– ರಾಘವೇಂದ್ರ ಅಡಿಗ ಎಚ್ಚೆನ್.
ಖ್ಯಾತ ಹಿರಿಯ ಪತ್ರಕರ್ತರು,ಲೇಖಕರು, ರಾಜಕೀಯ ಅಂಕಣಕಾರರು, ಜೀವನ ಚರಿತ್ರೆಕಾರರು ಆದ ಪದ್ಮ ಭೂಷಣ ಟಿ.ಜೆ.ಎಸ್ ಜಾರ್ಜ್ (ಥೈಲ್ ಜಾಕೋಬ್ ಸೋನಿ ಜಾರ್ಜ್) ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಇಂದು ನಿಧನರಾದ ಜಾರ್ಜ್ ಅವರು,ಪತ್ನಿ, ಪುತ್ರಿ, ಪುತ್ರ, ಮತ್ತು ಬಂಧುಬಳಗ ವನ್ನು ಅವರು ಅಗಲಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.
ಕೇರಳದ ಥoಪ ಮೋನ್ ನಲ್ಲಿ ಮೇ 7,1928 ರಲ್ಲಿ ಜನಿಸಿದ ಜಾರ್ಜ್ ಅವರ ತಂದೆ ಥೈಲ್ ಥಾಮಸ್ ಜಾಕೋಬ್, ತಾಯಿ ಚಾಚಿಯಮ್ಮ ಜಾಕೋಬ್. ಇವರ ತಂದೆ ಕೇರಳದಲ್ಲಿ ಮ್ಯಾಜಿಸ್ಟ್ರೇಟ್ ಆಗಿದ್ದರು. ತಾಯಿ ಗೃಹಿಣಿ.
ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ
ಆನರ್ಸ್ ಪದವಿ ಪಡೆದ ನಂತರ,1950 ರಲ್ಲಿ ಮುಂಬೈನ ದಿ
ಫ್ರಿ ಪ್ರೆಸ್ ಜರ್ನಲ್ ನಲ್ಲಿ ವೃತ್ತಿ ಜೀವನ ನಡೆಸಿದ ಇವರು, ಮುಂದೆ ಇಂಟರ್ ನ್ಯಾಶನಲ್ ಪ್ರೆಸ್ ಇನ್ಸ್ಟಿಟಿಟ್ಯೂಟ್ ,ದಿ ಸರ್ಚ್ ಲೈಟ್ ಮತ್ತು ಫಾರ್ಚೂನ್ ಮತ್ತು ಈಸ್ಟರ್ನ್ ಏಕನಾಮಿಕ್ ರಿವ್ಯೂ ಮೂಲಕ ಎಷ್ಯಾ ವೀಕ್ ನ ಸ್ಥಾಪಕ
ಸಂಪಾದಕರಾದರು.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕೀಯ ಸಲಹೆಗಾರರಾಗಿದ್ದ ಜಾರ್ಜ್ ಅವರು ನಿರ್ಭೀತ ಪತ್ರಕರ್ತರು. ಭಾರತದ ಪ್ರಸಿದ್ಧ ಅಂಕಣಕಾರರಾಗಿದ್ದ
ಇವರು ಸಾಮಾಜಿಕ ಅನ್ಯಾಯ,ಭ್ರಷ್ಟಾಚಾರ,ಅಸಹಿಷ್ಣುತೆ
ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುವ ಪ್ರವೃತ್ತಿಗಳ ವಿರುದ್ಧ ತಮ್ಮ ಹೋರಾಟವನ್ನು ಇಂಡಿಯನ್ ಎಕ್ಸ್ ಪ್ರೆಸ್ ನ ತಮ್ಮ ಸಾಪ್ತಾಹಿಕ “ಪಾಯಿಂಟ್ ಆಫ್ ವ್ಯೂ” ಅಂಕಣಗಳ ಮೂಲಕ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಮುಂದುವರೆಸಿದರು.
