ಕಂಗಳ ಕೆಳಗಿನ ಕಪ್ಪು ವೃತ್ತಗಳಿಂದಾಗಿ, ಹೆಣ್ಣಿನ ಸೌಂದರ್ಯಕ್ಕೆ ರಾಹು ಬಡಿದಂತಾಗುತ್ತದೆ. ಯಾವ ವಿಧಾನ ಅನುಸರಿಸಿ ಇದರಿಂದ ಮುಕ್ತಿ ಹೊಂದಬಹುದು....?
ನಿಮ್ಮ ಚೆಲುವು ಕಂಗೊಳಿಸುವುದೇ ನಿಮ್ಮ ಸುಂದರ ವದನಾರವಿಂದದಿಂದ! ಎಲ್ಲಕ್ಕೂ ಮೊದಲು ಜನರ ದೃಷ್ಟಿ ಮುಖದ ಮೇಲೆ ಹೋಗುತ್ತದೆ. ಹಾಗಿರುವಾಗ, ನಿಮ್ಮ ಮೈ ಬಣ್ಣ ನೀವು ಬಯಸಿದಂತೆ ತಿಳಿಯಾಗಿ ಆಕರ್ಷಕ ಎನಿಸದಿದ್ದಾಗ, ಎಷ್ಟೇ ಮೇಕಪ್ ಮಾಡಿಕೊಂಡರೂ ಏನೋ ಡಲ್ ಎನಿಸುತ್ತದೆ. ಆದರೆ ನಿಮ್ಮ ಕಂಗಳ ಕಾಂತಿ ಮುಖದ ಬೇರೆ ಮೈನಸ್ ಪಾಯಿಂಟ್ಸ್ ನ್ನು ಮರೆಮಾಚಬಲ್ಲದು. ಹಾಗಿರುವಾಗ ನಿಮ್ಮ ಮುಖದ ಸೌಂದರ್ಯ ಎದ್ದು ಕಾಣಲು, ನಿಮ್ಮ ಕಂಗಳ ಕೆಳಗೆ ಮೂಡುವ ಕಪ್ಪು ವೃತ್ತ ಅಥವಾ ಉಂಗುರ (ಡಾರ್ಕ್ ಸರ್ಕಲ್ಸ್) ನಿಮ್ಮನ್ನು ಅಂದಗೇಡಿ ಆಗಿಸುತ್ತದೆ. ಮೈಕಾಂತಿ ಚೆನ್ನಾಗಿದ್ದು, ಮೈಕಟ್ಟು ಸದೃಢವಾಗಿದ್ದರೂ ಈ ಡಾರ್ಕ್ ಸರ್ಕಲ್ಸ್, ನಿಮ್ಮ ಸೌಂದರ್ಯಕ್ಕೆ ದೊಡ್ಡ ಕಪ್ಪು ಚುಕ್ಕೆ ಆದೀತು. ಆದ್ದರಿಂದ ಅದನ್ನು ಹೋಗಲಾಡಿಸಿ, ನಿಮ್ಮ ಮುಖದ ಸೌಂದರ್ಯ ದಿವಿನಾಗಿ ಬೆಳಗುವಂತೆ ಮಾಡಿ. ಕಂಗಳ ಕೆಳಗಿನ ಈ ಡಾರ್ಕ್ ಸರ್ಕಲ್ಸ್ ನಿಮ್ಮ ಸುಸ್ತು, ಅಪೂರ್ಣ ನಿದ್ದೆ, ಒತ್ತಡ, ಟೆನ್ಶನ್, ಹೆಚ್ಚುತ್ತಿರುವ ವಯಸ್ಸಿನ ಕಾರಣ ಆಗುತ್ತದೆ.
ಸಾಮಾನ್ಯವಾಗಿ ಹೆಂಗಸರು ಈ ಡಾರ್ಕ್ ಸರ್ಕಲ್ಸ್ ನ್ನು ಅಡಗಿಸಲು ಮೇಕಪ್ ಸಹಾಯ ಪಡೆಯುತ್ತಾರೆ. ಆದರೆ ಮೇಕಪ್ ಬದಲಾಗಿ ನೈಸರ್ಗಿಕ ವಿಧಾನಗಳಿಂದ ಈ ಕಪ್ಪು ವೃತ್ತಗಳನ್ನು ಓಡಿಸಬೇಕು. ಅದಕ್ಕಾಗಿ ಇಲ್ಲಿವೆ ಕೆಲವು ಮನೆ ಮದ್ದು. ನೀವು ಸಹ ಇವನ್ನು ಅನುಸರಿಸಿ, ಡಾರ್ಕ್ ಸರ್ಕಲ್ಸ್ ನಿಂದ ಮುಕ್ತಿ ಪಡೆಯಿರಿ.
