ಸಲಿಂಗ ಜೋಡಿಗಳು ಸುಪ್ರೀಂ ಕೋರ್ಟ್‌ ಕದ ತಟ್ಟಿ, ಜೋಲು ಮೋರೆಯೊಂದಿಗೆ ವಾಪಸ್ಸು ಬರುತ್ತಿವೆ. ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ ಅಂತಾಗಿದೆ. ಪರಸ್ಪರರಿಗೆ ಸಮಾಜ, ಸರ್ಕಾರದಿಂದ ಕಾನೂನಾತ್ಮಕ ವಿವಾಹ ರಕ್ಷಣೆ ದೊರಕದು ಅಂತಾಗಿಹೋಯಿತು.

ಅನಾದಿ ಕಾಲದಿಂದ ನಮ್ಮ ಸರ್ಕಾರ ಮತ್ತು ಧರ್ಮ ಎರಡೂ ಕೂಡಿ ವಿವಾಹದ ಕುರಿತು ಎಂಥ ಸುಭದ್ರ ಜಾಲ ಹೆಣೆದಿಟ್ಟಿದೆ ಎಂದರೆ, ಅದರ ಹೊರತಾಗಿ ವಿವಾಹದ ಕಲ್ಪನೆ ಸಾಧ್ಯವೇ ಇಲ್ಲ. ಸುಪ್ರೀಂ ಕೋರ್ಟ್‌ ಒತ್ತಿ ಒತ್ತಿ ಹೇಳಿದ್ದೂ ಇದನ್ನೇ! ಈಗಾಗಲೇ ವಿಶ್ವದ ಅನೇಕ ದೇಶಗಳು ಸಲಿಂಗ ವಿವಾಹಕ್ಕೆ ಕಾನೂನಿನ ಮನ್ನಣೆ ನೀಡಿದೆ. ಅದರಿಂದ ವಿವಾದಗಳೂ ಆಗಿಲ್ಲ, ಅಲ್ಲಿನ ಸಮಾಜಗಳೂ ತಮ್ಮ ಪಾಡಿಗಿವೆ.

ಎಲ್ಲಾ ಪ್ರಕರಣಗಳಲ್ಲೂ ಧರ್ಮ ದೊಡ್ಡ ಅಡ್ಡಗೋಡೆಯಾಗಿ ತಡೆಯುತ್ತದೆ. ಅದು ಸಂರಕ್ಷಣೆ ನೀಡುತ್ತದೆ ಎಂದೇನೋ ಹೇಳುತ್ತಾರೆ, ಆದರೆ ಅದರ ಅಂಗಡಿಕಾರರು ಮಾತ್ರ…. ಮೊದಲು ನಮಗೆ ಕೊಡಬೇಕಾದ ಹಣ ಕೊಟ್ಟು ನೀವು ಮದುವೆ ಆಗಿ, ಮಕ್ಕಳು ಮಾಡಿಕೊಳ್ಳಿ ಅಂತಾರೆ. ನಂತರ ತಾನೇ ಉಳಿದ ಸುಖ, ಸಂಪತ್ತು, ಕಾರು, ಬಂಗಲೆ ಇತ್ಯಾದಿಗಳು. ಈ ರೀತಿ ಎಲ್ಲಾ ಕಡೆಯೂ ಮೂಗು ತೂರಿಸುತ್ತಾ ಧರ್ಮ ಎಲ್ಲೆಡೆ ಗಬ್ಬೆಬ್ಬಿಸುತ್ತಿದೆ. ಯಾವ ಧರ್ಮ ಇದುವರೆಗೂ ಸಲಿಂಗ ವಿವಾಹಕ್ಕೆ ಸಮ್ಮತಿ ನೀಡಿಲ್ಲ, ಏಕೆಂದರೆ ಅದರ ಪಾರುಪತ್ಯಕ್ಕೆ ಅಡ್ಡಿ ಬರಬಾರದೆಂಬುದೇ ಇಲ್ಲಿಯ ವಿಡಂಬನೆ. ಹಾಗೂ ಒಂದು ವೇಳೆ ಇಂಥ ಜೋಡಿ ಮದುವೆಯಾದರೆ, ಅವರೇನೋ 40-50 ವರ್ಷ ಒಟ್ಟೊಟ್ಟಿಗೆ ಖುಷಿಯಾಗಿ ಬಾಳಬಹುದು, ಆದರೆ ಸಂತಾವನಂತೂ ಆಗದು. ಮುಂದೆ ಅವರಿಗೆ ಮಕ್ಕಳಾದರೆ ತಾನೇ ಅವರ ಜಾತಕ, ನಾಮಕರಣ, ವಿವಾಹ ಮುಂತಾದ ಎಲ್ಲಾ ವಿಷಯಕ್ಕೂ ಮೂಗು ತೂರಿಸಿ ಹಣ ಕೇಳಬಹುದು? ಹೀಗಾಗಿ ಧರ್ಮ ಸಲಿಂಗ ವಿವಾಹವನ್ನು ಎಂದೂ ಪುರಸ್ಕರಿಸದು.

