CATEGORY : SOCIETY
URL : HENNU
ಶಾಸ್ತ್ರ ಸಂಪ್ರದಾಯಗಳ ಹೆಸರಲ್ಲಿ ಧರ್ಮಾಂಧ ಕಂದಾಚಾರಿಗಳು, ಯಾವ ರೀತಿ ಹೆಣ್ಣನ್ನು ಗಂಡಿನ ಅಡಿಯಾಳಾಗಿಸಿದ್ದಾರೆ ಎಂದು ನಿಮಗೆ ಗೊತ್ತೇ……?
ನಮ್ಮ ದೇಶದಲ್ಲಿ ವರ್ಷವಿಡೀ ಯಾವುದಾದರೊಂದು ಹಬ್ಬ ನಡೆಯುತ್ತಲೇ ಇರುತ್ತದೆ. 4-5 ಅತಿ ಪ್ರಚಲಿತ ಹಬ್ಬಗಳನ್ನು ಬಿಟ್ಟರೆ, ವಿಭಿನ್ನ ರಾಜ್ಯಗಳಲ್ಲಿ ಕಂಡುಬರುವ ಸಣ್ಣಪುಟ್ಟ ಹಬ್ಬಗಳಿಗೇನೂ ಕೊರತೆ ಇಲ್ಲ. ಹಬ್ಬಗಳು ಮಾತ್ರವಲ್ಲ, ಅನೇಕ ವ್ರತ ಉಪವಾಸಗಳಿಗೂ ಕೊರತೆ ಇಲ್ಲ. ಇದನ್ನು ಎಲ್ಲಾ ವಿವಾಹಿತ/ಅವಿವಾಹಿತ ಹೆಣ್ಣುಮಕ್ಕಳೂ ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಾಗುತ್ತದೆ. ಇದನ್ನು ಎಲ್ಲವೂ ಸುಶಿಕ್ಷಿತ, ಅಲ್ಪಶಿಕ್ಷಿತ, ಅಶಿಕ್ಷಿತ ಹೆಂಗಸರೂ ನಿಷ್ಠೆಯಿಂದ ಪಾಲಿಸುತ್ತಾರೆ. ಒಂದು ವಿಧದಲ್ಲಿ ಈ ಹಬ್ಬ, ವ್ರತ, ಪೂಜಾ ಸಮಾರಂಭಗಳು ಹತ್ತಾರು ಮಂದಿ ಒಂದೆಡೆ ಸೇರಿ ಕಲೆತು ಆಚರಿಸುವ ಮಾಧ್ಯಮವಾಗಿದೆ. ಆದರೆ ಈ ವ್ರತಾಚರಣೆಗಳ ಹಿಂದೆ ಅನೇಕ ಸಮಸ್ಯೆಗಳೂ ಇವೆ. ಈ ವಿಷಯದ ಕುರಿತಾಗಿ ಹಲವು ಹೆಂಗಸರ ಜೊತೆ ನಡೆಸಿದ ಮಾತುಕಥೆಯ ಸಂಕ್ಷಿಪ್ತ ಸಾರಾಂಶ :
50-50 ಓಕೆ
ಈ ಕುರಿತಾಗಿ ಬೆಂಗಳೂರಿನ 45 ವರ್ಷದ ಅರ್ಚನಾ ಹೇಳುತ್ತಾರೆ, “ಹಬ್ಬ ಅಂದ ಮೇಲೆ ಇದೆಲ್ಲ ಇದ್ದದ್ದೇ…. ನಮ್ಮಲ್ಲಿ ಹಲವಾರು ಬಗೆಯ ಸಣ್ಣಪುಟ್ಟ ಹಬ್ಬ, ಹರಿದಿನ, ವ್ರತ, ಉಪವಾಸ, ಪೂಜಾ ಸಮಾರಂಭಗಳು ಇದ್ದೇ ಇರುತ್ತವೆ. ಇದಕ್ಕೆ ಬರುವ ಅತಿಥಿಗಳನ್ನು ಆದರಿಸಿ, ಅವರ ಉಪಚಾರದ ಕಡೆ ಹೆಚ್ಚಿನ ಗಮನ ಕೊಡುವುದೇ ಹೆಂಗಸರ ಕರ್ತವ್ಯ ಆಗುತ್ತದೆ. ಹ್ಞಾಂ…. ಸಿಂಗಾರ, ಮೇಕಪ್, ಹೊಸ ಸೀರೆ ಇವೆಲ್ಲ ಜೊತೆಗೂಡುತ್ತವೆ. ಬಂದವರಿಗೆ ಬೇಕಾದಂತೆ ಔತಣ ಮಾಡಿ ಸತ್ಕರಿಸದಿದ್ದರೆ ಹೇಗೆ? ಗೃಹಿಣಿಯರು