ಜಾರ್ಜ್ ಅವರು ಲೇಖಕರಾಗಿ ,ಅನುವಾದಕರಾಗಿ, ಜೀವನ
ಚರಿತ್ರೆಕಾರರಾಗಿ ಹಲವಾರು ಪ್ರಮುಖ ಪುಸ್ತಕಗಳ
ಸರಣಿಯೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ
ಗಳಿಸಿದ್ದರು. ಕೃಷ್ಣ ಮೆನನ್, ಲೀ ಕುವಾನ್ ಯೂ, ದಿ ಲೈಫ್ ಅಂಡ್ ಟೈಮ್ಸ್ ಆಫ್ ನರ್ಗೀಸ್ , ದಿ ಎನ್ಕ್ವೇರ್ ಡಿಕ್ಷನರಿ ಬಿಹಾರದಲ್ಲಿ ದಂಗೆ ,ಮೊಮೆಂಟ್ಸ್, ಜಯಾ – ಎನ್ ಇನ್ಕ್ರೆಡಿಬಲ್ ಸ್ಟೋರಿ, ಇಂಡಿಯಾ ಅಟ್ 50, ಎಂ.ಎಸ್. ಏ ಲೈಫ್ ಇನ್ ಮ್ಯೂಸಿಕ್, ದಿ ಗೋಯೆಂಕ ಲೆಟರ್ಸ್, ಘೋಷ ಯಾತ್ರಾ, ಭಾರತ 1000 ಟು 2000, ಸಂಪಾದನೆ: ಪತ್ರಕರ್ತರಿಗೆ ಒಂದು ಕೈಪಿಡಿ, ಭಾರತದಲ್ಲಿ ಪ್ರಾಂತೀಯ ಮುದ್ರಣಾಲಯ ,ಆಸ್ಕ್ಯೂ, ನಾಟೋಟಿಕ್ಕಪಳಿಲ್ ನವಮಾಸo,ಇವರ ಜನಪ್ರಿಯ ಕೃತಿಗಳು.
ಇವರ ಸಾಧನೆಗೆ ಪದ್ಮಭೂಷಣ, ಕನ್ನಡ ರಾಜ್ಯೋತ್ಸವ,
ಪತ್ರಿಕಾ ಆಕಾಡೆಮಿ, ವಕ್ಕಮ್ ಮೌಲವಿ ಸ್ಮಾರಕ ಪ್ರಶಸ್ತಿ,
ಕಮಲ ಸುರೈಯ ಪ್ರಶಸ್ತಿ ,ಕೇಸರಿ ಮಾಧ್ಯಮ ಪ್ರಶಸ್ತಿ, ಬಷೀರ್ ಪುರಸ್ಕಾರo, ಮಹಮದ್ ಕೋಯ ಪ್ರಶಸ್ತಿಗಳು
ಲಭಿಸಿವೆ.
ಬೆಂಗಳೂರಿನಲ್ಲಿ ನೆಲೆಸಿರುವ ಜಾರ್ಜ್ ಅವರಿಗೆ ಪತ್ನಿ ಅಮ್ಮು, ಮಗಳು ಶೆಬಾ ಥೈಲ್, ಮಗ ಜೀತ್ ಥೈಲ್ ಇದ್ದು ಇವರ ಸೋದರಳಿಯ ರಾಜ್ ಮಥಾಯ್ ಅಮೇರಿಕಾ ದೂರದರ್ಶನದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸು
ತ್ತಿದ್ದಾರೆ.
ಸಂಪಾದಕರಾಗಿ ,ವೃತ್ತಿಪರ ಲೇಖಕರಾಗಿ, ಗಂಭೀರ ರಾಜಕೀಯ ಅಂಕಣಕಾರರಾಗಿ, ಪತ್ರಿಕಾರಂಗದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ,ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೃತಿಗಳನ್ನು ನೀಡಿರುವ,ತುಂಬು ಜೀವನ ನಡೆಸಿದ ಟಿ. ಜೆ.ಎಸ್ ಜಾರ್ಜ್ ಅವರು , ಭಾರತೀಯ ಪತ್ರಿಕಾ ರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸುವ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ.
ಹಿರಿಯ ಪತ್ರಕರ್ತರಿಗೆ ಅಂತಿಮ ನಮನಗಳು.