ಮಿಸ್ ಕೋಲ್ಕತಾ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತಳಾದ ನಂತರ, ನಟನೆಯ ಕ್ಷೇತ್ರದಲ್ಲಿ ತನ್ನ ಪ್ರತಿಭೆ ತೋರಿಸಲು ಬಂದ ಸೈಂತಿನಿ ಘೋಷ್, ಟಿವಿ ಇಂಡಸ್ಟ್ರಿಯ ಕಾಸ್ಟಿಂಗ್ ಕೌಚ್ ಕುರಿತು ಏನು ಹೇಳ ಬಯಸುತ್ತಾಳೆ....?
ಸೈಂತಿನಿ ಘೋಷ್ ಮೊದಲು ಮಾಡೆಲ್ ಆಗಿದ್ದು, ನಂತರ ನಟಿ ಆದಳು. ಝೀ ಟಿವಿಯಲ್ಲಿನ `ನಾಗಿನ್' ಧಾರಾವಾಹಿಯಲ್ಲಿ ಇವಳ ಪಾತ್ರ ಹೆಚ್ಚಿನ ಪ್ರಶಂಸೆ ನಡೆಯಿತು. 2002ರಲ್ಲಿ `ಕುಂಕುಂ ಏಕ್ ಪ್ಯಾರ್ ಸಾ ಬಂಧನ್' ಧಾರಾವಾಹಿಯಿಂದ ತನ್ನ ಕೆರಿಯರ್ ಆರಂಭಿಸಿದ ಈಕೆ ಮುಂದೆ ಕ್ರಮೇಣ `ನಾಗಿನ್, ಮಹಾಭಾರತ್, ನಾಮಕರಣ್' ಇತ್ಯಾದಿಗಳಿಂದ ಈ ಬಂಗಾಳಿ ಬಾಲೆ, ನಟನೆಯಲ್ಲಿ ತನ್ನದೇ ಆದ ಛಾಪನ್ನೊತ್ತಿದ್ದಾಳೆ.
ಮೂಲತಃ ಬಂಗಾಳಿ ಸಾಂಪ್ರದಾಯಿಕ ಕುಟುಂಬಕ್ಕೆ ಸೇರಿದ ಈಕೆ, ಮಿಸ್ ಕೋಲ್ಕತಾ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತಳಾಗಿ, ಹಲವಾರು ಬಂಗಾಳಿ ಚಿತ್ರಗಳಲ್ಲಿ ನಟಿಸಿದ್ದಾಳೆ. ಈಕೆಯ ಡೆಬ್ಯು ಧಾರಾವಾಹಿ `ಕುಂಕುಂ.' 2014ರಲ್ಲಿ `ಇತ್ನಾ ಕರೋನಾ ಮುಝೆ ಪ್ಯಾರ್'ನಲ್ಲಿ ಖಳನಾಯಕಿಯಾಗಿ ಮಿಂಚಿದ ಈಕೆ, ಮುಂದೆ `ಡೇರ್' ಡ್ಯಾನ್ಸ್ ಪ್ರತಿಸ್ಪರ್ಧೆಯಲ್ಲಿ ಭಾಗವಹಿಸಿ ಆ ನಂತರ `ಬಿಗ್ ಬಾಸ್' ನಲ್ಲೂ ಕಾಣಿಸಿಕೊಂಡಳು.
ಇದೀಗ ಈಕೆ ಸೋನಿ ಸಬ್ ವಾಹಿನಿಯಲ್ಲಿ `ಅಲೀಬಾಬಾ: ದಾಸ್ತಾನ್ ಏ ಕಾಬುಲ್' ಧಾರಾವಾಹಿಯಲ್ಲಿ ಸಿಮ್ ಸಿಮ್ ಳ ಪಾತ್ರ ವಹಿಸುತ್ತಿದ್ದಾಳೆ.
ಈ ನಟನಾ ಕ್ಷೇತ್ರಕ್ಕೆ ನೀನು ಬಂದದ್ದು ಆಕಸ್ಮಿಕವೋ ಅಥವಾ ಬಾಲ್ಯದ ಕನಸೋ?
