ಮಧ್ಯಮ ವರ್ಗದ ಜಂಜಾಟದ ಜೀವನದಲ್ಲಿ ಬಸವಳಿದಿದ್ದ ಶ್ರೀನಾಥ್ದಂಪತಿಗಳು ಮುಂದೆ ತಮ್ಮ ಸಂಧ್ಯಾಕಾಲದ ಸೆಕೆಂಡ್ ಇನ್ಸಿಂಗ್ಸ್ ಎದುರಿಸಿದ್ದು ಹೇಗೆ…….?

ಬೆಳಗಿನ ವಾಕಿಂಗ್‌ ಮುಗಿಸಿ ಮರಳಿದ ಶ್ರೀನಾಥರು ಕೈಯಲ್ಲಿ ಹಾಲಿನ ಪ್ಯಾಕೆಟ್‌ ಜೊತೆಗೆ ತಿಂಡಿ ಪೊಟ್ಟಣದ ಪಾರ್ಸೆಲ್ ಹಿಡಿದುಕೊಂಡೇ ಬಂದರು, “ನಿಮ್ಮಿ, ತಿಂಡಿಗೆ ರೆಡಿ ಮಾಡಿ ಆಯ್ತೇನೆ….?” ಎಂದು ಕೇಳುತ್ತಾ ಅಡುಗೆ ಮನೆಗೆ ಕಾಲಿಟ್ಟರು.

ಅವಲಕ್ಕಿ ಒಗ್ಗರಣೆ ತಯಾರಿಸಲು ಇನ್ನೇನು ಅವಲಕ್ಕಿ ಪ್ಯಾಕೆಟ್‌ ಒಡೆದು ನೆನೆಸಲು ಹೊರಟ ನಿರ್ಮಲಾ ಗಂಡ ಅವಸರಿಸುತ್ತಿರುವುದನ್ನು ಕಂಡು, “ಏನು ಸಾಹೇಬರಿಗೆ ವಾಕಿಂಗ್‌ ಮಾಡಿ ಜೋರು ಹಸಿವೆಯಾಯಿತಾ ಹೇಗೆ….? ಅಥವಾ ತಿಂಡಿ ತಿಂದು ಎಲ್ಲಿಗಾದರೂ ಹೋಗಬೇಕಿತ್ತಾ….? ಇನ್ನೂ ಅವಲಕ್ಕಿ ನೆನೆಸೋಕೆ ಹೋಗ್ತಾ ಇದೀನಿ ಅಷ್ಟೇ,” ಎಂದರು.

“ಅವಲಕ್ಕಿ ಎಲ್ಲ ನೆನ್ಸೋದು ಬೇಡ. ನಾನು ಹೋಟೆಲ್ ‌ನಿಂದ ಇಡ್ಲಿ, ವಡೆ ಪಾರ್ಸೆಲ್ ‌ತಂದಿದೀನಿ. ಅದನ್ನೇ ತಿನ್ನೋಣ ಬಾ…. ಆಮೇಲೆ ನಿನ್ನ ಕೈಯಿಂದ ಬಿಸಿ ಬಿಸಿಯಾದ ಒಂದು ಲೋಟ ಸ್ಟ್ರಾಂಗ್‌ ಕಾಫಿ ಕೊಟ್ಬಿಡು ಸಾಕು,” ಎಂದರು ಶ್ರೀನಾಥ್‌.

ನಿರ್ಮಲಾರಿಗೆ ಹೀಗೆ ಗಂಡ ಹೋಟೆಲ್ ‌ನಿಂದ ತಿಂಡಿ ತರೋದು ಸ್ವಲ್ಪ ಇಷ್ಟವಿಲ್ಲ. `ಸುಮ್ಮನೆ ದುಡ್ಡು ಪೋಲು ಮಾಡ್ತೀರಿ,’ ಎಂದು ಸದಾ ಗಂಡನನ್ನು ದೂರುತ್ತಿದ್ದರು.

“ಅಯ್ಯೋ, ಸುಮ್ನೆ ಯಾಕೆ ಹೋಟೆಲ್ ‌ನಿಂದ ತರೋಕೆ ಹೋದ್ರಿ….? ಹಣ ವೇಸ್ಟ್, ಅವಲಕ್ಕಿ ಮಾಡ್ತಾ ಇದ್ನಲ್ಲ…..” ಎಂದು ಎಂದಿನಂತೆ ಆಕ್ಷೇಪಿಸಿದರು ನಿರ್ಮಲಾ.

“ನೀನು ದಿನಾ ಅಡುಗೆ ತಿಂಡಿ ಮಾಡೋದು ಇದ್ದೇ ಇದೆಯಲ್ಲ. ಇತ್ತೊಂದು ದಿನ ನಿನಗೆ ರೆಸ್ಟ್ ಕೊಡಬೇಕು ಅನ್ನಿಸ್ತು. ಅವಲಕ್ಕಿ ಏನೋ ನೀನು ಒಗ್ಗರಣೆ ಹಾಕ್ತೀಯಾ. ಆಮೇಲೆ ತಿಂಡಿ ಅಂತ ಮಾಡಿದ ಮೇಲೆ ಪಾತ್ರೆ ತೊಳಿಬೇಕು, ಒಲೆಯೆಲ್ಲ ಕ್ಲೀನ್ ಮಾಡಬೇಕು, ಅವಲಕ್ಕಿ ಮಿಕ್ಕಿದರೆ ಅದನ್ನು ಮತ್ತೆ ನೀನು ಸಂಜೆಗೆ ಅದನ್ನೇ ತಿಂತೀಯಾ? ಹೀಗೆ ಕೆಲಸ ಬಾಲಂಗೋಚಿಯಾಗಿ ಬೆಳೀತಾ ಹೋಗುತ್ತೆ. ಅದಕ್ಕಿಂತ ಈಗ ಹೋಟೆಲ್ ನಿಂದ ತಂದ ತಿಂಡಿ ತಿಂದು, ಕಾಫಿ ಕುಡಿದು ಬಿಟ್ಟರೆ ಮುಗಿದು ಹೋಯ್ತಲ್ಲ ಕೆಲಸ,” ಎಂದು ಭುಜ ಕುಣಿಸುತ್ತಾ ಹೇಳಿದರು.

“ಆದರೂ ಹೋಟೆಲ್ ತಿಂಡಿಗೆ ಒಂದಕ್ಕೆ ನಾಲ್ಕು ರೇಟು! ಅದು ಯಾವ ಯಾವ ಎಣ್ಣೆಯಲ್ಲಿ ಮಾಡಿರ್ತಾರೋ ಏನೋ?” ಎಂದು ರಾಗವೆಳೆದರು ನಿರ್ಮಲಾ.

“ಇದು ಮಾಮೂಲಿ ಹೋಟೆಲ್ ಅಲ್ಲ. ಒಂದು ಮನೆಯಲ್ಲಿ ನಮ್ಮ ಹಾಗೆ ವಯಸ್ಸಾದ ಗಂಡ ಹೆಂಡತಿ ಇದ್ದಾರೆ. ಅವರು ತಮಗಾಗಿ ಮನೆಯಲ್ಲಿ ತಿಂಡಿ ಮಾಡೋದರ ಜೊತೆಗೆ 35-40 ಜನರಿಗಾಗುವಷ್ಟು ತಿಂಡಿ ಮಾಡಿ ಸೇವ್ ‌ಮಾಡ್ತಾರೆ. ಲಿಮಿಟೆಡ್‌ ಫುಡ್ ಮಾಡ್ತಾರೆ. ನನ್ನ ಫ್ರೆಂಡ್‌ ಜನಾರ್ಧನ ದಿನಾ ಅಲ್ಲೇ ತಿಂಡಿ ತಿನ್ನೋದು. ಏನು ಮಾಡೋದು ಅವನು ಬ್ರಹ್ಮಚಾರಿ ಅಲ್ವಾ? ಹೀಗೆ ಹೋಟೆಲ್ ನಲ್ಲಿ ತಿಂತಾನೇ ಜೀವನ ಕಳೆದುಬಿಟ್ಟ ನೋಡು. ಅವನು ಈ ಹೋಟೆಲ್ ನ ತುಂಬಾ ಹೊಗಳ್ತಾ ಇದ್ದ. ಅದಕ್ಕೆ ನೋಡೋಣ ಅಂತ ತಗೊಂಡು ಬಂದೆ. ಆ ಹೋಟೆಲ್ ‌ನಡೆಸೋ ದಂಪತಿಗಳಿಗೂ ವಯಸ್ಸಾಗಿದೆ. ಒಂದು ರೀತಿಯಿಂದ ನಾವು ಸಹಾಯ ಮಾಡಿದ ಹಾಗೂ ಆಗುತ್ತೆ. ನಮಗೂ ಕೆಲಸ ಉಳಿಯುತ್ತೆ,” ಎಂದು ಪ್ರೀತಿಯಿಂದ ಹೆಂಡತಿಯನ್ನು ಕರೆದರು.