ಸಲಿಂಗ ಸಂಬಂಧವನ್ನು ವಿವಾಹದ ಕಾನೂನಿನ ರೂಪ ಒದಗಿಸಲಾಗುತ್ತಿರುವ ಉದ್ದೇಶವೆಂದರೆ, ಸರ್ಕಾರದ ನೆರವಿನಿಂದ ಪತಿಪತ್ನಿ ಎನಿಸಿಕೊಂಡ ಇಬ್ಬರು ವ್ಯಕ್ತಿಗಳಿಗೆ ಕಾನೂನಿನ ನೆರವಿನಿಂದ ಬೇಕಾದಷ್ಟು ಹಕ್ಕು ಸಿಗುತ್ತದೆ. ಪತಿ ಸತ್ತ ತಕ್ಷಣ ಪತ್ನಿ ಅವನ ಆಸ್ತಿಯ ಒಡತಿಯಾಗುತ್ತಾಳೆ, ಮಕ್ಕಳಿಗೂ ಕಾನೂನುಬದ್ಧವಾಗಿ ತಾಯಿ ತಂದೆಯ ಹೆಸರು, ಆಸ್ತಿ ಸಿಗುತ್ತದೆ, ಒಬ್ಬರನ್ನೊಬ್ಬರು ಪರಸ್ಪರ ರೆಪ್ರೆಸೆಂಟ್‌ ಮಾಡಬಹುದು, ಆಸ್ಪತ್ರೆಗಳಲ್ಲಿ ನೆಕ್ಟ್ಸ್ ಆಫ್‌ ಕಿನ್‌ ವಿವಾಹಿತ ಸಂಗಾತಿಯೇ ಹೊರತು, ಅವಿವಾಹಿತ ಸಂಗಾತಿ ಅಲ್ಲ.

ಲಿವ್ ಇನ್‌ ನಲ್ಲಿರುವ ಜೋಡಿಗಳೂ ಸಹ ಇಂಥದೇ ಕಾನೂನಿನ ತೊಡಕಿಗೆ ನಲುಗುತ್ತಿವೆ. ಇಂಥ ಜೋಡಿಯ  ಒಬ್ಬ ವ್ಯಕ್ತಿ ಖೈದಿಯಾದರೆ, ಇನ್ನೊಬ್ಬರಿಗೆ ಜೀವನ ಸಂಗಾತಿಯಂತೆ ನಿರ್ಧಾರ, ಜವಾಬ್ದಾರಿ ತೆಗೆದುಕೊಳ್ಳುವ ಹಕ್ಕಿಲ್ಲ, ಕೇವಲ ಫ್ರೆಂಡ್‌ ಮಾತ್ರ ಆಗುತ್ತಾರೆ. ಅದೇ ತರಹ ಬ್ಯಾಂಕಿನಲ್ಲಿರುವ ಹಣ, ಪೆನ್ಶನ್‌ ಹಣ, ಆಸ್ತಿಪಾಸ್ತಿ ಇತ್ಯಾದಿ ಯಾವುದರ ಹಕ್ಕೂ ಇಂಥ ಲಿವ್ ‌ಇನ್‌, ಸಲಿಂಗ ಸಂಗಾತಿಗೆ ಇಲ್ಲ. ಪತಿ ಸತ್ತ ನಂತರ ಅವನ ಬಾಡಿಗೆ ಮನೆಗಳ ಆದಾಯವೆಲ್ಲ ಪತ್ನಿಗೆ ಸುಲಭವಾಗಿ ಸಿಗುತ್ತದೆ, ಇದೂ ಕೂಡ ಇಂಥವರಿಗೆ ಸಿಗದು.

ಸಾಮಾನ್ಯವಾಗಿ ಎಷ್ಟೋ ಕಾಂಟ್ರಾಕ್ಟ್ ಗಳಲ್ಲಿ ಲೀಗ್‌ ಹೇರ್‌ ಬಗ್ಗೆ ಪ್ರಸ್ತಾಪಿಸಲಾಗಿರುತ್ತದೆ. ಈ ಭಾಗ್ಯ ಇಂಥ ಮಂದಿಗಿಲ್ಲ. ಏಕೆಂದರೆ ಇಂಥವರು ಧರ್ಮಕ್ಕೆ ಕೊಡಬೇಕಾದ ದಂಡ ಕಟ್ಟಿ ಸಂಗಾತಿಗಳಾಗಿಲ್ಲವಲ್ಲ…..

ಸುಪ್ರೀಂ ಕೋಟ್‌ ಕೇಸ್‌ ಗಳನ್ನು ಖುಲಾಸೆ ಮಾಡುತ್ತಾ, ನೀವು ಹೇಗಾದರೂ ಸಂಗಾತಿಗಳಾಗಿರಿ, ಆದರೆ ಕಾನೂನಿನ ಸವಲತ್ತು ಮಾತ್ರ ಕೇಳಬೇಡಿ, ಎಂದು ಗುಡುಗಿದೆ. ಅದು ಸರ್ಕಾರದ ಕಾನೂನಿನ್ವಯ ವಿಧಿವತ್ತಾಗಿ ಮದುವೆಯಾದ ಜೋಡಿಗಳಿಗೆ ಮಾತ್ರ ಸೀಮಿತ, ಎನ್ನುತ್ತದೆ.

