ಕಂಡೂ ಕೇಳರಿಯದ ಮನೀಶನ ಪ್ರೇಮಕ್ಕೆ ಸಿಲುಕಿದ ನಿಯತಿ ಹಿಂದೆ ಮುಂದೆ ಯೋಚಿಸದೆ ಅವನನ್ನು ನಂಬಿದ್ದಕ್ಕೆ ಮೋಸ ಹೋಗಬೇಕಾಗುತ್ತದೆ. ಪ್ರೇಮವೆಂದು ಭಾವಿಸಿ ಹೋದಳು ಆ ಜ್ವಾಲೆಯಲ್ಲಿ ಸಿಲುಕಬೇಕಾಯಿತು. ಅದರಿಂದ ಅವಳು ಹೊರಬಂದು ನೆಮ್ಮದಿಯ ಜೀವನ ಕಂಡುಕೊಂಡದ್ದು ಹೇಗೆ........?
ಅದು ಒಂದು ಸುಂದರವಾದ ಮನೆ, ಪ್ರಕೃತಿಯ ಮಧ್ಯದಲ್ಲಿ ಭವ್ಯವಾದ ಅರಮನೆ. ಎಲ್ಲೆಲ್ಲಿ ನೋಡಿದರೂ ಅಲ್ಲೆಲ್ಲ ಹಸಿರು, ಮನಸ್ಸಿಗೆ ಮುದ ನೀಡುವುದು. ಸಿಂಚನಾಗೆ ಆ ಜಾಗ ನೋಡಿ ಲೋಕವೇ ಮರೆತು ಹೋದಂತೆ ಅನುಭವ. ಆಹಾ, ಎಂತಹ ಸುಂದರ ಜಾಗ ಇದು! ಇಲ್ಲೇ ಇದ್ದು ಬಿಡೋಣವೆನಿಸುತ್ತದೆ ಮನಸ್ಸಿಗೆ.
ಅವಳು ಸಿಂಚನಾ. ಅವಳು ತನ್ನ ಬಾಲ್ಯದ ಗೆಳತಿ ನಿಯತಿಯನ್ನು ನೋಡಲು ಏಳು ವರ್ಷಗಳ ಬಳಿಕ ಅವಳ ಮನೆಗೆ ಬಂದಿರುತ್ತಾಳೆ. ಕಣ್ಣಿನಲ್ಲಿ ಅವಳನ್ನು ಕಾಣುವ ಕಾತುರ. ಅವಳ ಬಗ್ಗೆ ತಿಳಿಯುವ ಆತುರ, ಮನಸ್ಸಿನಲ್ಲಿ ಅವರಿಬ್ಬರೂ ಕಳೆದ ಕ್ಷಣಗಳು, ಬಾಲ್ಯದ ಆ ದಿನಗಳನ್ನು ಮೆಲುಕು ಹಾಕುತ್ತಾ ಕಾಯುತ್ತಿರುತ್ತಾಳೆ.
ನಿಯತಿ ತುಂಬಾ ಮೃದು ಸ್ವಭಾವದ ಹುಡುಗಿ. ಪಟಪಟ ಅಂತ ಮಾತಾನಾಡುವ ಮಾತಿನ ಪಟಾಕಿ, ಆದರೆ ಈಗ ಅವಳ ಬದುಕಿನ ರೀತಿಯೇ ಬೇರೆ. ಈಗ ನಿಯತಿ ಒಬ್ಬ ಗಾಯಕಿ, ಲೇಖಕಿ, ಸಮಾಜ ಸೇವಕಿ. ಒಂದು ಆಶ್ರಮವನ್ನು ದತ್ತು ತೆಗೆದುಕೊಂಡು ಅಲ್ಲಿರುವ ಎಲ್ಲಾ ಮಕ್ಕಳಿಗೂ ಅವಳು ಪ್ರೀತಿಯ ತಾಯಿ.
ಡಿಗ್ರಿ ಎರಡನೇ ವರ್ಷ ಮುಗಿದ ಮೇಲೆ ಇದ್ದಕ್ಕಿದ್ದಂತೆ ನಾಪತ್ತೆ ಆದಳು ನಿಯತಿ. ಅವರ ಮನೆಯವರೆಲ್ಲ ಎಲ್ಲಿ ಹೋದರು ಎಂದು ಯಾರಿಗೂ ಗೊತ್ತಿರಲಿಲ್ಲ. ಯಾವ ಸಂಪರ್ಕ ಇರಲಿಲ್ಲ. ನಂತರ ಸಿಂಚನಾ ಮದುವೆ ಆಗಿ ಬೇರೆ ದೇಶಕ್ಕೆ ಹೋಗಿಬಿಡುತ್ತಾಳೆ.
