ಅನಂತು ಜೊತೆ ಪದ್ಮಾರ ಮದುವೆ ನಿಶ್ಚಯವಾದಾಗ ಆಕೆಯ ತವರಿನವರು ಅದ್ಭುತವಾದ ಕೆಂಪು ಹರಳಿನ ಓಲೆ ಮಾಡಿಸಿಕೊಟ್ಟಿದ್ದರು. ಅದು ಈ ದಂಪತಿಗಳ ಪ್ರೀತಿಗೆ ಪ್ರಮುಖ ಸಾಕ್ಷಿಯಾಗಿತ್ತು. ಹೀಗಿರುವಾಗ ಆಕಸ್ಮಿಕವಾಗಿ ಹಬ್ಬದ ಗಡಿಬಿಡಿಯಲ್ಲಿ ಓಲೆ ಕಳೆದುಹೋಯಿತು. ಅದು ಈ ದಂಪತಿಗಳ ಜಗಳಕ್ಕೆ ಕಾರಣವಾಗಿ ಮಾತೇ ನಿಂತುಹೋಯಿತು. ಮುಂದೆ ಪದ್ಮಾರ ಮಗಳು ಸೀಮಂತಿನಿಯ ಮದುವೆ ನಿಶ್ಚಯಾದಾಗ, ಕಳೆದು ಹೋದ ಓಲೆ ಸಿಕ್ಕಿದ್ದನ್ನು ನೆನಪಿಸಿಕೊಂಡು ಮಗಳ ಬಳಿ ಹಳೆಯ ವೃತ್ತಾಂತ ಹೇಳುತ್ತಿದ್ದರು. ಮುಂದೆ ಈ ದಂಪತಿಗಳ ನಡುವಿನ ವೈಮನಸ್ಯ, ಮಗಳ ಮದುವೆ ನೆಪದಲ್ಲಿ ತಿಳಿಯಾದದ್ದು ಹೇಗೆ……?
ಇರುವ ಒಬ್ಬಳೇ ಮಗಳ ಮದುವೆ ನಿಶ್ಚಯವಾಗಲಿದೆ. ಅದನ್ನು ನೆನಸಿಕೊಂಡಾಗಲೇ ದಂಪತಿಗಳು ಇಬ್ಬರೂ ಸಂತಸ ಹೆಮ್ಮೆಯಿಂದ ಬೀಗುತ್ತಿದ್ದರು. ಇಬ್ಬರ ಕಾಲುಗಳು ನೆಲದ ಮೇಲೆ ನಿಲ್ಲುತ್ತಿರಲಿಲ್ಲ. ಮುದ್ದಿನ ಮೊದಲನೇ ಮಗಳು. ಅವಳು ಹುಟ್ಟಿದಾಗ ಅಜ್ಜ ಅಜ್ಜಿಗೂ ಬಲು ಆನಂದ, “ಏನೋ ಅನಂತೂ… ಒಂದು ರೂಪಾಂತ ಹೆಸರಿಡು, ಇಲ್ಲವೇ ಸೀಮಂತಿನಿ ಅಂತ ಹೆಸರಿಡು,” ಎಂದು ಅವರೇ ಪ್ರೀತಿಯಿಂದ ಹೇಳಿದ್ದರು. ಕಡೆಗೆ ಸೀಮಂತಿನಿ ಎಂದೇ ಹೆಸರಿಟ್ಟರು.
ಮಗಳನ್ನು ಎಲ್ಲರೂ ತುಂಬಾ ಅಕ್ಕರೆಯಿಂದ ಬೆಳೆಸಿದ್ದರು. ಆದ್ದರಿಂದ ಅವಳಲ್ಲಿ ಒಳ್ಳೆಯ ಮಾನವೀಯ ಗುಣಗಳು ಮೈಗೂಡಿದ್ದವು. ಗುಣದ ಜೊತೆಗೆ ಅವಳು ಓದು, ಆಟೋಟಗಳಲ್ಲೂ ಮುಂದಿದ್ದಳು. ಜೊತೆಗೆ ಅಪ್ರತಿಮ ಸುಂದರಿ. ನಯ ವಿನಯ, ಹಿರಿಯರಿಗೆ ಗೌರವ, ಸಂಪ್ರದಾಯದ ಆಚಾರ ವಿಚಾರಗಳನ್ನು ಅರಿತಿದ್ದಳು. ಯಾರೇ ಆದರೂ ಮೆಚ್ಚಿ ಮದುವೆ ಮಾಡಿಕೊಂಡು ಹೋಗುತ್ತಾರೆ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬಂತೆ ನಮ್ಮ ಅನಂತುವಿನ ಮಗಳು ಯಾವುದರಲ್ಲಿ ಕಡಿಮೆ? ಜಾಸ್ತಿ ಓದಲಿಲ್ಲ ಅನ್ನುವುದೊಂದೇ. ಕಾಲ ಪರಿಸ್ಥಿತಿಯೂ ಹಾಗೆ ಇತ್ತು. ಊರು ಚಿಕ್ಕದು. ಶಿಕ್ಷಣಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಇದ್ದರೂ ಕೂಡ ಹುಡುಗಿಯರಿಗೆ ಶಿಕ್ಷಣ ಏಕೆ ಬೇಕು? ಸಹಿ ಮಾಡಲು ಬಂದರೆ ಸಾಕೆನ್ನುವವರೇ ಬಹಳ ಮಂದಿ ಇದ್ದರು.
ಮದುವೆ ವಿಷಯ ಬಂದಾಗ ಮಾತ್ರ, ಕಡಿಮೆ ಎಂದರೂ 10ರವರೆಗೆ ಓದಿರಬೇಕು. ಕಡಿಮೆ ಎಂದರೂ ಕನಿಷ್ಠ 7ನೇ ತರಗತಿ ಪಾಸಾಗಿರಬೇಕು ಅಂತ ಶುರುವಾಯಿತು. ಆಗ ವರದಕ್ಷಿಣೆ ಪಿಡುಗು ಪಸರಿಸಿತ್ತಾದರೂ ಕಲಿತ ಹುಡುಗಿಯರಿಗೆ ಕಂಡೀಶನ್‌ಮೇಲೆ ಸ್ವಲ್ಪ ರಿಯಾಯಿತಿ. ಮನಸ್ಸಿಗೆ ಬಂದಂತೆ ಕೇಳುತ್ತಿರಲಿಲ್ಲ. ಒಂದು ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಎನ್ನುವ ಕಾಲ ಅದಾಗಿತ್ತು.