ಈ ಸಂದರ್ಭದಲ್ಲಿ ಅತಿಥಿಗಳ ಜೊತೆ ಬೆರೆತು ತಮ್ಮ ವೈಭವ ಪ್ರದರ್ಶಿಸುವುದೂ ಮಾಮೂಲೇ….. ಇಲ್ಲದಿದ್ದರೆ ನೈಟಿಯಲ್ಲೇ ಇಡೀ ದಿನ ಮನೆಗೆಲಸ ಮಾಡುತ್ತಾ, ಮನೆಯವರನ್ನು ಸುಧಾರಿಸುವುದೇ ಆಗಿಹೋಗುತ್ತದೆ. ಇವೆಲ್ಲ ಹಬ್ಬಗಳೂ ಮನೆಮಂದಿಯ ಸುಖಶಾಂತಿ ಹೆಚ್ಚಲು, ಸದಾ ಮುತ್ತೈದೆಯಾಗಿ ಉಳಿದು ಗಂಡನ ಆಯುಷ್ಯ ಹೆಚ್ಚಿಸಲು ಕೋರುವುದಾಗಿದೆ.
“18ರ ಹರೆಯದಲ್ಲೇ ನನ್ನ ಮದುವೆ ಆಗಿತ್ತು. ಇಷ್ಟು ವರ್ಷಗಳಿಂದ ಇನ್ನೆಲ್ಲ ಕಟ್ಟುನಿಟ್ಟಾಗಿ ಫಾಲೋ ಮಾಡ್ತಿದ್ದೀನಿ. ಆದರೆ ನನ್ನ ಪತಿ ತುಸು ಅಧಿಕ ರಸಿಕ ಮಹಾಶಯ, ಮದುವೆಗೆ ಮೊದಲೇ ಹಲವು ಗರ್ಲ್ ಫ್ರೆಂಡ್ಸ್ ಇದ್ದರಂತೆ! ಹೀಗಾಗಿ ಅವರ ಹಿರಿಯರು 23ರಲ್ಲೇ ಇವರಿಗೆ ಮದುವೆ ಮಾಡಿಸಿ ಮೂಗುದಾರ ಹಾಕಿಸಿದ್ದಾರೆ. ಆದರೆ ಮದುವೆ ನಂತರ ಇವರು ದೊಡ್ಡದಾಗಿ ಏನೂ ಸುಧಾರಿಸಿಲ್ಲ. ನಮ್ಮದು ಮೊದಲಿನಿಂದಲೂ ಬಿಸ್ ನೆಸ್ ನಡೆಸುವ ಸಾಂಪ್ರದಾಯಿಕ ಕುಟುಂಬ. ಹಿರಿಯರು ಮಾಡಿಟ್ಟ ಆಸ್ತಿಯಲ್ಲಿ ಬಿಸ್ ನೆಸ್ ಮುಂದುವರಿಸಿದ್ದಾರೆ, ನಮ್ಮ ಮಾವ ಹೋದ ನಂತರ, ಇವರದೇ ಎಲ್ಲಾ ಕಾರುಬಾರು! ವ್ಯಾಪಾರದಲ್ಲಿ ಹೇಳಿಕೊಳ್ಳುವಂಥ ಲಾಭ ಏನಿಲ್ಲ.
“ನನ್ನ ಮನಸ್ಸಿಗೆ ಅಹಿತ ಎನಿಸುವ ಹಲವು ಪ್ರಸಂಗಗಳಿಗೆ ಇವರು ಕಾರಣರವಾಗಿದ್ದಾರೆ. ಭೀಮನ ಅಮಾವಾಸ್ಯೆಯಂಥ ಪತಿ ಪಾದ ಪೂಜೆಯನ್ನು ಬಿಟ್ಟುಬಿಡಬೇಕು ಎಂದೇ ಅನಿಸುತ್ತದೆ. ಜವಾಬ್ದಾರಿಯೇ ವಹಿಸದ ಇಂಥ ಗಂಡನಿಗಾಗಿ ಇದೆಂಥ ಪೂಜೆ, ಪುನಸ್ಕಾರ ಎನಿಸುತ್ತದೆ. ಆದರೆ ಸಮಾಜ ಏನನ್ನುತ್ತದೋ…..? ಹೀಗಾಗಿ ಏನೋ ಒಂದು ನಿಭಾಯಿಸುತ್ತಿದ್ದೇನೆ. ನಾನು ಇದನ್ನೆಲ್ಲ ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ನಮ್ಮತ್ತೆ ಮನಸ್ಸಿಗೆ ಬಹಳ ನೋವಾಗುತ್ತದೆ. ಅವರಿಗಾಗಿ ಇದೆಲ್ಲ ಮಾಡುತ್ತೇನೆ.
