ಸುಖೀ ಸಂಸಾರದ ಗೃಹಿಣಿಯಾಗಿದ್ದ ಮೌನಾ, ಮುಂದೆ ಮಗು ಆಗಲಿಲ್ಲವೆಂಬ ಕೊರಗಿಗೆ ತುತ್ತಾಗಿ ಖಿನ್ನತೆಗೊಳಗಾದಳು. ಅವಳು ತನ್ನ ಮೌನ ಮುರಿದದ್ದು ಹೇಗೆ….?
ರಾಹುಲ್ ಆಫೀಸ್ ಮುಗಿಸಿ ಮನೆಗೆ ಬಂದಾಗ ಮನೆ ಎಂದಿನಂತೆ ನಿಶ್ಶಬ್ದವಾಗಿತ್ತು. ಮೌನಾ ಕಿಟಕಿಯಿಂದ ಪಕ್ಕದ ಗ್ರೌಂಡ್ ನಲ್ಲಿ ಆಟವಾಡುತ್ತಿದ್ದ ಮಕ್ಕಳನ್ನೇ ನೋಡುತ್ತಾ ಮೈ ಮರೆತಿದ್ದಳು.
“ಮೌನಾ ಕಾಫಿ ಕೊಡು….” ಎಂದ ರಾಹುಲ್.
ಎಚ್ಚೆತ್ತ ಅವಳು, “ತಂದೇ,” ಎನ್ನುತ್ತಾ ಅಡುಗೆ ಮನೆಗೆ ಓಡಿದಳೇ ಒಂದು ತಟ್ಟೆಯಲ್ಲಿ ಸ್ನಾಕ್ಸ್ ತಂದು, “ತಿನ್ನುತ್ತಾ ಇರಿ. ಕಾಫಿ ತರುವೆ,” ಎಂದು ತಿರುಗಿ ಒಳಗೆ ಹೋದಳು.
ಮೊದಲಿನಂತೆ ಮಾತು ನಗು ಇಲ್ಲದೆ ಮನೆಗೆ ಬಂದಾಗ ರಾಹುಲ್ ಗೆ ಮೈ ಪರಚಿಕೊಳ್ಳುವಂತೆ ಆಗುತ್ತಿತ್ತು. ಅಂತೂ ನಾಳೆ ಇದಕ್ಕೊಂದು ಪರಿಹಾರ ಸಿಗುವ ಸೂಚನೆ ಗೆಳೆಯ ಸಮೀರನಿಂದ ಸಿಕ್ಕಿತ್ತು. ಕಾಫಿ ಕೊಟ್ಟ ಮೌನಾ ಹಾಗೇ ಮೌನವಾಗಿ ಕುಳಿತಳು.
“ಮೌನಾ,,, ನಾಳೆ ಮೈಸೂರಿಗೆ ಹೋಗಬೇಕು. ಸಮೀರ್ ಬರಬೇಕೆಂದು ಫೋನ್ ಮಾಡಿದ್ದಾನೆ. ಎರಡು ಮೂರು ದಿನ ಅಲ್ಲೇ ಇರಬೇಕಾಗಬಹುದು…. ಬಟ್ಟೆ ಜೋಡಿಸಿಕೋ,” ಎಂದ.
ಸಮೀರ್ ರಾಹುಲ್ ನ ಗೆಳೆಯ. ಅವನು ಮೈಸೂರಿನ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿದ್ದ. ಎರಡೂ ಕುಟುಂಬದವರೂ ಒಬ್ಬರ ಮನೆಗೊಬ್ಬರು ಪರಸ್ಪರ ಹೋಗಿ ಬಂದು ಮಾಡುತ್ತಿದ್ದರು. ಸಮೀರ್ ನ ಹೆಂಡತಿ ಸುಮಾ ಹಾಗೂ ಮೌನಾ ಇಬ್ಬರಲ್ಲೂ ಆತ್ಮೀಯಾದ ಸ್ನೇಹವಿತ್ತು.
“ನನಗೆ ಎಲ್ಲೂ ಬರುವ ಮನಸ್ಸಿಲ್ಲ. ನಾನು ಬರೋದಿಲ್ಲ…..”
“ಏಯ್…. ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾನೆ. ನಾನೇನಾದರೂ ಒಬ್ಬನೇ ಹೋದರೆ ಗಂಡ ಹೆಂಡತಿ ಅಷ್ಟೇ…. ನನ್ನನ್ನು ಹಿಂದೆ ಅಟ್ಟುತ್ತಾರೆ ಅಷ್ಟೇ,” ಎಂದು ಹೆದರಿದವನಂತೆ ನಟಿಸಿದ.
