– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಕಾಂತಾರ ಚಾಫ್ಟರ್ 1
ನಿರ್ದೇಶನ: ರಿಷಬ್ ಶೆಟ್ಟಿ
ನಿರ್ಮಾಣ: ಹೊಂಬಾಳೆ ಫಿಲ್ಮ್ಸ್
ತಾರಾಂಗಣ: ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ, ಮುಂತಾದವರು
ರೇಟಿಂಗ್: 4.5/5
ಅದು ಈಶ್ವರನ ಹೂದೋಟ ಅದನ್ನು ತನ್ನ ವಶ ಮಾಡಿಕೊಳ್ಳಬೇಕೆನ್ನುವ ಬಾಂಗ್ರ ರಾಜನ ಬಯಕೆ ಅದಕ್ಕೆ ಅಲ್ಲಿನ ಮೂಲ ನಿವಾಸಿಗಳಾದ ಬೆರ್ಮೆ ಹಾಗೂ ಅವನ ಗುಂಪಿನವರ ಪ್ರತಿರೋಧ – ಇದುವೇ ಕಾಂತಾರ ಚಾಪ್ಟರ್ 1ರ ಒಂದೆಳೆಯ ಕಥಾ ಸಾರ. ಧರ್ಮ-ಅಧರ್ಮದ ನಡುವೆ ಧರ್ಮ ಗೆಲ್ಲುತ್ತದೆ… ಈ ಧರ್ಮದ ಗೆಲುವಿಗೆ ದೈವದ ಬಲವೂ ಇರುತ್ತದೆ ಎನ್ನುವುದು ಇಲ್ಲಿನ ಪ್ರಮುಖ ಕಥೆ.
ಇಡೀ ಕಥೆಯು ಬೆರ್ಮೆಯ ಸುತ್ತವೇ ಸಾಗುತ್ತದೆ. ಬೆರ್ಮೆ ಒಂದು ತುಳುನಾಡಿನ ದೈವಸ್ವರೂಪಿ ವ್ಯಕ್ತಿ. ಇದು ತುಳುನಾಡಿನ ಆದಿ ದೈವ .ಬೆರ್ಮೆರ್ ಅರ್ಥವಾ ಬೆರ್ಮೆ, ತುಳುನಾಡಿನ ಆದಿ ದೈವ, ಪ್ರಮುಖ ದೈವ. ತುಳುನಾಡಿನ ಸೃಷ್ಟಿಕರ್ತ ಮತ್ತು ಎಲ್ಲ ದೈವಗಳ ಅಧಿನಾಯಕನೆಂದು ನಂಬಲಾಗುತ್ತದೆ. ತುಳುನಾಡನ್ನು ಬರ್ಮೆ ಸೃಷ್ಟಿಸಿದ್ದಾ? ಪರುಶುರಾಮ ಸೃಷ್ಟಿಸಿದ್ದಾ? ಎನ್ನುವ ಚರ್ಚೆ ಕೂಡ ಇದೆ. ಬೆರ್ಮೆರಾಧನೆ ತುಳುನಾಡಿನ ಮೂಲ ಧರ್ಮದ ಒಂದು ಭಾಗ. ನಾಗರಾಧನೆ ಮತ್ತು ದೈವಾರಾಧನೆಯೊಂದಿಗೆ ಬೆರ್ಮೆರನ್ನು ಅಲ್ಲಿ ಪೂಜಿಸಲಾಗುತ್ತದೆ. ‘ಬೆರ್ಮೆ’ ಎಂಬುದು ‘ಬ್ರಹ್ಮ’ ಎಂಬ ಪದದ ತುಳು ರೂಪ ಎನ್ನಲಾಗುತ್ತದೆ. ಬೆರ್ಮೆರ್ ಎಂಬ ಪದ ಪೆರಿಯಮ್ಮೆರ್ ಪದದಿಂದ ಹುಟ್ಟಿದೆ, ಬ್ರಹ್ಮ ಪದದಿಂದ ಅಲ್ಲ ಎನ್ನುವ ವಾದವೂ ಇದೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ “ಕಾಂತಾರ ಚಾಪ್ಟರ್ 1” ಈ ಬೆರ್ಮೆಯ ಕಥೆ ಹೇಳುತ್ತದೆ. ಬೆರ್ಮೆ ಜನನದ ಕಾರಣ, ಶಿವನ ಹೂದೋಟದ ಮೇಲೆ ಕಣ್ಣಿಟ್ಟಿರುವವರಿಗೆ ಏನಾಗುತ್ತದೆ ತಿಳಿಯಲು ನೀವು ಒಮ್ಮೆ ಚಿತ್ರಮಂದಿರದಲ್ಲೇ ಸಿನಿಮಾ ವೀಕ್ಷಿಸಬೇಕು.