“ನಮ್ಮ ಅಂಗಡಿಯನ್ನು ಇವರು ನಡೆಸುತ್ತಾರೆ. ನಾನೂ ಮಧ್ಯೆ ಮಧ್ಯೆ ನೋಡಿಕೊಳ್ಳುವೆ. ಜೊತೆಗೆ ಟೇಲರಿಂಗ್ ಮಾಡುತ್ತಾ, ಬಟ್ಟೆ ಹೊಲಿಗೆ, ಕಸೂತಿ ಇತ್ಯಾದಿ ಸಹ ಸಂಭಾಳಿಸುವೆ. ಮದುವೆಯಾದ ಹೊಸತರಲ್ಲಿ ನಾನೊಂದು ಬುಟಿಕ್ ತೆರೆಯಲು ಸಹಾಯ ಮಾಡಿ ಎಂದರೆ ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ನಾನು ಬರೀ ಈ ಸಂಪ್ರದಾಯಗಳಲ್ಲೇ ಮುಳುಗಿಹೋದೆ, ಇದರ ಬದಲು ನನ್ನದು ಅಂತ ಸ್ವಂತವಾಗಿ ಏನಾದರೂ ಮಾಡಿದ್ದರೆ ಚೆನ್ನಾಗಿತ್ತು….”
ನೌಕರಿ ತೊರೆದ ಆದರ್ಶ ಸತಿ
40 ವರ್ಷದ ಮೈಸೂರಿನ ರೇವತಿ ಹೇಳುತ್ತಾರೆ, “ನನ್ನ ಮದುವೆ ಆಗಿದ್ದು ಲೇಟ್, 30ರಲ್ಲಿ ಆಯ್ತು. ಮದುವೆಗೆ ಮೊದಲು ಒಂದು ಉತ್ತಮ ಖಾಸಗಿ ಕಂಪನಿಯಲ್ಲಿ ನಾನು ಮ್ಯಾನೇಜರ್ ಆಗಿದ್ದೆ. ಮದುವೆ ಆದಾಗ ನಮ್ಮಿಬ್ಬರ ವಯಸ್ಸು ಹೆಚ್ಚುಕಡಿಮೆ ಒಂದೇ ಆಗಿತ್ತು. ನನ್ನ ಪತಿ ಹಾಗೂ ಮಾವ ಸಹ ಉನ್ನತ ಹುದ್ದೆಯಲ್ಲಿದ್ದಾರೆ. ಹೀಗಾಗಿ ಮದುವೆ ಆದ ಮೇಲೆ ಕೆಲಸ ಬಿಟ್ಟು, ಆದರ್ಶ ಸೊಸೆಯಾಗಿ ಮನೆ ನೋಡಿಕೊಳ್ಳಬೇಕೆಂಬುದೇ ಇವರೆಲ್ಲರ ಡಿಮ್ಯಾಂಡ್ ಆಗಿತ್ತು. 2-3 ವರ್ಷಗಳಲ್ಲಿ ನನಗೆ ಮನೆಯಲ್ಲೇ ಇರುವುದು ಉಸಿರು ಕಟ್ಟಿದಂತಾಯ್ತು.
