ಶರತ್ ಚಂದ್ರ
ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ಬಿಡುಗಡೆಯ ಮುಂಚಿನ ದಿನ Paid ಪ್ರೀಮಿಯರ್ ಶೋಗಳನ್ನು ಆಯೋಜಿಸುವ ಸಂಪ್ರದಾಯ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆ ಗಳು ಇದನ್ನು ಕೈ ಬಿಟ್ಟಿದ್ದು, ಚಿತ್ರದ ಬಿಡುಗಡೆ ದಿನವೇ ಪ್ರದರ್ಶನ ಆರಂಭಿಸುತ್ತಿದ್ದಾರೆ.
ಆದರೆ ರಾಜ್. ಬಿ. ಶೆಟ್ಟಿಯವರು ತಮ್ಮ’ಲೈಟರ್ ಬುದ್ಧ ‘ ಲಾಂಛನದಲ್ಲಿ ನಿರ್ಮಿಸಿರುವ ‘ಸು ಫ್ರಮ್ ಸೋ ‘ ಚಿತ್ರದ ಪ್ರೀಮಿಯರ್ ಶೋಗಳು ಮಂಗಳೂರು, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ನಡೆದಿದ್ದು ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದು ಕೊಂಡಿದೆ.
ಚಿತ್ರ ರಾಜ್ಯಾದ್ಯಂತ ಈ ತಿಂಗಳ 25ನೇ ತಾರೀಖಿನಂದು ಬಿಡುಗಡೆಯಾಗಲಿದ್ದು, ಇಂದು ಬೆಂಗಳೂರಿನಲ್ಲಿ ಕೂಡ ಕೆಲವು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ Paid ಪ್ರೀಮಿಯರ್ ಶೋ ನಡೆಯಲಿದೆ.
ಕರಾವಳಿ ಭಾಗದಲ್ಲಿ ತುಳು ನಾಟಕ ಮತ್ತು ಯಕ್ಷಗಾನ ಸಿನಿಮಾಗಳಿಗಿಂತಲೂ ಜನಪ್ರಿಯ.
ಮಂಗಳೂರು ಮತ್ತು ಉಡುಪಿ ಭಾಗದ ಜನರ ಹಾಸ್ಯ ಪ್ರಜ್ಞೆ, ಅಲ್ಲಿನ ಜನರ ದೈನಂದಿನ ಚಟುವಟಿಕೆಯಲ್ಲಿ ಹಾಸ್ಯ ಹಾಸು ಹೊಕ್ಕಾಗಿದೆ.
ಇಂತಹ ಸನ್ನಿವೇಶಗಳನ್ನು ಪೋಣಿಸಿ ಮಾಡಿದ ಚಿತ್ರವೇ ‘ಸು ಫ್ರಮ್ ಸೋ ‘.
ತುಳು ರಂಗಭೂಮಿ ಮತ್ತು ತುಳು ಸಿನೆಮಾಗಳಲ್ಲಿ ಅಭಿನಯಿಸಿ ನಿರ್ದೇಶನದಲ್ಲೂ ಕೈ ಆಡಿಸಿರುವ ಜೆ. ಪಿ. ತುಮ್ಮಿನಾಡ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಕನ್ನಡದ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನಲ್ಲಿ ನಟಿಸಿದ್ದ ಜೆ. ಪಿ. ತುಮ್ಮಿನಾಡ್, ರಾಜ್ ಬಿ ಶೆಟ್ಟಿಯವರ ಜೊತೆ ಗರುಡ ಗಮನ ವೃಷಭ ವಾಹನ, ಸ್ವಾತಿ ಮುತ್ತಿನ ಮಳೆ ಹನಿಯೆ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಜೆ. ಪಿ. ತುಮ್ಮಿನಾಡ್ ಅವರು ಕನ್ನಡದಲ್ಲಿ ನಿರ್ದೇಶಕರಾಗಿ ಮಾಡಿದ ಪ್ರಥಮ ಪ್ರಯತ್ನದಲ್ಲಿ ಗೆದ್ದಿದ್ದಾರೆಯೆಂದು ಸಿನಿಮಾ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿದಾಗ ಸ್ಪಷ್ಟವಾಗುತ್ತಿದೆ.
ಕಾಂತರ ಖ್ಯಾತಿಯ ದೀಪಕ್ ರೈ ಪಾಣಾಜೆ, ಹಾಗೂ ಈಗಾಗಲೇ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಪ್ರಕಾಶ್ ತುಮಿನಾಡು ಬಿಟ್ಟರೆ ಈ ಚಿತ್ರದಲ್ಲಿ ಪರಿಚಿತ ಮುಖಗಲಿಲ್ಲ. ಹೆಚ್ಚಾಗಿ ಮಂಗಳೂರಿನ ಸ್ಥಳೀಯ ಹೊಸ ಕಲಾವಿದರನ್ನು ಚಿತ್ರದಲ್ಲಿ ಬಳಸಿದ್ದು.ರಾಜ್. ಬಿ. ಶೆಟ್ಟಿ ಯವರ ಸ್ಪೆಷಲ್ ಎಂಟ್ರಿ ಕೂಡ ಈ ಚಿತ್ರದಲ್ಲಿ ಇದೆಯಂತೆ.
ಒಟ್ಟಿನಲ್ಲಿ ನಮ್ಮಲ್ಲಿ ಮಲಯಾಳಂ ಚಿತ್ರಗಳ ಹಾಗೆ ನೇಟಿವಿಟಿ ಇರುವ ಚಿತ್ರಗಳು ಬರುತ್ತಿಲ್ಲವೆಂಬ ಕೂಗಿಗೆ ‘ಸು ಫ್ರಮ್ ಸೋ’ ಉತ್ತರ ನೀಡಲಿದೆ. ಈಗಾಗಲೇ ಈ ಚಿತ್ರದ ಮಲಯಾಳಂ ಡಬ್ಬಿಂಗ್ ರೈಟ್ಸ್ ಅನ್ನು ಮಮ್ಮುಟ್ಟಿ ಪುತ್ರ ದುಲ್ಕರ್ ಸಲ್ಮಾನ್ ಪಡೆದಿದ್ದು ಈ ಚಿತ್ರದ ಬಗ್ಗೆ ಇನ್ನಷ್ಟು ನಿರೀಕ್ಷೆ ಹೆಚ್ಚಿದೆ.
ಮಂಗಳೂರು ಶಿವಮೊಗ್ಗ ಮತ್ತು ಮೈಸೂರು ನಗರಗಳ ಪ್ರೇಕ್ಷಕರು ಮೆಚ್ಚಿದ ಹಾಗೆ ಕರ್ನಾಟಕದ ಎಲ್ಲಾ ಪ್ರೇಕ್ಷಕರು ಅಪ್ಪಿ ಕೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕು.