– ರಾಘವೇಂದ್ರ ಅಡಿಗ ಎಚ್ಚೆನ್.
ದಾಸ ಸಾಹಿತ್ಯದ ಹಳೆಯ ಕೊಂಡಿ , ಕಟಗೇರಿ ದಾಸ , ಅನಂತಾಚಾರ್ಯ ಕಟಗೇರಿ ದಾಸರು ಈ ದಿನ ಮುಂಜಾನೆ ನಿಧನರಾದರು ಅವರಿಗೆ ೯೯ ವರ್ಷ ವಯಸ್ಸಾಗಿತ್ತು.
ಹರಿದಾಸ ಕೀರ್ತನಾ ಶಿರೋಮಣಿ.. ಸಂಗೀತ ಆಚಾರ್ಯ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು..
ದಾಸ ಸಾಹಿತ್ಯ ಹಾಗೂ ಗಮಕ ಹಗಲು ರಾತ್ರಿ ಎನ್ನದೇ ಹಾಡುವಷ್ಟು ಸಾಮರ್ಥ್ಯ! ದಾಸರ ಪದ ಹಾಡುವುದು ಮಾತ್ರವಲ್ಲ ಅದರ ಅರ್ಥ, ಸಂದರ್ಭ, ಔಚಿತ್ಯ ಮತ್ತು ಪೌರಾಣಿಕ, ಪಾರಮಾರ್ಥಿಕ ಹಿನ್ನೆಲೆ, ಕತೆ-ಉಪಕತೆ ಸಹ ವಿವರಿಸಬಲ್ಲ ಆಳ ಜ್ಞಾನ..
ಸೈಕಲ್ ಏರಿ, ಮನೆ ಮನೆಗೆ ಹೋಗಿ ದಾಸರ ಪದ ಮಕ್ಕಳಿಗೆ ಕಲಿಸುತ್ತ, ನೀಡಿದಷ್ಟು ಪಡೆಯುತ್ತ ಬಂದ ಮಹಾನುಭಾವರು ಕಟಗೇರಿ ದಾಸರು..
ಆಂಧ್ರಪ್ರದೇಶದ ಗುಂತಕಲ್ ಬಳಿಯ ಚಿಪ್ಪಗೇರಿಯ ವಿಜಯದಾಸರ ಪಟ್ಟದ ಶಿಷ್ಯರಾದ ಕಟಗೇರಿ ದಾಸರು, ದಾಸರು ಹೆಣೆದ ‘ಪದಗಳು’, ನೀಡಿದ ಸುಳುವಿನ ಹಾದಿ ‘ಸುಳಾದಿಗಳು’, ತಪ್ತವಾದಂತಹ ಸಂದರ್ಭದಲ್ಲಿ ಮಾರ್ಗದರ್ಶಿಯಾಗಿ ನೀಡಿದ ಸೂತ್ರಗಳು ‘ಊಗಾಭೋಗ’ ಹಾಗು ವಿಮರ್ಶೆಗೆ ಸ್ವತ: ಒಡ್ಡಿಕೊಳ್ಳುವ- ‘ನಿಂದಾಸ್ತೋತ್ರ’ ಗಳಲ್ಲಿ ಅವರು ಎತ್ತಿದ ಕೈ.
ಸಾವಿರಾರು ದಾಸರ ಪದಗಳ ಅಪೂರ್ವ ಭಂಡಾರವೆನಿಸಿದ್ದ ಹರಿದಾಸ ಕೀರ್ತನಾ ಶಿರೋಮಣಿ, ಧಾರವಾಡದ ಮಾಳಮಡ್ಡಿಯ ಕಟಗೇರಿಯವರಾದ ಅನಂತಾಚಾರ್ಯರು ಸಂಗೀತ ಆಚಾರ್ಯರೆಂದೇ ಹೆಸರಾಗಿದ್ದರು. ದಾಸರಪದ ಗಾಯನದ ಜತೆಗೆ ಅವುಗಳ ಅರ್ಥ, ಸಂದರ್ಭ, ಔಚಿತ್ಯ, ಪೌರಾಣಿಕ, ಪಾರಮಾರ್ಥಿಕ ಹಿನ್ನೆಲೆ, ಕತೆ-ಉಪಕತೆ ವಿವರಿಸುತ್ತಿದ್ದ ಇವರ ಜ್ಞಾನ ವಿಶಾಲವಾದುದಾಗಿತ್ತು. ದಾಸಸಾಹಿತ್ಯದ ಅನನ್ಯ ಪ್ರಚಾರಕರಾಗಿದ್ದ ದಾಸರು, ಕಂಚಿನ ಕಂಠ, ಸುಶ್ರಾವ್ಯ ಗಾಯನ, ಸ್ವರಗಳ ಮೇಲಿನ ಕರಾರುವಾಕ್ ಹಿಡಿತ, ಸ್ವರಶುದ್ಧಿ, ಭಾವಶುದ್ಧಿಯ ಪಂಡಿತೋತ್ತಮರೆನಿಸಿದ್ದರು. 19 ಪ್ರಕಾರಗಳ ದಾಸಸಾಹಿತ್ಯದ ನಾಲ್ಕು ಸಾವಿರಕ್ಕೂ ಅಧಿಕ ದಾಸರ ಪದಗಳ ಭಂಡಾರ ಇವರದಾಗಿತ್ತು.
ಸಾವಿರಾರು ಸಂಗೀತಾಸಕ್ತರಿಗೆ ಸ್ವರಜ್ಞಾನ ಧಾರೆಯೆರೆದ ಗುರುವೆನಿಸಿದ್ದ ಕಟಗೇರಿ ದಾಸರು ಮನೆಮನೆಗೆ ತೆರಳಿ ಮಕ್ಕಳಿಗೆ ದಾಸರ ಪದ ಕಲಿಸಿದ ಮಹಾನುಭಾವರು. ಹರಿದಾಸ ಸೇವೆಯಲ್ಲಿ ಬದುಕಿನ ಸಾರ್ಥಕತೆ ಕಂಡುಕೊಂಡ ಜ್ಞಾನವೃದ್ಧರಿವರು.
99 ವರ್ಷ ವಯಸ್ಸಿನ ಕಟಗೇರಿ ದಾಸರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬಲಭೀಮ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.