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದ ಮಾತ್ರಕ್ಕೆ ಭೂಕಂಪ ಆಗಿಹೋಗದು. ಯಾರೇ ಇಂಥ ಪ್ರೇಮಕ್ಕೆ ಸಿಲುಕಿರಲಿ, ಅವರನ್ನು ಮೃಗಾಲಯದ ಪ್ರಾಣಿಗಳೆಂಬಂತೆ ಈ ಧಾರ್ಮಿಕ ಸಮಾಜ ಕೆಂಗಣ್ಣಿನಿಂದ ನೋಡಬಾರದು. ಅದು ಅವರ ಪರ್ಸನ್ ವಿಚಾರ, ಅದರಿಂದ 3ನೆಯವರಿಗೆ ಏನು ಕೇಡು? ಇದು ಅವರವರ ಭಾವಕ್ಕೆ ಬಿಟ್ಟದ್ದು, ಇದರಲ್ಲಿ ಹೊಸತೇನು ಬಂತು? ಸಲಿಂಗ ವಿವಾಹಕ್ಕೆ ಕ್ಯಾಥೊಲಿಕ್‌ ಚರ್ಚ್‌ ಕಡು ವಿರೋಧಿಯಾಗಿದೆ. ಪ್ರತಿ ವರ್ಷ ಯುವ ಪಾದ್ರಿಗಳೊಂದಿಗೆ ಸಲಿಂಗ ಸಂಬಂಧ ಹೊಂದಿರುವ ಹುಡುಗರಿಗೆ ಕೋಟ್ಯಂತರ ಹಣ ನೀಡಿ, ಅವರ ಬಾಯಿ ಮುಚ್ಚಿಸಲಾಗುತ್ತದೆ. ಪೋಪ್‌ ರ ಅಪೀಲುಗಳ ನಂತರ, ಸೆಮಿನಾರಿಗಳಲ್ಲಿ ವಾಸಿಸುವ ಹುಡುಗರು, ಫಾದರ್‌ ಗಳೊಂದಿಗೆ ಸಲಿಂಗ ಸಂಬಂಧ ಹೊಂದಿ ಖುಷಿ ಪಡುತ್ತಿರುತ್ತಾರೆ.

ಧರ್ಮದ ಮೂಗಿನಡಿ ಹೀಗೆ ನಡೆಯಬಹುದಾದರೆ, ಸಮಾಜದಲ್ಲಿ ಸಲಿಂಗ ಜೋಡಿಗಳು ರಾಜಾರೋಷವಾಗಿ ಮದುವೆಯಾಗ ಬಯಸಿದರೆ ಧರ್ಮ ಇದಕ್ಕೆ ಏಕೆ ಆಕ್ಷೇಪಿಸಬೇಕು? ಕಾನೂನು ಏಕೆ ತಡೆಯಬೇಕು?

ಸುಪ್ರೀಂ ಕೋರ್ಟ್‌ ಏನೇ ಹೇಳಿಕೊಳ್ಳಲಿ, ಈ ಜೋಡಿಗಳಂತೂ ತಮ್ಮ ದಾಂಪತ್ಯ ಮುಂದುರಿಸುವುದು ದಿಟ. ಈ ಜೋಡಿಗಳು ಮುಂದೆ ಉಯಿಲು, ಪವರ್‌ ಆಫ್‌ ಅಟಾರ್ನಿಗಳಿಂದ ತಮ್ಮ ವ್ಯವಹಾರ ಮಾಡಿಕೊಳ್ಳುತ್ತಾರೆ. ಜಾಯಿಂಟ್‌ ಆಗಿ ಪ್ರಾಪರ್ಟಿ ಕೊಳ್ಳುತ್ತಾರೆ, ಪರಸ್ಪರ ಕಾಂಟ್ರಾಕ್ಟ್ ಮಾಡಿಕೊಂಡು ನಿಷ್ಠರಾಗುತ್ತಾರೆ. ವಿಧಿಯಿಲ್ಲದೆ ಇಂಥವರ ಮನೆಯವರೂ ಇವರನ್ನು ಮುಂದೆ ಒಪ್ಪಿಕೊಳ್ಳಬೇಕಾಗುತ್ತದೆ, ಎಷ್ಟಾದರೂ ಅವರ ಮನೆಯ ಮಕ್ಕಳೇ ಅಲ್ಲವೇ? ಕಾನೂನು ಈ ಜೋಡಿಗಳನ್ನು ಒಪ್ಪಲಿ ಬಿಡಲಿ, ಮನೆಮಂದಿ ಒಪ್ಪುವುದರಲ್ಲಿ ತಪ್ಪೇನಿದೆ?

