ಗಿರೀಶ : ಮಾನವನಿಗಿಂತ ನಾಯಿ ಬಾಳು ಮೇಲು ಅಂತಾರಲ್ಲ ಅದು ಹೇಗೆ?

ಸುರೇಶ : ಇರು ಇರು, ಮಾನವ ಅನ್ನೋ ಬದಲು ಗಂಡನಿಗಿಂತ ನಾಯಿ ಬಾಳು ಮೇಲು ಅನ್ನು. ಗಂಡ ಅನ್ನಿಸಿಕೊಂಡ ಪ್ರಾಣಿ ಆಫೀಸಿಗೆ ಹೋಗುವಾಗಲೂ ಅವನ ಮನೆ ನಾಯಿ ಗೇಟ್‌ ಬಳಿ ಆರಾಮವಾಗಿ ಮಲಗಿರುತ್ತೆ, ಅವನು ವಾಪಸ್‌ ಬಂದಾಗಲೂ ಹಾಯಾಗಿ ಹಾಗೇ ಕಾಲು ಚಾಚಿ ಮಲಗಿದ್ದರೆ, ಅವನಿಗಿಂತ ಅದರ ಪಾಡೇ ಮೇಲಲ್ಲವೇ?

ಪತಿ : ಆಹಾ…. ಇವತ್ತು ಎಷ್ಟು ಸುಂದರವಾಗಿ ಕಾಣಿಸ್ತಿದ್ದಿ ಗೊತ್ತಾ…..?

ಪತ್ನಿ : ಹೌದೇನ್ರಿ….? ನಿಮ್ಮ ಬಾಯಿಗೆ ಬೆಲ್ಲ ಹಾಕ! ಈ ಮಾತು ಕೇಳಿ ನನ್ನ ಹೃದಯ ಹೊಸ ರಾಗ ಹಾಡುತಿದೆ….ಗೊತ್ತಾ?

ಪತಿ : ಇರು ಇರು….. ಇನ್ನೂ 4-5 ಸಲ ಹೇಳಿಬಿಡ್ತೀನಿ…. ನಿನ್ನ ಮಾತೇ ತಾನೇ ಯಾವಾಗಲೂ ನಡೆಯೋದು?

ಗುಂಡ  ಗುಂಡಿ ಜೋರು ಜಗಳವಾಡುತ್ತಿದ್ದರು.

ಗುಂಡ : ಬಿಡು ಬಿಡೇ…. ನಿನ್ನಂಥವರು 100 ಮಂದಿ ಸಿಗ್ತಾರೆ!

ಗುಂಡಿ : ನೋಡಿದ್ಯಾ…. ಈಗಲೂ `ನನ್ನಂಥ’ವಳೇ ಬೇಕು ಅಂತೀಯಲ್ಲ!

ಪತಿ : ಕಳೆದ 4 ತಾಸುಗಳಿಂದ ಎಲ್ಲಿ ಹಾಳಾಗಿ ಹೋಗಿದ್ದೆ?

ಪತ್ನಿ : ಮಾಲ್ ಗೆ ಶಾಪಿಂಗ್‌ ಮಾಡಲು ಹೋಗಿದ್ದೆ!

ಪತಿ : ಏನೇನು ತಗೊಂಡೆ…?

ಪತ್ನಿ : 2 ಹೇರ್‌ ಬ್ಯಾಂಡ್‌…. 40-50 ಸೆಲ್ಛಿಗಳು!

ಗುಂಡ ಪಿಯುಸಿ 2ನೇ ವರ್ಷದಲ್ಲಿದ್ದ. ಮೇಡಂ ಕ್ಲಾಸಿನಲ್ಲಿ ಪಾಠ ಮಾಡುವಾಗ ಅವನು ಸದಾ ಗೌರಿ ಕಡೆ ತಿರುಗಿ ತಿರುಗಿ ನೋಡುತ್ತಿದ್ದ. ಕೊನೆಗೆ ಅವಳಿಗೂ ಇದು ಗೊತ್ತಾಗಿ ಒಂದು ದಿನ ಕೇಳಿಯೇ ಬಿಟ್ಟಳು…..