ನಿರ್ಮಲಾ ಬಂದು ಕವರ್‌ ಬಿಚ್ಚಿ ಬಾಳೆ ಎಲೆಯಲ್ಲಿ ಪಾರ್ಸೆಲ್ ಕಟ್ಟಿಡ್ಡ ಇಡ್ಲಿ ವಡೆಯನ್ನು ಒಂದು ಪ್ಲೇಟಿಗೆ ಹಾಕಿದರು. ಗಂಡ ಹೆಂಡತಿ ಇಬ್ಬರೂ ಎದುರು ಬದುರು ಕೂತು ಇಡ್ಲಿ ವಡೆಗೆ ಚಟ್ನಿ ಸವರಿ, ಸಾಂಬಾರ್‌ ನಲ್ಲಿ ಮುಳುಗಿಸಿ ಸವಿದರು.

“ಚೆನ್ನಾಗಿದೆ ಕಣ್ರೀ, ಪರವಾಗಿಲ್ಲ ಮನೆಯಲ್ಲಿ ಮಾಡಿದ ಹಾಗೇ ಇದೆ. ಯಾರವರು…? ಹೊಸದಾಗಿ ಹೋಟೆಲ್ ಓಪನ್ ಮಾಡಿದ್ದಾರಾ…?” ಎಂದು ನಿರ್ಮಲಾ ಕುತೂಹಲದಿಂದ ಕೇಳಿದರು.

“ಬೇರೆ ಊರಿನವರಂತೆ. ಅಲ್ಲೆಲ್ಲ ಸ್ವಲ್ಪ ಲಾಸ್‌ ಆಗಿ ಇಲ್ಲಿ ಬಂದಿದ್ದಾರೆ. ಒಂದು ಬಾಡಿಗೆ ಮನೆ ಹಿಡಿದಿದ್ದಾರೆ. ಮನೆ ಮುಂದಿನ ಅಂಗಳದಲ್ಲಿ ಒಂದು ಶೀಟ್‌ ಹಾಕಿ ಅಲ್ಲಿ ನಾಲ್ಕಾರು ಟೇಬಲ್ ಕುರ್ಚಿ ಇಟ್ಟುಕೊಂಡಿದ್ದಾರೆ. ಮಕ್ಕಳು ಮರಿ ಯಾರೂ ಇಲ್ಲವಂತೆ,” ಎಂದ ಶ್ರೀನಾಥರ ಮಾತಿಗೆ ಮರುಕ ಹುಟ್ಟಿತು.

“ಛೇ… ಪಾಪ ಮಕ್ಕಳಿಲ್ವಾ….? ವಯಸ್ಸಾದ ಕಾಲದಲ್ಲಿ ಯಾರೂ ಇಲ್ಲ ಅಂದ್ರೆ ಎಷ್ಟು ಕಷ್ಟ ಅಲ್ವಾ…..?” ಎಂದರು.

ಅದನ್ನು ಕೇಳಿದ್ದೇ ತಡ ಶ್ರೀನಾಥರು ಜೋರು ಧ್ವನಿಯಲ್ಲಿ, “ಇದ್ದರೂ ಏನು ಪ್ರಯೋಜನ ನಿಮ್ಮಿ….? ಅವರೇನು ನಮ್ಮ ಕಷ್ಟಕ್ಕೆ ಆಗ್ತಾರಾ ಹೇಳು…? ಆವರು ತಿಂಗಳ ಹಿಂದೆ ನನಗೆ ಕಣ್ಣಿನ ಆಪರೇಷನ್‌ ಆಯಿತಲ್ಲ. ಆಗ ಆಸ್ಪತ್ರೆಗೆ ಓಡಾಡಿದ್ದು ಯಾರು? ನೀನು ಮತ್ತೆ ಆ ನನ್ನ ಬ್ರಹ್ಮಚಾರಿ ಸ್ನೇಹಿತ ಜನಾರ್ದನ್‌ ಅಲ್ಲವೇ? ಇಬ್ಬಿಬ್ಬರು ಗಂಡುಮಕ್ಕಳು ನಮಗೆ. ಒಬ್ಬರಾದರೂ, ಅಪ್ಪ, ಅಮ್ಮ ನೀವು ನಮ್ಮ ಮನೇಲಿ ಬಂದಿರಿ, ಇಲ್ಲೇ ಆಪರೇಷನ್‌ ಮಾಡಿಸಿಕೊಳ್ಳಿ ಅಂದ್ರಾ….? ಇಲ್ವಲ್ಲಾ….. ಹ್ಞೂಂ, ಯಾರಿಗೆ ಯಾರೂ ಇಲ್ಲ ನಿಮ್ಮಿ.

“ಮರಿ ಹಕ್ಕಿ ತನ್ನ ರೆಕ್ಕೆಗಳಿಗೆ ಬಲ ಬಂದ ಮೇಲೆ, ಸ್ವಚಂಧ ಆಕಾಶದಲ್ಲಿ ಹಾರಲು ಕಲಿತ ಮೇಲೆ ಅದು ತನಗಾಗಿ ಮೈಲಿಗಟ್ಟಲೆ ದೂರದಿಂದ ಆಹಾರ ತಂದು ತನ್ನ ಬಾಯಿಗೆ ಗುಟುಕಿಡುತ್ತಿದ್ದ ತಾಯಿ ತಂದೆ ಹಕ್ಕಿಯನ್ನು ಮರೆತೇಬಿಡುತ್ತಿ. ಈಗ ಮನುಷ್ಯರೂ ಪ್ರಾಣಿ ಪಕ್ಷಿಗಳ ಹಾಗೆ ಆಗಿಬಿಟ್ಟಿದ್ದಾರೆ. ಅದೆಲ್ಲ ಒಂದು ಕಾಲದಲ್ಲಿ ಇತ್ತು. ವಯಸ್ಸಾದ ಮೇಲೆ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಾರೆ, ನಮ್ಮ ಸಹಾಯಕ್ಕೆ ಬರ್ತಾರೆ ಅಂತೆಲ್ಲ ಹಿಂದಿನವರು ಲೆಕ್ಕಾಚಾರ ಹಾಕುತ್ತಿದ್ದರು. ಈಗ ಅದೆಲ್ಲ ಕನಸಿನ ಮಾತು. ವಯಸ್ಸಾದ ಮೇಲೆ ಮಕ್ಕಳು ನಮ್ಮ ಜೊತೆಗೆ ಇರಬೇಕಾದ್ರೆ ಹಿಂದಿನ ಜನ್ಮದ ಪುಣ್ಯ ಇರಬೇಕೋ ಏನೋ….?” ಎಂದು ನಿಟ್ಟುಸಿರುಬಿಟ್ಟರು ಶ್ರೀನಾಥ್‌.

“ಸುತ್ತಿ ಬಳಸಿ ನಮ್ಮ ಸಂಸಾರದ ಕಥೆನೇ ಹೇಳ್ತಾ ಇದ್ದೀರಾ….? ನಮ್ಮ ಮಕ್ಕಳು ಮಾತ್ರ ಸ್ವಾರ್ಥಿಗಳಾ….? ನಿಮ್ಮ ತಮ್ಮ ತಂಗಿ ಏನು ಮಾಡಿದರು. ಮರೆತುಹೋಯಿತಾ…..? ಅಷ್ಟೆಲ್ಲ ಅವರಿಗೆ ಓದಿಸಿ ಒಂದು ಒಳ್ಳೆ ಭವಿಷ್ಯ ರೂಪಿಸಬೇಕಾದರೆ ನಾವಿಬ್ಬರೂ ನಮ್ಮ ಸುಖವನ್ನು ತ್ಯಾಗ ಮಾಡಿದ್ದು ಅವರುಗಳ ಅರಿವಿಗೇ ಬರಲಿಲ್ಲ. `ಅಪ್ಪ ತೀರಿಕೊಂಡ ಮೇಲೆ ಅವರ ಕೆಲಸ ನಿನಗೆ ಸಿಕ್ಕಿದ್ದು. ಅದಕ್ಕೆ ನಮಗೆಲ್ಲ ಕಲಿಸೋದು ನಿನ್ನ ಡ್ಯೂಟಿಯಾಗಿತ್ತು. ಅದನ್ನು ನೀನು ಮಾಡಿದೆ. ಅದರಲ್ಲೇನು ಹೆಚ್ಚುಗಾರಿಕೆ ಇದೆ,’ ಎಂದು ನಿಷ್ಠೂರವಾಗಿ ಹೇಳಿಬಿಟ್ಟರಲ್ಲ,” ಎಂದು ಹಳೆಯದೆಲ್ಲ ನೆನಪಾಗಿ ಮನಸ್ಸಿನ ಕಹಿ ಹೊರ ಹಾಕಿದರು ನಿರ್ಮಲಾ.