“ಹೀಗಾಗಿ ಮೈಸೂರಿನಲ್ಲೇ ನಾನು ಕೆಲಸಕ್ಕಾಗಿ ಟ್ರೈ ಮಾಡತೊಡಗಿದೆ. 1-2 ಉತ್ತಮ ಖಾಸಗಿ ಕಂಪನಿಗಳಲ್ಲಿ ಅವಕಾಶ ದೊರೆತಾಗ, ಮಾವ…. ಈಗ ಬೇಡ. ಮೊಮ್ಮಗ 4-5ನೇ ಕ್ಲಾಸಿಗೆ ಹೋಗುವಂತಾದಾಗ ಆಮೇಲೆ ನೋಡೋಣ, ನಾವೇ ಎಲ್ಲಾದರೂ ಕೊಡಿಸುತ್ತೇವೆ… ಎಂದುಬಿಟ್ಟರು. ನನ್ನ ಅತ್ತೆಗಂತೂ ನಾನು ಮತ್ತೆ ಕೆಲಸಕ್ಕೆ ಹೋಗುವುದು ಖಂಡಿತಾ ಬೇಕಿರಲಿಲ್ಲ. ಸದಾ ಆಚಾರ, ಸಂಪ್ರದಾಯ, ಹಬ್ಬ, ಹರಿದಿನ…. ಇದಿಷ್ಟೇ ಅವರ ಪ್ರಪಂಚ. ಹೀಗಾಗಿ ಎಲ್ಲಾ ಹಬ್ಬಗಳಲ್ಲೂ ನಾನು ಅವರಿಗೆ ಬಲಗೈ ಆಗಿ, ವ್ರತ ಉಪವಾಸ ನಿಭಾಯಿಸುತ್ತಿದ್ದೆ. ಹಿಂದೆ ನೀನು ನೌಕರಿ ಮಾಡಿರಬಹುದು, ಹಾಗೇಂತ ಸದಾ ನೀನು ಅದರಲ್ಲಿ ಮುಳುಗಿಹೋದರೆ, ಮನೆವಾರ್ತೆ ನಡೆಸುವುದನ್ನು ನೀನು ಕಲಿಯುವುದು ಯಾವಾಗ? ಕೆಲವು ವರ್ಷಗಳಲ್ಲಿ ನಾನು ಕಣ್ಣು ಮುಚ್ಚಿದರೆ, ಮುಂದಕ್ಕೆ ನೀನು ತಾನೇ ಇದನ್ನೆಲ್ಲ ಸಂಭಾಳಿಸಬೇಕು? ಎನ್ನುತ್ತಾರೆ.
“ಅವರಿಗೆ ನೋವಾಗಬಾರದೆಂದು ಇದೆಲ್ಲವನ್ನೂ ಹಾಗೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಮುಂದೆ ಬಸಿರು, ಬಾಣಂತನ, ಮಗುವಿನ ಪಾಲನೆ, ಮನೆ, ಹಿರಿಯರ ಸೇವೆ….. ಇದರಲ್ಲೇ ಮುಳುಗಿ ಹೋದೆ. ಇವರಂತೂ ಯಾವುದಕ್ಕೂ ಎಂದಿಗೂ ನನಗೆ ಸಹಾಯ ಮಾಡುವವರಲ್ಲ. ಇದೆಲ್ಲ ಯಾಕೋ ನನಗೆ ಸರಿಹೋಗೋಲ್ಲ, ಉಸಿರು ಕಟ್ಟಿದಂತಿದೆ ಎಂದು ಇವರ ಬಳಿ ಹೇಳಿದರೆ, ಸುಮ್ಮನೆ ಅಮ್ಮನನ್ನು ಅನುಸರಿಸಿಕೊಂಡು ಹೋಗು. ಇನ್ನೆಷ್ಟು ವರ್ಷ ಇರ್ತಾಳೆ….. ಅಂತಾರೆ. ನಾನು ಏನಾದರೂ ವಿರೋಧಿಸಲು ಹೊರಟರೆ ಅತ್ತೆ ಬಹಳ ಬೇಜಾರು ಮಾಡಿಕೊಂಡು, ರಂಪ ಮಾಡ್ತಾರೆ. ಒಟ್ಟಾರೆ ಸುಶಿಕ್ಷಿತಳಾದ ನನ್ನ ಅಭಿಪ್ರಾಯಕ್ಕೆಲ್ಲಿ ಮನ್ನಣೆ ಇಲ್ಲ!