ಗೌರಿ : ಏನು ವಿಷಯ?

ಗುಂಡ : ಐ ಲವ್ ಯೂ!

ಗೌರಿ : ಈಗ ನಾನೂ ಸಹ ನಿನಗೆ `ಐ ಲವ್ ಯೂ!’ ಹೇಳಿದರೆ, ಆಗ ನಿನಗೆ ಹೇಗನಿಸುತ್ತೆ?

ಗುಂಡ : ಅಯ್ಯೋ… ಡಾರ್ಲಿಂಗ್‌! ಖುಷಿಯಿಂದ ನಾನು ಸತ್ತೇ ಹೋಗ್ತೀನಷ್ಟೆ…. ಬಲು ಚಾಲೂಕು ಹುಡುಗಿ ಗೌರಿ ಓರೆಗಣ್ಣಿನಿಂದ ಅವನ ಕಡೆ ನೋಡುತ್ತಾ, “ಹೋಗು…. ಬದುಕಿಕೋ… ನಾನು ಹಾಗೇನೂ ಹೇಳೋದಿಲ್ಲ ಬಿಡು!”

 

ವಿಶಾಲಮ್ಮ ತಮ್ಮ ವಿಶಾಲಕಾಯ ಹೊತ್ತು ಏದುಸಿರು ಬಿಡುತ್ತಾ ಡಾಕ್ಟರ್‌ ಬಳಿ ಬಂದರು.

ವಿಶಾಲಮ್ಮ : ಡಾಕ್ಟ್ರೇ…. ನೀವೇ ತಾನೇ ಹೇಳಿದ್ರಿ… ಆಟ ಆಡಿದ್ರೆ ನನ್ನ ಮೈ ತೂಕ ಕರಗುತ್ತೆ ಅಂತ… ಮತ್ತೆ ನೋಡಿ, 3 ತಿಂಗಳಿನಿಂದ ಗಂಟೆಗಟ್ಟಲೆ ಆಡಿದ್ರೂ ಏನೂ ವ್ಯತ್ಯಾಸ ಆಗಿಲ್ಲ.

ಡಾಕ್ಟರ್‌ : ಯಾವ ಆಟ ಆಡ್ತಿದ್ರಿ?

ವಿಶಾಲಮ್ಮ : ಮೊಬೈಲ್ ‌ನಲ್ಲಿ ಕ್ಯಾಂಡಿ ಕ್ರಶ್‌!

ಡಾಕ್ಟರ್‌ : ಸಾರಿ ಗಿರೀಶ್‌….. ನಿಮ್ಮ ಹೆಂಡತಿ ಇನ್ನು 2-3 ದಿನದ ಅತಿಥಿಯಷ್ಟೆ…. ಅವರು ಹೆಚ್ಚು ದಿನ ಬದುಕಲಾರರು. ಐ ಆ್ಯಮ್ ರಿಯಲಿ ಸಾರಿ….!

ಗಿರೀಶ್‌ : ಅದಕ್ಕೆ ನೀವ್ಯಾಕೆ ಸಾರಿ ಕೇಳ್ತೀರಿ ಸಾರ್‌? ಇಷ್ಟು ವರ್ಷ ಶೋಷಣೆ ಸಹಿಸಿದವನು, ಇನ್ನು 2-3 ದಿನ ಅಡ್ಜಸ್ಟ್ ಮಾಡಿಕೊಳ್ಳಲಾರೆನೇ?