“ಹ್ಞೂಂ…. ತಮ್ಮ ತಂಗಿ ಕಥೆ ಹಾಗಾದರೆ, ಹೊಟ್ಟೆಲಿ ಹುಟ್ಟಿದ ಮಕ್ಕಳಿಗೂ ನಾವು ಬೇಡವಾದೆವಲ್ಲ. ಒಬ್ಬರಾದರೂ ನಮ್ಮ ಜೊತೆ ಬಂದು ಇರಿ ಅಂತ ಕರೀತಾರಾ….?” ಶ್ರೀನಾಥ್‌ ಬೇಸರದಿಂದ ನಿಟ್ಟುಸಿರು ಹೊರಹಾಕಿದರು.

“ಅಲ್ಲಾರೀ…. ನಾವು ಮಕ್ಕಳಿಗೆ ಓದಿಸಿ ಒಳ್ಳೆ ಡಿಗ್ರಿ ಕೊಡಿಸೋದು ಯಾಕೆ? ಅವರಿಗೊಂದು ಕೆಲಸ ಸಿಕ್ಕಲಿ, ಅವರ ಕಾಲ ಮೇಲೆ ಅವ್ರು ನಿಂತ್ಕೊಳ್ಳಲಿ ಅಂತ ತಾನೇ….? ಈಗ ನಮ್ಮ ಮಕ್ಕಳು ಅವರಷ್ಟಕ್ಕೆ ಅವರಿದ್ದಾರೆ. ಅದಕ್ಕೆ ನಾವು ಖುಷಿಪಡಬೇಕು. ಎಷ್ಟೋ ಜನ ವಿದ್ಯಾವಂತರು ಡಿಗ್ರಿ ಮುಗಿದ ಮೇಲೂ ಕೆಲಸ ಸಿಗದೆ ಇನ್ನೂ ಅಪ್ಪ ಅಮ್ಮನ ಹಂಗಿನಲ್ಲೇ ಇರ್ತಾರೆ. ನಮ್ಮ ಪಕ್ಕದ ಮನೆಯ ರಾಧಾ ಟೀಚರ್‌ಹೇಳ್ತಾ ಇದ್ರು. ಅವರ ಮಗ ದಿನಾ ಬೆಳಗ್ಗೆ ಹೋಗಿ ರಾತ್ರಿ ಬರುತ್ತಾನಂತೆ. ಎಲ್ಲಿ ಹೋಗಿದ್ದೆ ಅಂತ ಕೇಳಿದರೆ ಕೆಲಸದ ಇಂಟರ್‌ ವ್ಯೂ ಅಂತ ಹೇಳ್ತಾನಂತೆ.

“ಅವನು ಎಂ.ಬಿ.ಎ ಮಾಡಿದ್ದಾನೆ. ಸಣ್ಣಪುಟ್ಟ ಕೆಲಸ ಮಾಡೋಕೆ ಅವನಿಗೆ ಇಷ್ಟ ಇಲ್ಲ. ಜಾಸ್ತಿ ಸಂಬಳದ ಕೆಲಸ ಸಿಗ್ತಾ ಇಲ್ಲ. ಅವನ ಬಸ್‌ ಚಾರ್ಜ್‌ ಗೆ ಕೂಡ ಇವರೇ ಕೊಡಬೇಕಂತೆ. ಸಧ್ಯ ನಮ್ಮ ಪರಿಸ್ಥಿತಿ ಹಾಗಿಲ್ಲವಲ್ಲ. ಅದೇ ಸಮಾಧಾನ. ಮಕ್ಕಳು ಕರೆಯದಿದ್ದರೇನಂತೆ….? ನಮಗೆ ಬೇಜಾರಾದರೆ ಅಲ್ಲಿಗೆ ಹೋಗಿ ಇದ್ದು ಬರೋಣ. ಮೂರು ತಿಂಗಳ ಹಿಂದೆ ಹೋಗಿದ್ವಲ್ಲ ಅದೇ ರೀತಿ….” ಎಂದು ನಿರ್ಮಲಾ ಮಕ್ಕಳ ಪರವಾಗಿ ವಕಾಲತ್ತು ವಹಿಸಿದರು.

ಶ್ರೀನಾಥರು ಮರು ಮಾತನಾಡಲಿಲ್ಲ. ಅವರಿಗೆ ಮಕ್ಕಳ ಮನೆಗೆ ಹೋಗಿ ಇರುವುದು ಸ್ವಲ್ಪ ಇಷ್ಟವಾಗುತ್ತಿರಲಿಲ್ಲ. ಅದೊಂದು ರೀತಿ ಬಂಧನವೆಂಬ ಅನುಭವ ಸಾಕಷ್ಟು ಸಲ ಅವರಿಗೆ ಆಗಿತ್ತು.

ಮೂರು ತಿಂಗಳ ಹಿಂದೆ ದೊಡ್ಡ ಮಗ ಶ್ರೀತ್ಸನ ಮನೆಗೆ ಹೋದಾಗ ಯಾರೋ ನೆಂಟರ ಮನೆಗೆ ಹೋದ ಹಾಗೆ ಆಗಿತ್ತು. ಇವರಿಬ್ಬರೂ ಅಲ್ಲಿರುವಷ್ಟು ದಿನ ಸೊಸೆ ಅರುಣಾ ಮುಖ ಗಂಟಿಕ್ಕಿಕೊಂಡೆ ಇದ್ದಳು. ಹತ್ತು ಮಾತು ಆಡಿದರೆ ಅವಳು, `ಹ್ಞೂಂ’ ಅಥವಾ `ಇಲ್ಲ’ ಎಂದಷ್ಟೇ ಚುಟುಕಾಗಿ ಉತ್ತರಿಸುತ್ತಿದ್ದಳು. ಹಾಗೆಂದ ಮಾತ್ರಕ್ಕೆ ಅವಳೇನೂ ಮಿತಭಾಷಿಯಲ್ಲ. ಅವರ ಗೆಳತಿಯರು, ನೆರೆಹೊರೆಯವರು ಮನೆಗೆ ಬಂದರೆ ಬಾಯಿ ತುಂಬಾ ಮಾತನಾಡುತ್ತಿದ್ದಳು. ಆ ನಗು, ಆ ಮಾತು, ಕೇಕೆ ನೋಡಬೇಕು! ಆದರೆ ಅತ್ತೆ ಮಾವನೊಡನೆ ಮಾತನಾಡಲು ಏನೋ ಬಿಗುಮಾನ. ಹೆಚ್ಚು ಮಾತನಾಡಿ ಆತ್ಮೀಯವಾಗಿದ್ದರೆ ಇವರೆಲ್ಲಿ ಇಲ್ಲೇ ಇದ್ದುಬಿಡುತ್ತಾರೋ ಎಂಬ ಭಯವಿರಬೇಕು.

ಒಮ್ಮೆ ವಾಷಿಂಗ್‌ ಮೆಷಿನ್‌ ಗೆ ಬಟ್ಟೆ ಹಾಕುವಾಗ, “ಅತ್ತೆ ಮಾವ, ನಿಮ್ಮ ಬಟ್ಟೆನಾ ಸಪರೇಟ್‌ ಆಗಿ ಹಾಕಿಕೊಳ್ಳಿ. ನನ್ನ ಗಂಡ, ಮಕ್ಕಳ ಬಟ್ಟೆಯ ಜೊತೆಗೆ ಹಾಕ್ಬೇಡಿ,” ಎಂದು ಖಡಕ್ಕಾಗಿ ಹೇಳಿದ್ದಳು.

“ನಮಗೇನು ಚರ್ಮ ರೋಗವಿದೆಯಾ ತಾಯಿ, ಹೀಗೆ ಹೇಳ್ತಾ ಇದೀಯಲ್ಲ…?’ ಎಂದು ಕೇಳಬೇಕೆನಿಸಿದ್ದರೂ ನಿರ್ಮಲಾ ಸುಮ್ಮನಿರುವಂತೆ ಸನ್ನೆ ಮಾಡಿದಾಗ ವಿಧಿ ಇಲ್ಲದೆ ಶ್ರೀನಾಥ್‌ ಸುಮ್ಮನಾದರು.