ಯಾವುದು ಆಗಬೇಕಿದೆಯೋ, ಅದರಿಂದ ಇನ್ನೊಬ್ಬರಿಗೆ ಹಾನಿ ಇಲ್ಲವೇ, ಅದಕ್ಕೆ ಕಾನೂನು ಮೊಹರು ಒತ್ತದಿರುವುದು, ಸಾಂವಿಧಾನಿಕ ಕೋರ್ಟುಗಳ ಕೂಪಮಂಡೂಕತನ, ಕಂದಾಚಾರದ ನಿಲುವನ್ನು ಸಾರುತ್ತದೆ. ಭಾರತದ ಸುಪ್ರೀಂ ಕೋರ್ಟ್‌ ಕ್ರಾಂತಿ ವೀರನೇನೂ ಅಲ್ಲ. ಅದು ಯಥಾಸ್ಥಿತಿಯನ್ನು ಉಳಿಸಿಕೊಳ್ಳ ಬಯಸುತ್ತದಷ್ಟೆ. ಅದಕ್ಕೆ ನೆಹರೂಗಿದ್ದ ಧೈರ್ಯ ಇಲ್ಲ, ಅವರು 1955-56ರಲ್ಲಿ ಹಿಂದೂ ಮ್ಯಾರೇಜ್‌ ಆ್ಯಕ್ಟ್, ಹಿಂದೂ ಸಕ್ಸೆಶನ್‌ ಆ್ಯಕ್ಟ್ ರಚಿಸಿ, ಹಿಂದೂಗಳ ಬಾಯಿ ಅಡಗಿಸಿದ್ದರು.

same-sex-marriage-2

ಇತ್ತ ದರಿ ಅತ್ತ ಪುಲಿ!

ಪ್ರತಿ ಮೊಬೈಲ್ ‌ನಲ್ಲೂ ಒಂದು ಕ್ಯಾಮೆರಾ ಇರುವುದು ಟೆಕ್ನಾಲಜಿಯ ಕೈವಾಡ. ಎಲ್ಲಾ ಹೊಸ ಟೆಕ್ನಾಲಜಿಯಂತೆ ಇದರಲ್ಲೂ ಅಪಾಯ ತಪ್ಪಿದ್ದಲ್ಲ. ಈಗಂತೂ ಇಂಥ ಕ್ಯಾಮೆರಾಗಳಿಂದ, ವಾಶ್‌ ರೂಮುಗಳಲ್ಲಿ ಹುಡುಗಿ ತನ್ನ ಬಟ್ಟೆ ಬದಲಿಸುವ ದೃಶ್ಯಗಳ ವಿಡಿಯೋ ಮಾಡಲೆಂದೇ ದುರ್ಬಳಕೆಯಾಗುತ್ತಿದೆ. ನಂತರ ಬ್ಲಾಕ್‌ ಮೇಲ್ ‌ಮಾಡುತ್ತಾ, ವೈರಲ್ ಮಾಡುತ್ತೇವೆಂದು ಹೆದರಿಸುತ್ತಾರೆ.

ಭಾರತದ ಮಹಾನ್‌ ಜನತೆಯೂ ಸಹ ಇಂಥ ವಿಡಿಯೋ ಸಿಕ್ಕೀತೇ ಎಂದು ಹಪಹಪಿಸುತ್ತಿರುತ್ತದೆ. FB‌, ಇನ್‌ ಸ್ಟಾಗ್ರಾಂ, ಆ್ಯಪ್ಸ್, ಥ್ರೆಡ್ಸ್, ಯೂಟ್ಯೂಬ್‌ ಗಳಲ್ಲಿ ಇದರ ಮಜಾ ಪಡೆಯುತ್ತಾ, ಯಾವುದೂ ಡೆಲೀಟ್‌ ಆಗದಂತೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುತ್ತದೆ.

ದೆಹಲಿಯಲ್ಲಿ ವಿದ್ಯಾರ್ಥಿಗಳ ಒಂದು ಕಾರ್ಯಕ್ರಮದಲ್ಲಿ ಫ್ಯಾಷನ್‌ ಶೋಗಾಗಿ, ಹೆಣ್ಣುಮಕ್ಕಳು ಬಟ್ಟೆ ಬದಲಿಸುವಾಗ, ಅವರ ವಾಶ್ ರೂಂ ಕಿಟಕಿಯಿಂದ, ಅಲ್ಲಿಯದೇ ಒಬ್ಬ ಸಿಬ್ಬಂದಿ ವಿಡಿಯೋ ಶೂಟ್‌ ಮಾಡುವಾಗ ಸಿಕ್ಕಿಬಿದ್ದ. ಇಂಥವು ದೇಶವಿಡೀ ಅದೆಷ್ಟು ನಡೆಯುತ್ತದೋ? ವೈರಲ್ ಆದನಂತರ ಆ ಹುಡುಗಿಯರ ಪಾಡಂತೂ ಯಾರಿಗೂ ಬೇಡ.

