ಎಲ್ಲರ ಅಚ್ಚುಮೆಚ್ಚಿನ ವಾಹಿನಿ ಜೀ಼ ಕನ್ನಡ ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಹೃದಯಕ್ಕೆ ನಿರಂತರವಾಗಿ ಲಗ್ಗೆ ಇಡುತ್ತಾ ಬಂದಿದ್ದು, ಇದೀಗ ಮತ್ತೊಂದು ಭಕ್ತಿಪ್ರಧಾನ ಧಾರಾವಾಹಿಯನ್ನು ಜನರ ಮುಂದಿಡಲು ಸಜ್ಜಾಗಿದೆ.
'ಶ್ರೀ ರಾಘವೇಂದ್ರ ಮಹಾತ್ಮೆ' ಎಂಬ ಧಾರಾವಾಹಿ ಇದೇ ಸೆಪ್ಟೆಂಬರ್ 1 ರಿಂದ ರಾತ್ರಿ 9 ಗಂಟೆಗೆ ಜೀ಼ ಕನ್ನಡದಲ್ಲಿ ಪ್ರಸಾರವಾಗಲಿದೆ. ಇದರಲ್ಲಿ ರಾಯರ ಬಾಲ್ಯ, ಪವಾಡಗಳು ಮತ್ತು ಅವರ ಜೀವನದಲ್ಲಿ ನಡೆದ ಅನೇಕ ಕಥೆಗಳು ನಮಗೆ ಕಾಣಸಿಗಲಿದೆ.
ಇದು ಶ್ರೀ ರಾಘವೇಂದ್ರ ಸ್ವಾಮಿಗಳ ಅಸಾಮಾನ್ಯ ಜೀವನಯಾತ್ರೆಯನ್ನು ವಿವರಿಸುತ್ತದೆ. ರಾಯರ ಬಾಲ್ಯದಿಂದ ಹಿಡಿದು ಅವರ ಆತ್ಮಜಾಗೃತಿ, ಉಪದೇಶಗಳು, ಪವಾಡಗಳು, ಪರಂಪರೆ ಈ ಧಾರಾವಾಹಿಯಲ್ಲಿ ಕಾಣಸಿಗಲಿವೆ. ಕಥಾಶೈಲಿ ಮತ್ತು ಭವ್ಯ ದೃಶ್ಯಾವಳಿಗಳ ಸಮನ್ವಯದೊಂದಿಗೆ ಈ ಧಾರಾವಾಹಿ ರಾಯರ ಜೀವನದ ಮೌಲ್ಯಗಳನ್ನು ವೀಕ್ಷಕರಿಗೆ ತಿಳಿಸುವಲ್ಲಿ ಯಶಸ್ವಿಯಾಗಲಿದೆ.
ಧಾರಾವಾಹಿಯಲ್ಲಿ ಪ್ರತಿಭಾನ್ವಿತ ತಾರಾ ಬಳಗವಿದ್ದು ಮಹೇಶ್ ಸುಖಧರೆ ನಿರ್ಮಾಣ ಮಾಡುತ್ತಿದ್ದು, ನವೀನ್ ಕೃಷ್ಣ ನಿರ್ದೇಶಿಸಿದ್ದಾರೆ. ಮಣಿಕಾಂತ್ ಕದ್ರಿ ಅವರ ಅಮೋಘ ಸಂಗೀತ ಇರಲಿದ್ದು, ವಿಷ್ಣು ಪಾತ್ರದಲ್ಲಿ ಅಮಿತ್ ಕಶ್ಯಪ್ ಅವರು ನಟಿಸಿದ್ದಾರೆ. ಸಿರಿ ಪ್ರಹ್ಲಾದ್ ಲಕ್ಷ್ಮಿ ಪಾತ್ರದಲ್ಲಿ ನಟಿಸಿದ್ದು, ವ್ಯಾಸರಾಯರ ಪಾತ್ರದಲ್ಲಿ ಪರೀಕ್ಷಿತ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವಿಕಾಸ್ ವಸಿಷ್ಠ, ದೀಪಿಕಾ, ಕಾರ್ತಿಕ್ ಸಾಮಗ, ಧನ್ಯಶ್ರೀ ಪ್ರಭು, ವಿಕ್ರಂ ಸೂರಿ, ಡಾ.ಸಂಜಯ್, ಸ್ನೇಹಾ ಹೆಗ್ಡೆ, ಶ್ರೀನಿಧಿ, ಶ್ರೀಲತಾ, ಅನುರಾಗ್ ಸೇರಿದಂತೆ ಅನೇಕ ಪ್ರತಿಭಾನ್ವಿತ ಕಲಾವಿದರ ದಂಡು ಕಾಣಸಿಗಲಿದೆ. ಹಿರಣ್ಯ ಕಶಿಪುವಾಗಿ ಚೆಲುವರಾಜು, ಕಯಾದು ಆಗಿ ಲೂಸಿಯಾ ಚೆಲುವೆ ಶ್ರುತಿ ಹರಿಹರನ್ ಈ ಧಾರಾವಾಹಿಯಲ್ಲಿ ನಟಿಸಿದಲ್ಲಿದ್ದಾರೆ. ಇನ್ನು ರಾಯರು ಯಾರು ಎಂಬುದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ. ಒಟ್ಟಿನಲ್ಲಿ ಇದು ಪ್ರೇಕ್ಷಕರಿಗೆ ಮನರಂಜನೆಯ ಹಬ್ಬದವನ್ನು ಕೊಡುವುದಂತೂ ಗ್ಯಾರಂಟಿ.
ʼಶ್ರೀ ರಾಘವೇಂದ್ರ ಮಹಾತ್ಮೆʼ ಕೇವಲ ಪೌರಾಣಿಕ ಕಥೆಯಾಗಿರದೆ ಈಗಿನ ಜನಾಂಗಕ್ಕೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವತ್ತ ಪ್ರಯತ್ನ ಮಾಡಲಿದೆ. ಉನ್ನತ ಮಟ್ಟದ ಟೆಕ್ನಾಲಜಿ, ಭವ್ಯ ಸೆಟ್‌ಗಳು ಮತ್ತು ಗಟ್ಟಿಯಾದ ಕಥಾಹಂದರದೊಂದಿಗೆ ಈ ಧಾರಾವಾಹಿ ಕನ್ನಡ ಪೌರಾಣಿಕ ಕಥನಶೈಲಿಗೆ ಹೊಸ ಅರ್ಥ ನೀಡಲು ಸಜ್ಜಾಗಿದೆ.