ಇಂದಿನ ಆಧುನಿಕ ಕಾಲಕ್ಕೆ ಹೆಂಗಸರ ಪ್ರಮುಖ ಟೈಂ ಪಾಸ್ ಆಗಿರುವ ಕಿಟಿ ಪಾರ್ಟಿ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಪೇಚಾಟ ಶುರುವಾಗುತ್ತದೆ. ಇದರ ಮಹಿಮೆಯನ್ನು ಒಂದಿಷ್ಟು ವಿವರವಾಗಿ ತಿಳಿಯೋಣವೇ.......?
ರೇಣುಕಮ್ಮ ಒಲೆ ಮೇಲೆ ಹಾಲು ಕಾಯಿಸಿ, ಮಧ್ಯಾಹ್ನದ ಸಾಂಬಾರಿಗೆ ಎಲ್ಲಾ ಹೆಚ್ಚಿಟ್ಟು. ಮಸಾಲೆ ರುಬ್ಬಿಟ್ಟು, ತರಾತುರಿಯಲ್ಲಿ ಪತಿಗೆ ಎರಡು ಚಪಾತಿಯನ್ನು ತಿನ್ನಿಸುವ ಬದಲು ಮೂರು ಚಪಾತಿ ತಿನ್ನಿಸಿ, ಅವರಿಗೆ ಹೊಟ್ಟೆ ಉಬ್ಬರ ಆಗಿ ರೋಡಂಚಿನಲ್ಲಿ ಅಡ್ಡಾಡುವಂತೆ ಮಾಡುತ್ತಿದ್ದರು. ಒಟ್ಟಾರೆ ರೇಣುಕಮ್ಮನವರಿಗೆ ಕಿಟಿ ಪಾರ್ಟಿ ದಿನ ನೆಲದ ಮೇಲೆ ಕಾಲು ನಿಲ್ಲೋವಲ್ದು ನೋಡಿ..... ಅಸರವಸರ, ಸಡಗರ, ಕೆಲವೊಮ್ಮೆ ಆಪತ್ತು, ವಿಪತ್ತು!
ಅಂತೂ ರಂಗರಾಯರು, ``ನಿಧಾನ ಕಣೆ ರೇಣು.... ಬಿದ್ದು ಕಾಲುಗೀಲು ಮುರ್ಕೊಂಡೀಯಾ.... ಆಮೇಲೆ ನೀನಿಲ್ದೆ ಕಿಟಿ ಪಾರ್ಟೀಲಿ ಕಂಡವರ ಸುದ್ದಿ ಮಾತಾಡೋರು ಯಾರೂ ಇಲ್ದಂಗೆ ಆದೀತು,'' ಎಂದರು.
``ನಿಮ್ಮ ಕಾಲು ಎಳೆಯುವ ಬುದ್ಧಿ ಇದ್ದಿದ್ದೇ ಬಿಡಿ.....'' ಎಂದು ಗದರುತ್ತಲೇ ರೆಡಿ ಆಗಲು ಹೋದವರು ರೇಣುಕಮ್ಮ.
