ಮಿಸ್ ಕೋಲ್ಕತಾ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತಳಾದ ನಂತರ, ನಟನೆಯ ಕ್ಷೇತ್ರದಲ್ಲಿ ತನ್ನ ಪ್ರತಿಭೆ ತೋರಿಸಲು ಬಂದ ಸೈಂತಿನಿ ಘೋಷ್, ಟಿವಿ ಇಂಡಸ್ಟ್ರಿಯ ಕಾಸ್ಟಿಂಗ್ ಕೌಚ್ ಕುರಿತು ಏನು ಹೇಳ ಬಯಸುತ್ತಾಳೆ….?
ಸೈಂತಿನಿ ಘೋಷ್ ಮೊದಲು ಮಾಡೆಲ್ ಆಗಿದ್ದು, ನಂತರ ನಟಿ ಆದಳು. ಝೀ ಟಿವಿಯಲ್ಲಿನ `ನಾಗಿನ್’ ಧಾರಾವಾಹಿಯಲ್ಲಿ ಇವಳ ಪಾತ್ರ ಹೆಚ್ಚಿನ ಪ್ರಶಂಸೆ ನಡೆಯಿತು. 2002ರಲ್ಲಿ `ಕುಂಕುಂ ಏಕ್ ಪ್ಯಾರ್ ಸಾ ಬಂಧನ್’ ಧಾರಾವಾಹಿಯಿಂದ ತನ್ನ ಕೆರಿಯರ್ ಆರಂಭಿಸಿದ ಈಕೆ ಮುಂದೆ ಕ್ರಮೇಣ `ನಾಗಿನ್, ಮಹಾಭಾರತ್, ನಾಮಕರಣ್’ ಇತ್ಯಾದಿಗಳಿಂದ ಈ ಬಂಗಾಳಿ ಬಾಲೆ, ನಟನೆಯಲ್ಲಿ ತನ್ನದೇ ಆದ ಛಾಪನ್ನೊತ್ತಿದ್ದಾಳೆ.
ಮೂಲತಃ ಬಂಗಾಳಿ ಸಾಂಪ್ರದಾಯಿಕ ಕುಟುಂಬಕ್ಕೆ ಸೇರಿದ ಈಕೆ, ಮಿಸ್ ಕೋಲ್ಕತಾ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತಳಾಗಿ, ಹಲವಾರು ಬಂಗಾಳಿ ಚಿತ್ರಗಳಲ್ಲಿ ನಟಿಸಿದ್ದಾಳೆ. ಈಕೆಯ ಡೆಬ್ಯು ಧಾರಾವಾಹಿ `ಕುಂಕುಂ.’ 2014ರಲ್ಲಿ `ಇತ್ನಾ ಕರೋನಾ ಮುಝೆ ಪ್ಯಾರ್’ನಲ್ಲಿ ಖಳನಾಯಕಿಯಾಗಿ ಮಿಂಚಿದ ಈಕೆ, ಮುಂದೆ `ಡೇರ್’ ಡ್ಯಾನ್ಸ್ ಪ್ರತಿಸ್ಪರ್ಧೆಯಲ್ಲಿ ಭಾಗವಹಿಸಿ ಆ ನಂತರ `ಬಿಗ್ ಬಾಸ್’ ನಲ್ಲೂ ಕಾಣಿಸಿಕೊಂಡಳು.
ಇದೀಗ ಈಕೆ ಸೋನಿ ಸಬ್ ವಾಹಿನಿಯಲ್ಲಿ `ಅಲೀಬಾಬಾ: ದಾಸ್ತಾನ್ ಏ ಕಾಬುಲ್’ ಧಾರಾವಾಹಿಯಲ್ಲಿ ಸಿಮ್ ಸಿಮ್ ಳ ಪಾತ್ರ ವಹಿಸುತ್ತಿದ್ದಾಳೆ.
ಈ ನಟನಾ ಕ್ಷೇತ್ರಕ್ಕೆ ನೀನು ಬಂದದ್ದು ಆಕಸ್ಮಿಕವೋ ಅಥವಾ ಬಾಲ್ಯದ ಕನಸೋ?