ಇತ್ತೀಚೆಗೆ ಎಡಿಟಿಂಗ್‌ ಸಾಧನಗಳು ಬೇಕಾದಷ್ಟಿದ್ದು, ಈ ಹುಡುಗಿಯರ ಬ್ಯಾಕ್‌ ಗ್ರೌಂಡ್‌ ಬದಲಾಯಿಸಿ, ಇವರುಗಳು ದೇಹದಂಧೆಗೆ ತೊಡಗಿದ್ದಾರೆಂದೇ ಪ್ರತಿಬಿಂಬಿಸುತ್ತಾರೆ. ಇದರ ಬದಲು ಮೊಬೈಲ್ ‌ಕೇವಲ ಮಾತನಾಡಲು, ಮೆಸೇಜ್‌ ಗಾಗಿ ಮಾತ್ರ ಎಂದಿದ್ದರೆ ಎಷ್ಟೋ ಉತ್ತಮ. ಇವಕ್ಕೆ ಕ್ಯಾಮೆರಾ ನಂಟು ಖಂಡಿತಾ ಬೇಡ. ಇಂಥ ಕ್ಯಾಮೆರಾಗಳು ಬೇರೆಯವರ ಪ್ರೈವೆಸಿ ಹಾಳು ಮಾಡುವುದರಲ್ಲಿ ಇರುತ್ತವೆ. ಹಿಂದೆಲ್ಲ ಇದ್ದ ಕ್ಯಾಮೆರಾ ಸ್ಪಷ್ಟವಾಗಿ ಕಾಣುತ್ತಿತ್ತು. ಅದರಿಂದ ಯಾರ ಫೋಟೋ ತೆಗೆಯಲಾಗುತ್ತಿತ್ತೋ, ಅಂಥವರು ಎಚ್ಚೆತ್ತುಕೊಳ್ಳುವ ಸಾಧ್ಯತೆ ಇತ್ತು.

ಈಗೆಲ್ಲ ಜನ ಎದ್ದರೆ ಕೂತರೆ ತಮ್ಮ ಮೊಬೈಲ್ ‌ಗಳಿಂದ ಫೋಟೋ ಹಿಡಿಯುವುದೇ ದೊಡ್ಡ ಫ್ಯಾಷನ್‌ ಆಗಿಹೋಗಿದೆ. ಇದು ಬಿಟ್ಟರೆ ಬೇರೆ ಕೆಲಸವಿಲ್ಲ ಎಂಬಂತೆ ಜನ ವರ್ತಿಸುತ್ತಾರೆ. ಈ ಹುಚ್ಚುತನ ಒಂದು ವರ್ಗದ ಮೇಲೆ ಅತಿ ಕೆಟ್ಟದಾಗಿ ಸವಾರಿಗೊಂಡು, ಟೆಕ್ನಾಲಜಿಯ ದುರ್ಬಳಕೆ ಲೀಲಾಜಾಲವಾಗಿ ನಡೆಯುತ್ತಿದೆ.

ಮೊಬೈಲ್ ‌ಕಂಪನಿಗಳು ತಮ್ಮ ಕ್ಯಾಮೆರಾಗಳಲ್ಲಿ ಸತತ ಸುಧಾರಣೆ ತರುತ್ತಲೇ ಇವೆ, ಬದಲಿಗೆ ಇದನ್ನು ನಿಲ್ಲಿಸುವುದೇ ಉತ್ತಮ. ಕ್ಯಾಮೆರಾ ಡಿಸೈನ್‌ ಬೇರೆಯೇ ಆಗಿದ್ದು, ಬೇರೆ ಬಣ್ಣಗಳಲ್ಲಿ ಸಿಗುವಂತಾಗಬೇಕು, ಆಗಲಾದರೂ ದುರ್ಬಳಕೆ ಕಡಿಮೆ ಆದೀತೇನೋ! ಇದು ಟೆಕ್ನಾಲಜಿಯನ್ನು ವಿರೋಧಿಸುವ ಕ್ರಿಯೆಯಲ್ಲ, ಕಾರಿಗೆ ಸೇಫ್ಟಿ ಬ್ರೇಕ್‌, ಏರ್‌ ಬೆಲೂನ್‌ ಇದ್ದಂತೆ. ಹೀಗೆ ಪ್ರತಿ ಮೊಬೈಲೂ ಇತರರ ಪ್ರೈವೆಸಿ ಹಾಳು ಮಾಡಲೆಂದೇ ಆಗಿಹೋದರೆ, ಇದು ಅಮೆರಿಕಾದಲ್ಲಿ ಸುರಕ್ಷತೆಯ ಹೆಸರಿನಲ್ಲಿ ಪ್ರತಿಯೊಬ್ಬರಿಗೂ ರಿವಾಲ್ವರ್‌ ಲೈಸೆನ್ಸ್, ಕೊಟ್ಟಂತೆಯೇ ಆದೀತು. ಅಲ್ಲಂತೂ 2 ವಾರಕ್ಕೊಮ್ಮೆ ಯಾರಾದರೂ ತಲೆಕೆಟ್ಟವನೊಬ್ಬ ಸಾರ್ವಜನಿಕ  ಸ್ಥಳದಲ್ಲಿ ಒಮ್ಮೆಲೇ 10-20 ಮಂದಿಯನ್ನು ಕೊಲ್ಲುತ್ತಲೇ ಇರುತ್ತಾನೆ. ಆದರೆ ಅಲ್ಲಿನ ಚರ್ಚ್‌ ಮಂದಿ ಇದಕ್ಕೆ ದೇವರ ಇಚ್ಛೆ ಹಾಗೂ ಅಮೆರಿಕಾ ಸಂವಿಧಾನದ ಹಕ್ಕು ಎಂದು ಜಾರಿಕೊಳ್ಳುತ್ತಾರೆ. ಅಮೆರಿಕಾ ಸಂವಿಧಾನ ರೂಪುಗೊಂಡಾಗ, ಅಲ್ಲಿ ಪ್ರತಿ ಜಾಗದಲ್ಲೂ ಪೊಲೀಸ್‌ ವ್ಯವಸ್ಥೆ ಇರಲಿಲ್ಲ. ಜನ ತಾವಾಗಿ ಗೂಂಡಾ, ಡಾಕು, ಸರ್ಕಾರದ ಅತಿರೇಕದ ವರ್ತನೆಗಳಿಂದ ಕಾಪಾಡಿಕೊಳ್ಳಬೇಕಿತ್ತು.

