ಸ್ವಾದಿಷ್ಟ ಟೊಮೇಟೊ ಭುಜಿಯಾ
ಸಾಮಗ್ರಿ : 3-4 ಮಧ್ಯಮ ಗಾತ್ರದ ಟೊಮೇಟೊ, 1 ಕಪ್ ಕಡಲೆಹಿಟ್ಟು, 3-4 ಚಮಚ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪುದೀನಾ ಚಟ್ನಿ, ಕಾಳುಮೆಣಸು, ಓಮ, ಹುರಿದು ಪುಡಿ ಮಾಡಿದ ಜೀರಿಗೆ, ಚಾಟ್ ಮಸಾಲ, ಇಂಗು, ಕರಿಯಲು ಎಣ್ಣೆ.
ವಿಧಾನ : ಟೊಮೇಟೊ ಶುಚಿಗೊಳಿಸಿ, ಒರೆಸಿಕೊಂಡು 4-4 ಭಾಗ ಮಾಡಿ. ಇದಕ್ಕೆ ಪುದೀನಾ ಚಟ್ನಿ ಸವರಿ ಒಂದು ಕಡೆ ಇರಿಸಿ. ಒಂದು ಬೇಸನ್ನಿಗೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಖಾರ, ಮೆಣಸು, (ಚಾಟ್ ಮಸಾಲ ಬಿಟ್ಟು) ಉಳಿದೆಲ್ಲ ಮಸಾಲೆ ಸೇರಿಸಿ, ನೀರು ಹಾಕಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. 10 ನಿಮಿಷ ಬಿಟ್ಟು, ಇದರಲ್ಲಿ ಟೊಮೇಟೊ ತುಂಡುಗಳನ್ನು ಅದ್ದಿಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ. ಸರ್ವ್ ಮಾಡುವ ಮುನ್ನ, ಚಿತ್ರದಲ್ಲಿರುವಂತೆ ಇವನ್ನು ಕತ್ತರಿಸಿ, ಚಾಟ್ ಮಸಾಲ ಉದುರಿಸಿ, ಟೊಮೇಟೊ ಸಾಸ್ ಜೊತೆ, ಬಿಸಿಯಾಗಿ ಸವಿಯಲು ಕೊಡಿ. ಬಿಸಿ ಬಿಸಿ ಕಾಫಿ/ಟೀ ಜೊತೆಗಿರಲಿ.

ಬ್ರೆಡ್ ಚಾಪ್ಸ್
ಸಾಮಗ್ರಿ : 6-8 ಬ್ರೆಡ್ ಸ್ಲೈಸ್, ಬೇಯಿಸಿ ಮಸೆದ 2 ಆಲೂ, ಅರ್ಧ ಕಪ್ ಕಡಲೆಹಿಟ್ಟು, ಸಣ್ಣಗೆ ಹೆಚ್ಚಿದ 4-5 ಹಸಿಮೆಣಸು, 1 ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಚಾಟ್ ಮಸಾಲ, ಗರಂಮಸಾಲ, ಹುರಿದು ಪುಡಿ ಮಾಡಿದ ಜೀರಿಗೆ, ಪುದೀನಾ ಚಟ್ನಿ, ಹುಳಿಸಿಹಿ ಚಟ್ನಿ, ಹೆಚ್ಚಿದ 2 ಈರುಳ್ಳಿ, 2 ಟೊಮೇಟೊ, ತುಸು ಕೊ.ಸೊಪ್ಪು, ಅರ್ಧ ಸೌಟು ಎಣ್ಣೆ.
ವಿಧಾನ : ಬ್ರೆಡ್ ಸ್ಲೈಸ್ ನ್ನು ನೀರಲ್ಲಿ ಅದ್ದಿ ಹಿಂಡಿಕೊಂಡು, ಒಂದು ಬೇಸನ್ನಿಗೆ ಹಾಕಿಡಿ. ಇದಕ್ಕೆ ಮಸೆದ ಆಲೂ, ಕಡಲೆಹಿಟ್ಟು, ಹಸಿಮೆಣಸು, ಶುಂಠಿ, ಉಪ್ಪು, ಮೆಣಸು, ಉಪ್ಪು, ಖಾರ, ಚಾಟ್ ಮಸಾಲ, ಜೀರಿಗೆ ಎಲ್ಲಾ ಸೇರಿಸಿ ಮಿಶ್ರಣ ಕಲಸಿಡಿ. ಇದರಿಂದ ಗುಂಡಗೆ ನಿಪ್ಪಟ್ಟಿನ ಆಕಾರ ಮಾಡಿಕೊಂಡು, ಬಿಸಿ ಅಳ್ಳಕ ತವಾ ಮೇಲೆ ಹಾಕಿ ಶ್ಯಾಲೋ ಫ್ರೈ ಮಾಡಿ. ಎರಡೂ ಬದಿ ಹೊಂಬಣ್ಣ ಬಂದಾಗ ಕೆಳಗಿಳಿಸಿ. ಬಿಸಿ ಇರುವಾಗಲೇ ಇದರ ಮೇಲೆ (ಚಿತ್ರದಲ್ಲಿರುವಂತೆ) ಹೆಚ್ಚಿದ ಎಲ್ಲಾ ಪದಾರ್ಥ ಹಾಕಿ ಸವಿಯಲು ಕೊಡಿ.

ಸೋರೆ ಪಾಲಕ್ ಪಕೋಡ
ಸಾಮಗ್ರಿ : 1 ಸಣ್ಣ ಸೋರೆಕಾಯಿ, 1 ಕಂತೆ ಪಾಲಕ್ ಸೊಪ್ಪು, 2-3 ಹಸಿಮೆಣಸು, 1 ಕಪ್ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಜೀರಿಗೆ, ಸೋಂಪು, ಅಮ್ಚೂರ್ ಪುಡಿ, ಇಂಗು, ದಾಳಿಂಬೆ ಪುಡಿ, ಕರಿಯಲು ಎಣ್ಣೆ.
ವಿಧಾನ : ಸೋರೆಯ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು, ಹಸಿ ಮೆಣಸು, ಶುಂಠಿ, ಕೊ.ಸೊಪ್ಪು ಹಾಗೂ ಇನ್ನಿತರ ಎಲ್ಲಾ ಸಾಮಗ್ರಿ ಸೇರಿಸಿ ಪಕೋಡ ಮಿಶ್ರಣದಂತೆ ಕಲಸಿಡಿ. ಇದರಿಂದ ನಿಂಬೆ ಗಾತ್ರದ ಉಂಡೆಗಳಾಗಿಸಿ, ತುಸು ಚಪ್ಪಟೆ ಮಾಡಿ, ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಬರುವಂತೆ ಕರಿಯಿರಿ. ಚಿತ್ರದಲ್ಲಿರುವಂತೆ ಸಲಾಡ್ ನಿಂದ ಅಲಂಕರಿಸಿ, ಸಾಸ್ ಜೊತೆ ಸವಿಯಲು ಕೊಡಿ.