ನಿಯತಿ ಬಗ್ಗೆ ತಿಳಿಯಲು ಪ್ರಯತ್ನಿಸಿದರೂ ಯಾವುದೇ ಉಪಯೋಗವಿರಲಿಲ್ಲ. ಅವಳು ಪ್ರತಿದಿನ ನಿಯತಿಯನ್ನು ನೆನಪು ಮಾಡಿಕೊಂಡು ಕೊರಗಿದ್ದೆಷ್ಟೋ.... ಆದರೆ ಟಿವಿಯಲ್ಲಿ ಅವಳ ಬಗ್ಗೆ ಕೇಳಿ ಅಚ್ಚರಿಯ ಜೊತೆಗೆ ಶಾಕ್ ಕೂಡ ಆಗುತ್ತದೆ. ನಂತರ ತುಂಬಾ ಪ್ರಯತ್ನಪಟ್ಟು ಅವಳನ್ನು ಸಂಪರ್ಕಿಸಿ, ರಜೆಯಲ್ಲಿ ಭಾರತಕ್ಕೆ ಬಂದಾಗ ಸಿಗುವೆ ಎಂದು ಹೇಳಿ ವಿಳಾಸ ಪಡೆದು ಈಗ ಅವಳನ್ನು ಕಾಣಲು ಬಂದಿರುತ್ತಾಳೆ.
ಸಿಂಚನಾ ಮನೆಯ ಒಳಗೆ ಬಂದಾಗ, ವಿಸಿಟರ್ಸ್ ರೂಮಿನಲ್ಲಿ ಕೂತು ಕಾಯಲು ಹೇಳುತ್ತಾರೆ ಆ ಮನೆಯ ಕೆಲಸದವರು. ಅವಳು ಅಲ್ಲಿ ಕಾಯುತ್ತಾ ಕುಳಿತುಕೊಳ್ಳುತ್ತಾಳೆ.
ಐದು ನಿಮಿಷಗಳ ಬಳಿಕ ನಿಯತಿ ಬರುತ್ತಾಳೆ, ಬಂದವಳೇ ಸಿಂಚನಾಳ ಬಳಿ ಬಂದು, ``ಸಾರಿ ಸಿಂಚು, ಸ್ನಾನಕ್ಕೆ ಹೋಗಿದ್ದೆ. ಲೇಟ್ ಆಗಿ ಹೋಯಿತು. ತುಂಬಾ ಕಾಯಿಸಿಬಿಟ್ಟೆನಾ...?'' ಎಂದು ಕೇಳುತ್ತಾಳೆ.
``ನೋ ನೀತೀ, ಪರವಾಗಿಲ್ಲ. ಹೌ ಆರ್ ಯು? ಎಷ್ಟು ಚೇಂಜ್ ಆಗಿಬಿಟ್ಟಿದ್ದೀಯಾ ನೀನು? ನಿನ್ನ ಗುರುತೇ ಸಿಗುವುದಿಲ್ಲ,'' ಎನ್ನುತ್ತಾಳೆ ಸಿಂಚನಾ.
``ಬದುಕು ಹಾಗೆ ಎಲ್ಲವನ್ನೂ ಕಲಿಸಿಬಿಡುತ್ತದೆ. ಅದೆಲ್ಲ ಬಿಡು, ಇಷ್ಟು ವರ್ಷ ಆದ ಮೇಲೆ ಸಿಕ್ಕಿದ್ದೀಯಾ.... ಫಸ್ಟ್ ಬ್ರೇಕ್ ಫಾಸ್ಟ್. ಆಮೇಲೇ ಬೇರೆ ಎಲ್ಲಾ... ಬಾ ಹೋಗೋಣ,'' ಎಂದು ನಿಯತಿ ಅವಳ ಕೈ ಹಿಡಿದುಕೊಂಡು ಡೈನಿಂಗ್ ಹಾಲ್ ಗೆ ಕರೆದುಕೊಂಡು ಹೋಗುತ್ತಾಳೆ.