ಅನಂತ ಭಟ್ಟರ ಹೆಂಡತಿ ಪದ್ಮಾ ಸೀಮಂತಿನಿಯ ತಾಯಿ ಕೂಡ ಏಳರವರೆಗೆ ಓದಿ ಅನಂತೂಗೆ ಮಾಲೆ ಹಾಕಿದ್ದು. ಅವಳಪ್ಪ ತುಂಬಾ ಸಿರಿವಂತರು. ಮಗಳಿಗೆ ಬೇಕಾದಷ್ಟು ಒಡವೆ ವಸ್ತ್ರ ಕೊಟ್ಟಿದ್ದರು.
`ಉಳ್ಳವರು ಶಿಲಾಲಯ ಮಾಡುವರು ನಾ ಏನು ಮಾಡಲಿ ಬಡವನಯ್ಯ’ ಅನ್ನುವ ಸ್ಥಿತಿ ಭಟ್ಟರಿಗೇನೂ ಇರಲಿಲ್ಲ. ಆದರೂ ಪದ್ಮಾಳ ಅಪ್ಪ ಅಳಿಯನಿಗೆ ಕೈತುಂಬಾ ಕೊಟ್ಟು ದಿಬ್ಬಣ ಹೊರಡಿಸಿದ್ದರು. ಅಳಿಯ ಧಾರ್ಮಿಕ ಸದ್ಗುಣ ಸಂಪನ್ನ. ಜೊತೆಗೆ ಸುಂದರನಾಗಿದ್ದ. ಆದರೇನು ಅವಿಭಕ್ತ ಕುಟುಂಬ ಎಲ್ಲರೂ ಸಂತೋಷವಾಗಿದ್ದರು. ಮನೆ ನಂದಗೋಕುಲ ಎಂದೇ ಹೇಳಬಹುದು. ಹಳೇ ಸಂಪ್ರದಾಯದ ಮನೆಯನ್ನು ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಆಧುನಿಕ ಮನೆಯನ್ನಾಗಿ ಪರಿವರ್ತಿಸಿದ್ದರು. ಪೂರ್ತಿಯಾಗಿ ಬದಲಾಯಿಸಲು ಅಜ್ಜ ಒಪ್ಪಿರಲಿಲ್ಲ. ಅವರು ತುಂಬಾ ಸ್ಟ್ರಿಕ್ಟ್, ಜೊತೆಗೆ ಕೋಪಿಷ್ಟರು. ಅವರೆದುರು ನಿಂತು ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಮನೆಯ ಎಲ್ಲ ಉಸ್ತುವಾರಿ ಅವರದೇ ಆಗಿತ್ತು.
ಸೀಮಂತಿನಿಯನ್ನು ನೋಡಲು ಬಂದವರು ಅವಳನ್ನು ಮೆಚ್ಚಿ ಮದುವೆ ನಿಶ್ಚಯ, ತಾಂಬೂಲಕ್ಕೆ ಮಧ್ಯಸ್ಥಿಕೆ ವಹಿಸಿಕೊಂಡ ನರಸಿಂಹ ಭಟ್ಟರು, ಬೀಗರ ಕಡೆಯವರೆಲ್ಲರೂ ಬಂದು ಸೇರಿದರು. ಬಂದವರೆಲ್ಲರೂ ನಿಮ್ಮ ಮಗಳು ನಮಗೆ ಬಹಳ ಮೆಚ್ಚಿಕೆಯಾದಳು. ಅವಳನ್ನು ನಮ್ಮ ಮನೆಯ ಸೊಸೆಯಾಗಿ ಮನೆ ತುಂಬಿಸಿಕೊಳ್ಳುವೆವು. ನಮಗೆಲ್ಲರಿಗೂ ಒಪ್ಪಿಗೆ ಇದೆ ಯಾವುದೇ ಅಭ್ಯಂತರವಿಲ್ಲ. ಜೊತೆಗೆ ವರದಕ್ಷಿಣೆಯಾಗಿ ನಮಗೆ ಏನನ್ನೂ ತೆಗೆದುಕೊಳ್ಳಲು ಮನಸ್ಸಿಲ್ಲ. ಮೊದಲಿನಿಂದ ನಡೆದು ಬಂದ ಪದ್ಧತಿಯಂತೆ ಕನ್ಯೆಗೆ ಕೊಡುವ ಚಿನ್ನ ಬೆಳ್ಳಿ, ಸೀರೆ, ವಸ್ತ್ರ ಕೊಟ್ಟು ಮದುವೆಯನ್ನು ವಿಜೃಂಭಣೆಯಿಂದ ಮಾಡಿಕೊಡಬೇಕು ಎಂದರು.
ಎಂತಹ ವಿಶಾಲ ಹೃದಯದವರು ಬೀಗರಾಗಿ ಸಿಕ್ಕಿದರೆಂದು ಇವರೆಲ್ಲರಿಗೂ ಸಂತೋಷವಾಗಿತ್ತು. ಅವರ ಮನೆಯಲ್ಲಿ ಎಲ್ಲರೂ ವಿದ್ಯಾವಂತರಾಗಿದ್ದರು. ಅಳಿಯ ಲಕ್ಷಣವಾಗಿದ್ದು, ಕೈ ತುಂಬಾ ಸಂಬಳ ತರುವವನಾಗಿದ್ದ. ಇವರಿಗೆ ಇನ್ನೇನು ಬೇಕಿರಲಿಲ್ಲ. ಬಂದವರಿಗೆಲ್ಲಾ ಪದ್ಮಾ ತರತರಹದ ತಿಂಡಿ ಮಾಡಿ ಎಲ್ಲರನ್ನೂ ತೃಪ್ತಿಪಡಿಸಿದಳು.
ತಿಂದು ತೃಪ್ತರಾದ ನರಸಿಂಹ ಭಟ್ಟರು, “ಸರೀ ರಾಯರೇ, ಮಗಳಿಗೆ ಎಷ್ಟು ಪವನ್ ಚಿನ್ನ ಹಾಕ್ತೀರಿ?” ಎಂದು ಕೇಳಿದರು.
“ಅಯ್ಯೋ ಅದರಲ್ಲಿ ಹೇಳಲಿಕ್ಕೇನುಂಟು? ಪ್ರತಿ ವರ್ಷ ಧನಲಕ್ಷ್ಮಿ ಪೂಜೆ ದಿನದಂದು ಮೊದಲೇ ಸ್ವಲ್ಪ ಸ್ವಲ್ಪ ಬಂಗಾರ ಖರೀದಿಸಿಟ್ಟಿದ್ದೆ. ಅದರಲ್ಲಿ ನಾಲ್ಕು ನಾಲ್ಕು ಚಿನ್ನದ ಬಳೆಗಳು, ಒಂದು ಕಡಗ, ಎರಡೆಳೆಯ ಪೆಂಡೆಂಟ್ ಸರಗಳು, ಒಂದು ಮೋಹನ ಮಾಲೆ, ಓಲೆ ಎಲ್ಲವೂ ಇದೆ. ಮತ್ತೇನು ಬೇಕು. ಮೊದಲೇ ಬೀಗರು ಏನೂ ಬೇಡವೆಂದು ಹೇಳಿದ್ದಾರಲ್ಲ… ಮತ್ತೇಕೆ ಈ ಪ್ರಶ್ನೆ….?” ಎಂದು ಜೋರಾಗಿ ಕೇಳಿದರು.
“ಹಾಗಲ್ಲ….. ಸಂಪ್ರದಾಯಕ್ಕೆ ಹುಡುಗಿಗೆ ಏನು ಕೊಡುವಿರಿ ಎಂದು ಕೇಳಿದೆ ಅಷ್ಟೆ.”
“ಛೇ…ಛೇ… ಇದಕ್ಕೆ ನಾನು ಒಪ್ಪಲ್ಲ. ಅದರಲ್ಲೂ ನಮ್ಮ ಮಗಳಿಗೆ ಒಡವೆ ಆಸೆ ಇಲ್ಲ. ನೀವು ಮಧ್ಯಸ್ಥರಾಗಿ ಏನೇನೋ ಕುತಂತ್ರ ಮಾಡಬೇಡಿ.”
“ಛೇ…ಛೇ… ಎಂಥ ಮಾತು ನಿಮ್ಮದು ನಾನೇಕೆ ಕುತಂತ್ರ ಮಾಡಲಿ….? ಇದರಿಂದ ನನಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ. ನಿಮಗೇ ಹಾನಿ. ಇಷ್ಟೊಂದು ಭಾರೀ ಮನೆತನದ ನೆಂಟಸ್ಥನ ಕಳೆದುಕೊಳ್ಳುವಿರಿ ತಿಳೀತಾ…..?”
ಹೀಗೆ ಸೀಮಂತಿನಿಯ ತಂದೆ ಮತ್ತು ನರಸಿಂಹ ಭಟ್ಟರ ನಡುವೆ ವಾಗ್ವಾದ ನಡೀತಾ ಇತ್ತು. ಇದನ್ನು ಕೇಳಿಸಿಕೊಂಡ ಸೀಮಂತಿನಿಯ ತಾಯಿ ಅಲ್ಲಿ ಏನೋ ಅವಘಡ ನಡೀತಾ ಇದೆ ಎಂದುಕೊಂಡು ಅಲ್ಲಿಗೆ ಬಂದಳು. ಅಲ್ಲಿ ನರಸಿಂಹ ಭಟ್ಟರ ಅವತಾರ, ಗಂಡನ ಮುಖ ಒಣಗಿದ ತರಗೆಲೆಯಂತೆ ಆಗಿತ್ತು. ದೇವರೇ ಇದೇನು ಆಗ್ತಾ ಇದೆ, ನಿನ್ನನ್ನು ನಂಬಿರುವೆ ಕಾಪಾಡು ಎಂದು ಮನದಲ್ಲೇ ಪ್ರಾರ್ಥಿಸುತ್ತಾ, ಗಂಡನ ಬಳಿ ಬಂದು, “ಏನಾಯ್ತೂಂದ್ರೆ…. ಯಾಕೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದೀರಾ….?” ಎಂದು ಕೇಳಿದಳು.
“ಏನು ಹೇಳಲಿ… ನಾವು ಕೊಡುವ ಬಂಗಾರ ಅವರಿಗೆ ಸಾಲದೂಂತ ಕಾಣುತ್ತೆ. ಹೇಳುವುದು ಒಂದು…. ಮಾಡುವುದು ಇನ್ನೊಂದು,” ಎಂದರು.
“ಬಿಡಿಸಿ ಹೇಳಿ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಬೇಡಿ.”
“ಏನಿಲ್ಲ, ಅವರು ನಿನ್ನ ಮಗಳಿಗಾಗಿ ನವರತ್ನ ಹಾರ ಮಾಡಿಸಿದ್ದಾರಂತೆ. ಅಲ್ಲದೇ ನಾವು ಚಿನ್ನದ ಬೆಲೆ ಕಡಿಮೆ ಇದ್ದಾಗ ಪಚ್ಚೆಹಾರದ ಪೂರ್ತಿ ಸೆಟ್ ಮಾಡಿಸಿಟ್ಟಿದ್ದೇವೆ….. ”
“ಅದಕ್ಕೇನಿಗ…..?”
“ಅದಕ್ಕೆ ನಾವು ಸೀಮಂತಿನಿಗೆ ಕೆಂಪು ಹರಳಿನ ನೆಕ್ಲೇಸ್ ಪೂರ್ತಿ ಸೆಟ್ ಮಾಡಿಸಿ ಕೊಡಬೇಕಂತೆ. ಏಕೆಂದರೆ ಅತ್ತೆ ಹಾಕಿಕೊಂಡಾಗ ಸೊಸೆ ಬರೀ ಕೊರಳಲ್ಲಿ ಇರುವುದೇ…? ಅವರ ಡಿಗ್ನಿಟಿ, ಅಭಿಮಾನ ಸಂಪತ್ತಿಗೆ ಕೆಟ್ಟ ಹೆಸರು ಬಾರದೇ? ಅದಕ್ಕೆ ನಾವೀಗ ಪ್ರತ್ಯೇಕವಾಗಿ ಮಾಡಿಸಿಕೊಡಬೇಕಂತೆ. ನನಗೂ ಪಿತ್ತ ನೆತ್ತಿಗೇರಿತ್ತು. ಅದಕ್ಕೆ ಭಟ್ಟರ ಬಳಿ ವಾದಿಸುತ್ತಿದ್ದಿ. ಭಟ್ಟರಿಗೂ ಕೋಪ ನೆತ್ತಿಗೇರಿತು,” ಎಂದರು.