`ಕಿಟಿ ಪಾರ್ಟಿ' ಈಗ ಮದುವೆಯಾದ ಹೆಂಗಸರಿಗೆ ಮತ್ತು ಸ್ವಲ್ಪ ವಯಸ್ಸಾದ ಆಂಟಿಯರಿಗೆ ತಿಂಗಳಿಗೊಮ್ಮೆ ಒಟ್ಟಾಗಿ ಸೇರುವುದು, ತರಹೇವಾರಿ ಅಡುಗೆಗಳನ್ನು ಮಾಡಿ ವಿವಿಧ ಆಟೋಟಗಳನ್ನು ಆಡಿ, ಹಾಡು, ಕುಣಿತ, ಮಾತು, ಹರಟೆ, ಹಾಸ್ಯ.....!! ಇತ್ಯಾದಿಗಳಿಂದ ಮನರಂಜನೆ ಪಡೆಯುವುದು ಆಧುನಿಕ ಹವ್ಯಾಸವಾಗಿದೆ. ತರಹಾರಿ ಫೋಟೋ ಶೂಟು, ಯಾವೆಲ್ಲ ಡ್ರೆಸ್ ಗಳನ್ನು ಮನೆಯವರ ಮುಂದೆ ಹಾಕಲು ಸಾಧ್ಯವಿಲ್ಲವೇ ಅಂತಹ ಬಟ್ಟೆ ಧರಿಸಿ, ವಿವಿಧ ದಿರಿಸಿನಲ್ಲಿ ಗೋಡೆಗೊರಗುತ್ತಾ, ಅವಕಾಶ ನೋಡುತ್ತಾ, ತಿರುಗದ ಹೂನ್ನು ತನ್ನೆಡೆಗೆ ತಿರುಗುವ ಎಂದು ಹಿಂಸಿಸುತ್ತಾ.... ಫೋಟೋ ಕ್ಲಿಕ್ಕಿಸಿ.... ಮನೆಗೆ ಬಂದ ಮೇಲೆ ಗಂಡ ಮಕ್ಕಳ ಕಥೆ ಏನಾಯ್ತೋ ಗೊತ್ತಿಲ್ಲ.... ಕ್ಲಿಕ್ಕಿಸಿದ ಫೋಟೋಗಳನ್ನು ವಾಟ್ಸ್ ಆ್ಯಪ್ ಸ್ಟೇಟಸ್ ಗೆ ಹಾಕಿ, FBಗೆ ಪೋಸ್ಟ್ ಮಾಡಿ, ಮತ್ತೆ ಕೆಲಸ ಮುಗಿದ ತಕ್ಷಣ ಚಿಕ್ಕಂದಿನಲ್ಲಿ ತಾತಾ ಚಾಕಲೇಟ್ ತಂದಿದ್ದೀನಿ ಬಾ ಎಂದಾಗ ಓಡೋಡಿ ಹೋಗುವಂತೆ ಫೋನಿನತ್ತ ಧಾವಿಸಿ ಓಡಿಹೋಗುವುದು. ಸ್ಟೇಟಸ್ ಗೆ ರಿಪ್ಲೈ ಏನು ಬಂದಿರಬಹುದು ಎಂದು ಗಮನಿಸುವುದು.
``ಯೂ ಆರ್ ಲುಕಿಂಗ್ ಸೋ ಯಂಗ್,'' ಎಂದು ತನ್ನ ಹಳೆಯ ಗೆಳತಿ ಹೇಳಿದಾಗ ಸುನಂದಮ್ಮನವರು ಹಾಗೆ ಕನ್ನಡಿಯಲ್ಲಿ ತೆಳುಗೂದಲಿನ ಒಳಗಿದ್ದ ಬಿಳಿಗೂದಲನ್ನು ಒಳಕ್ಕೆ ಸರಿಸುತ್ತಾ, ``ಓಹ್... ಥ್ಯಾಂಕ್ಯು ಕಣೇ ಮೊಮ್ಮಕ್ಕಳು ಆದ್ಮೇಲು ಏನು ಯಂಗ್ ಬಿಡು....'' ಎಂದು ಸುಮ್ಮನೆ ಮೇಲ್ ಮಾತಿಗೆ ಹೇಳಿದರೂ ಒಳಗೆ ಆನಂದ ಪರಮಾನಂದ.....!
``ಪ್ರತಿ ತಿಂಗಳು ಕಿಟಿ ಪಾರ್ಟಿಯಲ್ಲೂ ಒಂದೇ ತರಹದ ಡ್ರೆಸ್ ಕೋಡ್ ಹಾಕಿರ್ತೀರಲ್ಲ. ಸೂಪರ್ ಕಣ್ರೀ....,'' ಎಂದು ಧಾರವಾಡದ ತನ್ನ ಗೆಳತಿ ಅನುಸೂಯಮ್ಮ ಹೇಳಿದಾಗ.... ಪ್ರತಿ ತಿಂಗಳು ಡ್ರೆಸ್ ತೆಗೆದುಕೊಳ್ಳುವಾಗ ಗಂಡನ ಬೈಗುಳ, ಸಹಸ್ರನಾಮ ನೆನಪಾದರೂ ಬಾಯಿ ತಡವರಿಸಿದರು.
