ಮಸಣ ಕಾಯುತ್ತಿದ್ದ ಪತಿಯ ಅಕಾಲಿಕ ಮರಣದಿಂದ ಒಬ್ಬಂಟಿಯಾದ ಮಾಣಿಕ್ಯಾ, ಮುಂದೆ ತನ್ನ ಜೀವನ ನಡೆಸಲು ಪತಿಯ ಕಾಯಕವನ್ನೇ ಮುಂದುವರಿಸಿದಳು. ಕರ್ತವ್ಯನಿಷ್ಠ ಹೆಣ್ಣಿನ ಮಾನವೀಯತೆ ಎಲ್ಲವನ್ನೂ ಮೀರಿದ್ದು……!

“ಮಾಣಿಕ್ಯಾ….. ಏ ಮಾಣಿಕ್ಯಾ…. ಕೂಸೂ ಶಾನೇ ಅಳ್ತಾ ಇದೆ, ಒಸಿ ಬಂದು ಒಯ್ತೀಯಾ….?” ಅತ್ತೆಯಿಂದ ಬಂದ ಕೂಗಿಗೆ ಪ್ರತಿಯಾಗಿ, “ಬಂದೇ ಕಣ್ವಾ ಬಂದೇ….?” ಎನ್ನುತ್ತಾ ತನ್ನಷ್ಟೇ ಎತ್ತರ ಇರುವ ಕೋಲಿನಿಂದ ಉರಿಯುತ್ತಿದ್ದ ಹೆಣದ ಆಜೂಬಾಜು ಬೀಳುತ್ತಿದ್ದ ಕಟ್ಟಿಗೆಗಳನ್ನು ಸರಿ ಮಾಡುತ್ತಾ ಉತ್ತರಿಸಿದಳು ಮಾಣಿಕ್ಯಾ.

ಈಗ ಎರಡು ವರ್ಷಗಳ ಹಿಂದಷ್ಟೇ  ಈ ಮಾಣಿಕ್ಯಾ ವೀರಪ್ಪನ ಕೈ ಹಿಡಿದಿದ್ದಳು. ವೀರಪ್ಪನದು ವಂಶ ಪಾರಂಪರಿಕವಾಗಿ ಬಂದಿತ್ತು ಈ ಹೆಣ ಸುಡುವ ವೃತ್ತಿ. ವಾಸ ಮಸಣದ ಕಾಂಪೌಂಡ್‌ ಮೂಲೆಯೊಂದರಲ್ಲಿ ಟಿನ್‌ ಶೀಟುಗಳಿಂದ ಜೋಡಿಸಿದ ಪುಟ್ಟ ಮನೆ. ಕಳೆದ ಐದು ತಿಂಗಳ ಕೆಳಗೆ ವಿಪರೀತ ಜ್ವರದ ಬಾಧೆಗೆ ಬಲಿಯಾದ ವೀರಪ್ಪ, ತನ್ನ ಒಂದು ವರ್ಷದ ಮಗು ಮತ್ತು ತಾಯಿಯ ಜವಾಬ್ದಾರಿಯನ್ನು ಮಾಣಿಕ್ಯಾಳ ಹೆಗಲಿಗೆ ಹಾಕಿ ಶಿವನ ಪಾದ ಸೇರಿದ್ದ.

ಸಂಸಾರದ ನೊಗ ಹೊತ್ತ ಮೂವತ್ತರ ಹರೆಯದ ಮಾಣಿಕ್ಯಾ ತುಂಬಾ ಗಟ್ಟಿಗಿತ್ತಿ. ಅಸಾಧಾರಣ ಧೈರ್ಯವಂತೆ, ದಿನದ ಯಾವ ಘಳಿಗೆಯಲ್ಲಾದರೂ ಸರಿ, ದಹನಕ್ಕೆ ಯಾ ದಫನ್‌ ಗೆ ಹೆಣ ಬಂದರೂ ಬೇಸರಿಸದೇ ಅಚ್ಚುಕಟ್ಟಾಗಿ ತನ್ನ ಕರ್ತವ್ಯವನ್ನು ತೃಪ್ತಿಯಿಂದ ನಿರ್ವಹಿಸುತ್ತಿದ್ದಳು. ದಹನ/ದಫನ್‌ ಕೆಲಸ ಮುಗಿದ ನಂತರ ಯಾವತ್ತಿಗೂ ಅದಕ್ಕೆ ಸಂಬಂಧಪಟ್ಟವರ ಎದುರು ಕೈಯೊಡ್ಡಿ ಕಾಸು ಕೇಳಿದವಳಲ್ಲ, ಹಾಗೇನಾದರೂ ಒಂದು ಪಕ್ಷ ಅವರಾಗಿಯೇ ಕೊಟ್ಟರೆ ಅದೆಷ್ಟಿದೆ ಎಂದು ನೋಡದೇ, `ಶಿವಾ,’ ಎನ್ನುತ್ತಾ ಅದನ್ನು ಪಡೆದು ಕೈ ಮುಗಿಯುತ್ತಿದ್ದಳು.