ನಾನು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದಳು. ಅಲ್ಲಿ ಆ್ಯಕ್ಟಿಂಗ್ ಬಗ್ಗೆ ಯಾರೂ ಚಿಂತಿಸಲು ಹೋಗುವುದಿಲ್ಲ. ನಾನು ಓದಿನಲ್ಲಿ ಚುರುಕಾಗಿದ್ದರಿಂದ ಮನೆಯವರು ನನ್ನನ್ನು ಡಾಕ್ಟರ್ ಆಗಿಸಲು ಬಯಸಿದರು. ಈ ನಟನೆಯ ಪ್ರೊಫೆಶನ್ ನ್ನು ನಾನು ಆರಿಸಿಕೊಳ್ಳಲಿಲ್ಲ, ಅದೇ ನನ್ನನ್ನು ಆರಿಸಿಕೊಂಡಿದೆ. ಪ. ಬಂಗಾಳ ರಾಜ್ಯ ಕಲೆ, ಸಂಸ್ಕೃತಿಗೆ ತಇರೂರು. ಅಲ್ಲಿ ಇಂದಿಗೂ ಸಹ ಬಹುತೇಕರ ಮನೆಗಳಲ್ಲಿ ಸಂಜೆ ಹೊತ್ತು ಶಾಸ್ತ್ರೀಯ ಸಂಗೀತದ ಅಭ್ಯಾಸ ನಡೆಯುತ್ತಿರುತ್ತದೆ. ಇಂಥ ಕಡೆ ನಟನೆಯಲ್ಲಿ ಬೆಳಗುವುದು ದೊಡ್ಡ ವಿಷಯವಲ್ಲ. ಬಾಲ್ಯದಿಂದಲೂ ನನಗೆ ಡ್ಯಾನ್ಸ್ ಇಷ್ಟ, ಹೀಗಾಗಿ ಹಲವಾರು ಡ್ಯಾನ್ಸ್ ಡ್ರಾಮಾಗಳಲ್ಲಿ ಭಾಗವಹಿಸಿದ್ದೇನೆ. ಆದರೆ ನಟನೆಯೇ ಮುಂದೆ ನನ್ನ ವೃತ್ತಿ ಆಗಬಹುದು ಎಂದು ಎಣಿಸಿರಲಿಲ್ಲ.
ಅಸಲಿಗೆ ನಾನು ಮಿಸ್ ಕೋಲ್ಕತಾ ಸ್ಪರ್ಧೆಗಾಗಿ ಭಾಗವಹಿಸಿದಾಗ, ಈ ನಟನೆಯ ಕ್ಷೇತ್ರ ನನ್ನನ್ನು ಕೈ ಬೀಸಿ ಕರೆಯಿತು. ಹಲವಾರು ಆಫರ್ಸ್ ಬಂದವು. ಆಗ ಮಾಡೆಲಿಂಗ್ ಆರಂಭಿಸಿದ ನಾನು, ನಂತರ ಬಂಗಾಳಿ ಚಿತ್ರಗಳಲ್ಲಿ ನಟಿಸತೊಡಗಿದೆ. ರಜಾ ದಿನಗಳಿಗಾಗಿ ಕಸಿನ್ ಮನೆಗೆ ಮುಂಬೈಗೆ ಬಂದಿದ್ದೆ. ಆಗ ಸಣ್ಣಪುಟ್ಟ ಪಾತ್ರಗಳಲ್ಲಿ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡೆ. ಆಗ 3-4 ವರ್ಷ ಅಲ್ಲೇ ಉಳಿದು, ಬಾಲಿವುಡ್ ನಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿದೆ.
ಈಗಿನ `ಆಲಿಬಾಬಾ‘ ಶೋನಲ್ಲಿ ನಿನ್ನ ಪಾತ್ರದ ವಿಶೇಷತೆ ಏನು?