ಇನ್ನು ಎರಡನೇ ಮಗ ಆದರ್ಶನೂ ಇವರನ್ನು ಪ್ರೀತಿ ಆದರಗಳಿಂದ ಬರ ಮಾಡಿಕೊಳ್ಳುವುದು ಅಷ್ಟರಲ್ಲೇ. ಅವನಿರೋದು ಮುಂಬೈನಲ್ಲಿ. ಅಪ್ಪ ಅಮ್ಮ ಮುಂಬೈಗೆ ಬರುತ್ತೇವೆ ಎಂದು ಫೋನ್‌ ಮಾಡಿದರೆ ಸಾಕು, `ಅಯ್ಯೋ, ನಾವು ಒಂದು ಟೂರ್‌ ಪ್ಲಾನ್ ಮಾಡಿದೀವಿ ಈಗ ಬರಬೇಡಿ,’ ಅಂತಲೋ `ಅಪ್ಪಾ…. ಆಫೀಸ್‌ ವರ್ಕ್‌ ತುಂಬಾ ಇದೆ. ನಾನು ಒಂದೊಂದು ಸಲ ಆಫೀಸ್‌ ನಲ್ಲೇ ಮಲಗ್ತೀನಿ. ಶ್ವೇತಾಗೂ ವರ್ಕ್‌ ಲೋಡ್‌ ಜಾಸ್ತಿಯಾಗಿದೆ. ತನ್ನ ಆಫೀಸಿಗೆ ಹತ್ತಿರ ಆಗುತ್ತೆ ಅಂತ ಈಗವಳು ಮಗುವನ್ನು ಕರೆದುಕೊಂಡು ತವರಿನಲ್ಲೇ ಇದ್ದಾಳೆ. ತವರಿನಿಂದಲೇ ಡೇಲಿ ಅಪ್‌ ಅಂಡ್‌ ಡೌನ್‌ ಮಾಡ್ತಾ ಇದ್ದಾಳೆ. ಮಗೂನ ಅಲ್ಲೇ ಹತ್ತಿರದ ಸ್ಕೂಲ್ ಗೆ ಸೇರಿಸಿದ್ದಾಳೆ. ಅಪ್ಪಾ ನೀವು ಸದ್ಯಕ್ಕೆ ಬರಬೇಡಿ. ನಾನು ಫ್ರೀ ಆದಾಗ ಅತ್ತೆ ಮನೆಗೇ ಹೋಗ್ತಿರ್ತಿನಿ. ಪಾಪ ಅವರಿಗಾದರೂ ಯಾರಿದ್ದಾರೆ ಅಪ್ಪಾ….’ ಎಂದು ನಿರ್ದಾಕ್ಷಿಣ್ಯವಾಗಿ  ಹೇಳಿದ್ದ.

`ಎಂಥ ಮಗ,’ ಎಂದು ಶ್ರೀನಾಥರ ಮನಸ್ಸಿಗೆ ಪಿಚ್ಚೆನಿಸಿತು. ಈ ಮಗನಿಗಾಗಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅವನು ಚಿಕ್ಕವನಿದ್ದಾಗ ಆಗಾಗ ಕೆಮ್ಮು, ಜ್ವರ ಬರುತ್ತಿತ್ತು. ಅದು ಚಿಕ್ಕ ಮಕ್ಕಳಲ್ಲಿ ಸಾಮಾನ್ಯ ಎಂದು ತಿಳಿದು ಮನೆ ಹತ್ತಿರದ ಡಾಕ್ಟರ್‌ ಬಳಿ ತೋರಿಸಿ ಔಷಧಿ ಕೊಡಿಸುತ್ತಿದ್ದರು. ಆದರೆ ಪದೇ ಪದೇ ಹೀಗೆ ಕೆಮ್ಮು, ಜ್ವರ ಬರತೊಡಗಿದಾಗ, ಅವನನ್ನು ಕರೆದುಕೊಂಡು ದೊಡ್ಡ ಆಸ್ಪತ್ರೆಗೆ ಹೋಗಿದ್ದರು. ಆಗ ಅವನ ಹೃದಯದಲ್ಲಿ ಒಂದು ರಂಧ್ರವಿದೆ ಎಂದು ತಿಳಿಯಿತು. ಆದಷ್ಟು ಬೇಗ ಆಪರೇಷನ್‌ ಮಾಡಿಸಬೇಕೆಂದು ಡಾಕ್ಟರ್‌ ಹೇಳಿದಾಗ ಶ್ರೀನಾಥ್‌ ದಂಪತಿಗಳು ಕಕ್ಕಾಬಿಕ್ಕಿಯಾಗಿದ್ದರು.

ಅಂತೂ ಇಂತೂ ಸಾಲ ಸೋಲ ಮಾಡಿ ಹಣ ಹೊಂದಿಸಿ ಮಗನ ಹೃದಯದ ಆಪರೇಷನ್‌ ಮಾಡಿಸಿದ್ದರು. ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ್ದರು. ಹೀಗಾಗಿ ಅವನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಗಂಡ ಹೆಂಡತಿ ಆತಂಕಕ್ಕೊಳಗಾಗುತ್ತಿದ್ದರು. ಆದರೆ ಈಗ ಆ ಮಗನೇ, `ನೀವು ನಮ್ಮಲ್ಲಿಗೆ ಬರಬೇಡಿ,’ ಎಂದು ಹೇಳಿ ತಮ್ಮ ಹೃದಯನ್ನು ಚುಚ್ಚುವಂತೆ ಮಾತನಾಡುತ್ತಿದ್ದಾನೆ. ಹ್ಞಾಂ….. ಈ ಸ್ವಾರ್ಥ ತುಂಬಿದ ಜಗತ್ತಿನಲ್ಲಿ ಯಾರಿಗೆ ಯಾರೂ ಇಲ್ಲ ಎನಿಸಿತು ಅವರಿಗೆ, ಹಳೆಯದನ್ನೆಲ್ಲಾ ಮೆಲುಕು ಹಾಕಿದರು ಶ್ರೀನಾಥ್‌.

ಶ್ರೀನಾಥ್‌ ಬ್ಯಾಂಕೊಂದರಲ್ಲಿ ಮ್ಯಾನೇಜರ್‌ ಆಗಿ ರಿಟೈರ್ಡ್‌ ಆಗಿದ್ದರು. ಪ್ರಾರಂಭದಲ್ಲಿ ಅವರು ಜವಾನನಾಗಿ ಆ ಬ್ಯಾಂಕ್‌ ನಲ್ಲಿ ಕೆಲಸಕ್ಕೆ ಸೇರಿದ್ದರು. ಅವರ ತಂದೆ ಸರ್ವೀಸ್‌ ನಲ್ಲಿದ್ದಾಗಲೇ ಹೃದಯಾಘಾತದಿಂದ ತೀರಿಕೊಂಡಿದ್ದರು. ನೌಕರರು ಸೇವಾ ಅವಧಿ ಮುಗಿಯುವ ಮುನ್ನವೇ ಮರಣ ಹೊಂದಿದರೆ ಅನುಕಂಪದ ಆಧಾರದ ಮೇಲೆ ಅವರ ಹೆಂಡತಿಗೆ ಅಥವಾ ಮೆಜಾರಿಟಿಗೆ ಬಂದ ಅವರ ಮಕ್ಕಳಿಗೆ ನೌಕರಿ ದೊರೆಯಬೇಕೆಂಬ ಸರ್ಕಾರಿ ನಿಯಮದಂತೆ ಅವರಿಗೆ ನೌಕರಿ ದೊರೆತಿತ್ತು.

pregnancy-story1

ಶ್ರೀನಾಥರ ತಾಯಿ ಕಲಿತದ್ದು 3ನೇ ಕ್ಲಾಸ್‌. ಅವರಿಗೆ ಯಾವುದೇ ವ್ಯವಹಾರ ಜ್ಞಾನವಿರಲಿಲ್ಲ. ಹೀಗಾಗಿ ಅವರು ಮಗನನ್ನು ನೌಕರಿಗೆ ಸೇರುವಂತೆ ಒತ್ತಾಯಿಸಿದ್ದರು. ಶ್ರೀನಾಥ್‌ ಗೆ ಇನ್ನೂ ಕಲಿಯುವ ಆಸೆ ಇದ್ದರೂ ತಮ್ಮ ಕುಟುಂಬ ನಿರ್ವಹಣೆಗಾಗಿ ಅಪ್ಪನ ಬ್ಯಾಂಕಿನಲ್ಲೇ ಜವಾನನ ಕೆಲಸಕ್ಕೆ ಸೇರಿಕೊಂಡಿದ್ದರು. ಏನೇನೋ ಆಗಬೇಕೆಂದ ಕನಸು ಕಂಡಿದ್ದ ಶ್ರೀನಾಥರಿಗೆ ಜವಾನನ ಕೆಲಸ ಮಾಡುವಾಗ ಒಮ್ಮೊಮ್ಮೆ ದುಃಖ ಒತ್ತರಿಸಿ ಬರುತ್ತಿತ್ತು. ಆದರೂ ತಮಗೆ ವಹಿಸಿದ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು.