“ಅಯ್ಯೋ…. ಬಿಡಿ ಅವರೇನು ಮಾಡ್ತಾರೆ? ಅವರದೇನು ತಪ್ಪಿಲ್ಲ. ಅಲ್ಲಿ ನೋಡಿ ನಿಮ್ಮ ಕುಡಿ… ಅಳಿಯನಾಗುವವನ ಜೊತೆ ಹೇಗೆ ಸಂತಸದಿಂದ ಮಾತನಾಡುತ್ತಾ ಇದ್ದಾಳೆ….. ಇಹದ ಪರಿವೇ ಇಲ್ಲದಂತೆ. ನಾವು ನಮ್ಮ ಮಗಳಿಗೆ ಕೊಡದೆ ಪಕ್ಕದ ಮನೆಯವರು ಕೊಡಬೇಕಾ….? ಅವರೆದರು ನನ್ನ ಮರ್ಯಾದೆ ಮೂರು ಕಾಸಿಗೆ ಮಾಡಬೇಡಾಂತ ನರಸಿಂಹ ಭಟ್ಟರು ಹೇಳಿದ್ದು ಕೇಳಿಸಿತು ಅದಕ್ಕೆ ಓಡೋಡಿ ಬಂದೆ.
“ಈಗ ಸುಮ್ಮನಿರಿ… ದೇವರ ಕೃಪೆಯಿಂದ, ಹಿರಿಯರ ಆಶೀರ್ವಾದದಿಂದ ಎಲ್ಲವೂ ಸರಿಹೋಗುವುದು. ಚಿಂತೆ ಮಾಡಬೇಡಿ, ದೇವರಿದ್ದಾನೆ. ಒಂದು ಸೆಟ್ ಒಡವೆಗಾಗಿ ಇಂತಹ ಒಳ್ಳೇ ಸಂಬಂಧ ಕಳೆದುಕೊಳ್ಳುವುದೇ….? ನನ್ನ ಹತ್ತಿರ ಹರಳು ಹಾಕದೆ ಇರುವ ಆಭರಣ ಬಹಳಷ್ಟು ಇದೆ. ಅದನ್ನೆಲ್ಲಾ ಮುರಿಸಿ ಮಾಡಿಸಿದರಾಯ್ತು, ದಯವಿಟ್ಟು ಚಿಂತೆ ಮಾಡಬೇಡಿ,” ಎಂದಳು.
“ನಿನ್ನಂಥ ಉದಾರ ಮನಸ್ಸು ಯಾರಿಗೂ ಇರಲ್ಲ ಕಣೇ…. ನೀನು ವಿಶಾಲ ಹೃದಯದವಳು.”
“ಸಾಕಿನ್ನು ನಿಮ್ಮ ವರ್ಣನೆ. ಅಬ್ಬಾ…. ಸಂಬಂಧ ಕೂಡುವ ಮೊದಲೇ ಎಲ್ಲಿ ಕಳಚಿ ಹೋಗುತ್ತೋ ಎಂದು ಭಯವಾಗಿತ್ತು,” ಎನ್ನುತ್ತಾ ಪದ್ಮಾ, ನರಸಿಂಹ ಭಟ್ಟರಿಗೆ, “ನೀವು ಹೇಳಿದಂತೆ ಮಾಡಿಸುತ್ತೇವೆ. ಈಗ ನಿಶ್ಚಯ ತಾಂಬೂಲದ ದಿನ, ಮದುವೆ ದಿನದ ಬಗ್ಗೆ ಚರ್ಚಿಸೋಣ,” ಎಂದಳು.
ಭಟ್ಟರು ಹುಡುಗನ ತಾಯಿಯ ಕಿವಿಯಲ್ಲಿ ಪಿಸಿಪಿಸಿ ಎಂದು ಏನೋ ಹೇಳುತ್ತಿದ್ದಂತೆ ಅವರ ಮುಖ ಕಮಲದಂತೆ ಅರಳಿತು.
ಹುಡುಗನ ತಂದೆ, “ ನೋಡಿ ಅನಂತು…. ಮದುವೆ ತಡ ಮಾಡುವ ಹಾಗಿಲ್ಲ. ಏಕೆಂದರೆ ತಮ್ಮನ ಹೆಂಡತಿ ಗರ್ಭಿಣಿ. ಪ್ರಸವ ಆಗುವ ಮೊದಲೇ ಎಲ್ಲ ಕಾರ್ಯ ಆಗಬೇಕು. ಡೆಲಿವರಿ ಆದ ಮೇಲೆ…. ಪುರುಡು…. 10 ದಿನ ಯಾವ ಮಂಗಳ ಕಾರ್ಯವನ್ನು ಮಾಡುವ ಹಾಗಿಲ್ಲ.. ಇದೆಲ್ಲ ನಿಮಗೆ ಗೊತ್ತಿರಬೇಕಲ್ಲ….”
“ಅಯ್ಯೋ…. ಇದೆಲ್ಲಾ ನಮಗೆಲ್ಲ ಹೇಗೆ ಗೊತ್ತಾಗಬೇಕು…. ಯಾರು ಗರ್ಭಿಣಿ ಏನು ಕತೆ ಎಂದು… ಇದೊಳ್ಳೆ ಗ್ರಹಚಾರ ಆಯ್ತಲ್ಲ. ನಮಗೆ ಬೇರೆ ಕೆಲಸವೇ ಇಲ್ಲವೇ…” ಅನಂತು ಕೇಳಿದರು.