ಇದರ ಆಫರ್ ಬಂದಾಗ ನನಗೆ ಇದರ ಮಹತ್ವ ಗೊತ್ತಾಗಲೇ ಇಲ್ಲ. ಸುಮಾರು ಕಂತು ಮುಗಿದಿದ್ದರೂ ಸಿಮ್ ಸಿಮ್ ಪಾತ್ರ ಬಂದಿರಲಿಲ್ಲ. ಮುಂದೆ ನನ್ನದು ಮಹತ್ವದ ಪಾತ್ರ ಆಗಲಿದೆ ಎಂದು ನಿರ್ದೇಶಕರು ಅದರ ರೂಪುರೇಷೆ ತಿಳಿಸಿದರು. `ಬಾಗಿಲು ತೆಗೆಯೇ ಸೇಸಮ್ಮ!’ ಅಂದಾಗ ಅದರ ಉತ್ತರವಾಗಿ ತನ್ನ ಧ್ವನಿ ಬರುತ್ತಿತ್ತು, ನಂತರ ಅದೇ ಹೆಣ್ಣಿನ ರೂಪ ತಾಳಿ ನಾನು ಸೇಸಮ್ಮ ಆದೆ! ಇದನ್ನು ಕೇಳಿ ಬಹಳ ಥ್ರಿಲ್ಲಿಂಗ್ ಎನಿಸಿ ಒಪ್ಪಿಕೊಂಡೆ. ಮೊದಲ ಸಲ ಆಲಿಬಾಬಾ ಕಥೆಯಲ್ಲಿ ಪ್ರೇಕ್ಷಕರು ಸೇಸಮ್ಮನನ್ನು ವ್ಯಕ್ತಿಯಾಗಿ ಕಾಣಲಿದ್ದಾರೆ!
ಈ ವಾಹಿನಿಯಲ್ಲಿ ಇದಕ್ಕೂ ಮೊದಲು ನಟಿಸಿದ್ದೆ. ಹೀಗಾಗಿ ಯಾವುದೂ ಕಷ್ಟ ಆಗಲಿಲ್ಲ. ಅನಾದಿ ಕಾಲದಿಂದಲೂ ಅರೇಬಿಯನ್ ನೈಟ್ಸ್ ಕಥೆ ಓದುತ್ತಿರುವ ಮಕ್ಕಳಿಗೆ ಆಲಿಬಾಬಾ ಕಥೆ ಎಂದರೆ ಮೊದಲಿನಿಂದಲೂ ಮಹಾ ಕುತೂಹಲಕಾರಿ. `ಲಾರ್ಜರ್ ದ್ಯಾನ್ ಲೈಫ್’ ಆಂಗ್ಲ ಧಾರಾವಾಹಿ ಹಾಗೆ ಇದನ್ನು ರಿಚ್ ಆಗಿ ಶೂಟ್ ಮಾಡಿದ್ದಾರೆ. ಇದರಲ್ಲಿ ಮ್ಯಾಜಿಕ್, ರೊಮಾನ್ಸ್, ಫ್ಯಾಂಟೆಸಿ ಎಲ್ಲವೂ ಇದೆ. ಇಲ್ಲೂ ಸಹ ನಾನು ಖಳನಾಯಕಿ! ಇಲ್ಲಿನ ನಟನೆ ನಿಜಕ್ಕೂ ಚಾಲೆಂಜಿಂಗ್. ತನ್ನ ಸ್ವಾರ್ಥ ಪ್ರೇಮದ ಈಡೇರಿಕೆಗಾಗಿ ಈ ಖಳನಾಯಕಿ ಏನೇನು ಮಾಡಲಿದ್ದಾಳೆ ಎಂದು ನೀವೇ ನೋಡಿ ಹೇಳಬೇಕು.
ಇದರಲ್ಲಿನ ಒಂದೊಂದು ಕಾಸ್ಟ್ಯೂಮ್ಸ್ ಬಲು ಹೆವಿ. ಶೂಟಿಂಗ್ ನಲ್ಲಿ ಎಷ್ಟು ಗಂಟೆ ಕಾಲ ಇದನ್ನು ಧರಿಸಿದೆ? ಕಳಚುವುದು ಸಹ ಕಷ್ಟಕರ ಅಲ್ಲವೇ?