ಸರ್ಕಾರ ಒಂದು ಹೆಣಕ್ಕೆ ಇಂತಿಷ್ಟು ಎಂದು ಹಣ ನಿಗದಿಪಡಿಸಿತ್ತು. ಹೀಗಾಗಿ ಬರುವ ಆದಾಯದಲ್ಲಿ ತೃಪ್ತಿಯಿಂದ ಜೀವನ ಸಾಗಿಸುತ್ತಿದ್ದಳು. ಪತಿಯ ಮರಣದ ನಂತರ ತನ್ನ ಕೆಲಸದ ಸಹಾಯಕ್ಕೆ ಇವರವೊಂದು ಸಂಬಂಧಿಗಳ ಪೈಕಿ ಒಬ್ಬ ವಯಸ್ಸಾದ ವ್ಯಕ್ತಿಯನ್ನು ಗೊತ್ತುಪಡಿಸಿಕೊಂಡಿದ್ದಳು.

ಹುಟ್ಟಿ ಬಂದ ಮೇಲೆ ಸಾವು, ಯಾರಿಗೆ ಯಾವಾಗ, ಎಷ್ಟೆಷ್ಟು ಜನಕ್ಕೆ ಬರುತ್ತದೆ ಎಂಬುದು ಯಕ್ಷಪ್ರಶ್ನೆ ಅಲ್ಲವೇ? ಹೀಗಾಗಿ ಕೆಲವೊಂದು ದಿನ ಒಂದರ್ಧ ಗಂಟೆ ಕೂಡ ಬಿಡುವಿಲ್ಲದೇ ಮಾಣಿಕ್ಯಾಳಿಗೆ ದುಡಿಯಬೇಕಾಗಿ ಬರುತ್ತಿತ್ತು. ಅಂತೆಯೇ ತೀರಾ ಅಪರೂಪಕ್ಕೆ ಎನ್ನುವಂತೆ ಒಂದೊಂದು ದಿನ ಪೂರ್ತಿ ಬಿಡುವು ಸಿಕ್ಕಿದ್ದೂ ಉಂಟು. ಅಂತಹ ದಿನಗಳಲ್ಲಿ ಅವಳು ಮಸಣದ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಳು.

ಹೀಗೆ ಒಂದು ದಿನ ಸೂರ್ಯೋದಯದಿಂದ ಆರಂಭವಾದ ಮಾಣಿಕ್ಯಾಳ ಕಾಯಕ, ರಾತ್ರಿಯ ಹನ್ನೆರಡಾದರೂ ಸಾಗುತ್ತಲೇ ಇತ್ತು. ಒಂದಿನಿತೂ ಬಿಡುವಿಲ್ಲದ ಕೆಲಸದಿಂದ ಅವಳ ದೇಹ, ಮನಸ್ಸು ಸಹಜವಾಗಿ ವಿಶ್ರಾಂತಿ ಬಯಸತೊಡಗಿತ್ತು. ಆ ದಿನ ಕೊನೆಯಲ್ಲಿ ಬಂದವರ ಕಾರ್ಯ ಪೂರೈಸಿ, ಅವರನ್ನು ಬೀಳ್ಕೊಟ್ಟು, `ಉಸ್ಸಪ್ಪಾ’ ಎಂದು ದೀರ್ಘ ಉಸಿರು ಬಿಡುತ್ತಾ ಮನೆಗೆ ಬಂದು, ಹಸಿದ ಹೊಟ್ಟೆ ತಣಿಸಿ, ಚಾಪೆ ಮೇಲೆ ಮಲಗಿ, ದಿಂಬಿಗೆ ತಲೆಕೊಟ್ಟು ಇನ್ನೇನು ನಿದ್ರೆಗೆ ಜಾರಬೇಕು ಎನ್ನುವಷ್ಟರಲ್ಲಿ ರಾತ್ರಿಯ ನೀರವತೆ ಸೀಳಿ ಯಾರೋ ಬಿಕ್ಕಿ ಬಿಕ್ಕಿ ಅಳುತ್ತಿರುವ ಶಬ್ದ ಕೇಳಿಸಿಕೊಂಡು ಪುನಃ ಎದ್ದು ಮೂಲೆಯಲ್ಲಿದ್ದ ಕೋಲು, ಟಾರ್ಚ್‌ ನೊಂದಿಗೆ ಆಚೆಗೆ ಬಂದಳು.