ತಂಪು ಹಾಲು
ಕಾದಾರಿದ ಹಾಲನ್ನು ಇಡೀ ರಾತ್ರಿ ಫ್ರಿಜ್ ನಲ್ಲಿರಿಸಿ ಮಾರನೇ ಬೆಳಗ್ಗೆ ಅದನ್ನು ಡಾರ್ಕ್ ಸರ್ಕಲ್ಸ್ ಗೆ ಹಚ್ಚುವುದರಿಂದ ಹೆಚ್ಚಿನ ಲಾಭವಿದೆ. ಒಂದು ಸಣ್ಣ ಬಟ್ಟಲಲ್ಲಿ ಈ ತಂಪು ಹಾಲು ತೆಗೆದುಕೊಂಡು, ಅದರಲ್ಲಿ ಹತ್ತಿ ಉಂಡೆ ನೆನೆಸಿಡಿ. ನಂತರ ಅದನ್ನು ಕಂಗಳ ಕೆಳಗಿನ ಡಾರ್ಕ್ ಸರ್ಕಲ್ಸ್ ಭಾಗದ ಮೇಲೆ ಇರಿಸಿಕೊಂಡು, ಹಾಗೇ ಅರ್ಧ ಗಂಟೆ ಅಲುಗಾಡದೆ ಇರಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದನ್ನು ಬೆಳಗ್ಗೆ ಸಂಜೆ ಎರಡೂ ಹೊತ್ತು 1-2 ವಾರ ಮುಂದುವರಿಸಿದರೆ, ನೀವು ಬಯಸಿದ ಪರಿಣಾಮ ಖಂಡಿತಾ ಸಿಗುತ್ತದೆ, ಡಾರ್ಕ್ ಸರ್ಕಲ್ಸ್ ಕ್ರಮೇಣ ಮಾಯ ಆಗ ತೊಡಗುತ್ತದೆ.
ಗುಲಾಬಿ ಜಲ
ಹಾಲು 5-6 ಚಮಚ ತಂಪು ಹಾಲಿಗೆ ಅಷ್ಟೇ ಪ್ರಮಾಣದ ಗುಲಾಬಿ ಜಲ ಬೆರೆಸಿಕೊಳ್ಳಿ. ಇದಕ್ಕೆ ಹತ್ತಿ ಉಂಡೆ ಹಾಕಿ ನೆನೆಸಿ, ಕಂಗಳು ಹಾಗೂ ಡಾರ್ಕ್ ಸರ್ಕಲ್ಸ್ ಇರುವ ಜಾಗ ಪೂರ್ತಿ ಕವರ್‌ಮಾಡಿ. ಅರ್ಧ ಗಂಟೆ ಹಾಗೇ ಅಲುಗಾಡದೆ ಇರಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಕಪ್ಪು ವೃತ್ತ ಓಡಿಸಲು ಈ ಪ್ರಕ್ರಿಯೆಯನ್ನು ವಾರದಲ್ಲಿ 3 ಸಲ ರಿಪೀಟ್ ಮಾಡಿ.
ಬಾದಾಮಿ ಎಣ್ಣೆ - ಹಾಲು
ಅರ್ಧ ಚಿಕ್ಕ ಬಟ್ಟಲು ತಂಪು ಹಾಲಿಗೆ ಅಷ್ಟೇ ಪ್ರಮಾಣದಲ್ಲಿ ಬಾದಾಮಿ ಎಣ್ಣೆ ಬೆರೆಸಿಕೊಂಡು, ಅದರಲ್ಲಿ ಹತ್ತಿ ಉಂಡೆ ನೆನೆಸಿ, ಕಂಗಳು ಕಪ್ಪು ವೃತ್ತಗಳನ್ನು ಕವರ್ ಮಾಡುವಂತೆ, ಅರ್ಧ ಗಂಟೆ ಕಾಲ ಒತ್ತಿ ಇರಿಸಿಕೊಳ್ಳಿ. ಆಮೇಲೆ ತಣ್ಣೀರಿನಿಂದ ಮುಖ ತೊಳೆಯಿರಿ. ಹೀಗೆ ವಾರಕ್ಕೆ 3-4 ಸಲ ಮಾಡಿ, ಉತ್ತಮ ಪರಿಣಾಮ ಕಾಣುವಿರಿ.