ಪ್ರತಿ ದಿನ ನಾನು ಇಂಥವನ್ನು ಧರಿಸಲೇಬೇಕು. ಈ ಡ್ರೆಸ್ ಅಂತೂ ಬಲು ಭಾರಿ, ಎಲ್ಲಕ್ಕೂ ಹೆವಿ ಅಂದ್ರೆ ಕಿರೀಟ. ನಟಿಸುವಾಗ ಅದೆಲ್ಲಿ ಬಿದ್ದು ಹೋದೀತೋ ಅಂತ ದಿಗಿಲು ಬೇರೆ. ಡ್ಯಾನ್ಸ್ ಸಂದರ್ಭದಲ್ಲೂ ಬಲು ಕಷ್ಟ. ಇದನ್ನು ತೊಟ್ಟು ರೆಡಿ ಆಗುವುದಕ್ಕೆ 2 ಗಂಟೆ ಕಾಲ ಬೇಕು. ಡ್ರೆಸ್ ಮಾತ್ರವಲ್ಲ…. ಜ್ಯೂವೆಲರಿ, ಕಿರೀಟ ಧರಿಸಿ ರೆಡಿ ಆಗುಷ್ಟವರಲ್ಲಿ ಸಾಕಾಗಿ ಹೋಗುತ್ತದೆ. ಅದನ್ನು ಕಳಚಲಿಕ್ಕೂ ಬಹಳ ಸಮಯ ಬೇಕು.
ಮೊದಲ ಬ್ರೇಕ್ ಸಿಕ್ಕಿದ್ದು ಯಾವಾಗ? ಮನೆಯವರ ಸಪೋರ್ಟ್ ಹೇಗಿತ್ತು?
`ಕುಂಕುಂ’ ಧಾರಾವಾಹಿಯಿಂದ ನನಗೆ ಉತ್ತಮ ಬ್ರೇಕ್ ಸಿಕ್ಕಿತು. ಮನೆಯವರ ಉತ್ತಮ ಸಪೋರ್ಟ್ ನಿಂದಲೇ ನಾನು 17 ವರ್ಷ ಈ ಇಂಡಸ್ಟ್ರಿಯಲ್ಲಿ ಸಕ್ರಿಯಳಾಗಿರಲು ಸಾಧ್ಯವಾಗಿದೆ. 18ರ ಹರೆಯದಲ್ಲೇ ನಾನು ಮಾಡೆಲಿಂಗ್ ಆರಂಭಿಸಿದೆ. ಆಗ ನಾನು ಟಿವಿ ಸೇರಬಹುದೆಂದು ಎಣಿಸಿರಲಿಲ್ಲ. ಸದಾ ಓದಿನ ಕಡೆ ಮಹತ್ವ ನೀಡುತ್ತಿದ್ದ ನಾನು, ನಟನೆಗೆ ಸೇರುವಂತಾದಾಗ ನನ್ನ ತಾಯಿ ಯಾವಾಗಲೂ ನನ್ನ ಜೊತೆಯಲ್ಲೇ ಇರುತ್ತಿದ್ದರು. ಕೋಲ್ಕತಾದಿಂದ ಮುಂಬೈ…. ನನಗೆ ನಿಜಕ್ಕೂ ದೊಡ್ಡ ಜರ್ನಿ ಎನಿಸಿತು!
ಕಾಸ್ಟಿಂಗ್ ಕೌಚ್ ನ ಸಮಸ್ಯೆ ಎದುರಿಸಿದ್ದು ಉಂಟೇ?
