– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಕೊತ್ತಲವಾಡಿ
ನಿರ್ದೇಶನ: ಶ್ರೀರಾಜು
ನಿರ್ಮಾಣ: ಪುಷ್ಪ ಅರುಣ್ ಕುಮಾರ್
ತಾರಾಗಣ: ಪೃಥ್ವಿ ಅಂಬರ್, ಕಾವ್ಯಾ ಶೈವ, ಗೋಪಾಲ್ ದೇಶಪಾಂಡೆ, ರಾಜೇಶ್ ನಟರಂಗ ಮೊದಲಾದವರು.
ರೇಟಿಂಗ್: 3/5
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರು 2025ರ ಏಪ್ರಿಲ್ 30ರಂದು ತಮ್ಮ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಘೋಷಿಸಿದರು. ಅನೌನ್ಸ್ ಆದ ಮೂರೇ ತಿಂಗಳಿಗೆ ಸಿನಿಮಾ ಬಿಡುಗಡೆಯಾಗುತ್ತಿದೆ. ಸಾಕಷ್ಟು ವಿಚಾರಗಳಿಂದ ಸಖತ್ ಸದ್ದು ಮಾಡಿರುವ ಸಿನಿಮಾ ಇಂದು (ಆಗಸ್ಟ್ 1)ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಹಳ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಹಾಗಾದರೆ ಸಿನಿಮಾ ಹೇಗಿದೆ? ಮುಂದೆ ಓದಿ..
ಇದೊಂದು ಹಳ್ಳಿಯ ರಾ ಸ್ಟೈಲ್ನ ಆಕ್ಷನ್ ಡ್ರಾಮಾ. ಒಂದು ಊರಿನ ಸ್ಥಳೀಯ ರಾಜಕೀಯವೇ ಈ ಸಿನಿಮಾದ ಕೇಂದ್ರಬಿಂದು. ಇತ್ತೀಚೆಗೆ ಕನ್ನಡದಲ್ಲಿ ಗ್ರಾಮೀಣ ಸೊಗಡಿನ ಕಮರ್ಷಿಯಲ್ ಸಿನಿಮಾಗಳು ಕಡಿಮೆ ಆಗಿದ್ದವು. ಬಹುಶಃ ಅದನ್ನು ‘ಕೊತ್ತಲವಾಡಿ’ ಭರ್ತಿ ಮಾಡಿತು ಎನ್ನಬೇಕು.
ಕೊತ್ತಲವಾಡಿ ಕಾವೇರಿ ನದಿ ದಡದಲ್ಲಿರುವ ಸುಂದರ ಗ್ರಾಮ.ಅಲ್ಲಿ ನಾಯಕ ಮೋಹನ( ಪೃಥ್ವಿ ಅಂಬರ್) ಕೆಲಸಕ್ಕೆ ಜರನ್ನು ಒಟ್ಟು ಮಾಡಿ ಕಳಿಸೋ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದಾನೆ ಅದೇ ಊರಲ್ಲಿ ಗುಜರಿ ಬಾಬು (ಗೋಪಾಲಕೃಷ್ಣ ದೇಶಪಾಂಡೆ) ಇರುತ್ತಾನೆ. ಅವನೊಬ್ಬ ಮಹಾನ್ ಚಾಲಾಕಿ ಮನುಷ್ಯ.ಅವನಿಗೂ ಮೋಹನನಿಗೂ ಅವಿನಾಭಾವ ಸಂಬಂಧ ಬೆರೆತಿರುತ್ತದೆ. ಮಂಜಿ(ಕಾವ್ಯ ಶೈವ) ಆ ಊರಿನ ಅಂಗನವಾಡಿ ಟೀಚರ್ ಮೋಹನನ ಮಡದಿ. ಇಂತಿರುವಾಗ ಊರಿಗೊಂದು ಸಮಸ್ಯೆ ಎದುರಾಗುತ್ತದೆ. ಅದರಿಂದ ಪಾರಾಗಲು ಗುಜರಿ ಬಾಬು ಹೇಳುವ ಉಪಾಯ ಮುಂದೆ ಇಡೀ ಹಳ್ಳಿಯ ಜನರ ಬದುಕಲ್ಲಿ ನಾನಾ ಏರಿಳಿತಕ್ಕೆ ಕಾರಣವಾಗುತ್ತದೆ. ನಂತರ ಏನಾಗುತ್ತದೆ, ಆ ಊರು ಹೇಗೆ ಕಾಪಾಡಲ್ಪಡುತ್ತದೆ ಎಂಬುದೇ ಚಿತ್ರದ ಕಥೆ.
ಪೃಥ್ವಿ ಅಂಬಾರ್ ಅವರು ಆಂಗ್ರಿ ಯಂಗ್ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಬಹುಶಃ ಇದೇ ಮೊದಲ ಬಾರಿಗೆ ಪೃಥ್ವಿ ನಟನೆಯ ಸಿನಿಮಾದಲ್ಲಿ ದೊಡ್ಡಮಟ್ಟದ ಆಕ್ಷನ್ ಇದೆ ಎನ್ನಬಹುದು ಆದರೆ ಇಡೀ ಚಿತ್ರವನ್ನು ಆವರಿಸಿಕೊಳ್ಳೋದು ಗೋಪಾಲ ಕೃಷ್ಣ ದೇಶಪಾಂಡೆ. ಅವರ ಮಾಗಿದ ನಟನೆ. ಒರ್ವ ಚಾಲಾಕಿ, ಕುತಂತ್ರಿ ರಾಜಕಾರಣಿಯಾಗಿ, ಜನ ನಾಯಕನಾಗಿ ಅವರು ಹಲವು ಶೇಡ್ ಗಳಲ್ಲಿ ಕಾಣಿಸಿದ್ದಾರೆ.
ನಾಯಕಿ ಕಾವ್ಯ ಶೈವಗೆ ಹಳ್ಳಿ ಹುಡುಗಿ ಪಾತ್ರ, ಪೊಲೀಸ್ ಅಧಿಕಾರಿಯಾಗಿ ರಾಜೇಶ್ ನಟರಂಗ ಅವರ ಪಾತ್ರ ಇಲ್ಲಿ ಸಖತ್ ಹೈಲೈಟ್! ಬಾಲ ರಾಜ್ವಾಡಿ, ಅವಿನಾಶ್ ಪಾತ್ರಗಳು ಕೆಲವೇ ದೃಶ್ಯಗಳಿಗೆ ಸೀಮಿತ.
ಟೆಕ್ನಿಕಲಿ ಈ ಸಿನಿಮಾದ ಕ್ವಾಲಿಟಿ ಚೆನ್ನಾಗಿದೆ. ಮೇಕಿಂಗ್ ಕೂಡ ಗುಣಮಟ್ಟದಿಂದ ಕೂಡಿದೆ, ಹಿನ್ನೆಲೆ ಸಂಗೀತವೂ ಕೂಡ ಗಮನಸೆಳೆಯುತ್ತದೆ. ಸಿನಿಮಾ ಹಾಡುಗಳಲ್ಲಿ, ಡ್ಯಾನ್ಸ್ ವಿಚಾರದಲ್ಲಿ ಅಷ್ಟೇನೂ ಗಮನ ಸೆಳೆಯುವುದಿಲ್ಲ. ಸಂಭಾಷಣೆ ವಿಷಯದಲ್ಲಿ ಹೇಳುವುದಾದರೆ ಹಳ್ಳಿ ಭಾಷಾ ಸೊಗಡು ಕೂಡ ಇಲ್ಲಿ ಸರಿಯಾದ ರೀತಿಯಲ್ಲಿ ಬಳಕೆ ಆಗಿಲ್ಲ. ನಿರ್ದೇಶಕ ಶ್ರೀ ರಾಜು ಚಿತ್ರಕಥೆ ಹಾಗೂ ನಿರೂಪಣೆಯ ವಿಚಾರದಲ್ಲಿ ಇನ್ನಷ್ಟು ಬಿಗಿಯಾಗಿರಬೇಕಿತ್ತು . ಕಥೆ ಮೂಲಕ ಏನನ್ನು ಹೇಳಬೇಕು ಎನ್ನುವ ವಿಷಯದಲ್ಲಿ ಗೊಂದಲವಿದ್ದಂತೆ ಕಾಣಿಸುತ್ತದೆ. ಪ್ರೇಮ, ಪ್ರೀತಿಯ ದೃಶ್ಯದಲ್ಲಿ ಗಾಢತೆ ಇಲ್ಲವಾಗಿದೆ. ಒಟ್ಟಿನಲ್ಲಿ ಮಾಸ್ ಹಾಗೂ ಫ್ಯಾಮಿಲಿ ಆಡಿಯನ್ಸ್ ಒಮ್ಮೆ ನೋಡಬಹುದಾದ ಸಿನಿಮಾ ಕೊತ್ತಲವಾಡಿ.