ್ತಾಳೆ. ತನ್ನೆಲ್ಲಾ ಕೆಲಸದಲ್ಲಿಯೂ ಮೊದಲ ಅನುಭವ ನೆನಪಿನಲ್ಲಿ ಉಳಿಯುವಂತಿರಬೇಕು ಎನ್ನುವುದು ಅಭಿಯ ನಿಲುವು.
ಅದಕ್ಕಾಗಿ ಅವನು ಪ್ರತಿ ಕೆಲಸದಲ್ಲಿಯೂ ಹೊಸ ನೆನಪನ್ನು ಹುಡುಕುತ್ತಾನೆ. ಇದೇ ಅವನ ಜೀವನದಲ್ಲಿ ನಾನಾ ತಿರುವು ನೀಡುತ್ತದೆ. ಅದಲ್ಲದೆ ತಂದೆ ಕೋದಂಡಪಾಣಿಯ ಹಿನ್ನೆಲೆ ಬದುಕಿನ ಕಥೆ ಅರಿವಾದಾಗ ಅಭಿ ಜೀವನದಲ್ಲಿ ಮತ್ತೊಂದು ಮಹತ್ವದ ಟ್ವಿಸ್ಟ್ ಸಿಗುತ್ತದೆ. ಅದೆಲ್ಲದರ ಮಧ್ಯೆ ಶತ್ರುಗಳ ಕಾಟ, ಇದೆಲ್ಲದರಿಂದ ಅವ್ನು ಹೇಗೆ ಪಾರಾಗುತ್ತಾನೆ? ತಂದೆ ಮಗ ಮತ್ತೆ ಒಂದಾಗುತ್ತಾರೆಯೆ? ಇದೆಲ್ಲವನ್ನೂ ಸಿನಿಮಾದಲ್ಲಿ ನೋಡಬೇಕು.
ಓರ್ವ ಜನಪ್ರಿಯ ರಾಜಕಾರಣಿಯಾಗಿರುವ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಕಾರಣಕ್ಕೆ ಎಷ್ಟು ಅಗತ್ಯವೋ ಅಷ್ಟು ಅದ್ದೂರಿತನದಲ್ಲಿ ಚಿತ್ರ ನಿರ್ಮಾಣವಾಗಿದೆ. ಕ್ಯಾಮೆರಾ ಲೊಕೇಶನ್ , ಕಲರ್ಫುಲ್ ಉಡುಗೆ-ತೊಡಗೆಗಳು, ಅದ್ಧೂರಿ ಕಾರುಗಳು. ಉತ್ಸಾಹಭರಿತವಾಗಿರುವ ಹಾಡುಗಳು, ನೃತ್ಯ, ದೊಡ್ಡ ಸ್ಟಾರ್ ಬಟ ನಟಿಯರು ಎಲ್ಲವೂ “ಜೂನಿಯರ್” ನಲ್ಲಿದೆ. ಆ ಮಟ್ಟಿಗೆ ಇದೊಂದು ಸೀನಿಯರ್ ಚಿತ್ರ. ಆದರೆ ಮೂಲ ಕಥೆ ಫ್ಯಾಮಿಲಿ ಸೆಂಟಿಮೆಂಟ್ ನಿಂದ ಕೂಡಿಯೂ ಸಹ ಹಲವು ಕಡೆಗಳಲ್ಲಿ ನೈಜ ಬದುಕಿನಿಂದ ಹೊರತಾಗಿದೆ. ಉದಾಹರಣೆಗೆ ನಾಯಕ ಮತ್ತವನ ತಂಡ ಎಲ್ಲ ಆಟಗಳಲ್ಲಿ ಸೋತ ನಂತರವೂ ಕಪ್ ಎತ್ತಿಕೊಂಡು ಓಡುತ್ತಾನೆ. ಭಾರಿ ದೊಡ್ಡ ಕಾರ್ಪೊರೇಟ್ ಸಂಸ್ಥೆಯ ಸಿಇಓ ಒಬ್ಬರು ಸಿಎಸ್ಆರ್ ಫಂಡ್ ನ ನಿರ್ವಹಣೆ ಮಾಡುವುದಕ್ಕಾಗಿ ಸಣ್ಣ ಹಳ್ಳಿಯೊಂದಕ್ಕೆ ಬಂದು ನೆಲೆಸಿ ಅಲ್ಲಿಯೇ ಅದ್ದೂರಿ ಆಗಿರುವ ಪಂಚತಾರಾ ಹೋಟೆಲ್ ಲೆವೆಲ್ ನ ಆಫೀಸ್ ತೆರೆಯುತ್ತಾರೆ. ಹಳ್ಳಿಯ ಜನ ನಾಯಕನನ್ನ ಖುಷಿಪಡಿಸಲು ಐಟಂ ಗರ್ಲ್ ನ ಕರೆಸಿ ಕುಣಿಸುತ್ತಾರೆ. ಇದೆಲ್ಲವೂ “ಹೀರೋ”ಗಾಗಿ ಅವನ ಬಿಲ್ಡ್ ಅಪ್ ಘಾಗಿ ಮಾಡಿರುವ ಸೆಟಪ್ ಎನ್ನುವುದು ಪ್ರೇಕ್ಷಕನಿಗೆ ತಕ್ಷಣ ಅರಿವಾಗುತ್ತದೆ. ಮತ್ತು ಮೊದಲ ಚಿತ್ರದಲ್ಲೇ ನಾಯಕನಿಗೆ ಓರ್ವ ಸ್ಟಾರ್ ನಟನಿಗೆ ನೀಡುವ ಇಮೇಜ್ ಕೊಡಲು ಮುಂದಾಗಿರುವುದು ನಾಟಕೀಯ ಎನಿಸುವಂತಿದೆ. ಜೆನಿಲಿಯಾ ಡಿಸೋಜಾ, ರವಿಚಂದ್ರನ್, ರಾವ್ ರಮೇಶ್, ಶ್ರೀಲೀಲಾ, ಅಚ್ಯುತ್ ಕುಮಾರ್ ಅಂಥಹಾ ಭಾರಿ ದೊಡ್ಡ ತಾರಾಗಣ. ಪೀಟರ್ ಹೇನ್ಸ್, ಸೆಂಥಿಲ್ ಕುಮಾರ್, ದೇವಿಶ್ರೀಪ್ರಸಾದ್ ಇನ್ನೂ ಕೆಲವು ದಕ್ಷಿಣ ಭಾರತದ ಅತ್ಯುತ್ತಮ ತಂತ್ರಜ್ಞರು. ಎಲ್ಲರೂ ಇಲ್ಲಿದ್ದಾರೆ ಆದರೆ ಇವರೆಲ್ಲಾ ಸೇರಿಯೂ ಒಂದು ಪರಿಪೂರ್ಣ ಚಿತ್ರವಾಗಿ “ಜೂನಿಯರ್” ಮನಸ್ಸಿಗೆ ನಾಟುವುದಿಲ್ಲ ಎಂದೆನ್ನಬೇಕು.
ಹಾಗೆಂದು ಸಿನಿಮಾ ಉತ್ತಮವಾಗಿಲ್ಲ ಎನ್ನುವಂತಿಲ್ಲ ಅಪ್ಪ ಮಗನ ಸಾಂಬಂಧ, ಅಕ್ಕ ತಮ್ಮನ ಬಾಂಧವ್ಯ, ದ್ವೇಷ, ಕಚೇರಿ ರಾಜಕೀಯ, ಶತ್ರುಗಳೊಡನೆ ಹೊಡೆದಾಟ, ಭಾವನಾತ್ಮಕ ಸನ್ನಿವೇಶ ಎಲ್ಲವೂ ಇದರಲ್ಲಿದೆ. "ಕಷ್ಟ ಬರದೆ ಇರೋವರೆಗೂ ನಮ್ಮದೇ ಅದೃಷ್ಟ ಅಂತಾರೆ ಕಷ್ಟ ಬಂದಾಗ ನಮ್ಮ ಸಾಮರ್ಥ್ಯ ಗೊತ್ತಾಗತ್ತೆ.. " "ಪ್ರರಂಚದಲ್ಲಿ ಪ್ರತಿಯೊಬ್ಬನ ಕೋಪದ ಹಿಂದೆ ಒಂದು ಕಾರಣವಿರತ್ತೆ.. ಆದರೆ ಅವನ ತಂದೆ ತಾಯಿ ಕೋಪದ ಹಿಂದೆ ಪ್ರೀತಿ ಮಾತ್ರನೇ ಇರತ್ತೆ.." ಎನ್ನುವಂತಹಾ ಸಂಭಾಷಣೆಗಳು ಮನಸ್ಸಿಗೆ ಮುಟ್ಟುವಂತಿದೆ. ಅಭಿನಯದ ವಿಷಯದಲ್ಲಿ ಕಿರೀಟಿಗಿದು ಮೊದಲ ಸಿನಿಮಾ ಆಗಿರುವುದರಿಂದ ನಟನೆಯಲ್ಲಿ ಕೆಲವೊಂದಷ್ಟು ಕಡೆ ಪಳಗಬೇಕಿದೆ. ಬಹುತೇಕ ಭಾವನಾತ್ಮಕ ಸನ್ನಿವೇಶದಲ್ಲಿ ಅವರಿನ್ನೂ ಪಕ್ವವಾಗಬೇಕು. ಮಾಸ್ ಹೊಡೆದಾತದಲ್ಲಿ ಕಿರೀಟಿಯನ್ನು ಕಂಡಾಗ ಅವರೊಬ್ಬ ಚಿಕ್ಕ ವಯಸ್ಸಿನ ಹುಡುಗರಂತೆ ಭಾಸವಾಗುತ್ತಾರೆ. ಆದರೆ ತಾವೊಬ್ಬ ಉತ್ತಮ ನೃತ್ಯಪಟು ಎನ್ನುವುದನ್ನು ಕಿರೀಟಿ ತಮ್ಮ ಮೊದಲ ಸಿನಿಮಾದಲ್ಲೇ ನಿರೂಪಿಸಿದ್ದಾರೆ.