ಅಂಥ ದೊಡ್ಡ ಪ್ರಮಾಣದಲ್ಲಿ ಏನಿಲ್ಲ…. 1-2 ಸಲ ಸಿನಿಮಾ ನಿರ್ದೇಶಕರ ಬಳಿ ನಾನು ಡಿಸ್ಕಶನ್ ಗೆ ಹೋಗಿದ್ದಾಗ, ಅವರ ಮಾತುಗಳು ಯಾಕೋ ಸಹಜವಾಗಿಲ್ಲ ಎನಿಸಿತು. ಮತ್ತೊಬ್ಬ ನಿರ್ದೇಶಕರು, ಪೋರ್ಟ್‌ಪೋಲಿಯೋ ಬದಲು ಡೈರೆಕ್ಟ್ ಆಡಿಶನ್ ತೆಗೆದುಕೊಳ್ಳುವೆ ಎಂದರು. ಆದರೆ ಅದರಲ್ಲಿ ನಿನ್ನ ನಟನೆಯ ಸಾಮರ್ಥ್ಯದ ಬಗ್ಗೆ ತಿಳಿಯಲು ಕಷ್ಟವಾಗಬಹುದು, ಹೀಗಾಗಿ ಸ್ವಲ್ಪ ಹೊತ್ತು ನಾನೂ ನೀನೂ ಏಕಾಂತದಲ್ಲಿ ಮಾತನಾಡೋಣ, ಪರಸ್ಪರ ಅರ್ಥ ಮಾಡಿಕೊಳ್ಳಲು ಪೂರಕ ಎಂದರು.
ಇಂಥ ಮಾತನ್ನು ಕೇಳಿ ನಾನು ಆತನನ್ನು ಅಲ್ಲೇ ತಡೆದೆ, ನಾನು ಅಂಥದ್ದಕ್ಕೆ ತಯಾರಿಲ್ಲ ಎಂದು ಎದ್ದು ಬಂದಿದ್ದೆ. ಆದರೆ ಕಿರುತೆರೆಯಲ್ಲಿ ಇಂಥ ಜಂಜಾಟಗಳಿಲ್ಲ. ಬೇರೆ ಊರಿನವಳಾಗಿದ್ದರೂ ಮುಂಬೈ ಕಿರುತೆರೆ ನನ್ನನ್ನು ಕೈ ಹಿಡಿದು ಬೆಳೆಸಿದೆ, ಅದಕ್ಕೆ ನಾನು ಚಿರಋಣಿ!
ನಿನ್ನ ಮದುವೆ, ಗಂಡ, ಸಂಸಾರದ ಬಗ್ಗೆ……?
ಒಬ್ಬ ಕಾಮನ್ ಫ್ರೆಂಡ್ ಮೂಲಕ ಅವರನ್ನು ಸಂಧಿಸಿದೆ. 9 ವರ್ಷಗಳ ತನಕ ಸ್ನೇಹ, ಪ್ರೇಮ ಅಂತಲೇ ಇದ್ದೆ. ನಂತರ ಮದುವೆ ಆದೆ. ಇಷ್ಟು ವರ್ಷ ಪರಸ್ಪರ ಅರಿತಿದ್ದರಿಂದ ಸಂಸಾರ ಸುಗಮವಾಗಿ ಸಾಗುತ್ತಿದೆ. ಯಾವ ಸಂಬಂಧೀ ಇರಲಿ, ಸುಮಧುರ ಆಗಲು ಟೈಂ, ಆಳವಾದ ಬಂಧ ಬಲು ಮುಖ್ಯ.
ಎಂದಾದರೂ ನಿನ್ನನ್ನು `ಈ ಪಾತ್ರಕ್ಕೆ ನೀನು ಬೇಡ‘ ಎಂದು ನಿರಾಕರಿಸಿದ್ದಾರೆಯೇ? ಅದನ್ನು ಹೇಗೆ ಸ್ವೀಕರಿಸಿದೆ?