“ಛೇ…ಛೇ… ನೀವೆಂಥ ಮನುಷ್ಯರು? ನಿಮ್ಮಂಥವರೊಂದಿಗೆ ಮದುವೆ ಮಾತು ಬೆಳೆಸಲು ಬಂದೆವಲ್ಲ……” ಎಂದು ಹುಡುಗನ ತಂದೆ ಕೊಸರಾಡಿದರು.
ಮತ್ತೆ ಪದ್ಮಾ ಮಧ್ಯೆ ಬಂದು ಎಲ್ಲವನ್ನೂ ನಾರ್ಮಲ್ ಗೆ ತಂದಳು. ಎಲ್ಲರೂ ಸೇರಿ ನಿಶ್ಚಿತಾರ್ಥ, ಮದುವೆ ಮಾತುಕತೆ ಎಲ್ಲವನ್ನೂ ತೀರ್ಮಾನಿಸಿದರು. 7ನೇ ಕ್ಲಾಸ್ ಮುಗಿಸಿದ್ದರೂ ಹೋಬಳಿ ಮಟ್ಟದ ಆ ಊರಿನಲ್ಲಿ ಸೀಮಂತಿನಿಗೆ ಮಂಡಿಪೇಟೆಯಲ್ಲಿ ಸುಮಾರಾದ ಕೆಲಸ ಸಿಕ್ಕಿತ್ತು. ಅಂದು ಅವಳು ಆಫೀಸಿಗೆ ಹೋಗಲು ತಡವಾಗಿತ್ತು. ಅವಳು ತಾಯಿಯನ್ನು ಹುಡುಕಿಕೊಂಡು ಬಂದಳು. ಹಿತ್ತಲ ಬಾಗಲಲ್ಲಿ ತಾಯಿ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದರು. ಹಿಂದಿನ ದಿನದ ಘಟನೆ ಆಕೆಯನ್ನು ಚಿಂತೆಗೀಡು ಮಾಡಿತ್ತು. ಬೀಗರ ಮನೆಯವರು ಕೇಳಿದ ಕೆಂಪು ಹರಳಿನ ಓಲೆ ಸೆಟ್, ಅದಕ್ಕಾಗಿ ಬೀಗತ್ತಿ ತೋರಿದ ಧೋರಣೆ, ಅಲ್ಲಿ ನಡೆದ ಮನಸ್ತಾಪ ಎಲ್ಲವೂ ಶಾಂತವಾಗಿದ್ದ ಆಕೆಯ ಮನಸ್ಸಿನ ಸರೋವರಕ್ಕೆ ಕಲ್ಲು ಹಾಕಿದಂತಿತ್ತು. ಅವರ ಕಣ್ಣಾಲಿಗಳು ತುಂಬಿ ಬಂದವು.
“ಅಮ್ಮಾ….. ಯಾಕಿಲ್ಲಿ ಒಬ್ಬಳೇ ಕುಳಿತಿದ್ದೀಯಾ…..? ಇದೇನಿದು ಕೈಯಲ್ಲಿ ಆಭರಣದ ಡಬ್ಬ…. ಏನಿದೆ ಅದರೊಳಗೆ? ನನಗೆ ತಡವಾಗಿದೆ. ನೀರ್ ದೋಸೆ ಮಾಡ್ತೀನಿ ಅಂದಿದ್ದೆ. ನನಗೆ ಹಸಿವಾಗ್ತಿದೆ,” ಎಂದಳು.
“ನೀನೇ ಮಾಡಿಕೊಂಡು ತಿನ್ನು….”
“ಯಾಕೇ ಏನಾಯ್ತಮ್ಮಾ….. ” ಎನ್ನುತ್ತಾ ಆಕೆಯ ಮುಖವನ್ನು ತನ್ನತ್ತ ತಿರುಗಿಸಿಕೊಂಡಳು. ಅಳುತ್ತಿದ್ದ ತಾಯಿಯನ್ನು ನೋಡಿ, “ಅಮ್ಮಾ…. ಈಗಲೇ ಇಷ್ಟು ಅತ್ತರೆ ಹೇಗಮ್ಮಾ…..? ಮದುವೆಗೆ ಇನ್ನೂ ತಿಂಗಳೊಪ್ಪೊತ್ತಿದೆ. ನಾನೇನು ನಾಳೇನೆ ಹೋಗುತ್ತಿಲ್ಲ…… ” ಎನ್ನುತ್ತಾ ಆಭರಣದ ಡಬ್ಬಿಯನ್ನು ತೆರೆದು ನೋಡಿದಳು.
“ಅರೇ ಕೆಂಪು ಹರಳಿನ ಓಲೆ…. ಅದೂ ಒಂದೇ ಒಂದು…. ಇನ್ನೊಂದೆಲ್ಲಿ…..? ಈ ಮೊದಲು ನಾನು ಇದನ್ನು ನೋಡಿಯೇ ಇರಲಿಲ್ಲ,” ಎಂದಳು ಕುತೂಹಲದಿಂದ.
“ಅಯ್ಯೋ ಬಿಡು ಸೀಮಂತಿನಿ….. ಅದೊಂದು ದೊಡ್ಡ ಕಥೆ. ಅದನ್ನು ಮರೆಯಲಿಕ್ಕಾದೀತೆ…..? ಈಗ್ಯಾಕೆ ಅದೆಲ್ಲಾ? ನಿನಗೆ ಆಫೀಸಿಗೆ ತಡವಾಯ್ತು ನಡಿ…” ಎಂದಳು.
“ಪರವಾಗಿಲ್ಲ ನಾನಿಂದು ರಜೆ ಹಾಕ್ತೀನಿ. ನಿನ್ನ ಮನದಲ್ಲಿರುವ ಆ ಘಟನೆಯನ್ನು ನನಗೆ ಹೇಳಿ ನಿನ್ನ ಮನಸ್ಸನ್ನು ಹಗುರ ಮಾಡಿಕೊ,” ಎಂದು ಹಠ ಹಿಡಿದಳು.
“ನಿನ್ನ ಮದುವೆಗೆ ಬೀಗರ ಮನೆಯಲ್ಲಿ ಕೆಂಪು ಹರಳಿನ ಒಡವೆ ಸೆಟ್ ಮಾಡಲೇಬೇಕು ಎಂದಿದ್ದರಿಂದ ನನಗೆ ಈ ಕೆಂಪು ಹರಳಿನ ಓಲೆಯ ನೆನಪಾಯ್ತು. ಇಷ್ಟು ದಿನ ಮನದ ಮೂಲೆಯಲ್ಲಿ ಇದ್ದದ್ದನ್ನು ಕೆದಕಿ ಹೊರ ಹಾಕಿದಂತೆ ಆಯ್ತು.”