ಹೀಗೆ ಒಮ್ಮೆ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರಿಗೆ ಕ್ಯಾಂಟೀನ್‌ ನಿಂದ ಟೀ ತಂದುಕೊಟ್ಟರು. ಹೇಳಿದ ಕೆಲಸವನ್ನು ಚುರುಕಾಗಿ ಮಾಡುತ್ತಾ, ಆಫೀಸ್‌ ತುಂಬಾ ಲವಲವಿಕೆಯಿಂದ ಓಡಾಡಿಕೊಂಡಿದ್ದ ಇನ್ನೂ ಎಳಸು ಮುಖದ ಹುಡುಗನನ್ನು ನೋಡಿ ಹೊಸದಾಗಿ ಬಂದ ಆ ಅಧಿಕಾರಿಗೆ ಇವರ ಬಗ್ಗೆ ಕನಿಕರದ ಜೊತೆಗೆ ಕುತೂಹಲ ಹುಟ್ಟಿ, “ಏನಪ್ಪಾ… ಇಷ್ಟು ಸಣ್ಣ ವಯಸ್ಸಿಗೆ ಕೆಲಸಕ್ಕೆ ಸೇರಿದ್ದೀಯಾ…..? ಮುಂದೆ ಓದಬಹುದಿತ್ತಲ್ವಾ….?” ಎಂದು ಕೇಳಿದರು.

“ಸಾರ್‌, ಅನಿವಾರ್ಯವಾಗಿ ನಾನು ಕೆಲಸಕ್ಕೆ ಸೇರಿದೀನಿ. ನನಗೂ ಮುಂದೆ ಓದಬೇಕು. ನಿಮ್ಮ ಹಾಗೆ ಆಫೀಸರ್‌ ಆಗಬೇಕೆಂಬ ಆಸೆ ಇತ್ತು. ಆದರೆ ನನ್ನ ತಂದೆಯ ಅಕಾಲ ಮರಣದಿಂದ ನಾನು ಅನುಕಂಪದ ಆಧಾರದ ಮೇಲೆ ಈ ಕೆಲಸಕ್ಕೆ ಸೇರಿಕೊಂಡೆ. ನನಗೆ ಬರುವ ಸಂಬಳದಲ್ಲಿ ತಮ್ಮ, ತಂಗಿಯನ್ನು ಓದಿಸಬೇಕು. ಅವರ ಭವಿಷ್ಯ ರೂಪಿಸಬೇಕು, ಮನೆ ನಡೆಸಬೇಕು, ತಾಯಿಯನ್ನು ನೋಡಿಕೊಳ್ಳಬೇಕು. ಇಷ್ಟೆಲ್ಲಾ ಹೊರೆ ನನ್ನ ಮೇಲಿರುವಾಗ ನಾನು ಮುಂದೆ ಹೇಗೆ ಕಲಿಯಲಿ ಸಾರ್‌….?” ಎಂದು ಆ ಅಧಿಕಾರಿಯ ಮುಂದೆ ಅಳುತ್ತಾ ಹೇಳಿಕೊಂಡರು ಶ್ರೀನಾಥ್‌.

“ಅಳಬೇಡಪ್ಪ… ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಅಂತ ಇರುತ್ತೆ. ನೀನು ಮನಸ್ಸು ಮಾಡಿದರೆ ಈವ್ನಿಂಗ ಕಾಲೇಜ್‌ ಗೆ ಸೇರಿಕೊಂಡು ಡಿಗ್ರಿ ಕಂಪ್ಲೀಟ್‌ ಮಾಡಬಹುದು. ಆಫೀಸರ್‌ ಎಗ್ಸಾಮ್ ಬರೆದು ಪಾಸಾದರೆ ನಿನ್ನ ಕನಸಿನಂತೆ ನೀನೂ ಆಫೀಸರ್ ಆಗಬಹುದು. ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ನಾನು ಬರೀ ಉಪದೇಶ ಮಾಡ್ತಿದ್ದೀನಿ ಅಂದ್ಕೊಬೇಡ. ನಾನೇನು ದೊಡ್ಡ ಶ್ರೀಮಂತರ ಮನೆಯಿಂದ ಬಂದವನಲ್ಲ. ನನ್ನ ತಂದೆ ಗಾರೆ ಕೆಲಸ ಮಾಡುತ್ತಿದ್ದರು. ನಾನು ಕೂಡ ಶಾಲೆಗೆ ರಜೆ ಇದ್ದಾಗ ಅವರ ಜೊತೆ ಅದೇ ಕೆಲಸಕ್ಕೆ ಹೋಗ್ತಿದ್ದೆ. ಆ ಹಣದಲ್ಲೇ ನನ್ನ ಶಾಲಾ ಕಾಲೇಜ್‌ ಫೀಸ್‌ ಕಟ್ಟುತ್ತಿದ್ದೆ.

“ಹೀಗೆ ಬಿಡುವಿದ್ದಾಗೆಲ್ಲಾ ಹತ್ತೆಂಟು ಉದ್ಯೋಗ ಮಾಡಿ ಹಣ ಗಳಿಸಿ. ನನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಿದೆ. ಡಿಗ್ರಿ ಮುಗಿದ ಮೇಲೆ ಬ್ಯಾಂಕ್‌ ಪರೀಕ್ಷೆ ಕಟ್ಟಿದೆ. ಚೆನ್ನಾಗಿ ಓದಿ ಆಫೀಸರ್‌ ಎಗ್ಸಾಮ್ ಬರೆದು ಪಾಸಾದೆ. ಕಷ್ಟಪಟ್ಟರೆ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬಹುದು. ಆಗ ಯಾರ ಹಂಗೂ ಇರುವುದಿಲ್ಲ. ಸೋಲಿಗೆ ನೂರೆಂದು ಕಾರಣ ಹೇಳುವ ಬದಲು ಗೆದ್ದು ಬೀಗುವುದನ್ನು ಕಲಿ. ನನ್ನ ಹಾಗೆ ನಿನ್ನ ಜೀವನ ಇನ್ನೊಬ್ಬರಿಗೆ ಮಾದರಿಯಾಗಲಿ,” ಎಂದು ಉಪದೇಶ ಕೊಟ್ಟಿದ್ದಲ್ಲದೆ, ಸಂಜೆ ಕಾಲೇಜಿಗೆ ತಮ್ಮದೇ ಸಂಬಳದ ಹಣದಿಂದ ಅಡ್ಮಿಷನ್‌ ಕೂಡ ಮಾಡಿಸಿದರು. ಆ ಪುಣ್ಯಾತ್ಮನ ಸಹಾಯದಿಂದ ಶ್ರೀನಾಥ್‌ ಕಷ್ಟಪಟ್ಟು ಓದಿ ಡಿಗ್ರಿ ಮುಗಿಸಿ ಹಂತಹಂತವಾಗಿ ಪ್ರೊಮೋಷನ್‌ ಪಡೆಯುತ್ತಾ ಅದೇ ಬ್ಯಾಂಕಿನಲ್ಲಿ ಮ್ಯಾನೇಜರ್‌ ಆದರು. ಅದೇ ಸಮಯದಲ್ಲಿ ಬ್ಯಾಂಕಿನಲ್ಲಿ ಪಿಗ್ಮಿ ಏಜೆಂಟ್‌ ಆಗಿದ್ದ ನಿರ್ಮಲಾ ಪರಿಚಯವಾದದ್ದು. ಮದುವೆಯಾದ ಮೂರು ತಿಂಗಳಿಗೆ ನಿರ್ಮಲಾರ ಗಂಡ ಆಕ್ಸಿಡೆಂಟ್‌ ನಲ್ಲಿ ತೀರಿಕೊಂಡಿದ್ದರು. ಆ ಕಾಲದಲ್ಲಿ ವಿಧವೆಯರನ್ನು ಯಾರೂ ಅಷ್ಟಾಗಿ ಮದುವೆಯಾಗುತ್ತಿರಲಿಲ್ಲ. ಆದರೆ ಶ್ರೀನಾಥ್‌ ರಿಗೇಕೋ ನಿರ್ಮಲಾರ ಬಗ್ಗೆ ವಿಶೇಷವಾದ ಪ್ರೀತಿ, ಇಷ್ಟು ಚಿಕ್ಕ ವಯಸ್ಸಿನಲ್ಲಿ ದಾಂಪತ್ಯದ ಯಾವ ಸುಖವನ್ನೂ ಕಾಣದೆ ವಿಧವೆಯಾದಳಲ್ಲ ಎಂಬ ಅನುಕಂಪ, ಜೊತೆಗೆ ಅವಳ ಸೌಮ್ಯ ಸ್ವಭಾವದ ಬಗ್ಗೆ ಮೆಚ್ಚುಗೆ.

ಒಟ್ಟಾರೆ ಎಲ್ಲ ಭಾವನೆಗಳು ಸೇರಿ ಅನುರಾಗದ ಅಲೆಯೊಂದು ಅವರ ಹೃದಯದಲ್ಲಿ ಪುಟಿಯಿತು. ಒಂದು ದಿನ ತಾಯಿಯ ಎದುರಿಗೆ ತನ್ನ ಪ್ರೀತಿಯನ್ನು ಹೇಳಿಯೇ ಬಿಟ್ಟರು. ಆಕೆ ಒಮ್ಮೆಲೆ ಹೌಹಾರಿಬಿಟ್ಟರು.

