ಮಾಡೆಲಿಂಗ್ ನಿಂದ ನಟನೆಯ ರಂಗಕ್ಕೆ ಕಾಲಿಟ್ಟ ಬರ್ಖಾಳ ಸಂಘರ್ಷವೇ ಫುಲ್ ಫಿಲ್ಮೀ ಸ್ಟೈಲ್ ನಂತಿದೆ. ಆಕೆಯ ಪ್ರೊಫೆಶನಲ್ ಹಾಗೂ ಪರ್ಸನಲ್ ವಿಷಯಗಳ ಬಗ್ಗೆ ಅವಳಿಂದಲೇ ತಿಳಿಯೋಣವೇ……?
ಬರ್ಖಾ ಬಿಷ್ಟ್ ಹರಿಯಾಣಾ ರಾಜ್ಯದ ಹಿಸಾರ್ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದಳು. ತನ್ನ ಮೊದಲ ವಿದ್ಯಾಭ್ಯಾಸವನ್ನು ಕೋಲ್ಕತಾದಲ್ಲಿ ಆರಂಭಿಸಿ, ಪುಣೆಯಲ್ಲಿ ಕಾಲೇಜಿನ ವ್ಯಾಸಂಗ ಮುಂದುವರಿಸಿದಳು. ಆ ದಿನಗಳಲ್ಲೇ ಈಕೆ ಮಾಡೆಲಿಂಗ್ ಪ್ರವೇಶಿಸಿದ್ದು. 2000ದಲ್ಲಿ ಈಕೆ ಕ್ವೀನ್ ಬ್ಯೂಟಿ ಪೇಜೆಂಟ್ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತೆಯಾದಳು! ಅಲ್ಲಿಂದ ಅವಳು ನಟನೆಯತ್ತ ವಾಲಿದಳು. ಅವಳ ತಂದೆಗೆ ಅದು ಇಷ್ಟವಿರಲಿಲ್ಲ.
ಅದನ್ನು ಕಡೆಗಣಿಸಿ ಅವಳು ಮುಂಬೈಗೆ ಧಾವಿಸಿದಳು. ಅಲ್ಲಿ ಅವಳು ಮೊದಲಿಗೆ ಕಿರುತೆರೆಯ `ಕಿತ್ನಿ ಮಸ್ತ್ ಹೈ ಝಿಂದಗಿ’ ಧಾರಾವಾಹಿಯಲ್ಲಿ ಉದಿತಾಳ ಪಾತ್ರ ನಿರ್ವಹಿಸಿದಳು. ಇದಾದ ನಂತರ ಈಕೆ, `ಕಸೌಟಿ ಝಿಂದಗೀ ಕೀ, ಕ್ಯಾ ಹೋಗಾ ನಿಮ್ಮೋ ಕಾ, ಕಾವ್ಯಾಂಜಲಿ’ಯಂಥ ಯಶಸ್ವೀ ಧಾರಾವಾಹಿಗಳಲ್ಲಿ ಮಿಂಚಿದಳು.
ದಿಟ್ಟ ಕೆರಿಯರ್ ಬಾಲಿವುಡ್ ಗೆ ಅಡಿಯಿಟ್ಟ ಹೊಸತರಲ್ಲಿ ಈಕೆ ತನ್ನ ಸಹನಟ ಇಂದ್ರಿನೀ ಸೇನ್ ಗುಪ್ತಾ ಜೊತೆ ಪ್ರೇಮಾನುರಾಗಕ್ಕೆ ಸಿಲುಕಿ, ವರ್ಷದಲ್ಲೇ ಮದುವೆ ಆದಳು. ಇದಕ್ಕೆ ಮೊದಲು ಇವಳು ತನ್ನ ಮಾಜಿ ಪ್ರೇಮಿ ಕರಣ್ ಸಿಂಗ್ ಗ್ರೋವರ್ ಜೊತೆ ಎಂಗೇಜ್ ಮೆಂಟ್ ಮುಗಿಸಿ, 2006ರಲ್ಲಿ ಅದರಿಂದ ಹೊರಬಿದ್ದಳು. ಮುಂದೆ ಇವಳು ಹೆಣ್ಣುಮಗುವಿನ ತಾಯಿಯಾದಳು. 2021ರ ಹೊತ್ತಿಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬೆಳೆದು ವಿಚ್ಛೇದನ ಆಗಿಹೋಯಿತು.