ಮೊಬೈಲ್ ‌ಕ್ಯಾಮೆರಾ ಅಂತೂ ಯೂಸ್‌ ಲೆಸ್‌. ಅದೇ ತರಹ ಸರ್ಕಾರಗಳು ದೇಶಗಳನ್ನು ಸರ್ವಿಲೆನ್ಸ್ ಕ್ಯಾಮೆರಾಗಳಿಂದ ಕಟ್ಟಿಹಾಕಿದೆ. ಹೀಗಾಗಿ ಮೊಬೈಲ್ ‌ಕ್ಯಾಮೆರಾ ಬಂದ್‌ ಆಗಲೇಬೇಕು. ಕ್ಯಾಮೆರಾ ಬೇರೆ ಸಾಧನವಾಗಿ ಮಾರಾಟಗೊಳ್ಳಲಿ, ಮೊಬೈಲಿಗಂಟಿಕೊಂಡು ಬೇಡ. ಹೀಗಾದಾಗ ಕ್ಯಾಮೆರಾ ಖರೀದಿಸುವವರ ಸಂಖ್ಯೆ ಖಂಡಿತಾ ಕಡಿಮೆ ಆಗುತ್ತದೆ, ಕೊಂಡವರು ಜವಾಬ್ದಾರಿ ವಹಿಸುತ್ತಾರೆ. ಅದೂ ಸಹ ಅಮೆರಿಕಾ ಗನ್‌ ಕಲ್ಚರ್‌ ಆಗಾರದೆಂದಲ್ಲ, ಆದರೂ ನಿರ್ದೋಷಿ ಮುಗ್ಧ ಹೆಣ್ಣುಮಕ್ಕಳು ತಮ್ಮ ಪ್ರೈವೆಸಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಇಂಥ ಬೇಡಿಕೆಯನ್ನು ಜನತೆ ಬೆಂಬಲಿಸುತ್ತದೆಯೇ? ಡೌಟ್‌, ಏಕೆಂದರೆ ಅಫೀಮಿನ ಚಟದಂತೆ ಮೊಬೈಲ್ ‌ಕ್ಯಾಮೆರಾ ಹುಚ್ಚು ಜನರ ತಲೆಗೇರಿದೆ. ಡ್ರಗ್‌ ಮಾಫಿಯಾ ತರಹ ಮೊಬೈಲ್ ‌ಕಂಪನಿಗಳು ಕೋಟ್ಯಂತರ ಹಣ ಹೂಡಿ, ಅತ್ಯಾಧುನಿಕ ಕ್ಯಾಮೆರಾವುಳ್ಳ ಮೊಬೈಲ್ ‌ನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ.