“ಹಾಗಿದ್ದರೆ ನಾನು ಇಷ್ಟೆಲ್ಲ ಓದಿ ಕಲಿತು ಡಬ್ಬಲ್ ಡಿಗ್ರಿ ಪಡೆದಿದ್ದು ಬರೀ ಮನೆಗೆಲಸಕ್ಕೆ ಅಷ್ಟೆನಾ? ಈ ಲಕ್ಷಣಕ್ಕೆ ನಾನು ಇಷ್ಟು ಕಷ್ಟಪಡಬೇಕಿತ್ತೇ? ನನ್ನ ತವರಿನಲ್ಲಿ ಮಧ್ಯಮ ವರ್ಗದ ಕುಟುಂಬ. ಹೆಚ್ಚಿನ ಮೋಜು, ಮನರಂಜನೆಗೆ ಅವಕಾಶವಿಲ್ಲ. ಚೆನ್ನಾಗಿ ಕಲಿತು, ಕೆಲಸ ಮಾಡಿ, ಮುಂದೆ ಗಂಡನ ಮನೆಯಲ್ಲಿ ನಾನು ಬಯಸಿದಂತೆ ಇರೋಣ ಅಂದುಕೊಂಡರೆ…. ಏನೂ ನಡೆಯಲಿಲ್ಲ! ಜಗತ್ತಿಗೆ ತೋರಿಸಿಕೊಳ್ಳಲು ಇವರಿಗೆ ಸುಶಿಕ್ಷಿತ ಹೆಂಡತಿ, ಸೊಸೆ ಬೇಕಿತ್ತು. ಸದಾ ಈ ಸಂಪ್ರದಾಯಗಳ ಜಂಜಾಟದಲ್ಲಿ ಮುಳುಗುವುದು ಮಾತ್ರ ನನ್ನ ಪಾಲಿಗುಳಿಯಿತು. ನನ್ನ ಡಿಗ್ರಿಗೆ ಇಲ್ಲಿ ಕಡೆ ಕಾಸಿನ ಬೆಲೆ ಇಲ್ಲ. ಇದೇ ಮುಖ್ಯವಾಗಿದ್ದರೆ ಅಶಿಕ್ಷಿತ ಹಳ್ಳಿ ಹೆಣ್ಣನ್ನು ಮನೆ ತುಂಬಿಸಿಕೊಳ್ಳ ಬೇಕಿತ್ತಲ್ಲವೇ?
“ದುಃಖದ ವಿಷಯ ಅಂದ್ರೆ, ನಮ್ಮತ್ತೆ ಮಾವ ವಿಚಿತ್ರ ಸ್ವಭಾವದವರು. ಹಬ್ಬದ ಎಲ್ಲಾ ದಿನಗಳಲ್ಲೂ ಭಾರಿ ಸೀರೆಗಳನ್ನೇ ಉಡಬೇಕು, ಹೊರಗಿನ ಓಡಾಟದಲ್ಲಿ ಒಡವೆ ಕಳೆದು ಹೋದೀತೆಂದು, ಕೃತಕ ಒಡವೆ ಧರಿಸಿದರೆ ಸಾಕು ಅಂತಾರೆ. ಹೀಗೆ ನನ್ನ ಯಾವ ಆಸೆಯೂ ಈಡೇರುವ ಹಾಗಿಲ್ಲ. ನನಗಂತೂ 40ರ ಹೊತ್ತಿಗೆ ಜಿಗುಪ್ಸೆ ಬಂದು ಎಲ್ಲವೂ ಸಾಕಾಗಿ ಹೋಗಿದೆ. ಯಾವುದು ಎಲ್ಲಾದರೂ ಹಾಳಾಗಲಿ ಅನಿಸಿಬಿಟ್ಟಿದೆ. ನಾನು ಕೇವಲ ಈ ಮನೆಯ ಗುಲಾಮಳೇ ಆಗಿಹೋಗಿದ್ದೇನೆ!”