ಮುಂದೆ ಈಕೆ `ಕಾಮೆಡಿ ಸರ್ಕಸ್ ಕೀ ಅಜೂಬೆ, ಪಾಪ್ ಕಾರ್ನ್’ ಶೋಗಳಲ್ಲಿ ಹೋಸ್ಟ್ ಆಗಿದ್ದಳು. ಮುಂದೆ 2010ರಲ್ಲಿ ತನ್ನ ಮೊದಲ ಚಿತ್ರ `ರಾಜನೀತಿ’ಯಲ್ಲಿ ಉತ್ತಮ ಹೆಸರು ಪಡೆದಳು. ಈ ಚಿತ್ರದ `ಇಶ್ಕ್ ಬರ್ಸೆ….’ ಗ್ಲಾಮರಸ್ ಹಾಡಿನಲ್ಲಿ ಬಹಳ ಮಿಂಚಿದ್ದಳು.
ನಂತರದ `1920 : ಹಾರರ್ಸ್ ಆಫ್ ದಿ ಹಾರ್ಟ್’ ಹಾರರ್ ಚಿತ್ರದಲ್ಲಿ ಈಕೆ ಹೈಸ್ಕೂಲ್ ಹುಡುಗಿಯ ತಾಯಿಯ ಪಾತ್ರ ವಹಿಸಿದಳು. ನಟನೆ ಬಲು ಗಂಭೀರ ಎನಿಸಿತ್ತು.
ದೆವ್ವದ ಚಿತ್ರ ಏಕೆ ಆರಿಸಿಕೊಂಡೆ ಎಂದಿದ್ದಕ್ಕೆ, “ಈ ಹಿಂದೆ ನಾನು ಹಾರರ್ ಚಿತ್ರದಲ್ಲಿ ನಟಿಸಿರಲಿಲ್ಲ. ಹೀಗೊಂದು ವಿಭಿನ್ನ ಪ್ರಯತ್ನ ಮಾಡೋಣ ಅಂತ. ಇದು ನಿರ್ದೇಶಕ ವಿಕ್ರಂ ಭಟ್ ರ ಮೊದಲ ಚಿತ್ರ. ಮೊದಲಿನಿಂದಲೂ ದೆವ್ವದ ಚಿತ್ರ ಅಂದ್ರೆ ನನಗೆ ಇಷ್ಟ, ಭಾರಿ ಕುತೂಹಲ. ಈ ಚಿತ್ರದಲ್ಲಿ ನಾನೇ ದೆವ್ವವಾಗಿ ಪ್ರೇಕ್ಷಕರನ್ನು ಭಯಪಡಿಸಲು ಯತ್ನಿಸಿದ್ದೇನೆ!”
ಬೆಳ್ಳಿತೆರೆಯ ಡ್ರಾಮಾ ಡೈವೋರ್ಸ್
ನಂತರ ಯಶಸ್ವಿ ಸಿಂಗ್ ಮದರ್ ಎನಿಸಿದ ಈಕೆಗೆ, ತೆರೆಯಲ್ಲಿ ತಾಯಿಯ ಪಾತ್ರ ನಿರ್ವಹಿಸುವುದು ಕಷ್ಟವೇ ಆಗಲಿಲ್ಲ. ರೀಲ್‌ರಿಯಲ್ ತಾಯಿಗೆ ಬಹಳ ಅಂತರವಿದೆ.
“ಚಿತ್ರದಲ್ಲಿ ತಾಯಿಯ ಎಮೋಶನಲ್ಸ್ ವ್ಯಕ್ತಪಡಿಸುವುದು ಬಹಳ ಸುಲಭ. ಇದಕ್ಕೆ ತಕ್ಕ ಹಿನ್ನೆಲೆ, ಕಥೆ ಇರುತ್ತದೆ. ಅಲ್ಲಿ ತಾಯಿ ಮಗಳನ್ನು ಅತಿಯಾಗಿ ಪ್ರೀತಿಸಿ, ರಕ್ಷಿಸುತ್ತಾಳೆ.