ಅನಂತಯ್ಯ ಅಪರೂಪಕ್ಕೆ ಕಾರ್‌ ಕೊಂಡಿದ್ದರು. ಅವರ ಹೆಂಡತಿ ಅರವಿಂದಮ್ಮನಿಗೆ ತಾವು ಕಾರ್‌ ಕಲಿಯಬೇಕೆಂಬ ಚಪಲ. ರಾಯರು ಎಷ್ಟು ಹೇಳಿದರೂ ಆಕೆ ಒಪ್ಪಲಿಲ್ಲ. ಕೊನೆಗೆ ಅವರು ಒಂದು ಎಚ್ಚರಿಕೆಯ ನುಡಿ ಹೇಳುತ್ತಾ, ಕಾರಿನ ಕೀ ಕೊಟ್ಟರು, “ನೀನು ಡ್ರೈವಿಂಗ್‌ ಕಲಿಯುವಾಗ ಅಕಸ್ಮಾತ್‌ ಆ್ಯಕ್ಸಿಡೆಂಟ್‌ ಆಗಿ ಹೋದರೆ, ಆಗ ಪತ್ರಿಕೆಗಳಲ್ಲಿ ನಿನ್ನ ಒರಿಜಿನಲ್ ವಯಸ್ಸಿನ ಸಮೇತ ಫೋಟೋ ಬಂದುಬಿಡುತ್ತೇ….. ಆಗ ಎಲ್ಲರಿಗೂ ನಿನ್ನ ವಯಸ್ಸಿನ ಬಗ್ಗೆ ಗೊತ್ತಾಗಿಬಿಡುತ್ತೆ ಹುಷಾರಾಗಿರು…..”

ಅರವಿಂದಮ್ಮ ಕಾರ್‌ ಡ್ರೈವಿಂಗ್‌ ಕಲಿಯಲೇ ಇಲ್ಲ.

ಪುಟ್ನಂಜಿ : ಅಲ್ಲ, ಮಾತಿಗೆ ಹೇಳ್ತೀನಿ, ನಾನು 3-4 ದಿನ ಕಾಣಿಸದೆ ಹೋದ್ರೆ ಆಗ ನಿನಗೆ ಏನು ಅನಿಸುತ್ತೆ?

ಗುಂಡ : ಅಂಥ ಭಾಗ್ಯ ನನಗುಂಟೆ? ಆ ದಿನಗಳ ಆನಂದವನ್ನು ‌ವರ್ಣಿಸುವುದೆಂತು?

ಪುಟ್ನಂಜಿ ಆ ಸೋಮವಾರ ಕಾಣಿಸಲಿಲ್ಲ.

ಪುಟ್ನಂಜಿ ಮಂಗಳವಾರ ಕಾಣಿಸಲಿಲ್ಲ.

ಪುಟ್ನಂಜಿ ಬುಧವಾರ ಸಹ ಕಾಣಿಸಲಿಲ್ಲ!

ಪುಟ್ನಂಜಿ ಗುರುವಾರ ಗುಂಡನಿಗೆ ಕಾಣಿಸಲಿಲ್ಲ!

ಅಂತೂ ಇಂತೂ ಅವನ ಕಣ್ಣಿನ ಊತ ಕಡಿಮೆ ಆದ ಬಳಿಕ ಪುಟ್ನಂಜಿ ಅವನಿಗೆ ಶುಕ್ರವಾರ ಸ್ಪಷ್ಟವಾಗಿ ಕಾಣಿಸತೊಡಗಿದಳು!

ಸುಶೀಲಮ್ಮ ಧಾರಾಳವಾಗಿ ಮೇಕಪ್‌ ಮಾಡಿಕೊಂಡು ಡೆಂಟಿಸ್ಟ್ ರನ್ನು ಭೇಟಿಯಾಗಲು ಬಂದವರೇ, ಅವಸರದಲ್ಲಿ ಹೇಳಿದರು, “ನೋಡಿ ಡಾಕ್ಟ್ರೇ, ಬೇಗ ಬೇಗ ಒಂದು ಕೆಲಸ ಆಗಬೇಕು! ನನ್ನ ಬಳಿ ಈಗ ಇರೋದು ಹತ್ತೇ ನಿಮಿಷ! ಯಾವ ಅನಸ್ತೇಶಿಯಾ ಅಥವಾ ಪೇನ್‌ ಕಿಲ್ಲರ್‌ ಇಲ್ಲದಿದ್ರೂ ಪರವಾಗಿಲ್ಲ. ಏನು ಮಹಾ….? ಒಂದಿಷ್ಟು ನೋವಾಗುತ್ತೆ, ಆಗಲಿಬಿಡಿ. ಆದ್ರೆ ಮಾತ್ರ ನೀವು ಬೇಗ ಬೇಗ ಹಲ್ಲು ಕೀಳುವ ಕೆಲಸ ಮುಗಿಸಬೇಕು. ನಾನೀಗ ಅರ್ಜೆಂಟ್‌ ಕಿಟಿ ಪಾರ್ಟಿಗೆ ಹೊರಡಬೇಕಿದೆ!