ಧಾರ್ಮಿಕ ಅಬ್ಬರದಿಂದ ಹೆಚ್ಚುವ ಮಾಲಿನ್ಯ

ಸಾಮಾನ್ಯವಾಗಿ ಹೋಮ, ಹವನಗಳಿಂದ ದೇವರ ಮುಂದೆ ದೀಪ ಹಚ್ಚುವುದರಿಂದ ಒಳ್ಳೆಯದಾಗುತ್ತದೆ, ಇದರಿಂದ ಪರಿಸರ ಶುದ್ಧವಾಗಿ, ಮಾಲಿನ್ಯ ಹರಡುವುದಿಲ್ಲ ಎಂದೂ ಹಿಂದೂಗಳನ್ನು ನಂಬಿಸಲಾಗಿದೆ. ವೈಜ್ಞಾನಿಕವಾಗಿ ವಿಶ್ಲೇಷಿಸುವವರು ಸಹ ಮುಂದಿಡುವ ಲಾಜಿಕ್‌ ಎಂದರೆ ಹೋಮಹವನಗಳಲ್ಲಿ ಕಡ್ಡಿ, ಪತ್ರೆ, ತುಪ್ಪ, ಬೀಜ ಇತ್ಯಾದಿ ಹಾಕಿದರೆ ಪರಿಸರಕ್ಕೆ ಇಂಗಾಲದ ಡೈ ಆಕ್ಸೈಡ್‌ ಹರಡುವುದಿಲ್ಲ. ಇವರ ಮಾತಿಗೆ ನಗಬೇಕೋ ಅಳಬೇಕೋ?

2020, ನವೆಂಬರ್‌ ರ `ಡೇಲಿ ಗಾರ್ಜಿಯನ್‌’ ದೈನಿಕದ ಒಂದು ಅಂಕಣದಲ್ಲಿ, ಭಾರತೀಯ ಮೂಲದ ಒಬ್ಬ ಹಿಂದೂ ಜಿತೇಂದ್ರ ತುಲಿಯವರ ವರದಿ ಓದಿ ತುಸು ತೃಪ್ತಿ ಎನಿಸಿತು, ಆತ ಸರಿಯಾಗಿ ಹೇಳಿದ್ದಾರೆ. ಅವರ ವರದಿಯಲ್ಲಿ ಅಂದಿನ ಕಾಲದ ಅಮೆರಿಕನ್‌ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್‌, ನಮ್ಮ ಪ್ರಧಾನಿಯ ಬಹು ಆತ್ಮೀಯರಾಗಿದ್ದವರು ಹೇಳುತ್ತಾರೆ, ಭಾರತೀಯ ಫಿಲ್ದಿ, ಕೊಳಕು, ಗಲೀಜು. `ಅವರು ಸರಿಯಾಗಿ ಹೇಳಿದರು’ ಅಂತಾರೆ ಜಿತೇಂದ್ರ ತುಲಿ.

ಇವರ ಪ್ರಕಾರ, 1950ರಲ್ಲಿ ಇವರು ದೊಡ್ಡವರಾಗುತ್ತಿದ್ದಾಗ, ಆಕಾಶದಲ್ಲಿ ತಾರೆ, ಆಕಾಶಗಂಗೆ ಸುಲಭವಾಗಿ ಕಾಣಿಸುತ್ತಿತ್ತಂತೆ. ಇಂದು ಭಾರತ ಒಂದು ವಿಷಾನಿಲ ಗ್ಯಾಸ್‌ ಚೇಂಬರ್‌ ಆಗಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಜನಸಂಖ್ಯೆ ದಿನೇದಿನೇ ಧಾರಾಳ ಬಳಸುತ್ತಿರುವ ಪೆಟ್ರೋಲ್, ಕಲ್ಲಿದ್ದಲು, ಗ್ಯಾಸ್‌ ಇತ್ಯಾದಿ.

ಇವರು ಮುಂದುವರಿಸುತ್ತಾ ಹೆಣಗಳನ್ನು ಸುಡುವಿಕೆ, ಹೋಮಹವನ, ದೇವರ ಎದುರು 24 ಗಂಟೆ ದೀಪ ಹಚ್ಚುವುದು ಇತ್ಯಾದಿ ದೋಷಕ್ಕೆ ಕಾರಣ ಅಂತಾರೆ. ಇದಕ್ಕೆ ವಿರುದ್ಧವಾಗಿ ಸೋಶಿಯಲ್ ಮೀಡಿಯಾ, ಗೂಗಲ್ ಗಳಲ್ಲಿ ಲಕ್ಷಾಂತರ ಪೋಸ್ಟ್ ಗಳು, ಹವನದಿಂದ ಪರಿಸರ ಶುದ್ಧಿ ಆಗುತ್ತದೆ ಎನ್ನುತ್ತವೆ. ಹವನದಿಂದ ಪರಿಸರ ಶುದ್ಧಿ ಸಾಧ್ಯವಿಲ್ಲವೇ ಎನ್ನುವ ಗೂಗಲ್ ಸರ್ಚ್‌ ಗಳ ಮುಂದೆ ಅಸಲಿ ರಿಸರ್ಚ್‌ ವರದಿ ಎಲ್ಲೋ ಹೂತುಹೋಗುತ್ತದೆ.

