ತಮಿಳು ನಟ ಶಿವಕಾರ್ತಿಕೇಯನ್ ಮತ್ತು ಕನ್ನಡದ ನಟಿ ರುಕ್ಮಿಣಿ ವಸಂತ್ ನಟಿಸಿರುವ, ಎ.ಆರ್. ಮುರುಗದಾಸ್ ನಿರ್ದೇಶನದ ‘ಮದರಾಸಿ’ ಸಿನಿಮಾ ಸೆಪ್ಟೆಂಬರ್ 5ರಂದು ಬಹುಭಾಷೆಯಲ್ಲಿ ತೆರೆಗೆ ಬರಲಿದೆ.

ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ (ಹಿಂದಿಯಲ್ಲಿ ‘ದಿಲ್ ಮದರಾಸಿ’ ಎಂಬ ಶೀರ್ಷಿಕೆಯೊಂದಿಗೆ) ಬಿಡುಗಡೆಯಾಗಲಿದೆ.

ಬೆಂಗಳೂರಿನ ಕೋರಮಂಗಲದ ನಕ್ಸಸ್ ಮಾಲ್‌ನಲ್ಲಿ  ಚಿತ್ರದ ಪ್ರಚಾರ ಕಾರ್ಯಕ್ರಮ ನಡೆಯಿತು. ಚಿತ್ರತಂಡವು ಕನ್ನಡ, ತಮಿಳು, ತೆಲುಗು ಸೇರಿದಂತೆ ಎಲ್ಲಾ ಭಾಷೆಗಳ ಟ್ರೇಲರ್‌ಗಳನ್ನು ಪ್ರದರ್ಶಿಸಿತು. ಶಿವಕಾರ್ತಿಕೇಯನ್, ರುಕ್ಮಿಣಿ ವಸಂತ್ ಮತ್ತು ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭ ಮಾತನಾಡಿದ ನಟ ಶಿವಕಾರ್ತಿಕೇಯನ್, “ರುಕ್ಮಿಣಿ ವಸಂತ್ ಅವರಂತಹ ಪ್ರತಿಭಾವಂತ ನಟಿಯನ್ನು ತಮಿಳು ಚಿತ್ರರಂಗಕ್ಕೆ ನೀಡಿದ ಬೆಂಗಳೂರಿಗೆ ಧನ್ಯವಾದಗಳು. ನನ್ನ ಹಿಂದಿನ ಚಿತ್ರಗಳಿಗೆ ನೀವು ನಿರೀಕ್ಷೆಗೂ ಮೀರಿ ಯಶಸ್ಸು ಕೊಟ್ಟಿದ್ದೀರಿ. ‘ಮದರಾಸಿ’ ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ. ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಸದಾ ಋಣಿ. ನಿರ್ದೇಶಕ ಎ.ಆರ್. ಮುರುಗದಾಸ್ ಅವರೇ ಕಥೆಯನ್ನು ಬರೆದಿದ್ದಾರೆ. ಸೆಪ್ಟೆಂಬರ್ 5ರಂದು ಈ ಚಿತ್ರ ಬಿಡುಗಡೆಯಾಗಲಿದೆ. ದಯವಿಟ್ಟು ಈ ಚಿತ್ರವನ್ನು ಬೆಂಬಲಿಸಿ,” ಎಂದು ಕೋರಿದರು.

ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಮಾತನಾಡಿ, “ ‘ಮದರಾಸಿ’ ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಈ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲವಿರಲಿ,” ಎಂದು ಕೇಳಿಕೊಂಡರು.

‘ಮದರಾಸಿ’ ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಶಿವಕಾರ್ತಿಕೇಯನ್ ಅವರು ಮಾನಸಿಕ ಸಮಸ್ಯೆಯಿಂದ ಬಳಲುವ ಪಾತ್ರದಲ್ಲಿ ಬಹು ಶೇಡ್‌ಗಳನ್ನು ಒಳಗೊಂಡಿರುವ ಕತೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ವಿದ್ಯುತ್ ಜಮ್ಮ್ವಾಲ್, ಬಿಜು ಮೆನನ್, ಶಬೀರ್ ಕಲ್ಲರಕ್ಕಲ್, ವಿಕ್ರಾಂತ್ ಮತ್ತು ಇತರರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣವನ್ನು ಸುದೀಪ್ ಇಲಾಮನ್ ಮತ್ತು ಸಂಕಲನವನ್ನು ಎ. ಶ್ರೀಕರ್ ಪ್ರಸಾದ್ ನಿರ್ವಹಿಸಿದ್ದಾರೆ. ಶ್ರೀ ಲಕ್ಷ್ಮಿ ಮೂವೀಸ್ ಬ್ಯಾನರ್‌ನಡಿ ಈ ಚಿತ್ರವನ್ನು ಎನ್. ಶ್ರೀಲಕ್ಷ್ಮಿ ಪ್ರಸಾದ್ ನಿರ್ಮಿಸಿದ್ದಾರೆ. ವಿಕೆ ಫಿಲಂಸ್ ಕರ್ನಾಟಕದಾದ್ಯಂತ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