ರಾಹುಲ್ ಹೇಳಿದ್ದನ್ನು ಕೇಳಿ ಜೋರಾಗಿ ನಕ್ಕಳು ಮೌನಾ.
“ದಟ್ಸ್ ಗುಡ್ ಗರ್ಲ್ ಹೀಗೆ ಇರಬೇಕು ನೀನು. ಈ ಮೌನ ನಿನಗೆ ಸರಿಯಲ್ಲ…..” ಎಂದು ಅವಳ ಕೆನ್ನೆಯನ್ನು ಮೃದುವಾಗಿ ಹಿಂಡಿದ ರಾಹುಲ್.
“ಸೋನುಗೆ ಏನಾದರೂ ಗಿಫ್ಟ್ ತೆಗೆದುಕೊಂಡು ಹೋಗಬೇಕು”
“ಕಳೆದ ವಾರ ತಂದ ಟಾಯ್ಸ್ ಇದೆಯಲ್ಲಾ ಅದನ್ನೇ ಕೊಡೋಣ ಸಾಕು. ಬೆಳಗ್ಗೆ ಬೇಗ ಹೊರಡಬೇಕು,” ಎಂದ ರಾಹುಲ್.
“ಸಮೀರ್ ಹಾಗೂ ಸುಮಾರಿಗೆ ನಾನು ಮಾಡುವ ಚಟ್ನಿ ಪುಡಿ, ಉಪ್ಪಿನಕಾಯಿ ಇಷ್ಟ. ಅದನ್ನೂ ಪ್ಯಾಕ್ ಮಾಡಿಕೊಳ್ಳುವೆ,” ಎಂದು ಅಡುಗೆಮನೆಗೆ ಹೋದಳು.
ಮರುದಿನ ಹೊರಡಲು ರೆಡಿ ಮಾಡಿಕೊಂಡು ಊಟ ಮಾಡಿ ಮಲಗಿದರು.
`ನಾಳೆ ಸಮೀರ್ ಮಗು ಜೊತೆ ಸಮಯ ಕಳೆಯಬಹುದು, ಆಟ ಆಡಬಹುದು,’ ಎನ್ನುವ ಉತ್ಸಾಹದಲ್ಲಿ ಬೇಗ ನಿದ್ದೆಗೆ ಜಾರಿದಳು.
ರಾಹುಲ್ ಗೆ ಏನು ಮಾಡಿದರೂ ಕಣ್ಣು ಮುಚ್ಚಲಿಲ್ಲ, ಹಳೆಯದೆಲ್ಲಾ ನೆನಪಾಯಿತು.
ರಾಹುಲ್ ಗೆ ಮೌನಾ ಏನೂ ಹೊಸಬಳಲ್ಲ…. ಅತ್ತೆಯ ಮಗಳೇ ಆಗಿದ್ದಳು. ಚಿಕ್ಕಂದಿನಿಂದಲೂ ಪರಿಚಯ. ಅವಳ ಹೆಸರು ಮಾತ್ರ ಮೌನಾ. ಆದರೆ ಅವಳು ಒಂದು ನಿಮಿಷ ಮೌನವಾಗಿ ಇರುತ್ತಿರಲಿಲ್ಲ. ಚಿಕ್ಕ ವಯಸ್ಸಿನಿಂದಲೂ ಅಷ್ಟೇ. ತುಂಬಾ ಮಾತು ಮಾತು…. ಎಲ್ಲರ ಜೊತೆ ಖುಷಿ ಖುಷಿಯಾಗಿ ಓಡಾಡಿಕೊಂಡು ಇರುತ್ತಿದ್ದಳು.
“ನಿನಗ್ಯಾಕೆ ಮೌನಾ ಅಂತ ಹೆಸರಿಟ್ಟರೋ….. ಛೇ….! ವಾಚಾಳಿ ಅಂತ ಇಡಬೇಕಿತ್ತು. ಅರೆ….. ಒಂದು ನಿಮಿಷಾನೂ ಬಾಯಿ ಮುಚ್ಚೋದಿಲ್ವಲ್ಲಾ…..” ಎಂದು ರಾಹುಲ್ ಅವಳನ್ನು ಯಾವಾಗಲೂ ರೇಗಿಸುತ್ತಿದ್ದ.