“ಇದೇನು ಮಾತಾಡ್ತಾ ಇದ್ದೀಯಾ? ಒಳ್ಳೆ ಕೆಲಸದಲ್ಲಿದೀಯಾ, ನೀನು ಬಯಸಿದರೆ ಎಂತೆಂಥ ಚಂದಚಂದದ, ಒಳ್ಳೆಯ ಅನುಕೂಲಸ್ಥರ ಮನೆತನದ ಹುಡುಗಿಯರು ನಿನಗೆ ಸಿಕ್ತಾರೆ. ಹೋಗಿ ಹೋಗಿ ಗಂಡ ಸತ್ತವಳನ್ನು ಮದುವೆಯಾಗ್ತೀನಿ ಅಂತೀಯಲ್ಲ. ಜನ ಏನಂತಾರೆ….? ಆ ಹೆಣ್ಣು ಮದುವೆಯಾಗಿ ಮೂರು ತಿಂಗಳಿಗೇ ಗಂಡನನ್ನು ಕಳೆದುಕೊಂಡ ನತದೃಷ್ಟೆ. ಅಪಶಕುನದ ಹೆಣ್ಣು ಈ ಮನೆಗೆ ಸೊಸೆಯಾಗಿ ಬರುವುದಾ….?” ಎಂದು ಕೂಗಾಡಿದರು.

ಶ್ರೀನಾಥ್‌ ಮಾತ್ರ ತಾಯಿಯ ಮಾತಿಗೆ ಬಗ್ಗಲಿಲ್ಲ. “ನೋಡಮ್ಮಾ…. ನನ್ನ ಜೀವನದ ಯಾವ ಆಸೆಯನ್ನೂ ನಾನು ಪೂರೈಸಿಕೊಳ್ಳಲಿಲ್ಲ. ನಿನಗೆ ಗೊತ್ತಿದೆಯಲ್ಲಾ, ಕಾಲೇಜು ಓದುತ್ತಾ ಮಜಾ ಮಾಡಬೇಕಾಗಿದ್ದ ವಯಸ್ಸಿನಲ್ಲಿ ನೌಕರಿಗೆ ಸೇರಿದೆ. ಆ ಪುಣ್ಯಾತ್ಮ ಆಫೀಸರ್‌ದಯೆಯಿಂದ ಮುಂದೆ ಈವ್ನಿಂಗ್‌ಕಾಲೇಜು ಸೇರಿದರೂ ದುಡಿಮೆ, ಓದು ಒಟ್ಟೊಟ್ಟಿಗೆ ಮಾಡುವಾಗ ನಾನು ಹೈರಾಣಾಗಿದ್ದೆ. ಸಂಸಾರ ತೂಗಿಸೋಕೆ, ತಮ್ಮನ ಓದಿಗೆ, ತಂಗಿಯ ಮದುವೆಗೆ ಅಂತ ಹಣ ಕೂಡಿಡುವುದರಲ್ಲೇ ಆಯ್ತು ನನ್ನ ಜೀವನ. ಈಗಲೂ ಸೈಕಲ್ ಮೆಟ್ಟಿಕೊಂಡು ಬ್ಯಾಂಕಿಗೆ ಹೋಗೋನು ನಮ್ಮ ಬ್ಯಾಂಕಿನಲ್ಲಿ ನಾನೊಬ್ಬನೇ. ಈಗ ನಾನು ಬಯಸಿದ ಹುಡುಗೀನ ಮದುವೆ ಮಾಡಿಕೊಳ್ಳುತ್ತೀನಿ. ಅದಕ್ಕಾದರೂ ಬಿಡು. ಇಲ್ಲದಿದ್ದರೆ ನಾನು ಈ ಮನೆ ಬಿಟ್ಟು ಹೋಗುವುದು ಖಂಡಿತ,” ಎಂದು ತನ್ನ ನಿರ್ಧಾರಲನ್ನು ಹೇಳಿದರು.

ಶ್ರೀನಾಥರ ತಾಯಿ ಅಂಬಕ್ಕ ತೆಪ್ಪಗಾದರು. ಮನೆಯಲರ, ಬಂಧುಗಳ ವಿರೋಧದ ನಡುಲಂ ಶ್ರೀನಾಥ್‌ ಮತ್ತು ನಿರ್ಮಲಾ ಕೋರ್ಟ್‌ ಮ್ಯಾರೇಜ್‌ ಮಾಡಿಕೊಂಡರು. ನಿರ್ಮಲಾ ಶ್ರೀನಾಥರ ಬಾಳ ಸಂಗಾತಿಯಾಗಿ ಅವರ ಮನೆ, ಮನ ತುಂಬಿದರು. ಅಂಬಕ್ಕ ಮಾತ್ರ ಸೊಸೆಯನ್ನು, “ನನ್ನ ಮಗನನ್ನು ಬುಟ್ಟಿಗೆ ಹಾಕಿಕೊಂಡ ಮಾಯಾಂಗನೆ. ಅದೇನೊ ಕೋರ್ಟಿನಲ್ಲಿ ಸಹಿ ಮಾಡಿದ ಮಾತ್ರಕ್ಕೆ ಹೆಂಡತಿಯಾಗ್ತಾಳಾ? ಇವಳೇನು ನಮ್ಮ ಹಾಗೆ ಸಪ್ತಪದಿ ತುಳಿದು ಬಂದವಳಲ್ಲವಲ್ಲ,” ಎಂದು ಹಂಗಿಸುತ್ತಿದ್ದರು.

ನಿರ್ಮಲಾ ಆ ಬಗ್ಗೆ ಗಂಡನೆದುರು ಚಕಾರವೆತ್ತದಿದ್ದರೂ ಶ್ರೀನಾಥರಿಗೆ ತಾಯಿಯ ಕೊಂಕುನುಡಿ, ಭುಸುಗುಡುವಿಕೆಯ ಬಗ್ಗೆ ಗೊತ್ತೇ ಇತ್ತು.

ಗಂಡ ಹೆಂಡತಿ ಇಬ್ಬರೂ ಸೇರಿ ಸಂಸಾರ ರಥಕ್ಕೆ ಹೆಗಲುಕೊಟ್ಟರು. ಶ್ರೀನಾಥ್‌ ನಿರ್ಮಲಾಗೆ, “ನಾನು ನನ್ನ ತಮ್ಮನಿಗೆ ಮೆಡಿಕಲ್ ಓದಿಸಬೇಕು, ತಂಗಿಯ ಮದುವೆ ಮಾಡಬೇಕು. ಹೀಗಾಗಿ ನೀನು ಸ್ವಲ್ಪ ಜಾಣತನದಿಂದ ಸಂಸಾರ ನಿಭಾಯಿಸಬೇಕಾಗುತ್ತದೆ ನಿಮ್ಮಿ,” ಎಂದು ಮೊದಲೇ ಹೇಳಿದ್ದರು.

ಹೀಗಾಗಿ ಮೊದಲಿನಿಂದಲೂ ಲೆಕ್ಕಾಚಾರದಲ್ಲಿ ಬದುಕಿದರು. ನಿರ್ಮಲಾ ಬಯಸಿದ ಒಂದು ಸೀರೆಯಾಗಲಿ, ಚಿನ್ನ ಬೆಳ್ಳಿಯಾಗಲಿ ಎಂದೂ ಖರೀದಿಸಲಿಲ್ಲ. ಶ್ರೀನಾಥ್‌ ರ ತಮ್ಮ ಸುರೇಂದ್ರ ಮೆಡಿಕಲ್ ಓದಿ ಡಾಕ್ಟರ್‌ ಆದ. ತಂಗಿಗೂ ಒಳ್ಳೆಯ ಕಡೆ ನೋಡಿ ಮದುವೆ ಮಾಡಿಕೊಟ್ಟರು. ಆ ಜವಾಬ್ದಾರಿ ಮುಗಿಯುತ್ತಲೇ, ಅವರ ಮಕ್ಕಳು ದೊವಡ್ಡರಾಗುತ್ತಾ ಬಂದರು. ಮಕ್ಕಳ ಓದು, ಉನ್ನತ ಶಿಕ್ಷಣ ಎಂದು ಮತ್ತೆ ತಮ್ಮ ಕನಸುಗಳನ್ನೆಲ್ಲ ಅದುಮಿಟ್ಟು ಲೆಕ್ಕಾಚಾರದಲ್ಲಿ ದಂಪತಿಗಳು ಬದುಕಿದರು.