ಹೊರಗಡೆ ಕುಳಿರ್ಗಾಳಿ ಮಧ್ಯೆ ಸಣ್ಣದಾಗಿ ಮಳೆ ಬೀಳುತ್ತಿತ್ತು. ತಲೆ ಮೇಲೆ ಸೆರಗು ಹೊದ್ದು, ಅವಳು ಧ್ವನಿ ಬರುತ್ತಿದ್ದ ದಿಕ್ಕಿನತ್ತ ಸಾಗಿ ಬಂದು ನೋಡಿದಾಗ, ಗೇಟಿನ ಆ ಬದಿಯ ಬಲ ಪಾರ್ಶ್ವದಲ್ಲಿದ್ದ ಹೊಂಗೆ ಮರದ ಕೆಳಗೆ ತನ್ನಷ್ಟೇ ಪ್ರಾಯದ ಮಹಿಳೆಯೊಬ್ಬಳು ತನ್ನ ಎರಡೂ ಅಂಗೈ ಮುಂದೆ ಚಾಚಿ ಅದರ ಮೇಲೆ ಏನೋ ಹಿಡಿದುಕೊಂಡು ನಿಂತಿದ್ದಳು. ಲಗುಬಗೆಯಿಂದ ಗೇಟು ದಾಟಿ ಮಾಣಿಕ್ಯಾ ಅವಳ ಬಳಿ ಬಂದಳು. ನಿತ್ರಾಣಗೊಂಡ ದೇಹ, ಕೆದರಿದ ಕೂದಲು ಗುಳಿಬಿದ್ದ ಕೆಂಪಾದ ಕಣ್ಣುಗಳಿಂದ ಒಂದೇ ಸಮ ನೀರು ಸುರಿಸುತ್ತಾ ನಿಂತವಳ ಭುಜ ತಟ್ಟಿ, ಸಂತೈಸುವ ಸ್ವರದಲ್ಲಿ, “ಏನಮ್ಮಾ…..” ಎಂದು ಮಾಣಿಕ್ಯಾ ವಿಚಾರಿಸಿದಳು.

ಆ ಮಹಿಳೆ ಬಿಕ್ಕುತ್ತಲೇ, “ಅಕ್ಕಾ… ನಾ ಹ್ಯಾಗಂತ ಹೇಳ್ಲಿ….. ನಾನೊಬ್ಬಳು ಅನಾಥೆ….. ಯಾವನೋ ಪಾಪೀ ನನಗೆ ಮೋಸ ಮಾಡಿ ಅಂದು ಹೋದವ ಇಂದಿಗೂ ಬಂದಿಲ್ಲ. ನಾನು ಹೆಣ್ಣು ನೋಡು…. ಪಡಬಾರದ ಕಷ್ಟಪಟ್ಟು ಇದನ್ನು ಹೆತ್ತು, ಅಲ್ಲಿ ಇಲ್ಲಿ ಕಾಡಿಬೇಡಿ, ಈ ನನ್ನ ಕರುಳ ಕುಡೀನಾ ಸಾಕ್ತಾ ಇದ್ದೆ. ನೋಡಕ್ಕಾ, ಮಗೀಗೆ ನಿನ್ನೆಯಿಂದ್ಲೂ ವಿಪರೀತಾ ಜರಾ ಶುರು ಆಯ್ತು. ಜೊತೆಗೆ ಮಳೆ ಬ್ಯಾರೆ…. ಅಂಗೇ ಈ ಮಗಿನಾ ಎತ್ಕೊಂಡು ಬಸ್‌ ಸ್ಟಾಂಡ್‌ ಮೂಲೆನ್ಯಾಗ ಮಲಗಿಸಿಕೊಂಡು ಕುಂತಿದ್ದೆ. “ಅದ್ಯಾರೋ ಅಲ್ಲಿದ್ದ ಪುಣ್ಯಾತ್ಮ ನನಗೆ ಮತ್ತೆ ಮಗೀಗೆ ಅಂತ ಹಾಲು ಬಿಸ್ಕತ್ತು ತಂದುಕೊಟ್ಟ. ಮಗು ಹಸ್ಕೊಂಡದೆ ಅಂತ ಮೊದಲು ಅದಕ್ಕೆ ಹಾಲು ಕುಡಿಸಾಕ ಮುಂದಾದೆ…. ಆದರೆ ಮಗಿನ್‌ ಬಾಯಿಗೆ ಹಾಕಿದ ಹಾಲೆಲ್ಲಾ ಈಚೆಗೆ ಬಂದು ಮಗಾ ಗೋಣು ವಾಲಿಸಿಬಿಡ್ತಕ್ಕಾ…. ಹ್ಯಾಂಗೂ ರಾತ್ರಿ ಆಗಿತ್ತು. ಸುತ್ತಮುತ್ತ ಯಾವ ಜನಾನೂ ಇರ್ಲಿಲ್ಲ. ಅಂದೇ ಇದನ್ನ ಅಲ್ಲೆ ಎಲ್ಲಾರೂ ಇಟ್ಟು ಹೊಂಟು ಹೋಗುವಾ ಅಂತ ಅನ್ಕೊಂಡೆ, ಯಾಕೋ ಮನ್ಸು ಒಪ್ಪಿಲ್ಲ ಕಣಕ್ಕಾ….. ಎಂಗಾನಾ ಆಗ್ಲಿ ಅಂತ ಇಲ್ಲಿಗಂಟ ಎತ್ಕೊಂಡು ಬಂದೆ.