“ಅಂದ್ರೆ…..”
ಪದ್ಮಾ ಹೇಳತೊಡಗಿದಳು, “ನಾವು ಮೊದಲು ಹಳ್ಳಿಮನೆಯಲ್ಲಿ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದೆ. ನನಗೆ ನನ್ನ ತವರಿನಲ್ಲಿ ಈ ಕೆಂಪು ಹರಳಿನ ಓಲೆ ಕೊಟ್ಟಿದ್ದರು. ಇದು ಚೊಕ್ಕ ಚಿನ್ನದಲ್ಲಿ ಆಸಕ್ತಿಯಿಂದ ಮಾಡಿಸಿದ್ದ ಓಲೆ… ಇದನ್ನು ಎಲ್ಲರೂ ಬಹಳ ಇಷ್ಟಪಡುತ್ತಿದ್ದರು. ನಿನ್ನ ಅಪ್ಪಂಗೆ ಅಂತೂ ನಾನು ಈ ಓಲೆ ಹಾಕಿಕೊಂಡರೆ ತುಂಬಾ ಇಷ್ಟವಾಗುತ್ತಿತ್ತು. ಮನೆಯಲ್ಲಿ ನನ್ನ ಹಿರಿಯ ನಾದಿನಿ ಸುಭಾಷಿಣಿಯ ಗಂಡ ಬಹಳ ಕಟ್ಟುನಿಟ್ಟಿನ ಮನುಷ್ಯ. ಜೊತೆಗೆ ಬಹಳ ದರ್ಪ, ಅಹಂಕಾರ, ಬೇಡವಾದ ಗುಣುಗಳೇ ಅವರಲ್ಲಿ ತುಂಬಿತ್ತು. ಆತ ಹೇಳಿದಂತೆಯೇ ಎಲ್ಲ ನಡೆಯಬೇಕೆಂಬ ಹಟದ ಸ್ವಭಾವ.
“ಯಾವುದೇ ಹಬ್ಬ ಹರಿದಿನಗಳಿಗೆ ಬಂದರೂ ಅವರು ಹೇಳಿದಂತೆ ನಡೆಯಬೇಕಿತ್ತು. ಎಲ್ಲರೂ ಅವರಿಗೆ ಹೆದರಿ ಅವರು ಹೇಳಿದಂತೆ ಕೇಳುತ್ತಿದ್ದರು. ಅವರು ಮನೆಗೆ ಬರುತ್ತಾರೆಂದರೆ ನಮಗೆಲ್ಲ ಹೆದರಿಕೆ. ಸುಭಾಷಿಣಿ ಒಳ್ಳೆಯ ಮನಸ್ಸಿನವಳು. ಗಂಡನೆದುರಂತೂ ಗುಬ್ಬಿ ಅಂತಾಗಿಬಿಡುತ್ತಿದ್ದಳು. ಅವರು ಊಟ ತಿಂಡಿ ಮಾಡಿದ ನಂತರವೇ ಮನೆಯವರು ಊಟ ಮಾಡಬೇಕಿತ್ತು. ಹಾಗೆ ಅವರನ್ನು ಅಟ್ಟಕೇರಿಸಿದ್ದರು.
“ಒಮ್ಮೆ ಅವರು ಯುಗಾದಿಗೆಂದು ಬಂದಿದ್ದರು. ಎಲ್ಲರಿಗೂ ವಿಶೇಷವಾಗಿ ಅಳಿಯ ಮಗಳಿಗೆ ಹೊಸ ಬಟ್ಟೆ, ಹಬ್ಬದ ಸಾಮಾನುಗಳೆಲ್ಲವನ್ನೂ ಮನೆಗೆ ತಂದಾಗಿತ್ತು. ನಿನ್ನ ಚಿಕ್ಕಪ್ಪ, ಚಿಕ್ಕಮ್ಮ ಓದಿದರು. ಸಿಟಿಯಿಂದ ಬಂದವರಾದ್ದರಿಂದ ಅವರಿಗೆ ಇದೆಲ್ಲಾ ಸ್ವಲ್ಪ ಹಿಡಿಸುತ್ತಿರಲಿಲ್ಲ. ಆದರೆ ಅತ್ತೆಯ ಅಪ್ಪಣೆಯಂತೆ ಕೇಳಲೇಬೇಕಿತ್ತು.
“ರಾತ್ರಿಯಿಂದಲೇ ಎಲ್ಲ ಸಿದ್ಧತೆಗಳು ನಡೆಯತೊಡಗಿದ. ಬೆಳಗ್ಗೆ ಎದ್ದು ಎಲ್ಲರೂ ಸ್ನಾನ ಮಾಡಿ ಪೂಜಾ ವಿಧಿವಿಧಾನಗಳಿಗೆ ಬೇಕಾದ ವ್ಯವಸ್ಥೆ ಮಾಡಿದರು. 12.30ಗೆ ನೈವೇದ್ಯ ಎಂದು ಹೇಳಿದ್ದರಿಂದ ಅಡುಗೆ ಸಿದ್ಧತೆ ನಡೆಯ ತೊಡಗಿತು. ಹೋಳಿಗೆ, ಪಾಯಸ, ಚಿತ್ರಾನ್ನ, ಕೋಸಂಬರಿ, ಪಲ್ಯ, ಸಾರು, ಬಜ್ಜಿ ಎಲ್ಲ ಸಿದ್ಧವಾಗಬೇಕು. ಅಳಿಯಂದಿರಿಗೆ 1 ಗಂಟೆಗೆ ಸರಿಯಾಗಿ ಊಟ ಬಡಿಸಬೇಕಿತ್ತು.