ಅಲರ್ಜಿ ಸ್ಪೆಷಲಿಸ್ಟ್ ರಿತಿಕಾ ಗೋಯಲ್ ರ ಪ್ರಕಾರ, ಈ ಪರಿಸರ ಮಾಲಿನ್ಯಕ್ಕೆ ಹೆಚ್ಚು ಬಲಿಯಾಗುವವರು ಮಕ್ಕಳು. ಏಕೆಂದರೆ ಅಗರಬತ್ತಿ, ಮಸ್ಕಿಟೊ ಕಾಯಲ್, ಧೂಪಗಳಿಂದ ಮನೆಯ ಒಳಗೆ ಹಾಗೂ ಪೆಟ್ರೋಲ್, ಡೀಸೆಲ್‌, ಕಸಕ್ಕೆ ಬೆಂಕಿ, ಪಟಾಕಿಗಳಿಂದ ಮನೆಯ ಹೊರಗೆ ಮಾಲಿನ್ಯ ಹೆಚ್ಚುತ್ತದೆ.

ಕಟ್ಟಿಗೆಯ ಹೊಗೆ ಮಾಲಿನ್ಯಕಾರಕ ಎಂಬುದು ತಿಳಿದ ವೈಜ್ಞಾನಿಕ ವಿಷಯ. ಏಕೆಂದರೆ ಇದರಲ್ಲಿ ಸಣ್ಣ ಸಣ್ಣ ಪಾರ್ಟಿಕ್ಯುಲೇಟ್ ಕಣಗಳಿರುತ್ತವೆ. ಈ ಸೂಕ್ಷ್ಮಾಣುಗಳು ಕಂಗಳು, ಶ್ವಾಸಕೋಶ ಸೇರಿ ಹಾನಿ ಮಾಡುತ್ತವೆ. ಅಮೆರಿಕಾದ ಮನೆಗಳಲ್ಲಿ ಚಳಿ ಓಡಿಸಲು ಅಗ್ಗಿಷ್ಟಿಕೆ ಹೂಡುವುದು ಮಾಲಿನ್ಯಕ್ಕೆ ಮೂಲ. ಅದೇ ಕಟ್ಟಿಗೆ ಭಾರತದ ಹೋಮ ಹವನಗಳಲ್ಲಿ ನುಸುಳಿ ಪರಿಸರ ಶುದ್ಧೀಕರಿಸುತ್ತದೆ ಎಂದು ಹೇಳುವವರು ನಿಜಕ್ಕೂ ಮೂರ್ಖರೇ ಸರಿ, ಬೇರೆಯವರನ್ನೂ ಮೂರ್ಖರನ್ನಾಗಿಸುತ್ತಾರೆ. ಕಾರ್ಬನ್‌ ಮಾನಾಕ್ಸೈಡ್‌, ನೈಟ್ರೋಜನ್‌ ಆಕ್ಸೈಡ್‌ ಮೀಥೇನ್‌ ಗಳಂಥ ವಿಷಾನಿಲಗಳು ಹೊರಹೊಮ್ಮದಿರುತ್ತವೆಯೇ? ಅಮೆರಿಕಾದ ಅಗ್ಗಿಷ್ಟಿಕೆಯಲ್ಲಿ ಉರಿಯುವ ಕಟ್ಟಿಗೆ ಭಾರತದಲ್ಲಿ ತುಪ್ಪದೊಂದಿಗೆ ಉರಿದ ಮಾತ್ರಕ್ಕೆ ಮಾಲಿನ್ಯ ಹರಡದಿರುತ್ತದೆಯೇ?

ಪರಿಸರ ಮಾಲಿನ್ಯದ ಕುರಿತು ಲೆಕ್ಚರ್‌ ನೀಡುವ ನಮ್ಮ ಪ್ರಧಾನಿ, ಹೋಮ ಹವನ ಮಾಡುತ್ತಾ ಕಾಣಿಸಿಕೊಳ್ಳುತ್ತಾರೆ. ಅವರು ಯಾವಾಗ ಇಂಥ ಕಾರ್ಯಕ್ರಮ ಮಾಡಿದರೂ, ಅದು ಎಲ್ಲಾ ಟಿವಿ ಚಾನೆಲ್ ಗಳಲ್ಲೂ ಪ್ರಸಾರಗೊಂಡು, ಪ್ರಧಾನಿ ಜೊತೆ ಹವನದ ಗುಣಗಾನ ಆಗುವಂತೆ ನೋಡಿಕೊಳ್ಳುತ್ತಾರೆ. ವಿಶ್ವದೆಲ್ಲೆಡೆ ಪರಿಸರ ಮಾಲಿನ್ಯದ ಬಗ್ಗೆ ಆಗುತ್ತಿರುವ ಚರ್ಚೆ ಎಲ್ಲಿ ಮಾಯವಾಗಿರುತ್ತದೋ ಗೊತ್ತಿಲ್ಲ.

ಹೋಮ, ಹವನ, ದೀಪ ಹಚ್ಚುವುದೆಲ್ಲ ಧರ್ಮದ ದಂಧೆಗಳಾಗಿವೆ. ಸಾವಿರಾರು ಮೈಲಿ ನಡೆದು ಬರುವ ಭಕ್ತರು ಇವಗಳಿಂದಲೇ ಭಾರತದ ಅಖಂಡತೆ ಕಾಣಬಯಸಿದರೆ ಏನು ತಾನೇ ಹೇಳುವುದು?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