ಎಂದೂ ಮುಗಿಯದ ನೋವು
ಮಂಗಳೂರಿನ 50 ವರ್ಷದ ಸರಳಾ ಭಟ್ ಹೇಳುತ್ತಾರೆ, “ಮದುವೆಗೆ ಮುಂಚೆ ಬೆಂಗಳೂರಿನಲ್ಲಿ ನಾನು 7 ವರ್ಷ ಎಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಉತ್ತಮ ಹೆಸರು ಗಳಿಸಿದ್ದೆ. ನನ್ನ ತವರಿನಲ್ಲಿ ಯಾವ ಮೂಢನಂಬಿಕೆಯ ವಾತಾವರಣ ಇರಲಿಲ್ಲ, ಮಧ್ಯಮ ವರ್ಗದವರಾದರೂ ಹಾಯಾಗಿ ಫ್ರೀ ಆಗಿದ್ದೆ. ಮಂಗಳೂರಿನ ಈ ಸಂಬಂಧ ಸಿಕ್ಕಿದಾಗ, ಅಲ್ಲಿಯೇ ಹೊಸ ಕೆಲಸ ಹುಡುಕಿಕೊಂಡರಾಯಿತು ಅನಿಸಿತು. ವರ ಅನುಕೂಲಸ್ಥರ ಮನೆತನದವನಾದ್ದರಿಂದ ಹಿರಿಯರು ಬೇಗ ವಾಲಗ ಊದಿಸಿದರು. ನನ್ನ ಪತಿ ಓಪನ್ ಮೈಂಡೆಡ್ ಆಗಿದ್ದರೂ, ಅವರ ತಾಯಿ ತಂದೆ ಹಳೆ ಕಾಲದ ಸಂಪ್ರದಾಯ ಬಿಡುವವರಲ್ಲ. ಜೊತೆಗೊಬ್ಬ ಸೋದರತ್ತೆ ಮೊದಲಿನಿಂದ ಇವರಲ್ಲೇ ಉಳಿದಿದ್ದರು. ಇವರಿಗಾದರೆ ಯಾವುದೇ ಕಟ್ಟಳೆಗಳಿರಲಿಲ್ಲ, ಹೊರಗೆ ಕೆಲಸಕ್ಕೆ ಹೋಗುವ ಗಂಡಸು, ಹೇಗೋ ನಡೆಯುತ್ತೆ ಅಂದುಬಿಡುತ್ತಿದ್ದರು. ಆದರೆ ನನಗೆ ಮಾತ್ರ ಎದ್ದರೆ ಕೂತರೆ 28 ಕಟ್ಟಳೆಗಳಿದ್ದವು.
“ನಮ್ಮತ್ತೆ 8 ಗಂಟೆಗೇ ಮುಂಚೆ ಏಳುತ್ತಿರಲಿಲ್ಲ, ಆದರೆ ನಾನು 5 ಗಂಟೆಗೇ ಎದ್ದು ಕೆಲಸ ಆರಂಭಿಸಬೇಕು. ನನ್ನ ಪತಿ, ಮೈದುನ, ಮಾವ ಹೊರಗೆ ದುಡಿಯುವ ಮಂದಿ. ಅವರ ಟೈಂಟೇಬಲ್ ಅನುಸಾರ ನಾನು ಅಡುಗೆಮನೆ ಕೆಲಸ ನಿಭಾಯಿಸಬೇಕಿತ್ತು. ಅತ್ತೆ ಎಂದೂ ಸಹಾಯ ಮಾಡುತ್ತಿರಲಿಲ್ಲ. ಅಮವಾಸ್ಯೆ ಮತ್ತಿತರ ಹಬ್ಬ, ಹರಿದಿನಗಳಲ್ಲಿ ಬೇಗ ಎದ್ದು ಪೂಜೆ ನೈವೇದ್ಯಕ್ಕೆ ಬೇಕಾದ್ದನ್ನು ರೆಡಿ ಮಾಡಿಕೊಳ್ಳುವರು. ಎಲ್ಲಾ ಸುತ್ತು ಕೆಲಸ ಮುಗಿಸುವಷ್ಟರಲ್ಲಿ ನನಗೆ ಸಾಕು ಸಾಕಾಗುತ್ತಿತ್ತು.
“ಈ ಹಬ್ಬ ಹರಿದಿನ, ಅಮವಾಸ್ಯೆಗಳ ದಿನಾಂಕ ನನಗೆ ಗೊತ್ತಾಗೋದಿಲ್ಲ. ನನ್ನ ತವರಿನಲ್ಲಿ ಈ ರಾದ್ಧಾಂತ ಇರಲಿಲ್ಲ. ಅತ್ತೆ ಹೇಳಿದಂತೆ ಎಲ್ಲಾ ವ್ರತ ಉಪವಾಸ ನಡೆಸಿದರೂ, ಏನೋ ಒಂದು ನೆಪ ಹುಡುಕಿ ವ್ಯಂಗ್ಯವಾಗಿ ಆಡಿಕೊಳ್ಳದೆ ಬಿಡುತ್ತಿರಲಿಲ್ಲ. ಮನೆಯಲ್ಲಿ ಜಗಳ ಬೇಡ ಎಂದು ನಾನೇ ವಿರೋಧಿಸುತ್ತಿರಲಿಲ್ಲ. ಕೊನೆಗೆ ನನ್ನ ಕಷ್ಟ ನೋಡಲಾರದೆ ಮಾವ ನನಗಾಗಿ ವ್ರತ, ಹಬ್ಬ ಹರಿದಿನಗಳ ಸಂಪೂರ್ಣ ವಿವರದ ಒಂದು ಪುಸ್ತಕ ತಂದುಕೊಟ್ಟರು. ಅದರಲ್ಲಿದ್ದಂತೆಯೇ ನಡೆದುಕೊಳ್ಳುತ್ತಿದ್ದೆ.