ಡಾಕ್ಟರ್‌ : ನೀವು ಯಾರೋ ಭಾರಿ ಸಾಹಸಿ ಮಹಿಳೆಯೇ ಇರಬೇಕು. ಡೆಂಟಿಸ್ಟ್ ಹತ್ತಿರ ಬಂದಿದ್ದೀರಿ, ಆದರೂ ನೋವಾದರೆ ಆಗಲಿ ಬಿಡಿ, ಬೇಗ ಹಲ್ಲು ಕೀಳಿ ಅಂತಿದ್ದೀರಿ. ಇರಲಿ, ಈ ಕಡೆ ಬೇಗ ಬಂದು ಈ ಚೇರಿನಲ್ಲಿ ಕೂರಿ!

ಸುಶೀಲಮ್ಮ : ಅಯ್ಯೋ ಬಡ್ಕೊಂಡ್ರು… ನನಗಲ್ಲ ಡಾಕ್ಟ್ರೇ! ರೀ… ಬನ್ನಿ…. ಇಲ್ಲಿ…. ಈ ಚೇರ್‌ ಮೇಲೆ ಹೀಗೆ ಒರಗಿ, ಡಾಕ್ಟ್ರೇ, ಇವರ ಒಂದು ಹಲ್ಲು ಕೀಳಬೇಕು. ಬೇಗ ಯಾವುದೋ ಒಂದು ಕಿತ್ತು ಕಳುಹಿಸಿ ಬಿಡಿ. ರೀ…. ನಾನು ಆಟೋಲಿ ಕಾಯ್ತಿರ್ತೀನಿ. ಈಗಾಗಲೇ ವೆಯ್ಟಿಂಗ್‌ ಚಾರ್ಜ್‌ ಜಾಸ್ತಿ ಆಯ್ತು…. ಹಲ್ಲು ಕೀಳಿಸಿಕೊಂಡು, ಬೇಗ ಈ ಸಾಮಾನುಗಳನ್ನು ಹೊತ್ತುಕೊಂಡು ಆಟೋ ಕಡೆ ಬನ್ನಿ!

ಅಂತೂ ರಂಗಪ್ಪನಿಗೆ  ಡೈವೋರ್ಸ್‌ ಸಿಕ್ಕಿಬಿಟ್ಟಿತು!

ಜಡ್ಜ್ : ನೋಡ್ರಿ, ಇನ್ನು ಮುಂದೆ ನಿಮ್ಮ ಮಾಜಿ ಪತ್ನಿಗೆ ನಿಮ್ಮ ಅರ್ಧ ಸಂಬಳ ಕೊಟ್ಟುಬಿಡಬೇಕು!

ರಂಗಪ್ಪ : ಅಬ್ಬಾ…. ಉಳಿದ ಅರ್ಧ ಸಂಬಳವಾದ್ರೂ ನನ್ನದೇ ತಾನೇ….?

ನಾಗೇಶ್‌ : ಅಲ್ಲಯ್ಯ…. ಮನೇಲಿ ಸದಾ ನೀವು ಗಂಡ ಹೆಂಡ್ತಿ ನಗ್ತಾ ನಗ್ತಾ ಇರ್ತೀರಿ…. ನಿಮ್ಮನ್ನು ಕಂಡರೆ ಎಷ್ಟು ಹೊಟ್ಟೆ ಉರಿಯುತ್ತೆ ಗೊತ್ತಾ? ಅದು ಸರಿ, ನಿಮ್ಮ ಸಂತೋಷದ ಹಿಂದಿನ ರಹಸ್ಯವೇನು?