“ನಾನು ಬೇಗ ಸ್ನಾನ ಮುಗಿಸಿ ಬರಬೇಕೆಂದು ಟವೆಲ್ ಹಿಡಿದು ಹೊರಟಿದ್ದೆ. ಅಷ್ಟೊತ್ತಿಗೆ ಸುಭಾಷಿಣಿ ಬಂದವಳೇ, `ಅತ್ತಿಗೆ ಇದೇನು ನಿಮ್ಮ ಕೂದಲು ಇಷ್ಟು ಒರಟೊರಟಾಗಿದೆ…. ಬನ್ನಿ ಎಣ್ಣೆ ಮಸಾಜ್ ಮಾಡ್ತೀನಿ. ಹೆಚ್ಚೂ ಕಡಿಮೆ ಎಲ್ಲರದೂ ಆಯ್ತು,’ ಎಂದು ಎಣ್ಣೆ ಬಟ್ಟಲು ಹಿಡಿದುಕೊಂಡು ಮುಂದೆ ನಿಂತಳು.
“ಅವಳ ಬಲವಂತಕ್ಕೆ ಜಗ್ಗದೆ, ಅವಳಿಂದ ಎಣ್ಣೆ ಹಚ್ಚಿಸಿಕೊಳ್ಳದೆ ನಾನು ಸ್ನಾನಕ್ಕೆ ಹೋದೆ. ಹೋಗುವ ಅವಸರದಲ್ಲಿ ಓಲೆ ಬಿಚ್ಚಿರಲಿಲ್ಲ. ಸರಿ ಎಂದು ಬಚ್ಚಲು ಮನೆಯಲ್ಲಿದ್ದ ಸೀಗೇಕಾಯಿ ಬಟ್ಟಲಲ್ಲಿ ಹಾಕಿ ಗೂಡಿನಲ್ಲಿಟ್ಟೆ. ಸ್ನಾನ ಮುಗಿಸಿ ಹೊರಬರುವ ಹೊತ್ತಿಗೆ ಓಲೆ ವಿಷಯ ಮರೆತು ಹೋದೆ. ನಂತರ ಹಬ್ಬದ ನೈವೇದ್ಯ, ಅಡುಗೆ, ಊಟ ಎಲ್ಲ ಮುಗಿಯಿತು.
“ಸಂಜೆ ಎಲ್ಲರಿಗೂ ಕಾಫಿ ಕೊಡುವ ಸಮಯದಲ್ಲಿ ನಿಮ್ಮ ಅಪ್ಪ ನನ್ನ ಮುಖವನ್ನೇ ನೋಡುತ್ತಿದ್ದರು. ಇವರಿಗೇನಾಗಿದೆ ಎಂದುಕೊಳ್ಳುವಷ್ಟರಲ್ಲಿ ಅವರು ನನ್ನನ್ನು ಕರೆದು ಏಕೆ ಓಲೆ ಹಾಕಿಕೊಂಡಿಲ್ಲ ಎಂದು ಕೇಳಿದರು. ಆಗಲೇ ನನಗೆ ಓಲೆಯ ನೆನಪಾದದ್ದು. ಸ್ನಾನದ ಕೊಠಡಿಗೆ ಹೋಗಿ ಹುಡುಕಿದರೂ ಸಿಗಲೇ ಇಲ್ಲ. ನಾನು ಅಳುತ್ತಾ ಇದ್ದೆ. ನಿಮ್ಮಪ್ಪ ಬಂದು ಕೇಳಿದಾಗ, ನಾನು ವಿಷಯ ತಿಳಿಸಿದೆ. ಅದನ್ನು ಕೇಳಿ ಅವರು ಕೋಪದಿಂದ ನನ್ನ ಮೇಲೆ ಕೂಗಾಡಿದರು.
“ನಿಮ್ಮಪ್ಪ ಅಷ್ಟಕ್ಕೇ ಬಿಡದೇ ಮನೆಯ ಕೆಲಸದವರನ್ನು ವಿಚಾರಿಸಿ ಪೊಲೀಸರಿಗೆ ಕಂಪ್ಲೇಟ್ ಕೊಡುವುದಾಗಿ ಬೆದರಿಸಿದರು. ನಾನು ಅತ್ತೆ ಬೇಡವೆಂದು ಸುಮ್ಮನಿರಿಸಿದರೂ ಕೇಳದೆ ಬಸಪ್ಪ ಎಂಬ ಮೂಕ ಕೆಲಸದವನನ್ನು ಚೆನ್ನಾಗಿ ಹೊಡೆದು ಬಿಟ್ಟರು. ಹೇಗೋ ಅವನನ್ನು ಬಿಡಿಸಿಕೊಂಡೆ. ಆದರೆ ನಿಮ್ಮಪ್ಪ ನನ್ನನ್ನು ತುಂಬಾ ದಿನ ಮಾತನಾಡಿಸಲೇ ಇಲ್ಲ.
“ಹೀಗಾಗಿ ವರ್ಷಗಳು ಉರುಳಿ ಹೋದವು. ಒಮ್ಮೆ ಜೋರಾದ ಮಳೆಯಿಂದ ಗಟಾರ ಕಟ್ಟಿಕೊಂಡಿತು. ಅದರ ಹೂಳನ್ನು ತೆಗೆಸಿ ಹೊಲಕ್ಕೆ ಹಾಕಬೇಕೆಂದು ಕೆಲಸ ಶುರು ಮಾಡಿದರು. ಕೆಲಸದಾಳುಗಳು ಮಧ್ಯಾಹ್ನ ಊಟಕ್ಕೆ ಕುಳಿತಿದ್ದ ಸಮಯದಲ್ಲಿ ಮೂಕ ಬಸಪ್ಪ ದಿಢೀರನೆ ಎದ್ದು ನಿಂತು ಜಮೀನಿನ ಕಡೆ ಕೈ ತೋರಿಸುತ್ತಾ ನಿಂತ. ಏನೆಂದು ನೋಡಿದಾಗ ಸೂರ್ಯನ ಬಿಸಿಲಿಗೆ ಫಳಪಳ ಹೊಳೆಯುತ್ತಿತ್ತು ಕೆಂಪು ಹರಳಿನ ಒಂದು ಓಲೆ! ಮತ್ತೊಂದು ಓಲೆಗಾಗಿ ಎಷ್ಟು ಹುಡುಕಿದರೂ ಸಿಕ್ಕಲೇ ಇಲ್ಲ. ಅಂತೂ ಕಳೆದು ಹೋಗಿದ್ದ ಓಲೆ ಜೋಡಿಯಲ್ಲಿ ಒಂದು ಸಿಕ್ಕಿತು. ಈಗ ನಿನಗೆ ಕೆಂಪು ಹರಳಿನ ಓಲೆ ಮಾಡಿಸಬೇಕೆಂದಾಗ ಹಳೆಯ ನೆನಪಾಗಿ ದುಃಖವಾಯ್ತು,” ಎಂದರು.