“ಏಯ್ ಹೋಗೋ…. ನಿನ್ನಂತೆ ರಾಹು ಬಡಿದವರ ಹಾಗೆ ಮುಖ ಊದಿಸಿಕೊಂಡು ಇರಬೇಕಿತ್ತಾ…..” ಎಂದು ಅಣಕಿಸುತ್ತಿದ್ದಳು.
ಅವನು ಅವಳನ್ನು ಅಟ್ಟಿಸಿಕೊಂಡು ಹೋಗಿ ಬೆನ್ನ ಮೇಲೆ ಗುದ್ದುತ್ತಿದ್ದ. ಇಬ್ಬರೂ ಸಣ್ಣ ಪುಟ್ಟದ್ದಕ್ಕೆ ಕಿತ್ತಾಡುತ್ತಾ ಇರುತ್ತಿದ್ದರು. ಆದರೂ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಅತಿಯಾದ ಪ್ರೀತಿ ಇತ್ತು. ಮನೆಯಲ್ಲಿ ಮದುವೆಯ ಮಾತುಕತೆ ನಡೆದಾಗ ಬೇಡ ಎನ್ನಲು ಕಾರಣವಿಲ್ಲದೆ ಇಬ್ಬರೂ ಖುಷಿಯಿಂದ ಒಪ್ಪಿಕೊಂಡಿದ್ದರು.
ಮದುವೆಯ ನಂತರ ಅಷ್ಟೇ ಇಬ್ಬರೂ ಕೀಟಲೆ ಮಾಡುತ್ತಾ, ಕಿತ್ತಾಡುತ್ತಾ ಇರುತ್ತಿದ್ದರು. ಮೌನಾಳೂ ಅಷ್ಟೇ, ಮದುವೆಗೆ ಮೊದಲು ಹೇಗಿದ್ದಳೋ ನಂತರವೂ ಹಾಗೆಯೇ ಇದ್ದಳು.
ರಾಹುಲ್ ನ ತಾಯಿ ತಂದೆಗೆ ಅವಳನ್ನು ಕಂಡರೆ ತುಂಬಾ ಇಷ್ಟವಾಗಿತ್ತು. ಮೌನಾ ಹೆಸರಿಗೆ ವಿರುದ್ಧವಾಗಿ ಯಾವಾಗಲೂ ಮಾತನಾಡುತ್ತಲೇ ಇದ್ದಳು. ಎಷ್ಟು ಜಗಳವಾಡಿದರೂ ಅವನಿಗೂ ಅಷ್ಟೇ ಅವಳು ಮೌನವಾಗಿದ್ದರೆ ಆಗುತ್ತಿರಲಿಲ್ಲ. ಕೀಟಲೆ ಮಾಡಿ ಮಾತನಾಡಿಸಿ ನಗಿಸುತ್ತಿದ್ದ. ತಾಯಿ ತಂದೆಗಂತೂ ಮಗನಿಗಿಂತಲೂ ಮೌನಾಳೆಂದರೆ ತುಂಬಾ ಇಷ್ಟ.
ಯಾವ ಕೊರತೆಯೂ ಇಲ್ಲದೆ, ನಂದನವನದಂತೆ ಇದ್ದ ಇವರ ಮನೆಗೆ ಮಗುವೆಂಬ ನಗು ಮಾತ್ರ ಬರಲೇ ಇಲ್ಲ. ಮದುವೆಯಾಗಿ ನಾಲ್ಕೈದು ವರ್ಷ ಆಯಿತು. ಮಗು ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಸಂತೋಷವಾಗಿದ್ದರು. ನಂತರ ಎಂಟು ವರ್ಷಗಳಾದರೂ ಮಕ್ಕಳಾಗಲಿಲ್ಲ ಎಂಬ ಕೊರಗು ಎಲ್ಲರನ್ನೂ ಕಾಡಲು ಶುರುವಾಯಿತು. ಪೂಜೆ ಪುನಸ್ಕಾರ ಮಾಡಿದ್ದಾಯಿತು. ಡಾಕ್ಟರ್ ಬಳಿ ಹೋದಾಗ ಮೌನಾಳಿಗೆ ಸಣ್ಣ ಪ್ರಾಬ್ಲಮ್ ಇದೆ ಎಂದು ಟ್ರೀಟ್ ಮೆಂಟ್ ತೆಗೆದುಕೊಂಡಳು.