ನಾನು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದಳು. ಅಲ್ಲಿ ಆ್ಯಕ್ಟಿಂಗ್ ಬಗ್ಗೆ ಯಾರೂ ಚಿಂತಿಸಲು ಹೋಗುವುದಿಲ್ಲ. ನಾನು ಓದಿನಲ್ಲಿ ಚುರುಕಾಗಿದ್ದರಿಂದ ಮನೆಯವರು ನನ್ನನ್ನು ಡಾಕ್ಟರ್ ಆಗಿಸಲು ಬಯಸಿದರು. ಈ ನಟನೆಯ ಪ್ರೊಫೆಶನ್ ನ್ನು ನಾನು ಆರಿಸಿಕೊಳ್ಳಲಿಲ್ಲ, ಅದೇ ನನ್ನನ್ನು ಆರಿಸಿಕೊಂಡಿದೆ. ಪ. ಬಂಗಾಳ ರಾಜ್ಯ ಕಲೆ, ಸಂಸ್ಕೃತಿಗೆ ತಇರೂರು. ಅಲ್ಲಿ ಇಂದಿಗೂ ಸಹ ಬಹುತೇಕರ ಮನೆಗಳಲ್ಲಿ ಸಂಜೆ ಹೊತ್ತು ಶಾಸ್ತ್ರೀಯ ಸಂಗೀತದ ಅಭ್ಯಾಸ ನಡೆಯುತ್ತಿರುತ್ತದೆ. ಇಂಥ ಕಡೆ ನಟನೆಯಲ್ಲಿ ಬೆಳಗುವುದು ದೊಡ್ಡ ವಿಷಯವಲ್ಲ. ಬಾಲ್ಯದಿಂದಲೂ ನನಗೆ ಡ್ಯಾನ್ಸ್ ಇಷ್ಟ, ಹೀಗಾಗಿ ಹಲವಾರು ಡ್ಯಾನ್ಸ್ ಡ್ರಾಮಾಗಳಲ್ಲಿ ಭಾಗವಹಿಸಿದ್ದೇನೆ. ಆದರೆ ನಟನೆಯೇ ಮುಂದೆ ನನ್ನ ವೃತ್ತಿ ಆಗಬಹುದು ಎಂದು ಎಣಿಸಿರಲಿಲ್ಲ.
ಅಸಲಿಗೆ ನಾನು ಮಿಸ್ ಕೋಲ್ಕತಾ ಸ್ಪರ್ಧೆಗಾಗಿ ಭಾಗವಹಿಸಿದಾಗ, ಈ ನಟನೆಯ ಕ್ಷೇತ್ರ ನನ್ನನ್ನು ಕೈ ಬೀಸಿ ಕರೆಯಿತು. ಹಲವಾರು ಆಫರ್ಸ್ ಬಂದವು. ಆಗ ಮಾಡೆಲಿಂಗ್ ಆರಂಭಿಸಿದ ನಾನು, ನಂತರ ಬಂಗಾಳಿ ಚಿತ್ರಗಳಲ್ಲಿ ನಟಿಸತೊಡಗಿದೆ. ರಜಾ ದಿನಗಳಿಗಾಗಿ ಕಸಿನ್ ಮನೆಗೆ ಮುಂಬೈಗೆ ಬಂದಿದ್ದೆ. ಆಗ ಸಣ್ಣಪುಟ್ಟ ಪಾತ್ರಗಳಲ್ಲಿ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡೆ. ಆಗ 3-4 ವರ್ಷ ಅಲ್ಲೇ ಉಳಿದು, ಬಾಲಿವುಡ್ ನಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿದೆ.
ಈಗಿನ `ಆಲಿಬಾಬಾ' ಶೋನಲ್ಲಿ ನಿನ್ನ ಪಾತ್ರದ ವಿಶೇಷತೆ ಏನು?
ಇದರ ಆಫರ್ ಬಂದಾಗ ನನಗೆ ಇದರ ಮಹತ್ವ ಗೊತ್ತಾಗಲೇ ಇಲ್ಲ. ಸುಮಾರು ಕಂತು ಮುಗಿದಿದ್ದರೂ ಸಿಮ್ ಸಿಮ್ ಪಾತ್ರ ಬಂದಿರಲಿಲ್ಲ. ಮುಂದೆ ನನ್ನದು ಮಹತ್ವದ ಪಾತ್ರ ಆಗಲಿದೆ ಎಂದು ನಿರ್ದೇಶಕರು ಅದರ ರೂಪುರೇಷೆ ತಿಳಿಸಿದರು. `ಬಾಗಿಲು ತೆಗೆಯೇ ಸೇಸಮ್ಮ!' ಅಂದಾಗ ಅದರ ಉತ್ತರವಾಗಿ ತನ್ನ ಧ್ವನಿ ಬರುತ್ತಿತ್ತು, ನಂತರ ಅದೇ ಹೆಣ್ಣಿನ ರೂಪ ತಾಳಿ ನಾನು ಸೇಸಮ್ಮ ಆದೆ! ಇದನ್ನು ಕೇಳಿ ಬಹಳ ಥ್ರಿಲ್ಲಿಂಗ್ ಎನಿಸಿ ಒಪ್ಪಿಕೊಂಡೆ. ಮೊದಲ ಸಲ ಆಲಿಬಾಬಾ ಕಥೆಯಲ್ಲಿ ಪ್ರೇಕ್ಷಕರು ಸೇಸಮ್ಮನನ್ನು ವ್ಯಕ್ತಿಯಾಗಿ ಕಾಣಲಿದ್ದಾರೆ!