ರಿಟೈರ್ಡ್‌ ಆದ ಮೇಲೆ ಶ್ರೀನಾಥರ ಬಳಿ ಬ್ಯಾಂಕಿನಿಂದ ಬಂದ ಹಣ ಮತ್ತು ತಮ್ಮದೇ ಉಳಿತಾಯದ ಹಣ ಎಲ್ಲವೂ ಅವರ ಬಳಿ ಇತ್ತು. ಮಕ್ಕಳಿಬ್ಬರು ಆ ಹಣದಲ್ಲಿ ಸ್ವಲ್ಪ ಭಾಗಕ್ಕಾಗಿ ಮೊದಲೇ ಬೇಡಿಕೆ ಇಟ್ಟಿದ್ದರು. ದೊಡ್ಡವನು ಫ್ಲಾಟ್‌ ಖರೀದಿಗೆ ಸ್ವಲ್ಪ ಹಣ ಬೇಕೆಂದು ಹೇಳಿದ್ದ. ಚಿಕ್ಕವನು ಶೇರ್‌ ಮಾರ್ಕೆಟ್‌ ನಲ್ಲಿ ಇನ್ವೆಸ್ಟ್ ಮಾಡುತ್ತೇನೆಂದಿದ್ದ. ಏನೂ ಬೇಡ ಎಂದಿದ್ದವರು ಎಂದರೆ ನಿರ್ಮಲಾ ಮಾತ್ರ.

ಇದೀಗ ರಿಟೈರ್ಡ್‌ ಆದ ಎರಡು ಮೂರು ವರ್ಷದಲ್ಲಿ ಶ್ರೀನಾಥ್‌ ಯೋಚಿಸುತ್ತಿದ್ದಾರೆ. ತಾನು ಎಲ್ಲರಿಗೂ ಮಾಡಬೇಕಾದ ಕರ್ತವ್ಯವನ್ನು ಮಾಡಿದೆ. ಆದರೆ ಜೀವನವಿಡೀ ತನಗಾಗಿ ಬದುಕು ಸವೆಸಿದ ತನ್ನ ಹೆಂಡತಿಗಾಗಿ ಏನು ಮಾಡಿದೆ? ಅವಳಿಗಾಗಿ ತಾನು ಏನಾದರೂ ಮಾಡಲೇಬೇಕು ಎಂಬ ಆಸೆಯೊಂದು ಅವರ ಮನದಲ್ಲಿ ಚಿಗುರೊಡೆಯಿತು.

“ನಿಮ್ಮಿ, ನಾನು ತುಂಬಾ ವರ್ಷದಿಂದ ಒಂದು ಹುಡುಗೀನ ಪ್ರೀತಿಸ್ತಾ ಇದ್ದೀನಿ. ಈಗ ನೀನು ಹ್ಞೂಂ ಅಂದ್ರೆ ಅವಳನ್ನು ಮದುವೆಯಾಗಬೇಕು ಅಂತ ಇದೀನಿ,” ಎಂದು ಶ್ರೀನಾಥ್‌ ಸ್ವಲ್ಪ ಗಂಭೀರವಾಗಿ ಹೇಳಿದರು.

“ಏನ್ರೀ,,,, ಮಧ್ಯಾಹ್ನ ಊಟ ಆದ್ಮೇಲೆ ವೀಳ್ಯದೆಲೆ ಬಾಯಿಗೆ ಹಾಕಿಕೊಂಡ್ರಲ್ಲ. ಅದು ಹೊಸ ಅಡಿಕೆ, ಅದರ ಪಿತ್ತ ನೆತ್ತಿಗೇರಿತು ಅನಿಸುತ್ತೆ. ಅದಕ್ಕೇ ಹೀಗೆ ಮಾತಾಡ್ತಾ ಇದೀರಾ ಹೇಗೆ…..?” ಎಂದು ಗಂಡನ ಕಾಲೆಳೆದರು.

“ನಾನು ಪ್ರೀತಿಸ್ತಾ ಇರೋದು ನಿಜ. ಅದು ಬೇರೆ ಯಾರೂ ಅಲ್ಲ. ನೀನೇ ನನ್ನ ಚಿನ್ನ…! ಆದರೆ ನಿನಗಾಗಿ ನಾನು ಏನೂ ಮಾಡಲಿಲ್ಲ ಅನಿಸ್ತಾ ಇದೆ. ನಿಮ್ಮಿ, ಆಗ ನಾವು ತುಂಬಾ ತರಾತುರಿಯಲ್ಲಿ, ಬಂಧು ಬಳಗದ ವಿರೋಧದ ನಡುವೆ ಕಾನೂನು ರೀತ್ಯಾ ಮದುವೆಯಾದೆವು. ಈಗ ನಿನ್ನನ್ನು ಮದುಮಗಳ ಧಿರಿಸಿನಲ್ಲಿ ನೋಡುವ ಆಸೆ ಇದೆ. ಮತ್ತೊಮ್ಮೆ ಶಾಸ್ತ್ರೋಕ್ತವಾಗಿ ಮದುವೆಯಾಗೋಣ್ವಾ….?” ಎಂದು ಗಂಡ ಪ್ರೀತಿಯಿಂದ ಹೆಂಡತಿಯನ್ನು ತೋಳುಗಳಲ್ಲಿ ಬಳಸಿ ಕೇಳಿದಾಗ ನಿರ್ಮಲಾರ ಮೈಮನಸ್ಸಿನಲ್ಲಿ ವಿದ್ಯುತ್‌ ಸಂಚಾರವಾದಂತೆ ಆಯಿತು.

“ನಿಮ್ಮ ಐಡಿಯಾ ಚೆನ್ನಾಗಿದೆ. ಆದರೆ ಜನ ಏನಂದಾರು….? ಸುಮ್ಮನೆ ಹಣ ವೇಸ್ಟ್ ಅಲ್ವಾ….? ಅದಕ್ಕೆಲ್ಲಾ ಓಡಾಡೋದ್ಯಾರು…..?” ಎಂದು ಎಂದಿನಂತೆ ಲೆಕ್ಕಾಚಾರದ ಮಾತಾಡಿದರು.

“ನಿಮ್ಮಿ, ಈಗ ನಮ್ಮ ಪರಿಸ್ಥಿತಿ ಮೊದಲಿಗಿಂತ ಸುಧಾರಿಸಿದೆ. ಜವಾಬ್ದಾರಿಗಳೂ ಕಳೆದುಹೋಗಿವೆ. ನಮಗೋಸ್ಕರ ಯಾವಾಗ ಖರ್ಚು ಮಾಡೋದು ನಿಮ್ಮಿ? ಇಷ್ಟು ವರ್ಷವಂತೂ ನನ್ನ ತಮ್ಮ, ತಂಗಿ, ನಮ್ಮ ಮಕ್ಕಳಿಗೋಸ್ಕರ ದುಡಿದಿದ್ದಾಯ್ತು. ಇನ್ನಾದರೂ ನಾವು ನಮ್ಮ ಸಣ್ಣಪುಟ್ಟ ಆಸೆಗಳನ್ನು ಪೂರೈಸಿಕೊಳ್ಳೋಣ,” ಎಂದಾಗ ನಿರ್ಮಲಾಗೂ ಏನೋ ಒಂಥರ ಸಡಗರ ಸಂಭ್ರಮ.

ತಾವು ಇನ್ನೊಮ್ಮೆ ಮದುವೆ ಆಗುತ್ತಿರುವ ಬಗ್ಗೆ ಮಕ್ಕಳಿಬ್ಬರಿಗೂ ಹೇಳಿದಾಗ ಅವರಿಬ್ಬರೂ ಉರಿದುಬಿದ್ದರು. “ಅಪ್ಪಾ, ಸುಮ್ನೆ ದುಡ್ಡಿದೆ ಅಂತ ವೇಸ್ಟ್ ಮಾಡೋದಲ್ಲ…. ಯಾವುದರಲ್ಲಾದರೂ ಇನ್ವೆಸ್ಟ್ ಮಾಡಿ. ಫ್ಯೂಚರ್‌ ಗೆ ಆಗುತ್ತೆ. ಬ್ಯಾಂಕ್‌ ನಲ್ಲಿ ಇಟ್ಟರೆ 10 ವರ್ಷಕ್ಕೆ ಡಬಲ್ ಆಗುತ್ತೆ. ಅದೂ ಅಲ್ಲದೆ ಮದುವೆ ತಯಾರಿ ಅಂದ್ರೆ ಸುಮ್ಮನೆ ಆಗುತ್ತಾ…..? ಅದಕ್ಕೆಲ್ಲ ಓಡಾಡೋಕ್ಕೆ ನಮಗಂತೂ ಪುರಸತ್ತಿಲ್ಲ….” ಎಂದ ಹಿರೀ ಮಗ. ಕಿರೀ ಮಗನೂ ಅದನ್ನೇ ಹೇಳಿದ.