“ಅಯ್ಯೋ ಅಮ್ಮಾ…. ನಿಜ ಹೇಳ್ಲಾ? ನನಗೆ ಖಂಡಿತಾ ಓಲೆ ಮಾಡಿಸಬೇಡಿ. ಈಗ ಮಾಡಿಸಿಟ್ಟಿರುವುದೇ ಸಾಕು. ಇದರಲ್ಲಿ ಮರ್ಯಾದೆ ಪ್ರಶ್ನೆ ಏನು ಬಂತು? ಅಪ್ಪಾಜಿ ನಿನಗೇ ಅಂಥ ಓಲೆ ಮಾಡಿಸಿ ಕೊಡಬೇಕಿತ್ತು. ಹೋಗಲಿ ಬಿಡು… ನಾನೇ ನಿನಗೆ ಮಾಡಿಸಿ ಕೊಡ್ತೀನಿ,” ಎಂದಳು ಸೀಮಂತಿನಿ.
“ಅಯ್ಯೋ ಬೇಡ ಮಾರಾಯ್ತಿ…. ಇಂಥದ್ದನ್ನೆಲ್ಲಾ ಈಗ ನಾನೆಲ್ಲಿ ಧರಿಸ್ತೀನಿ? ಖಂಡಿತಾ ಬೇಡ. ಏನೋ ಮನಸ್ಸು ತಡೆಯದೆ ಎಲ್ಲಾ ನಿನ್ನ ಹತ್ರ ಹೇಳಿದೆ. ಈಗ ಮನ ಹಗುರ ಆಯ್ತು. ಆದರೆ ನಿಮ್ಮಪ್ಪ ಅಂದಿನಿಂದ ಇಂದಿನವರೆಗೂ ನನ್ನೊಡನೆ ಸರಿಯಾಗಿ ಮಾತನಾಡುತ್ತಲೇ ಇಲ್ಲ….. ಆದರೆ ಏನು ಮಾಡಲಿ? ಮುಖವಾಡ ಹಾಕಿಕೊಂಡು ಎಲ್ಲವನ್ನೂ ಸಹಿಸಿಕೊಂಡಿದ್ದೇನೆ.”
“ಮಗೂ… ನಾನು ಊರಿಗೆ ಹೋಗುತ್ತೇನೆ. ಬರಲು 7-8 ದಿನಗಳಾಗುತ್ತವೆ. ಗದ್ದೆ ಕೆಲಸ ಇದೆ,” ಎಂದು ಮಗಳ ಬಳಿ ಹೇಳಿ ಹೋದ ರಾಯರು 10 ದಿನಗಳಾದರು ಬರದಿದ್ದಾಗ ಪದ್ಮಾಳಿಗೆ ಚಿಂತೆ ಆಯಿತು. ಹೆದರಿ ಹೌಹಾರಿದರು. ಆದರೆ 10 ದಿನಗಳಾದ ಮೇಲೆ ಬಂದ ಪತಿ ರಾಯರು ಬಹಳ ಹಸನ್ಮುಖರಾಗಿದ್ದರು.
“ಸೀಮಂತಿನಿ ಬಾಮ್ಮಾ ಇಲ್ಲಿ…. ನಿಮ್ಮಮ್ಮನನ್ನೂ ಕರೆಕೊಂಡು ಬಾ,” ಎಂದರು.
“ಅರೇ ಏಕಪ್ಪಾ….? ಏನು ವಿಶೇಷ…?”
“ಇಬ್ಬರೂ ಕಣ್ಣು ಮುಚ್ಚಿಕೊಳ್ಳಿ”
“ಅರೇ ಇದೇನು ಹುಡುಗಾಟ?”
“ಹ್ಞಾಂ, ಈಗ ಕಣ್ಣು ತೆರೆಯಿರಿ.”
ಕಣ್ಣು ತೆರೆದಾಗ ಆಭರಣ ಪೆಟ್ಟಿಗೆ. ಅದನ್ನು ಬಿಚ್ಚಿ ನೋಡಿದಾಗ ಕೆಂಪು ಹರಳಿನ ನೆಕ್ಲೇಸ್, ಓಲೆ, ಬಳೆ. ಜೊತೆಗೆ ಪದ್ಮಾಳ ಮೊದಲಿದ್ದ ಓಲೆಯ ತರಹದ ಕೆಂಪು ಹರಳಿನ ಓಲೆಗಳು.“ಅಪ್ಪಾ….. ನೀವು ಗ್ರೇಟ್…. ತುಂಬಾ ಥ್ಯಾಂಕ್ಸ್ ,” ಎಂದಳು ಮಗಳು.
ಪದ್ಮಾ ಅತ್ಯಾನಂದದಿಂದ ಓಡಿ ಬಂದವಳೇ ಗಂಡನನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದರು.
“ಪದ್ಮಾ…. ಇದೇನು ಮಾಡುತ್ತಿರುವೆ. ನನ್ನನ್ನು ಕ್ಷಮಿಸು ನಾನು ನಿನ್ನ ಮನಸ್ಸು ನೋಯಿಸಿರುವೆ. ಇನ್ನು ಮುಂದೆ ನೀನು ಅಳುವಂತಿಲ್ಲ. ನನ್ನ ಮುದ್ದು,” ಎಂದರು.
`ಅಯ್ಯೋ…. ಎದುರಿಗೆ ಮಗಳಿರುವುದನ್ನೇ ಮರೆತೆನಲ್ಲ….’ ಎಂದು ನಾಚಿಕೆಯಿಂದ ರೂಮಿಗೆ ಓಡಿದರು ಪದ್ಮಾ.
ಕೆಂಪು ಹರಳಿನ ಓಲೆ ಡಬ್ಬದಲ್ಲಿ ಝಗಮಗಿಸುತ್ತಾ ಹೊಳೀತಿತ್ತು.