``ಓಹ್ ಹೌದಾ..... ನಮ್ಮವರೇ ಸೆಲೆಕ್ಟ್ ಮಾಡಿದ್ದು ಕಣೆ,'' ಅಂತ ಒಣಪ್ರತಿಷ್ಠೆಯ ಮಾತು ನೋಡ್ಬೇಕು ಕಣ್ರೀ.... ಅಬ್ಬಬ್ಬಾ ಅದೇನು ಬಿಂಕ, ಅದೇನು ಬಿನ್ನಾಣ! ನೋಡೋಕೆ ಎರಡು ಕಣ್ಣು ಸಾಲದು ಕಣ್ರೀ....ಹೀಗೆ ಕಿಟಿ ಪಾರ್ಟಿಯ ಮಾರನೇ ದಿನವಿಡೀ ಮನೆಗೆಲಸ ಮಾಡದೆ, ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಂದು ಗಂಟೆ ಆದ್ರೂ ತೆಗೆಯದೇ, ಗಂಟೆ 1-2 ಆದ್ರೂ ಅನ್ನಕ್ಕೆ ಇಡದೆ, ನಿನ್ನೆ ಹಾಕಿದ ಕಣ್ಣಿನ ಕಾಡಿಗೆಯನ್ನೇ ಅಳಿಸದೆ ಸ್ಟೇಟಸ್ ರಿಪ್ಲೈ ಮಾಡೋದ್ರಲ್ಲಿ ಸಮಯ ಕಳೋದ್ರಲ್ಲಿ ಅದೆಂಥಾ ಮಜಾನೋ ಕಣ್ರೀ.... ಆದ್ರೂ ಅವರ ಉಲ್ಲಾಸ ಮತ್ತು ತಾಳ್ಮೆಗೆ ನನ್ನ ಸಲಾಂ ಕಣ್ರೀ...... ನಮ್ಮ ಕಿಟೀಲಿ ಇರುಷ್ಟು ರಿಚ್ ನೆಸ್, ಗ್ರಾಂಡ್ ಅವರ ಕಿಟೀಲಿ ಇಲ್ಲ ಕಣ್ರೀ..... ಅವರೆಲ್ಲಾ ಡ್ರೆಸ್ ಕೋಡ್ ಮಾಡ್ಕೊಂಡಿಲ್ಲ. ಯಾವುದೋ ಒಂದು ಸಿಕ್ಕಿಸಿಕೊಂಡು ಬಂದಿರ್ತಾರೆ.... ಮತ್ತೆ ಅವರೆಲ್ಲಾ ಬರೀ ಕಿತ್ತಾಡ್ತಿರ್ತಾರೆ. ನಮ್ಮ ಕಿಟೀಲಿ ತುಂಬಾ ಅಂಡರ್ ಸ್ಟಾಂಡಿಂಗ್ ಇದೇ ಕಣ್ರೀ.... ಹೀಗೆ ಬೇರೆಯವರ ಕಿಟಿಯವರನ್ನು ಅಲ್ಲಗಳೋದ್ರಲ್ಲಿ ಏನು ಮಜಾನೋ ನಮ್ಮ ಆಂಟಿಯವರಿಗೆ. ನಮ್ ಕಿಟೀ.... ನಮ್ ಕಿಟೀ ಅಂತಾ ಹೇಳೋದು ನೋಡಿದ್ರೆ ಇವ್ರಿಗೇನೋ ನೂರಾರು ಜನ್ಮದ ನಂಟು ಅನ್ಕೋಬೇಕು. ಅಷ್ಟೊಂದು ಪ್ರೇಮ.... ಪ್ರೀತಿ.....!!