“ಯಾಕಾದರೂ ಈ ಜಂಜಾಟದಲ್ಲಿ ಬಂದು ಸಿಲುಕಿದೆನೋ ಎಂದು ಸದಾ ಪೇಚಾಡಿಕೊಳ್ತೀನಿ. ಹಬ್ಬಗಳು ಬಂದಾಗ ಕೆಲಸ ಮತ್ತಷ್ಟು ಡಬ್ಬಲ್ ಆಗುತ್ತಿತ್ತು. ಹಬ್ಬಕ್ಕಾಗಿ ನಾನು ಸಿಂಗರಿಸಿಕೊಳ್ಳುವುದು ಅತ್ತೆಗೆ ಬೇಕಿರಲಿಲ್ಲ. ಸದಾ ಬಂದವರಿಗೆ ಚಾಕರಿ ಮಾಡುವುದೇ ಆಗಿಹೋಯಿತು. ಇಲ್ಲಿ ಅಡುಗೆಗೆ ಈರುಳ್ಳಿ, ಬೆಳ್ಳುಳ್ಳಿ ಬಳಸುವ ಹಾಗಿರಲಿಲ್ಲ. ನಾವಿಬ್ಬರೇ ಎಂದಾದರೂ ಹೋಟೆಲ್ ಗೆ ಹೋದಾಗ ಮಾತ್ರ ಅದು ಅಪರೂಪವಾಗಿ ಸಿಗುತ್ತಿತ್ತು.
“ಈ ಎಲ್ಲಾ ಸಂಪ್ರದಾಯಗಳ ಸಂಕೋಲೆ, ಮೂಢನಂಬಿಕೆಗಳ ಜಂಜಾಟದಲ್ಲಿ ನನ್ನ ಜೀವನವೇ ಸವೆದುಹೋಯಿತು. ಇದರಿಂದ ರೋಸಿದ ನಾನೇ ಒಂದು ನಿರ್ಧಾರಕ್ಕೆ ಬಂದು, ಪತಿಯ ಬಿಸ್ ನೆಸ್ ನಲ್ಲಿ ಭಾಗಿ ಆಗತೊಡಗಿದೆ. ಮುಂದೆ ಮಗು ಆದ ನಂತರ ಅದರ ಲಾಲನೆಯಲ್ಲಿ ಮಗ್ನಳಾದೆ. ಮಗ ಈಗ ದೊಡ್ಡವನಾಗಿದ್ದಾನೆ, ನನ್ನ ಕೌಟುಂಬಿಕ ಬಿಸ್ ನೆಸ್ ನಿರಾತಂಕವಾಗಿ ನಡೆದಿದೆ.”
ಅನಿಸಿದ್ದನ್ನು ಸಾಧಿಸಿ ತೋರಿಸಿ
ಈ ಮೇಲಿನ ಉದಾಹಾರಣೆಗಳಿಂದ, ಮಾನವರ ಮಾನಸಿಕ ನೆಮ್ಮದಿಗಾಗಿ ಇರಬೇಕಿದ್ದ ಹಬ್ಬಗಳ ಆಚರಣೆ, ಸಂಪ್ರದಾಯಗಳ ಸಂಕೋಲೆಯಿಂದಾಗಿ ಹೆಂಗಸರ ಉಸಿರು ಕೆಡಿಸುತ್ತಿದೆ ಎಂಬುದು. ಈ ಅನಗತ್ಯ ಮೂಢನಂಬಿಕೆಗಳ ಹೇರಿಕೆ, ದಬ್ಬಾಳಿಕೆಗಳಿಂದಾಗಿ, ಸಹಜವಾಗಿ ಇರಬೇಕಿದ್ದ ಕೌಟುಂಬಿಕ ನೆಮ್ಮದಿ ಹಾಳಾಗುತ್ತಿದೆ. ಗಂಡಸರಿಗೆ ಇಲ್ಲದ ಯಾವುದೇ ಹೊರೆ, ಹೆಣ್ಣಿನ ನೆತ್ತಿಗೆ ಮಾತ್ರ ಕಟ್ಟಿಟ್ಟದ್ದು. ಇಂಥದ್ದನ್ನು ಸುಶಿಕ್ಷಿತ ಹೆಣ್ಣು ವಿರೋಧಿಸಿದರೆ, ಇದು ಮಾಮೂಲಿ ಅತ್ತೆ ಸೊಸೆ ಜಗಳ ಅಂತ ಗಂಡ, ಮಾವ ಯಾರೂ ತಲೆ ಕೆಡಿಸಿಕೊಳ್ಳೋದಿಲ್ಲ. ಹೊಂದಾಣಿಕೆ ಇಬ್ಬರಿಗೂ ಬೇಕು, ಸೊಸೆಯ ಮಾತುಗಳಿಗೆ ಮನ್ನಣೆಯೇ ಕೊಡಬಾರದು ಎಂಬುದು ಎಷ್ಟು ಸರಿ?