ಇಂತಹಾ ಬೆರ್ಮೆಯ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.ಅವರೇ ಇಡೀ ಚಿತ್ರವನ್ನು ಆವರಿಸಿದ್ದು ಮನುಷ್ಯನಿಗೆ ದೈವ ಕೃಪೆ ಇಲ್ಲವಾದಲ್ಲಿ ಅಂತಹ ನಟನೆ ಅಂತಹ ನಿರ್ದೇಶನ ಸಾಧ್ಯವಾಗುತ್ತಿರಲಿಲ್ಲ ಎನ್ನಬಹುದಾದಷ್ಟು ಮಟ್ಟಿಗೆ ಅವರ ಪಾತ್ರ ನಮ್ಮನ್ನು ಆವರಿಸಿಕೊಳ್ಳುತ್ತದೆ. ಆಕ್ಷನ್ ದೃಶ್ಯಗಳಲ್ಲಿ ಸಾಕಷ್ಟು ರಿಸ್ಕ್ ತೆಗೆದುಕೊಂಡು ಅಭಿನಯಿಸಿದ್ದಾರೆ. ಆದರೆ ಬೇರೆಲ್ಲಾ ಸಿನಿಮಾಗಳಂತೆ ಇಲ್ಲಿ ನಾಯಕನ ಇಂಟ್ರಡಕ್ಷನ್ ಗಾಗಿ ವಿಶೇಷ ಸನ್ನಿವೇಶಗಳಿಲ್ಲ. ಅವರು ಮೂರು ವರ್ಷಗಳಿಂದ ಪಟ್ಟ ಶ್ರಮವನ್ನು ತೆರೆ ಮೇಲೆ ನಾವೂ ಕಾಣಬಹುದು.
ರಾಣಿ ಕನಕವತಿಯಾಗಿ ರುಕ್ಮಿಣಿ ವಸಂತ್ ಸಹ ಅಷ್ಟೇ ಅದ್ಭುತವಾಗಿ ನಟಿಸಿದ್ದಾರೆ. ಅವರು ಕಣ್ಣುಗಳಿಂದಲೇ ಅಭಿನಯಿಸಿದ್ದು ಅವರು ಸಿನಿಮಾದಲ್ಲಿ ಕೇವಲ ಹೀರೋಯಿನ್ ಅಲ್ಲವೇ ಅಲ್ಲ.. ಈ ಹಿಂದೆ ಅವರು ಯಾವ ರೀತಿಯ ಪಾತ್ರಗಳಿಂದ ಗುರುತಿಸಲ್ಪಟ್ಟಿದ್ದರೋ ಅದೇ ರೀತಿಯ ಲವರ್ ಪಾತ್ರ ಇಲ್ಲಿಯೂ ಇದೆ. ಅದನ್ನು ತೆರೆಯ ಮೇಲೆ ನೋಡಿ.
ಉಳಿದ ಪಾತ್ರಗಳ ಕುರಿತು ಹೇಳುವುದಾದರೆ ಬಾಂಗ್ರ ರಾಜಮನೆತನದ ರಾಜನಾಗಿ ಜಯರಾಮ್, ಅವರ ಮಗ ಕುಲಶೇಖರನ ಪಾತ್ರದಲ್ಲಿ ಗುಲ್ಶನ್ ದೇವಯ್ಯ ತಮ್ಮ ಪಾತ್ರಕ್ಕೆ ಉತ್ತಮ ಪೋಷಣೆ ಒದಗಿಸಿಕೊಟ್ಟಿದ್ದಾರೆ. ಅವರು ತಮ್ಮ ಪಾತ್ರವನ್ನು ಜೀವಿಸಿದ್ದಾರೆ. ಪ್ರಕಾಶ್ ತುಮ್ಮಿನಾಡು, ದೀಪಕ್ ರೈ, ಅಲ್ಲಲ್ಲಿ ನಗಿಸುತ್ತಾರೆ. ಇನ್ನು ಇತ್ತೀಚೆಗೆ ವಿಧಿವಶನಾದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಸಹ ಮಹತ್ವದ ಪಾತ್ರವೊಂಡರಲ್ಲಿ ಕಾಣಿಸಿಕೊಂಡಿದ್ದು ಅವರು ಬದುಕಿದ್ದರೆ ಕನ್ನಡದಲ್ಲಿ ಮತ್ತೊಬ್ಬ ಉತ್ತಮ ಹಾಸ್ಯ ಕಲಾವಿದರಾಗುವ ಎಲ್ಲಾ ಸಾಧ್ಯತೆ ಇತ್ತು..