“ನನ್ನ 11 ವರ್ಷದ ಮಗಳು ಮೀರಾ ಒಬ್ಬಳೇ ನನ್ನ ಪ್ರಪಂಚ. ಪರದೆ ಮೇಲಿನ ಡ್ರಾಮಾ ಜೀವನಕ್ಕೆ ಬೇಕಿಲ್ಲ. ರಿಯಲ್ ನಲ್ಲಿ ಜವಾಬ್ದಾರಿ ಹೆಚ್ಚು, ರೀಲ್ ನಲ್ಲಿ ಭಾವಾತಿರೇಕ ಹೆಚ್ಚು! ರಿಯಲ್ ನಲ್ಲಿ ವಾಸ್ತವತೆ ಎದುರಿಸಬೇಕು, ಮಗಳನ್ನು ಗೆಳತಿಯಂತೆ ಆದರಿಸಬೇಕು. ರೀಲ್ ನಲ್ಲಿ ಕಂಟ್ರೋಲ್ ಮಾಡುವಂತೆ ರಿಯಲ್ ನಲ್ಲಿ ಆಗೋಲ್ಲ. ಇಲ್ಲಿ ತಾಯಿ ಎಷ್ಟೋ ಸಲ ಸೋಲಬೇಕಾಗುತ್ತದೆ!”
ಹಾರರ್ ಚಿತ್ರಗಳ ಆಯುಸ್ಸು ಬಹಳ ಚಿಕ್ಕದು. ಕ್ಲೈಮಾಕ್ಸ್ ತಿಳಿದ ನಂತರ ಜನ ಇದನ್ನು ಮತ್ತೊಮ್ಮೆ ಬಂದು ನೋಡಲು ಬಯಸುವುದಿಲ್ಲ.
“ಈ ಮಾತು ಕೇವಲ ಹಾರರ್ ಚಿತ್ರಗಳಿಗೆ ಮಾತ್ರವಲ್ಲ, ಇಂದಿನ ಎಲ್ಲಾ ಚಿತ್ರಗಳಿಗೂ ಅನ್ವಯಿಸುತ್ತದೆ. ಕೋವಿಡ್ ನಂತರವಂತೂ ಸಿನಿಮಾ ಸ್ಥಿತಿ ತೀರಾ ದಯನೀಯ. ಯಾರು ಥಿಯೇಟರಿಗೆ ಬಂದು 2ನೇ ಸಲ ಅದೇ ಚಿತ್ರ ನೋಡ ಬಯಸುತ್ತಾರೆ?
“ಹಾರರ್ ಚಿತ್ರಗಳಿಗ ತನ್ನದೇ ಕಮಿಟೆಡ್ ಆಡಿಯೆನ್ಸ್ ಇರ್ತಾರೆ. ಇಂಥ ಥ್ರಿಲ್ ಗಾಗಿಯೇ ಅವರು ಬರುತ್ತಾರೆ. ಚಿತ್ರ ಚೆನ್ನಾಗಿ ಬಂದಿದೆ ಎನ್ನುವುದು, ಅದು ಎಷ್ಟು ಪ್ರೇಕ್ಷಕರನ್ನು ಹಿಡಿದಿಡುತ್ತದೆ ಎನ್ನುವುದರಲ್ಲಿ ತಿಳಿಯುತ್ತದೆ. ಹೀಗಾಗಿ ಇಂಥ ಚಿತ್ರ ರೆಡಿ ಆಗೋದೇ ಕಡಿಮೆ.”