ಅದೇ ಕೊರಗಿನಲ್ಲಿ ಅಮ್ಮ, ಅಪ್ಪ ಇಬ್ಬರೂ ಆರು ತಿಂಗಳ ವ್ಯತ್ಯಾಸದಲ್ಲಿ ಶಿವನ ಪಾದ ಸೇರಿದರು. ರಾಹುಲ್ ಗಿಂತಲೂ ಹೆಚ್ಚು ಆಘಾತ ಮೌನಾಳಿಗೆ ಆಯಿತು. ಮೊದಲೇ ಮಕ್ಕಳಿಲ್ಲವೆಂಬ ಕೊರಗು ಇತ್ತು. ಅಪ್ಪ ಅಮ್ಮನಿಗಿಂತ ಹೆಚ್ಚಾಗಿದ್ದ ಅತ್ತೆ ಮಾವ ತೀರಿಕೊಂಡದ್ದು ಅವಳ ಮನಸ್ಸಿಗೆ ತುಂಬಾ ಆಘಾತವಾಯಿತು.
ಬೆಳಗ್ಗೆಯಿಂದ ರಾತ್ರಿ ತನಕ ಒಂಟಿಯಾಗಿರುತ್ತಿದ್ದ ಅವಳು ಮೌನದ ಮೊರೆ ಹೊಕ್ಕಳು, ಮಾತು ಕ್ರಮೇಣ ಮರೆತಂತಾಯಿತು. “ಒಂದು ಮಗುವನ್ನು ಅಡಾಫ್ಟ್ ಮಾಡಿಕೋ ರಾಹುಲ್, ಆಗ ಮೌನಾ ಸರಿಯಾಗುತ್ತಾರೆ….” ಎಂದಿದ್ದ ಸಮೀರ್.
“ನೀನೇ ಯಾವುದಾದರೂ ಮಗುವಿದ್ದರೆ ಹೇಳು,” ಎಂದಿದ್ದ.
ಈಗ ಒಂದು ಮಗುವಿದೆ ಅರ್ಜೆಂಟ್ ಆಗಿ ಬಾ ಎಂದು ಹೇಳಿದ್ದ. ಮಗುವಿನ ಬಗ್ಗೆ ಏನೂ ಡೀಟೇಲ್ಸ್ ಹೇಳಲಿಲ್ಲ. ಗಂಡು ಮಗುನಾ…. ಹೆಣ್ಣು ಮಗುನಾ… ಅಂತಾನೂ ಹೇಳಿರಲಿಲ್ಲ ಪುಣ್ಯಾತ್ಮ. ಕೇಳಿದರೆ ನೀನು ಇಲ್ಲಿ ಬಂದಾಗ ನೋಡುವೆ ಎಂದುಬಿಟ್ಟ ಮಹಾರಾಯ…. ಹೀಗೆ ಯೋಚಿಸುತ್ತಾ ನಿದ್ರೆಗೆ ಶರಣಾದ ರಾಹುಲ್.
ಮರುದಿನ ಇಬ್ಬರೂ ಮೈಸೂರು ತಲುಪಿ ಸಮೀರ್ ಮನೆಗೆ ಹೋದರು. ಅವನು ಇವರನ್ನೇ ಕಾಯುತ್ತಾ ಮನೆಯಲ್ಲಿಯೇ ಇದ್ದ. ಇವರನ್ನು ನೋಡಿದ ತಕ್ಷಣ ಅವರ ಮಗ ಸೋನು ಓಡಿಬಂದು ಮೌನಾಳನ್ನು ತಬ್ಬಿಕೊಂಡ.
“ಸೋನು ಪುಟ್ಟಾ…. ನಿನಗೆ ಏನೇನೋ ತಂದಿದ್ದೀನಿ ಗೊತ್ತಾ,” ಎಂದು ಅವನನ್ನು ಮುದ್ದುಗರೆಯುತ್ತಾ ತಾನು ತಂದ ಚಾಕಲೇಟ್ಸ್, ಟಾಯ್ಸ್, ಡ್ರೆಸ್ ಎಲ್ಲವನ್ನೂ ಕೊಟ್ಟಳು.