ಇನ್ನು ಚಿತ್ರದ ಮೇಕಿಂಗ್ ವಿಷಯಕ್ಕೆ ಬಂದರೆ ಅತ್ಯದ್ಭುತ ಕ್ಯಾಮೆರಾ ವರ್ಕ್ನಿಂದಾಗಿ ನೋಡುಗರ ಕಣ್ಣಿಗೆ ಹಬ್ಬವಾಗುವುದರಲ್ಲಿ ಸಂದೇಹವಿಲ್ಲ. ಹಾಲಿವುಡ್, ಬಾಲಿವುಡ್ ಮಂದಿಯ ದೈವದ ಕಥೆಯೊಂದನ್ನು ನಮ್ಮ ಭಾಷೆಯಲ್ಲಿ ನೋಡಿದ ಅನುಭವ ಕೊಡಲಿದೆ. ಇಲ್ಲಿ ದೈವ, ಭಕ್ತಿಯ ಕಥೆಯ ಹೊರತಾಗಿಯೂ ಮಾಸ್ , ಆಕ್ಷನ್ ಸನ್ನಿವೇಶವೂ ಸಾಕಷ್ಟು ಉಂಟು. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಕಾಂತಾರದ ಕಥೆಯ ದೃಶ್ಯವೈಭವದ ಮೆರುಗು ಹೆಚ್ಚುವಂತೆ ಮಾಡಿದೆ. “ಬ್ರಹ್ಮಕಲಶ” ಹಾಡು ಸಹ ಅತ್ಯುನ್ನತ ದೃಶ್ಯದೊಡನೆ ಮೂಡಿ ಬಂದಿದೆ. ಆದರೆ ಈ ಹಿಂದಿನ “ಕಾಂತಾರ” ಸಿನಿಮಾದ “ಸಿಂಗಾರ ಸಿರಿಯೇ” ಗೀತೆಯಂತೆ ಯಾವ ಹಾಡುಗಳು ಮನಸ್ಸಿನಲ್ಲಿ ಉಳಿಯುವುದಿಲ್ಲ.
ಚಿತ್ರದ ಕೆಲವೊಂದು ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಿ ಇನ್ನಷ್ಟು ಟ್ರಿಮ್ ಮಾಡುವ ಸಾಧ್ಯತೆ ಇತ್ತು. ಎರಡು ಗಂಟೆ ನಲವತ್ತೆಂಟು ನಿಮಿಷದ ಚಿತ್ರದ ಆವಧಿ ಸ್ವಲ್ಪ ಹೆಚ್ಚಾಯಿತೇನೋ ಎನಿಸುತ್ತದೆ.. ಚಿತ್ರದಲ್ಲಿನ ವಿಪರೀತ ಎನ್ನಬಹುದಾದ ಯುದ್ಧದ ದೃಶ್ಯಗಳು ಮೂಲ ಕಥೆಯ ಎಳೆಯನ್ನು ಸಡಿಲಾಗಿಸಿದೆ.ಅಲ್ಲದೆ ಚಿತ್ರದ ಪ್ರಥಮಾರ್ಧ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಿದರೆ ದ್ವಿತೀಯಾರ್ಧ ಕಥೆ ವೇಗವಾಗಿ ಹಲವು ಟ್ವಿಸ್ಟ್ ಗಳೊಂದಿಗೆ ಸಾಗುತ್ತದೆ. ಆದರೆ ಇಲ್ಲಿಯೂ ಹಲವೆಡೆಗಳಲ್ಲಿ ಬೇರೆಲ್ಲದಕ್ಕಿಂತ ಹೆಚ್ಚಾಗಿ ಯುದ್ದವೇ ಪ್ರಧಾನವಾಗಿದೆ. ಕ್ಲೈಮ್ಯಾಕ್ಸ್ ನಲ್ಲಿ ಈ ಹಿಂದಿನ “ಕಾಂತಾರ” ಚಿತ್ರದಲ್ಲಿರುವಂತೆ ದೈವ ನರ್ತನದ ದೃಶ್ಯ ಮತ್ತೆ ಪುನರಾವರ್ತನೆಯಾಗಿದೆ. ಇದರೊಡನೆ ಚಿತ್ರದ ಕಡೆಯಲ್ಲಿ ಅಧ್ಯಾಯ 2 ಬರುವ ಮುನ್ಸೂಚನೆ ಸಹ ಇದೆ. ಒಟ್ಟಾರೆ ಕೆಲವೊಂದು ಲೋಪ ದೋಷದ ಹೊರತಾಗಿಯೂ ನಿಜಕ್ಕೂ ಇದು ಒಳ್ಳೆಯ ಪ್ರಯತ್ನ. ಒಮ್ಮೆ ಪ್ರೇಕ್ಷಕ ಥಿಯೇಟರ್ ಗೆ ಹೋದರೆ ಕೊಟ್ಟ ದುಡ್ಡಿಗೆ ಯಾವುದೇ ಮೋಸವಾಗುವುದಿಲ್ಲ ಎಂದು ಖಚಿತವಾಗಿ ಹೇಳಬಹುದು.