ಜನಪ್ರಿಯ ಕ್ರೀಡೆಗಳಾದ ಕ್ರಿಕೆಟ್, ಬಾಕ್ಸಿಂಗ್, ಕುಸ್ತಿ, ರನ್ನಿಂಗ್ ರೇಸ್ ಸೇರಿದಂತೆ ಹಲವಾರು ಕ್ರೀಡೆಗಳ ಕುರಿತು ಬಾಲಿವುಡ್ನಲ್ಲಿ ಹಲವಾರು ಸಿನಿಮಾಗಳಾಗಿವೆ. ಅಂತೆಯೇ ಜಪಾನ್ ಮೂಲದ ರಾಷ್ಟ್ರೀಯ ಕ್ರೀಡೆ ಸುಮೊ ಕುಸ್ತಿ ಕುರಿತು ಬಾಲಿವುಡ್ನಲ್ಲಿ ಸಿನಿಮಾ ಆಗಿರುವುದು ವಿಶೇಷ. ಭಾರತದ ಮೊದಲ ಮಹಿಳಾ ಸುಮೊ ಕುಸ್ತಿ ಚಾಂಪಿಯನ್ ಆಗಿದ್ದ ಹೇತಲ್ ದವೆ ಕುರಿತ ಜೀವನಾಧಾರಿತ ಸಿನಿಮಾ ಇದು.
“ಸುಮೊದೀದಿ” ಎಂಬ ಟೈಟಲ್ನಲ್ಲಿ ಈ ಚಿತ್ರಕ್ಕೆ ಜಯಂತ್ ರೋಹಟಿ ಆಕ್ಷನ್ ಕಟ್ ಹೇಳಿದ್ದಾರೆ. “ಬಾಘಿ 2” ಸಿನಿಮಾದಲ್ಲಿಕಾಣಿಸಿಕೊಂಡಿದ್ದ ಶ್ರೀಯಂ ಭಗ್ನಾನಿ, ಹೇತಲ್ ದಾವೆಯಾಗಿ ಅಭಿನಯಿಸುತ್ತಿದ್ದಾರೆ.
ಚೈತನ್ಯ ಶರ್ಮಾ, ನಿತೇಶ್ ಪಾಂಡೆ, ಅನುಭಾ ಫಾತೇಪುರ ಪಾತ್ರ ನಿರ್ವಹಿಸಿದ್ದಾರೆ. 2023ರಲ್ಲಿ ಟೋಕಿಯಾ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಮೂಲಕ ಮೊದಲ ಬಾರಿಗೆ ಪ್ರದರ್ಶನಗೊಂಡಿತ್ತು.
2024ರ ಪಾಮ್ ಸ್ಟ್ರಿಂಗ್ಸ್ ಹಾಗೂ 24ನೇ ನ್ಯೂಯಾರ್ಕ್ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ನಲ್ಲಿ ಸ್ಕ್ರೀನಿಂಗ್ ಆಗಿ ಪ್ರೇಕ್ಷಕರ ಗಮನ ಸೆಳೆದಿತ್ತು. 2024ರಲ್ಲಿ ಎರಡು ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಭಾರತೀಯ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕಿದೆ. ದೇಶದಲ್ಲಿ ಅಧಿಕೃತವಾಗಿ ರಿಲೀಸ್ ಆಗುವ ಮುನ್ನವೇ ವಿದೇಶದಲ್ಲಿ ಈ ಸಿನಿಮಾ ಸದ್ದು ಮಾಡಿತ್ತು.
ಹೇತಲ್ ದಾವೆ: ಮುಂಬೈ ಮೂಲದ ಹೇತಲ್ ದವೆ ಭಾರತದ ಮೊದಲ ಮಹಿಳಾ ಸುಮೊ ಕುಸ್ತಿ ಪಟು. ಕೇವಲ ಪುರುಷರಿಗೆ ಸೀಮಿತ ಎಂದು ಹೇಳಲಾಗುತ್ತಿದ್ದ ಈ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಹೇತಲ್ ದವೆ 2008ರಲ್ಲಿ ಸುಮೊ ಕುಸ್ತಿಯಲ್ಲಿ ಚಾಂಪಿಯನ್ ಆಗುವ ಮೂಲಕ ದಾಖಲೆ ಬರದಿದ್ದರು. ಅವರ ಜೀವನಾಧಾರಿತ ಚಿತ್ರವೇ “ಸುಮೊದೀದಿ”.