ಈ ರೀತಿಯ ಅತ್ಯಧಿಕ ಒತ್ತಡದಿಂದಾಗಿ ಸುಶಿಕ್ಷಿತ ಹೆಣ್ಣು, ತಾನಾಗಿ ಸಂಪೂರ್ಣ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾಳೆ. ಆಧುನಿಕ ಸೊಸೆ ಈ ಕುಟುಂಬಕ್ಕೆ ಲಾಯಕ್ ಅಲ್ಲ ಎಂದು ಸಾಧಿಸಿ ಅತ್ತೆ ಏನು ಗಳಿಸಬೇಕಿದೆ? ಇದರ ಬದಲು ಪ್ರತಿ ರಾಜ್ಯದ ಪ್ರತಿ ಕುಟುಂಬದಲ್ಲೂ, ಆಯಾ ಕಾಲಕ್ಕೆ ತಕ್ಕಂತೆ ಪರಿವರ್ತನೆ ಮಾಡಿಕೊಂಡು, ಕುಟುಂಬಗಳೂ ಆಧುನಿಕ ರೀತಿನೀತಿಗೆ ಹೊಂದಿಕೊಳ್ಳುವುದು ಲೇಸು. ಹಿರಿಯರು ದೃಢ ಮರದ ಆಸರೆಯಾಗಿ ನಿಲ್ಲಬೇಕೇ ಹೊರತು, ಕಿರಿಯರ ಆಸೆ ಆಕಾಂಕ್ಷೆ ಚಿವುಟಲು ಹೋಗಬಾರದು.
ಸುಶಿಕ್ಷಿತ ಹೆಣ್ಣು ಇಷ್ಟೆಲ್ಲ ಮೂಢನಂಬಿಕೆಗಳ ಜಂಜಾಟಕ್ಕೆ ಸಿಲುಕುವ ಬದಲು, ಕ್ರಿಯಾಶೀಲಳಾಗಿ ತನ್ನ ಪ್ರೊಡಕ್ಟಿವ್ ಕೆಲಸಗಳಲ್ಲಿ ತೊಡಗುವುದು ಲೇಸು. ಹೆಣ್ಣಿನ ವಿದ್ಯಾಭ್ಯಾಸಕ್ಕೆ ತಕ್ಕಂತೆ ಅವಳು ಹೊರಗೆ ದುಡಿದು ಬರಲು, ತನ್ನದೇ ಕನಸು ನನಸಾಗಿಸಿಕೊಳ್ಳಲು ಮನೆಯವರ ಸಹಕಾರ ಅತ್ಯಗತ್ಯ. ಇದರಿಂದ ಮುಂದಿನ ಪೀಳಿಗೆಯ ಮಕ್ಕಳಿಗೆ ಒಂದು ಮಾದರಿಯಾಗಿ ನಿಲ್ಲುವುದು ಹಿತಕರ. ಮಕ್ಕಳ ಲಾಲನೆ ಪಾಲನೆ ಜೊತೆ, ಅವರ ಭವಿಷ್ಯ ರೂಪಿಸುವುದರಲ್ಲೂ ತಾಯಿಯ ದೊಡ್ಡ ಪಾತ್ರವಿದೆ. ಇದಕ್ಕೆ ಮನೆಯವರೆಲ್ಲರ ಸಂಪೂರ್ಣ ಸಹಕಾರ ಸಿಕ್ಕಾಗ ಮಾತ್ರ, ಆ ಮನೆ ನಂದಗೋಕುಲ ಆಗಲು ಸಾಧ್ಯ!
– ಕೆ.ಎಸ್. ರತ್ನಾ