ಅವಳು ಮಗುವಿನ ಜೊತೆಗೆ ಮಗುವಾಗಿ ಮಾತನಾಡುವುದನ್ನು ನೋಡುತ್ತಾ ಮೈಮರೆತು ನಿಂತ ರಾಹುಲ್. ಸುಮಾ ಕಾಫಿ ತಿಂಡಿ ಕೊಟ್ಟು ಉಪಾಚಾರ ಮಾಡಿದಳು. ಎಲ್ಲ ಉಪಚಾರ ಮುಗಿದ ಮೇಲೆ ಸಮೀರ್, “ಈ ಕೋವಿಡ್ ಬಂದು ಇಡೀ ವಿಶ್ವದೆಲ್ಲೆಡೆ ಎಷ್ಟೊಂದು ತೊಂದರೆಯಾಗಿದೆ. ಎಷ್ಟೋ ಜನ ತಮ್ಮವರನ್ನು ಕಳೆದುಕೊಂಡು ಒಂಟಿಯಾಗಿದ್ದಾರೆ. ಈಗ ನಾನೊಂದು ವಿಷಯ ಹೇಳುತ್ತೇನೆ, ನೀವಿಬ್ಬರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ,” ಎಂದು ಹೇಳಿದ.
“ಈಗ ಹದಿನೈದು ದಿನಗಳ ಹಿಂದೆ ನಮ್ಮ ಆಸ್ಪತ್ರೆಯಲ್ಲಿ ಎಪ್ಪತ್ತೈದು ವರ್ಷದ ಪೇಶೆಂಟ್ ಒಬ್ಬರು ಅಡ್ಮಿಟ್ ಆಗಿದ್ದಾರೆ. ಇನ್ನೆರಡು ದಿನದಲ್ಲಿ ಅವರನ್ನು ಡಿಸ್ಚಾರ್ಜ್ ಮಾಡುತ್ತೇವೆ. ಆ ತಾತಾ ತುಂಬಾ ಬಡವರು, ಅವರ ಬಳಿ ಹಣವಿಲ್ಲ. ಕೊರೋನಾ ವೈರಸ್ ನಿಂದಾಗಿ ಅವರ ಮನೆಯಲ್ಲಿ ಮಗ ಸೊಸೆ ಹಾಗೂ ಹೆಂಡತಿ ಮರಣವನ್ನಪ್ಪಿದರು. ಈಗ ತಾತಾ ಹಾಗೂ ಎರಡು ವರ್ಷದ ಹೆಣ್ಣು ಮಗು ಮಾತ್ರ ಉಳಿದಿದ್ದಾರೆ.
“ಅವರು ಬಾಡಿಗೆ ಮನೆಯಲ್ಲಿ ಮಗ ಸೊಸೆ ಜೊತೆ ಇದ್ದರು. ಮಗ ಸೊಸೆ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು. ಬಂದ ಸಂಬಳದಲ್ಲಿ ಹೇಗೋ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಈಗ ನೋಡಿದರೆ ಅವರ ಹೆಂಡತಿ, ಮಗ, ಸೊಸೆ ಯಾರೂ ಇಲ್ಲ. ಈಗವರು ಮೊಮ್ಮಗಳನ್ನು ಸಾಕುವ ಚೈತನ್ಯ ನನಗಿಲ್ಲ ಡಾಕ್ಟರೇ…. ಮಗುವನ್ನು ಅನಾಥಾಶ್ರಮದಲ್ಲಿ ಬಿಟ್ಟು ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಗೋಳಾಡುತ್ತಿದ್ದಾರೆ.
“ತುಂಬಾ ಒಳ್ಳೆಯ ಸಂಸ್ಕಾರವಂತ ಜನರು. ಅವರಿಗೆ ಏನಾದರೂ ಸಹಾಯ ಮಾಡೋಣ ಎಂಬ ಯೋಚನೆ ಬಂತು. ಈಗ ನಿನ್ನ ನೆನಪಾಯಿತು ರಾಹುಲ್. ಹೇಗೂ ನಿಮಗೂ ಅಪ್ಪ ಅಮ್ಮ ಇಲ್ಲ, ಜೊತೆಗೆ ನೀನು ಕೂಡ ಮಗು ಬೇಕು ಅಂತ ಯೋಚಿಸಿದ್ದೆ ಅಲ್ವಾ….. ನೀನೇ ಈ ಮಗುವನ್ನು ದತ್ತಕ ತೆಗೆದುಕೊಂಡರೆ ಆ ತಾತನನ್ನೂ ನೀವು ಸಾಕಬಹುದು ಎನಿಸಿತು. ನಿಮಗೂ ಮನೆಯಲ್ಲಿ ಹಿರಿಯರೊಬ್ಬರು ಇದ್ದ ಹಾಗೆ ಆಗುತ್ತದೆ. ನೊಂದ ಆ ಹಿರೀ ಜೀವಕ್ಕೆ ನೆಮ್ಮದಿ ಸಿಗುತ್ತದೆ….