OTT ಚಿತ್ರಗಳ ಡಿಮ್ಯಾಂಡ್
OTTಯಲ್ಲಿ ಸತತ ಚಿತ್ರಗಳ ಸುರಿಮಳೆ ಇರುತ್ತದೆ. ಹೀಗಾಗಿ ದಿನೇ ದಿನೇ ಅದರ ಗುಣಮಟ್ಟ ಕುಸಿಯುತ್ತಿದೆ! ಈ ಎಲ್ಲಾ ವಿಚಾರ ಡಿಮ್ಯಾಂಡ್‌ಸಪ್ಲೈಯನ್ನು ಆಧರಿಸಿದೆ. ಬೇಡಿಕೆ ಹೆಚ್ಚಿದಂತೆ ಪೂರೈಕೆಯೂ ಹೆಚ್ಚಲೇಬೇಕಲ್ಲವೇ? ಅದೂ ಇಲ್ಲಿಯದು ಕ್ರಿಯೇಟಿವ್ ಫೀಲ್ಡ್, ಪ್ರಾಡಕ್ಟ್ ಅಲ್ಲ. ಡಿಮ್ಯಾಂಡ್ ಪ್ರಕಾರ, ಉತ್ತಮ ಕಂಟೆಂಟ್ ಇಲ್ಲದಿದ್ದರೂ ಚಿತ್ರಗಳಂತೂ ತಯಾರಾಗುತ್ತಲೇ ಇರುತ್ತವೆ. OTT ಗತಿಯೂ ಇದೇ ಆಗಿದೆ. ಕ್ರಿಯೇಟಿವ್ ಫೀಲ್ಡ್ ನಲ್ಲಿ ಮೆಶೀನ್ ತರಹ ಪ್ರೊಡಕ್ಟಿಟಿವಿಟಿ ತೋರಿಸಲಾಗದು. ಹೀಗಾಗಿ ಇದು ಡೌನ್ ಆಗುತ್ತಿದೆ. ಆದರೆ ಈ ಕುರಿತಾಗಿ ಜನರ ಆಶಯ ದಿನೇ ದಿನೇ ಹೆಚ್ಚುತ್ತಿದೆ.
“ಫ್ಲಾಪ್ ಆಗುತ್ತಿರುವ OTT ಚಿತ್ರಗಳು, ವೆಬ್ ಸೀರೀಸ್ ತಯಾರಿಸುವ ಮಂದಿಗೆ ಏನಾಗುತ್ತಿದೆ ಎಂಬುದರ ಸ್ಪಷ್ಟ ಅರಿವು ಇರುವುದಿಲ್ಲ. ತಾವು ಮಾಡುತ್ತಿರುವುದೇ ಸರಿ ಎಂದುಕೊಳ್ಳುತ್ತಾರೆ. ಕ್ರಿಯೇಟಿವ್ ಫೀಲ್ಡ್ ಹೆಚ್ಚು ಅನ್ ಸ್ಟೇಬಲ್. ಕಂಟೆಂಟ್ ಇನ್ನೂ ಎಷ್ಟೋ ಸುಧಾರಿಸಬೇಕು. ಯಾವುದೋ ಯಶಸ್ವೀ ಸೂತ್ರದ ಹಿಂದೆ ನಿರ್ಮಾಪಕ, ನಿರ್ದೇಶಕರು ಧಾವಿಸುತ್ತಾರೆ. ಇಲ್ಲಿ ಎಲ್ಲ ಇನ್ ಸ್ಟೆಂಟೇ! ಅದರ ಪರಿಣಾಮ ನಂತರ ತಿಳಿಯುತ್ತದಷ್ಟೆ.”
ಸಿಂಗಲ್ ಮದರ್ ಸ್ಟ್ರಗಲ್
“ಡೈವೋರ್ಸ್ ನಂತರ ನಾನು ಸಿಂಗಲ್ ಮದರ್ ಆಗಿಯೇ ಮುಂದುವರಿದೆ. 11 ವರ್ಷದ ಮಗಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ಇಂದಿನ ಮಕ್ಕಳಿಗೆ ಎಲ್ಲವನ್ನೂ ತಿಳಿಯಬೇಕೆಂಬ ಕುತೂಹಲ, ಎಲ್ಲವನ್ನೂ ತಿಳಿದುಕೊಳ್ಳಲು ಅನೇಕ ಮಾಧ್ಯಮಗಳಿವೆ. ಸಿಂಗಲ್ ಮದರ್ ಆಗಿ ಎಲ್ಲವನ್ನೂ ಕಂಟ್ರೋಲ್ ಮಾಡುವುದು ಕಷ್ಟಕರ. ಇದನ್ನು ಸಮರ್ಪಕವಾಗಿ ನಿರ್ವಹಿಸುವುದೇ ನನ್ನ ಗುರಿ!