“ಅಕ್ಕಾ…. ನಿನ್ನ ದಮ್ಮಯ್ಯ ಅಂತೀನಿ…. ಈ ಮಸಾಣದಾಗ ಎಲ್ಲೋ ಒಂದ್ಕಡಿ ದಫನ್‌ ಮಾಡಿಬಿಡಕ್ಕಾ…” ಎನ್ನುತ್ತಾ ತನ್ನ ಮುಷ್ಟಿಯಲ್ಲಿ ಮುದ್ದೆಯಾದ ಒಂದಿಷ್ಟು ನೋಟುಗಳನ್ನು ತೋರಿಸುತ್ತಾ, “ಅಕ್ಕಾ…. ಇಕೋ ನನ್‌ ತವಾ ಇರೋದೇ ಇಷ್ಟು. ಇದನ್ನು ತಗೊಂಡು ದಫನ್‌ ಮಾಡಕ್ಕಾ….ಇಲ್ಲಾ ಅನ್ನಬ್ಯಾಡಾ…..” ಎಂದು ಒಂದೇ ಸಮನೆ ಅಳತೊಡಗಿದಳು.

ಮಾಣಿಕ್ಯಾಳ ಮನಸ್ಸು ತಡೆಯಲಾಗಲಿಲ್ಲ. ಅವಳೂ ತೇವವಾದ ಕಣ್ಣುಗಳಿಂದ, “ಏಯ್‌…. ಅಳಬ್ಯಾಡ ಸುಮ್ಕಿರು…. ಶಿವಾ ಅವ್ನೆ ಎಲ್ಲಾ ನೋಡ್ಕೋತಾನೇ ಬಾ ಒಳಕ್ಕೆ….” ಎಂದು ಅವಳನ್ನು ಸಂತೈಸಿ ಒಳಗೆ ಕರೆದು, ತನ್ನ ಸಹಾಯಕನಿಗೆ ಕೂಗಿ, ತೋರು ಬೆರಳಿನಿಂದ ಒಂದು ಜಾಗ ತೋರಿಸುತ್ತಾ, “ಇದನ್ನು ಅಲ್ಲಿ ದಫನ್‌ ಮಾಡಿ ಬಾ,” ಎಂದು ಹೇಳಿ ಆ ಮಹಿಳೆಯ ಕೈಯಲ್ಲಿದ್ದ ನಿರ್ಜೀವ ಕುಡಿಯನ್ನು ಅವನಿಗೆ ಹಸ್ತಾಂತರಿಸಿದಳು. ಇಷ್ಟೆಲ್ಲಾ ಮುಗಿಯುವಷ್ಟರಲ್ಲಿ ಮೂಡಣ ಕೆಂಪಾಗಿ ಕಾಣತೊಡಗಿತ್ತು. ಒಂದೇ ಸಮ ಅತ್ತು ಸುಸ್ತಾಗಿದ್ದ ಆ ಮಹಿಳೆಯನ್ನು ತನ್ನ ಮನೆಗೆ ಕರೆತಂದು, ಕಾಫಿ ಕಾಯಿಸಿ ಅವಳಿಗೂ ಕೊಟ್ಟು ತಾನೂ ಕುಡಿಯತೊಡಗಿದಳು.

ಅಷ್ಟರಲ್ಲಿ ಅವಳ ಸಹಾಯಕ, “ಮಾಣಿಕ್ಯಾ… ಬೇಗ ಬಾ, ಮತ್ತೊಂದು ಯಣಾ ಬಂದೈತೆ,” ಎಂದು ಕೂಗಿದಾಗ ಕೈಯಲ್ಲಿದ್ದ ಕಾಫಿಯನ್ನು ಬೇಗ ಗುಟುಕರಿಸಿ, “ಬಂದೇ ಬಂದೇ….” ಎನ್ನುತ್ತಾ ಮತ್ತೆ ಕೆಲಸಕ್ಕೆ ಅಣಿಯಾಗಿ ಹೊರಟು ನಿಂತಳು. ಆಗ ಅವಳನ್ನೇ ನೋಡುತ್ತಿದ್ದ ಆ ಮಹಿಳೆಗೆ ನಿಜವಾಗಿಯೂ ಇವಳು ಮಸಣದ ಮಾಣಿಕ್ಯ ಎಂದೆನಿಸದೇ ಇರಲಿಲ್ಲ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