ರವಿಚಂದ್ರನ್ ಅಪ್ಪನ ಪಾತ್ರದಲ್ಲಿ ಜೀವಿಸಿದ್ದಾರೆ. ನಾಯಕಿ ಶ್ರೀಲೀಲಾ ಕೇವಲ ಗ್ಲಾಮರ್ ಗೆ ಮಾತ್ರ ಸೀಮಿತವಾಗಿರುವಂತಿದೆ. ನಟನೆಗೆ ಹೆಚ್ಚು ಅವಕಾಶವಿಲ್ಲ ಅಲ್ಲದೆ ಮಧ್ಯಂತರದ ಬಳಿಕ ಅವರ ಪಾತ್ರ ಸಿನಿಮಾದಿಂದ ಹಠಾತ್ತನೆ ಮರೆಯಾಗುತ್ತದೆ. ಇಂಟರ್ವೆಲ್ ನಂತರ ಹಾಡೊಂದರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.
ಈ ಹಿಂದೆ “ಸತ್ಯ ಇನ್ ಲವ್” ಸಿನಿಮಾದಲ್ಲಿ ಅಭಿನಯಿಸಿದ್ದ ಜೆನಿಲಿಯಾ ದೇಶ್ ಮುಖ್ ಬಹು ವರ್ಷಗಳ ನಂತರ ಕನ್ನಡಕ್ಕೆ ಬಂದಿದ್ದಾರೆ. ದೊಡ್ಡ ಸಂಸ್ಥೆಯೊಂದರ ಬಲು ಶಿಸ್ತಿನ ಸಿಇಓ ಆಗಿ ಅವರ ಪಾತ್ರ ಇಷ್ಟವಾಗುತ್ತದೆ/ ಹೆಚ್ಚು ಸಂಭಾಷಣೆಗಳಿಲ್ಲದಿದ್ದರೂ ಸೌಂದರ್ಯ ಮತ್ತು ಗಂಭೀರ ನಟನೆಯಿಂದ ಅವರು ಗಮನ ಸೆಳೆಯುತ್ತಾರೆ. ದ್ವಿತೀಯಾರ್ಧದಲ್ಲಿ ಜೆನಿಲಿಯಾ ಹಾಗೂ ಕಿರೀಟಿಯದೇ ಮೇಜರ್ ಪಾತ್ರಗಳಿರುವುದು ವಿಶೇಷ.
ಸಿನಿಮಾದ ಆರಂಭದಲ್ಲಿಯೇ ಕಿರಣ್ ಶ್ರೀನಿವಾಸ್ ಅವರನ್ನು ವಿಲನ್ ರೀತಿ ತೋರಿಸಲಾಗುತ್ತದೆ. ಆದರೆ ಕೊನೆಯ ವರೆಗೂ ಅವರ ವಿಲನ್ಗಿರಿ ಮಾತ್ರ ಎಲ್ಲಿಯೂ ಕಾಣುವುದಿಲ್ಲ. ಕೊನೆಯಲ್ಲಿ ನಾಯಕನ ಭುಜದ ಮೇಲೆ ಕೈಹಾಕಿ ವಿರೋಧಿಯನ್ನು ಸಂತೈಸುವ ದೃಶ್ಯ ಚೆನ್ನಾಗಿದೆ. ಅಚ್ಯುತ್ ಕುಮಾರ್ ಕಡಿಮೆ ದೃಶ್ಯಗಳಲ್ಲಿ ಕಾಣಿಸಿದರೂ ನಟನೆಯಿಂದ ಗಮನ ಸೆಳೆದಿದ್ದಾರೆ. ಗೆಳೆಯರಾಗಿ ತೆಲುಗಿನ ನಟರಾದ ಹರ್ಷ, ಸತ್ಯ, ಸುಮನ್ ಶೆಟ್ಟಿ ಕನ್ನಡದ ಯೂಟ್ಯೂಬರ್ ಸುಧಾಕರ್ ಇದ್ದಾರೆ ಅಲ್ಲದೆ ಬಿರಾದರ್, ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಸಹ ಒಂದು ದೃಶ್ಯದಲ್ಲಿದ್ದಾರೆ.
ಒಟ್ಟಾರೆ ನಾಯಕನ ಪರಿಚಯಿಸಲಿಕ್ಕಾಗಿಯೇ ಮಾಡಿದ ಸಿನಿಮಾ ಎಂಬ ಕಾರಣಕ್ಕೆ ನಿರ್ದೇಶಕರು ಈ ಚಿತ್ರಕಥೆ ತಯಾರಿಸಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಹೊಸ ನಟನೊಬ್ಬನ ಮೊದಲ ಪ್ರಯತ್ನ ಎಂದು ಕೆಲ ಕೊರತೆಯನ್ನು ಮನ್ನಿಸಿ ನೋಡುವುದಾದರೆ ಇದೊಂದು ಉತ್ತಮ ಮನರಂಜನಾ ಚಿತ್ರ.