ಇಂಥ ರಿಜೆಕ್ಷನ್ಸ್ ಎಲ್ಲರಿಗೂ ಇದ್ದದ್ದೇ! ಎಲ್ಲಾ ಕಲಾವಿದರಿಗೂ ಇದು ಗೊತ್ತಿರುವುದೇ. ಉತ್ತಮ ಪಾತ್ರಗಳಿಗಾಗಿ ಹುಡುಕಾಟ, ಸಂಘರ್ಷ ಇದ್ದದ್ದೇ. ಮತ್ತೆ…. ಈ ಹೊಸ ಧಾರಾವಾಹಿ ಓಡುತ್ತೋ ಇಲ್ಲವೋ ಅನ್ನುವ ಟೆನ್ಶನ್ ಇದ್ದೇ ಇರುತ್ತದೆ. ನಿಜಕ್ಕೂ ಈ ಫೀಲ್ಡ್ ಬಲು ಟೆನ್ಶನ್ ಗಳಿಂದ ತುಂಬಿದೆ. ಪ್ರೇಕ್ಷಕರು ಒಂದು ಧಾರಾವಾಹಿಯನ್ನು ಚೆನ್ನಾಗಿಲ್ಲ ಅಂತ ಹೇಳಿಬಿಟ್ಟರೆ, ಕೆಲವು ದಿನಗಳಲ್ಲೇ ಅದು ನಿಂತೇ ಹೋಗುತ್ತದೆ. ಹಾಗಾಗಿಯೇ ನಟನೆ ಒಂದು ಅಸುರಕ್ಷಿತ ಪ್ರೊಫೆಶನ್ ಅಂತೀನಿ! ಪ್ರತಿಯೊಬ್ಬರ ಸಂಘರ್ಷ ವಿಭಿನ್ನವಾಗಿಯೇ ಇರುತ್ತದೆ. ಕೆಲವರಿಗೆ ಸಂಪಾದನೆಯೇ ಗುರಿಯಾದರೆ, ಹಲವರಿಗೆ ಹೆಸರು ಗಳಿಸಿದರೆ ಸಾಕಾಗಿರುತ್ತದೆ. ಬಂಗಾಳಿ ಚಿತ್ರಗಳಲ್ಲಿ ಆಫರ್ಸ್ ಬರುತ್ತಲೇ ಇತ್ತು, ಹೀಗಾಗಿ ಟಿವಿ ಇಂಡಸ್ಟ್ರೀಯಲ್ಲಿ ನಾನು ಹೆಚ್ಚು ಸ್ಟ್ರಗ್ ಮಾಡಲಿಲ್ಲ.
ಮಧ್ಯದಲ್ಲಿ ಅನಿವಾರ್ಯ ಬ್ರೇಕ್ ಆದಾಗ 1-2 ವರ್ಷ ನಿರುದ್ಯೋಗಿಯೇ ಆಗಿದ್ದೆ. ನಡುನಡುವೆ ಕೆಲವೊಂದು ಆಫರ್ಸ್ ಬರುತ್ತಿದ್ದುದೇನೋ ನಿಜ, ಆದರೆ ಅದು ನನ್ನ ಲೆವೆಲ್ ಆಗಿರದೆ ಬಹಳ ಸಣ್ಣಪುಟ್ಟ ಪೋಷಕ ಪಾತ್ರಗಳಾಗಿದ್ದವು. ಹೀಗಾಗಿ ಉತ್ತಮ ಪಾತ್ರದ ನಿರೀಕ್ಷೆಯಲ್ಲಿದ್ದೆ. ಒಂದು ಹಂತದವರೆಗೆ ನಾಯಕಿಯಾಗಿಯೇ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಾನು, ನಂತರ ವಯೋಸಹಜ ಪಾತ್ರಗಳಿಗೆ ಅಕ್ಕ, ಅತ್ತಿಗೆಯಾಗಿ, ಹಿರಿಯ ಖಳನಾಯಕಿಯಾಗಿ ಬಡತಿ ಪಡೆದೆ. ಮದುವೆ, ಮಗು ಆದ ನಾನು 40+ ನಂತರ ಸಹಜವಾಗಿ ಟೈಪ್ ಕಾಸ್ಟ್ ಗೆ ಒಳಗಾದೆ, ಪ್ರೇಕ್ಷಕರು ಹಾಗೆ ಮಾಡಿಬಿಡುತ್ತಾರೆ. ನಿರುದ್ಯೋಗ ಕಾಡುವಾಗ ನನ್ನ ಕುಟುಂಬದ ಸದಸ್ಯರು ನನಗೆ ಅಪಾರ ಬೆಂಬಲ ನೀಡಿದರು. ಹೀಗಾಗಿ ಮುಂದೆ ಪಾತ್ರ ನಿಭಾಯಿಸಲು ಅದೇ ಆತ್ಮವಿಶ್ವಾಸ ಉಳಿಸಿಕೊಳ್ಳುವಂತಾಯಿತು.