ಮಕ್ಕಳ ಇಂಥ ಪ್ರತಿಕ್ರಿಯೆಯನ್ನು ಶ್ರೀನಾಥ್‌ ನಿರೀಕ್ಷಿಸಿಯೇ ಇದ್ದರು. ಅವರೂ ಖಡಕ್ಕಾಗಿಯೇ ಉತ್ತರಿಸಿದರು, “ನಾನು ಬದುಕಿರುವವರೆಗೆ ನಮಗೆ ಅಗತ್ಯವಿರುವಷ್ಟು ಹಣ ಬ್ಯಾಂಕ್‌ ನಲ್ಲಿ ಇಟ್ಟಿದ್ದೀನಿ ಕಣ್ರೋ. ಹೇಗೂ ಪೆನ್ಷನ್‌ ಬರುತ್ತೆ. ಇನ್ನೂ ಹಣ ಕೂಡಿಟ್ಟು ಕೂಡಿಟ್ಟು ನಾವೇನು ಮಾಡೋದು….? ನಾವೇನು ನೂರು ವರ್ಷ ಬದುಕ್ತೀವಾ….? ನನ್ನ ಬದುಕು ನನಗೆ ಹೇಗೆ ಬೇಕೋ ಹಾಗೆ ಬದುಕುವ ಅಧಿಕಾರ ಇದೆ. ಇನ್ನು ಮದುವೆಗೆ ಓಡಾಡುವ ಅವಶ್ಯಕತೆ ನಿಮಗಿಲ್ಲ. ನಾನು ಈಗಾಗಲೇ ವೆಡ್ಡಿಂಗ್‌ ಪ್ಲಾನರ್ ಜೊತೆ ಈ ಬಗ್ಗೆ ಮಾತಾಡಿದೀನಿ. ನನಗೆ ಯಾವ ತರಹದ ಮದುವೆ ಬೇಕು ಅಂತ ಹೇಳಿದೀನಿ. ನೀವೇನೂ ತಲೆ ಕೆಡಿಸಿಕೊಳ್ಳಬೇಡಿ….” ಎಂದಾಗ ಮಕ್ಕಳಿಬ್ಬರೂ ತೆಪ್ಪಗಾದರು.

ಹೆಂಡತಿಗೂ ಹೇಳದೆ ಬೀಚ್‌ ವೆಡ್ಡಿಂಗ್‌ ಗೆ ಎಲ್ಲ ಸಿದ್ಧತೆಗಳನ್ನೂ ವೆಡ್ಡಿಂಗ್‌ ಪ್ಲಾನರ್‌ ಮೂಲಕ ಮಾಡಿಸಿದ್ದರು ಶ್ರೀನಾಥ್‌. ಮೆಹಂದಿ, ಅರಿಶಿನ, ಎಣ್ಣೆ ಶಾಸ್ತ್ರ, ಗೆಟ್‌ ಟು ಗೆದರ್‌ ಅಂತ ಮೂರ ದಿನಗಳ ಮದುವೆ ಭರ್ಜರಿಯಾಗಿ ನಡೆಯಿತು. ಬಂದವರಿಗೆಲ್ಲ ಉಳಿದುಕೊಳ್ಳಲು ಬೀಚ್‌ ಬಳಿಯ ರೆಸಾರ್ಟ್‌ ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಯುವಕರೂ ನಾಚುವಂತೆ ಗಂಡ ಹೆಂಡತಿ `ಮದರಂಗೀಯಲ್ಲಿ……’ ಹಾಡಿಗೆ ಮೆಲ್ಲನೆ ಹೆಜ್ಜೆ ಹಾಕಿದರು.

ಕಡಲ ತೀರದಲ್ಲಿ ನಿರ್ಮಿಸಲಾಗಿದ್ದ ಭವ್ಯ ಮಂಟಪದಲ್ಲಿ ಗೋಧೂಳಿ ಮುಹೂರ್ತದಲ್ಲಿ ದಂಪತಿಗಳು ಸಪ್ತಪದಿ ತುಳಿದರು. ಗಂಡ ಕೊಡಿಸಿದ ಹೊಸ ರೇಷ್ಮೆ ಸೀರೆ, ಚಿನ್ನಾಭರಣ ಮತ್ತು ವಜ್ರದ ನೆಕ್ಲೇಸ್‌ ನಲ್ಲಿ ಥೇಟ್‌ ಅಪ್ಸರೆಯಂತೆ ಕಾಣುತ್ತಿದ್ದರು ನಿರ್ಮಲಾ. ನಿರ್ಮಲಾರ ಮುಖದಲ್ಲಿ ಮಿನುಗುತ್ತಿದ್ದ ಮದುಮಗಳ ಕಳೆ ನೋಡಿ ಮಕ್ಕಳೂ ಆನಂದಪಟ್ಟರು.

“ಹ್ಞೂಂ…ಮದುವೆ ಆಯ್ತಲ್ಲ. ಇನ್ನು ನವದಂಪತಿಗಳು ಹನಿಮೂನ್‌ ಕೂಡ ಪ್ಲಾನ್‌ ಮಾಡಿರಬೇಕಲ್ಲವೇ…? ಎಲ್ಲಿಗೆ ಉಟಿಗಾ… ಕೊಡೈಕೆನಾಲ್ ‌ಗಾ….?” ಎಂದು ಶ್ರೀನಾಥರ ಗೆಳೆಯ ಛೇಡಿಸಿದರು.

“ಹ್ಞೂಂ…. ಈ ವಯಸ್ಸಿನಲ್ಲಿ ಊಟಿಗೇನು ಹೋಗೋದು. ನನ್ನ ಹೆಂಡತಿಗೆ ಅಯೋಧ್ಯೆಯಲ್ಲಿ ಶ್ರೀರಾಮಲ್ಲಾನ ನೋಡಬೇಕಂತೆ. ಅಲ್ಲಿಗೆ ಹೋಗಿ ಅಲ್ಲಿಂದ ಕಾಶಿ, ಮಥುರಾ ಎಲ್ಲ ನೋಡಿಕೊಂಡು ಬರ್ತೀವಿ…” ಎಂದು ಶ್ರೀನಾಥರು ಉತ್ತರಿಸುತ್ತಿದ್ದಂತೆ ಅವರ ಚಿಕ್ಕಪ್ಪನ ಮಗ ಅವಿನಾಶ್‌ ಹೆಮ್ಮೆಯಿಂದ, “ನಿನ್ನ ಜೀವನೋತ್ಸಾಹವನ್ನು ಮೆಚ್ಚಿದೆ ಕಣೋ…. ಹೀಗೆ ಖುಷಿ ಖುಷಿಯಾಗಿರು,” ಎಂದು ಬೆನ್ನು ತಟ್ಟಿದರು.

“ಹ್ಞೂಂ…. ಈ ಜೀನನ ಯಾತ್ರೆ ಯಾವಾಗ ಮುಗಿಯುತ್ತೋ ಗೊತ್ತಿಲ್ಲ ಕಣೋ…. ಅದಕ್ಕೆ ಕೈ ಕಾಲು ಗಟ್ಟಿ ಇರುವಾಗಲೇ ಒಂದಿಷ್ಟು ದಿನ ಯಾತ್ರೆ ಮಾಡಿ ದೇವರ ದರ್ಶನ ಮಾಡಿ ಪುಣ್ಯ ಸಂಪಾದನೆ ಮಾಡೋಣ ಅಂತ ನಮ್ಮಿಬ್ಬರ ಆಸೆ. ಇದು ನಮ್ಮ ಬದುಕಿನ ಸೆಕೆಂಡ್‌ ಇನ್ಸಿಂಗ್ಸ್. ಅದಕ್ಕೆ ನಾವಿಬ್ಬರೂ ಗಟ್ಟಿಯಿದ್ದಷ್ಟು ದಿನ ಹೀಗೆ ಖುಷಿ ಖುಷಿಯಿಂದ ಕಳೋಣಾಂತ ಇದೀವಿ,” ಎಂದು ತಮ್ಮ ಕೈಯಲ್ಲಿದ್ದ ನಿರ್ಮಲಾರ ಕೈಯನ್ನು ಒಮ್ಮೆ ಮೆಲ್ಲನೆ ಅದುಮುತ್ತಾ, `ನೀನೊಬ್ಬಳು ನನ್ನ ಜೊತೆಗಿದ್ದರೆ ನಾನು ಪ್ರಪಂಚವನ್ನೇ ಗೆಲ್ಲಬಲ್ಲೆ,’ ಎಂದು ಕಣ್ಣಲ್ಲೇ ಪ್ರೀತಿ ಸೂಸುತ್ತಾ ಅವರತ್ತ ನೋಡಿದರು.

ಗಂಡನ ನೋಟವನ್ನು ಎದುರಿಸಲಾರದೆ ತಮ್ಮ ಕೆಂಪಾದ ಮೊಗವನ್ನು ಮುಳುಗುತ್ತಿರುವ ಸೂರ್ಯನತ್ತ ತಿರುಗಿಸಿದರು ನಿರ್ಮಲಾ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