ಸುರೇಶ್‌ : ದಿನಾ ಮನೇಲಿ ಪಾತ್ರೆ ತೊಳೆಯೋನು ನಾನೇ…. ಆಗ ನನ್ನ ಹೆಂಡತಿ ದೂರದಿಂದ ನನ್ನತ್ತ ಪಾತ್ರೆ ಎಸೆಯುತ್ತಾಳೆ, ಅದು ನನಗೆ ತಗುಲಿದರೆ ಅವಳು ಖುಷಿಯಿಂದ ನಗ್ತಾಳೆ. ತಗುಲದೆ ಕೆಳಗೆ ಬಿದ್ದರೆ ನಾನು ಖುಷಿಯಾಗಿ ನಗ್ತೀನಿ, ಅಷ್ಟೆ!

ಗಂಡ ಹೊಸದಾಗಿ ಮದುವೆಯಾಗಿದ್ದ. 6 ತಿಂಗಳ ನಂತರ ಅವನ ಗೆಳೆಯ ಕಿಟ್ಟಿ ಗುಂಡನ ಭೇಟಿಗೆಂದು ಬಂದು ನೋಡ್ತಾನೆ, ಗುಂಡನ ಎಡಗಿವಿಗೊಂದು ರಿಂಗ್‌ ಬಂದುಬಿಟ್ಟಿದೆ!

ಕಿಟ್ಟಿ : ಇದೇನೋ ಗುಂಡ ಕಿವಿಯಲ್ಲಿ ರಿಂಗು? ಇದೇನು ಹೊಸಾ ಫ್ಯಾಷನ್ನಾ ಏನು ಕಥೆ? ಯಾವಾಗಿನಿಂದ ಹೀಗೆ?

ಗುಂಡ : ಅಯ್ಯೋ… ಏನು ಹೇಳಲಪ್ಪ ನನ್ನ ಕಷ್ಟ? ನನ್ನ ಹೆಂಡತಿ ಆಷಾಢಕ್ಕೆ ತವರಿಗೆ ಹೋಗಿದ್ದಳು. ಅವಳು ವಾಪಸ್ಸು ಬಂದಾಗಿನಿಂದ ಈ ಕರ್ಮ!

ಕಿಟ್ಟಿ : ಓಹೋ… ಅತ್ತಿಗೆ ಇದನ್ನು ನಿನಗೆ ತವರಿನಿಂದ ಹೊಸ ಗಿಫ್ಟ್ ಅಂತ ಕೊಟ್ಟರೇ?

ಗುಂಡ : ಅಯ್ಯೋ…. ಹಾಗಲ್ಲ ಕಣೋ! ಅವಳು ಊರಿನಿಂದ ಬಂದ ಮೊದಲ ದಿನ ಗಮನಿಸುತ್ತಾಳೆ…. ನಮ್ಮ ಹಾಸಿಗೆ ಬಳಿ ಇದು ಬಿದ್ದಿತ್ತು. `ಯಾರದ್ದು ಇದು?’ ಅಂತ ಗುಟುರು ಹಾಕಿದಳು. ಜೀವ ಕಾಪಾಡಿಕೊಳ್ಳಲು ನಂದೇ ಅಂದು ಬಿಟ್ಟೆನಪ್ಪ….`ಮತ್ತೆ ಕಿವಿಗೆ ಹಾಕ್ಕೋಳ್ಳಿ ಏಕೆ ಕೆಳಗೆ ಬಿದ್ದಿರಬೇಕು?’ ಅಂತ ದಬಾಯಿಸೋದೇ? ಬೀಸೋ ದೊಣ್ಣೆ ತಪ್ಪಿಸಿಕೊಂಡೆ…. ಈ ಹಾಳು ಕರ್ಮ ಕಿವಿಗೆ ಗಂಟು ಬಿತ್ತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