ಯಾವ ಕಾಂಪ್ಲಿಮೆಂಟ್ ನಿನಗೆ ಬಹಳ ಇಷ್ಟವಾಯ್ತು?
`ನಾಮಕರಣ್’ ಎಂಬ ಶೋನಲ್ಲಿ ನಾನು ಮಲತಾಯಿ ಪಾತ್ರ ವಹಿಸಿದ್ದೆ. ಮಲತಾಯಿ ಎಂದ ತಕ್ಷಣ ಅವಳು ಮಿನಿ ಪಿಶಾಚಿ ಎಂಬಂತೆ ನಮ್ಮ ಸಿನಿಮಾರಂಗ ಮಾಡಿಟ್ಟಿದೆ. ಮಲತಾಯಿ ಇರುವುದೇ ಮಲಮಕ್ಕಳನ್ನು ಹೊಡೆದು ಬಡಿದು ಗೋಳಾಡಿಸಲು ಎಂಬಂತಾಗಿಬಿಟ್ಟಿದೆ. ಆದರೆ ಇಲ್ಲಿ ನನ್ನ ಮಲಮಕ್ಕಳ ಜೊತೆ ನನಗೆ ಅವಿನಾಭಾವ, ಆತ್ಮೀಯ ಸಂಬಂಧವಿದೆ. ಅಲ್ಲಿ ಕಾಟಾಚಾರಕ್ಕೆ ಮಲತಾಯಿ ಆಗದೆ, ಹೆತ್ತ ತಾಯಿಯಂತೆಯೇ ಆ ಮಕ್ಕಳನ್ನು ಆದರಿಸಿ ಬೆಳೆಸುವ ತ್ಯಾಗಮಯಿ ಪಾತ್ರ. ಇದು ನಮ್ಮ ವೀಕ್ಷಕರಿಗೆ ಬಹಳ ಸೆಂಟಿಮೆಂಟ್ ಎನಿಸಿ, ಅನೇಕರು ನನಗೆ ಫೋನಾಯಿಸಿ, ಮೆಸೇಜ್ ಮಾಡಿ ತಮ್ಮ ಭಾವುಕತೆ ಹಂಚಿಕೊಂಡಿದ್ದಾರೆ! ಅಪ್ಪಟ ಕಲಾವಿದೆ ಎಂದು ನನ್ನನ್ನು ನಾನು ನಿರೂಪಿಸಿಕೊಳ್ಳಲು ಈ ಪಾತ್ರ ಉತ್ತಮ ಅವಕಾಶ ನೀಡಿದೆ. ನನ್ನ ಹೃದಯಂತರಾಳದಲ್ಲಿ ನೆಲೆಯೂರಿದ ಆ ಪಾತ್ರದಲ್ಲಿ ನಾನು ಪರಕಾಯ ಪ್ರವೇಶ ಮಾಡಿದ್ದೆ! ಕೆಲವೊಂದು ಸಲ ನನ್ನ ಖಳನಾಯಕಿ ಪಾತ್ರವನ್ನೂ ದ್ವೇಷಿಸಿದ್ದಾರೆ, ಅದು ಸಹ ಆ ಪಾತ್ರಕ್ಕೆ ಸಂದ ಗೌರವ ಎಂದೇ ಭಾವಿಸುತ್ತೇನೆ.
– ಪ್ರತಿನಿಧಿ