ಶರತ್ ಚಂದ್ರ
ಈ ವರ್ಷದ ಮೊದಲರ್ಧ ಸತತ ಸೋಲಿನಿಂದ ಕಂಗೆಟ್ಟಿದ್ದ ಕನ್ನಡ ಚಿತ್ರರಂಗಕ್ಕೆ 'ಸು ಪ್ರಂ ಸೋ' ಚಿತ್ರದ ಮೂಲಕ ಬರಗಾಲದಲ್ಲಿ ಮಳೆ ಬಂದಂತೆ ಸಿನಿಪ್ರೇಕ್ಷಕರಿಗೆ ಮನೋರಂಜನೆಯ ವರ್ಷದ ಮಳೆ ಸುರಿಸಿತ್ತು. ಇತ್ತೀಚೆಗೆ ಬಿಡುಗಡೆಯಾದ ಕಾಂತರ ಚಾಪ್ಟರ್ 1 ಚಿತ್ರವಂತೂ ವಿಶ್ವದಾದ್ಯಂತ ಬಂಗಾರದ ಬೆಳೆ ತೆಗೆಯುತ್ತಿದ್ದೂ, ಸಿನಿಮಾ ನೋಡಿದ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿಸಿದೆ. ಶೆಟ್ರ ಬಳಗ ಮತ್ತೆ ಮತ್ತೆ ತಮ್ಮ ಚಿತ್ರಗಳ ಮೂಲಕ ಕಮಾಲ್ ಮಾಡುತ್ತಿದ್ದಾರೆ
ಏತನ್ಮದ್ಯೆ ಸ್ಯಾಂಡಲ್ ವುಡ್ ಇನ್ನೊಬ್ಬ ಶೆಟ್ರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಹೌದು ನಾವು ಹೇಳ ಹೊರಟಿರುವುದು ರಕ್ಷಿತ್ ಶೆಟ್ಟಿ ಬಗ್ಗೆ. 2023ರಲ್ಲಿ ಕ್ರಿಕೆಟ್ ವರ್ಲ್ಡ್ ಕಪ್ ಸಮಯದಲ್ಲಿ ಬಂದ ' ಸಪ್ತ ಸಾಗರದಾಚೆ ಎಲ್ಲೋ ' ಸೈಡ್ ಬಿ ಯ ನಂತರ ಅವರ ಯಾವುದೇ ಸಿನಿಮಾ ಲಾಂಚ್ ಆಗಿಲ್ಲ.
ಇನ್ನೊಂದು ವರ್ಲ್ಡ್ ಕಪ್ ಹತ್ತಿರ ಬರುತ್ತಿದೆ ಆದರೂ ಕೂಡ ಇಲ್ಲಿ ತನಕ ಯಾವುದೇ ಹೊಸ ಚಿತ್ರವನ್ನು ರಕ್ಷಿತ್ ಲಾಂಚ್ ಮಾಡಿಲ್ಲ.
ಕೆಲವು ತಿಂಗಳುಗಳ ಹಿಂದೆ ಬೇಸತ್ತ ರಕ್ಷಿತ್ ಅಭಿಮಾನಿಗಳು, ರಕ್ಷಿತ್ ಕಾಣೆಯಾಗಿದ್ದಾರೆ ಹುಡುಕಿ ಕೊಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಮತ್ತು ಪೋಸ್ಟ್ಗಳನ್ನು ಹಾಕಿದ್ದರು.
ಈ ಹಿಂದೆ ಹರಡಿರುವ ಸುದ್ದಿಗಳ ಪ್ರಕಾರ ರಕ್ಷಿತ್ ಹೊಂಬಾಳೆ ಸಂಸ್ಥೆ ನಿರ್ಮಿಸಲು ಹೊರಟಿರುವ ರಿಚರ್ಡ್ ಅಂಟನಿ ಚಿತ್ರದ ಕಥೆ ಬರೆಯುವುದಕ್ಕಾಗಿ ಯುಎಸ್ಎ, ದುಬೈ ಮುಂಬೈ ಹೀಗೆ ಬೇರೆ ಬೇರೆ ಜಾಗಗಳಲ್ಲಿ ಬೀಡು ಬಿಟ್ಟು ಪರ್ಫೆಕ್ಟ್ ಸ್ಕ್ರಿಪ್ಟ್ ರೆಡಿ ಮಾಡುವಲ್ಲಿ ಮುಳುಗಿ ಹೋಗಿದ್ದಾರೆ ಎಂಬ ಸುದ್ದಿ ಹರಡಿತ್ತು.
ಇತ್ತೀಚಿನ ಯಾವುದೇ ಸಿನಿಮಾ ಸಮಾರಂಭಗಳಲ್ಲಿ ಹಾಗೂ ಮೀಡಿಯಾದ ಮುಂದೆ ಕಾಣಿಸಿಕೊಳ್ಳದೆ ಇರುವ ರಕ್ಷಿತ್ ನಡೆ ಬಗ್ಗೆ ಒಂದಷ್ಟು ಅಭಿಮಾನಿಗಳಿಗೆ ಬೇಸರವಿದ್ದರೆ, ಕೆಲವರು ರಕ್ಷಿತ್ ಒಂದು ಅದ್ಭುತ ಸಿನಿಮಾ ಕಟ್ಟಿಕೊಡುವ ತಯಾರಿಯಲ್ಲಿದ್ದಾರೆ ಎಂದು ಸಮಾಧಾನ ಪಟ್ಟುಕೊಂಡಿದ್ದಾರೆ.
ಈ ಮಧ್ಯೆ ರಕ್ಷಿತ್ ಅಭಿಮಾನಿಗಳಿಗೆ ಖುಷಿ ಕೊಡುವ ವಿಚಾರವೊಂದು ಹೊರಬಂದಿದೆ. 2021ರ ಸಾಲಿನ ರಾಜ್ಯ ಪ್ರಶಸ್ತಿ ಪ್ರಕಟವಾಗಿದ್ದು, ರಕ್ಷಿತ್ ಗೆ '777 ಚಾರ್ಲಿ' ಚಿತ್ರದ ನಟನೆಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ದೊರಕಿದೆ.
ಧರ್ಮನಾಗಿ ಶ್ವಾನದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ನಾಯಕನ ಪಾತ್ರಕ್ಕೆ ಜನ ಕೂಡ ಭೇಷ್ ಎಂದಿದ್ದರು. ಇದೇ ಚಿತ್ರಕ್ಕೆ ಈ ಹಿಂದೆ ನಿರ್ಮಾಪಕನಾಗಿ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಎಂದು ಆಯ್ಕೆಯಾಗಿ ನ್ಯಾಷನಲ್ ಅವಾರ್ಡ್ ಪಡೆದಿದ್ದರು.
ರಕ್ಷಿತ್ ಶೆಟ್ಟಿ ಆದಷ್ಟು ಬೇಗ ಹೊಸ ಚಿತ್ರದಲ್ಲಿ ನಟಿಸಿ,ನಿರ್ದೇಶಿಸಿ ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಉತ್ತಮ ಚಿತ್ರಗಳನ್ನು ಕೊಡುಗೆಯಾಗಿ ನೀಡಲಿ ಎಂದು ನಮ್ಮ ಹಾರೈಕೆ. ರಾಜ್ಯ ಪ್ರಶಸ್ತಿ ಪಡೆದ ರಕ್ಷಿತ್ ಶೆಟ್ಟಿ ಗೆ ಅಭಿನಂದನೆಗಳು.