“ಸಿಂಗಲ್ ಮದರ್ ಆಗಿ ಯಶಸ್ವಿ ಎನಿಸುವುದು ಸುಲಭದ ಮಾತಲ್ಲ. ಎಷ್ಟೋ ಜನ ವ್ಯಂಗ್ಯವಾಡಿದ್ದಿದೆ. ಅವರಿಗೆ ಮೊನಚು ಮಾತಿನಿಂದ ಮುಖಭಂಗ ಮಾಡಿರುವೆ. ಯಾರು ಏನೇ ಹೇಳಲಿ, ನನ್ನ ಸಂಘರ್ಷ ಹೀಗೇ ಮುಂದುವರಿಯಲಿದೆ.”
ಇಷ್ಟು ವರ್ಷಗಳ ಜೀವನ ಯಾತ್ರೆ ಹೇಗಿತ್ತು?
“ನನಗೆ ಯಾವುದೇ ಬಗೆಯ ರಿಗ್ರೆಟ್ಸ್ ಇಲ್ಲ. ನಾನು ಟಿವಿ ಧಾರಾವಾಹಿ ಸಿನಿಮಾ, OTT ಎಲ್ಲಾ ಮುಗಿಸಿದ್ದೀನಿ. ಸಣ್ಣ ಪ್ರಾಯದ ನಾಯಕಿಯಾಗಿ, ಗಂಭೀರ ತಾಯಿ ಪಾತ್ರಗಳವರೆಗೂ ಎಲ್ಲವನ್ನೂ ನಿಭಾಯಿಸಿರುವೆ. ನನಗೆ ಯಾವುದರ ವಿರುದ್ಧ ದೂರಿಲ್ಲ!”
ಸಾಮಾನ್ಯ ಮಹಿಳೆಯ ಜೀವನ
ತನ್ನ ದೈನಂದಿನ ಚಟುವಟಿಕೆಗಳ ಬಗ್ಗೆ ಹೇಳುತ್ತಾ ಬರ್ಖಾ, “ನನ್ನ ಜೀವನ ಇದೀಗ ಎಲ್ಲಾ ಸಾಮಾನ್ಯ ಮಹಿಳೆಯರಂತೆಯೇ ಆಗಿಹೋಗಿದೆ. ಬೆಳಗ್ಗೆ ಎದ್ದು ಬೇಗ ಮಗಳನ್ನು ಶಾಲೆಗೆ ರೆಡಿ ಮಾಡು, ಅವಳ ಟಿಫನ್ ಬಾಕ್ಸ್, ಬುಕ್ಸ್, ಓದಿನ ಕಾಳಜಿ, ಸಂಜೆ ಅವಳ ಆಟೋಟ, ಪಾರ್ಕಿನಲ್ಲಿ ವಾಕಿಂಗ್, ಹೋಂವರ್ಕ್ ಮಾಡಿಸು, ಟಿವಿ ನೋಡಿ ಊಟ ಮಾಡಿ ಮಲಗಿದರೆ…. ಆ ದಿನ ಕಳೆಯಿತು. ಮತ್ತೆ ಮಾರನೇ ದಿನ ಅದೇ ರಿಪೀಟ್! ಮುಂದಿನ 3-4 ವರ್ಷ ಮಗಳ ಓದಿನ ಕಡೆಯೇ ನನ್ನ ಫೋಕಸ್. ಮಕ್ಕಳನ್ನು ನಾವು ಸ್ವಾವಲಂಬಿಗಳಾಗಿಸಬೇಕು. ಅವರ ಕಾಲ ಮೇಲೆ ಅವರು ನಿಲ್ಲಲು ಕಲಿತರೆ, ಮುಂದೆ ಸತ್ಪ್ರಜೆಗಳಾದಂತೆಯೇ! ಹಕ್ಕಿ ಗೂಡು ಹಾರಿ ಹೋಗುವವರೆಗೂ ನಮ್ಮ ಜವಾಬ್ದಾರಿ. ಹಾರಾಟ ಕಲಿತ ಹಕ್ಕಿಯ ಭವಿಷ್ಯ ಅದರ ಕೈಯಲ್ಲಿ! ನನ್ನ ಕರ್ತವ್ಯ ನಾನು ಮಾಡಿದ್ದೇನೆಂಬ ತೃಪ್ತಿ ಇದೆ!” ಎನ್ನುತ್ತಾಳೆ.
– ಪ್ರತಿನಿಧಿ