“ಇದರಲ್ಲಿ ನನ್ನದೇನೂ ಬಲವಂತ ಇಲ್ಲ. ಆ ತಾತನಿಗೆ ಇನ್ಯಾರು ಇಲ್ಲ. ಅವರು ವೃದ್ಧಾಶ್ರಮ ಸೇರುವ ಬದಲು ಮೊಮ್ಮಗು ಜೊತೆಗೆ ನಿಮ್ಮ ಮನೆಯಲ್ಲಿ ಇದ್ದರೆ….. ಇದು ನನ್ನ ಅಭಿಪ್ರಾಯ ಅಷ್ಟೆ. ನಿಮಗೆ ಮಗು ಇಷ್ಟವಾದರೆ ಮಾತ್ರ ಮಗುವನ್ನು ದತ್ತು ತೆಗೆದುಕೊಳ್ಳಬಹುದು. ನಂತರ ಆ ತಾತನನ್ನು ವೃದ್ಧಾಶ್ರಮದಲ್ಲಿ ಸೇರಿಸುವ ಬಗ್ಗೆ ಮಾತನಾಡಿರುವೆ, ಅಲ್ಲಿಗೆ ಕಳುಹಿಸುತ್ತೇನೆ. ಬನ್ನಿ ಮೊದಲು ಆಸ್ಪತ್ರೆಗೆ ಹೋಗಿ ಅವರನ್ನು ಭೇಟಿ ಮಾಡೋಣ,” ಎಂದ ಸಮೀರ್.
ನಂತರ ಸುಮಾ, ಸಮೀರ್ ಮತ್ತು ರಾಹುಲ್, ಮೌನಾ ಎಲ್ಲರೂ ಆಸ್ಪತ್ರೆಗೆ ಹೋದರು. ಸಮೀರ್ ನ ಮಗ ಸೋನುವಂತೂ ಮೌನಾಳ ಬಳಿಯೇ ಇದ್ದ. ಆಸ್ಪತ್ರೆಗೆ ಬಂದು ನೋಡಿದರು. ತಾತಾ ಮತ್ತು ಮಗುವನ್ನು ನೋಡಿ ರಾಹುಲ್ ಹಾಗೂ ಮೌನಾರಿಗೆ ಬಹಳ ಇಷ್ಟವಾಯಿತು.
ಸಮೀರ್ ನನ್ನು ನೋಡುತ್ತಲೇ, “ಡಾಕ್ಟರ್, ನಾನು ಹೇಳಿದ ವಿಷಯ ಏನಾಯ್ತು? ನನ್ನ ಮಗುವನ್ನು ಎಲ್ಲಿ ಬಿಡುತ್ತೀರಿ….?” ಅಂತ ತಾತಾ ಆತಂಕದಿಂದ ಕೇಳಿದರು.
“ಸಮಾಧಾನವಾಗಿ ಇರಿ ತಾತಾ. ನಾನೊಂದು ವ್ಯವಸ್ಥೆ ಮಾಡುತ್ತೇನೆ,” ಎಂದು ನಗುತ್ತಾ ನುಡಿದ ಸಮೀರ್.
“ರಾಹುಲ್ ಇಬ್ಬರನ್ನೂ ನಮ್ಮ ಮನೆಗೆ ಕರೆದುಕೊಂಡು ಹೋಗೋಣವೇ ಪ್ಲೀಸ್….” ಎಂದಳು ಮೌನಾ.
“ಹಾಗೆ ಮಾಡೋಣ,” ಎಂದ ರಾಹುಲ್. ಎರಡು ದಿನ ಅಲ್ಲೇ ಇದ್ದು ಫಾರ್ಮಾಲಿಟೀಸ್ ಮುಗಿಸಿ, ತಾತಾ ಹಾಗೂ ಅವರ ಎರಡು ವರ್ಷದ ಮೊಮ್ಮಗಳನ್ನು ಕರೆದುಕೊಂಡು ವಾಪಸ್ ಬೆಂಗಳೂರಿಗೆ ಹಿಂದಿರುಗಿದರು.
ಈಗ ಮನೆಯಲ್ಲಿ ಮತ್ತೆ ಮೊದಲಿನ ಹಾಗೆ ನಗು ತುಂಬಿತ್ತು. ವೌನಾ ತನ್ನ ಮೌನ ಮುರಿದು ಮೊದಲಿನಂತೆ ವಾಚಾಳಿ ಆಗಿದ್ದಳು.