ಸ್ಟೀಮ್ಡ್ ಆಲೂ ಕೋಫ್ತಾ
ಸಾಮಗ್ರಿ : 1 ಕಪ್ ಕಡಲೆಹಿಟ್ಟು, 3-4 ಬೆಂದ ಆಲೂ, ಅರ್ಧ ಕಪ್ ತುರಿದ ಪನೀರ್, ಸಣ್ಣಗೆ ಹೆಚ್ಚಿದ ಹಸಿರು, ಹಳದಿ, ಕೆಂಪು, ಕ್ಯಾಪ್ಸಿಕಂ (ಒಟ್ಟಾರೆ 1 ಕಪ್), 2 ಈರುಳ್ಳಿ, ತುಸು ಹಸಿಶುಂಠಿ, ಕೊ.ಸೊಪ್ಪು, ಕರಿಬೇವು, ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ.
ವಿಧಾನ : ಬೆಂದ ಆಲೂ ಸಿಪ್ಪೆ ಸುಲಿದು ಅದನ್ನು ಮಸೆದಿಡಿ. ಇದಕ್ಕೆ ಪನೀರ್ ಮತ್ತಿತರ ಎಲ್ಲಾ ಹೆಚ್ಚಿದ ಸಾಮಗ್ರಿ ಸೇರಿಸಿ. ನಂತರ ಉಪ್ಪು, ಖಾರ, ಉಳಿದೆಲ್ಲ ಸೇರಿಸಿ ಮಿಶ್ರಣ ಮಾಡಿ, ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ. ಒಂದು ಬಟ್ಟಲಿಗೆ ಕಡಲೆಹಿಟ್ಟು, ಉಪ್ಪು, ಖಾರ, ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ತುಸು ಗಟ್ಟಿಯಾಗಿ ಕಲಸಿಡಿ. ಇದರಲ್ಲಿ ಆಲೂ ಉಂಡೆ ಅದ್ದಿಕೊಂಡು, ಇಡ್ಲಿ ಕುಕ್ಕರ್ ನಲ್ಲಿ ಹದನಾಗಿ ಹಬೆಯಲ್ಲಿ ಬೇಯಿಸಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಸಾಸುವೆ, ಇಂಗು, ಕರಿಬೇವಿನ ಒಗ್ಗರಣೆ ಕೊಡಿ. ಈ ಸ್ಟೀಮ್ಡ್ ಕೋಫ್ತಾಗಳನ್ನು ಒಮ್ಮೆ ಅದರಲ್ಲಿ ಬಾಡಿಸಿ, ಚಿತ್ರದಲ್ಲಿರುವಂತೆ ಸಾಸ್ ನಿಂದ ಅಲಂಕರಿಸಿ ತುಪ್ಪು ಹಾಕಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ದಾಲ್ ಮಸಾಲಾ ಪೂರಿ
ಸಾಮಗ್ರಿ : ಅರ್ಧರ್ಧ ಕಪ್ ಹೆಸರು ಬೇಳೆ, ಸಣ್ಣ ರವೆ, 2 ಕಪ್ ಗೋಧಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಇಂಗು, ಧನಿಯಾಪುಡಿ, ಅರ್ಧ ಸೌಟು ತುಪ್ಪ, ಕರಿಯಲು ಎಣ್ಣೆ.
ವಿಧಾನ : ಹೆಸರುಬೇಳೆಯನ್ನು 1-2 ಗಂಟೆ ಕಾಲ ನೆನೆಸಿ, ನಂತರ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಮೇಲೆ ತಿಳಿಸಿದ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ಪೂರಿ ಹಿಟ್ಟಿನ ತರಹ ಮೃದುವಾದ ಹಿಟ್ಟು ಕಲಸಿಕೊಳ್ಳಿ. ನಂತರ ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು 2 ಗಂಟೆ ಕಾಲ ನೆನೆಯಲು ಬಿಡಿ. ನಂತರ ಸಣ್ಣ ಉಂಡೆಗಳಾಗಿ ಲಟ್ಟಿಸಿ, ಚೂಪಾದ ತುದಿಯುಳ್ಳ ಸ್ಟೀಲ್ ಮುಚ್ಚಳದಿಂದ ಪುಟ್ಟ ಪೂರಿಗಳಾಗಿ ಕತ್ತರಿಸಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಬರುವಂತೆ ಪೂರಿ ಕರಿದು ತೆಗೆಯಿರಿ. ಇದನ್ನು ಟೊಮೇಟೊ ಗೊಜ್ಜು ಅಥವಾ ಆಲೂಪಲ್ಯ ಜೊತೆ ಸವಿಯಲು ಕೊಡಿ.

ಅಕ್ಕಿಹಿಟ್ಟಿನ ಶಂಕರಪೋಳಿ
ಸಾಮಗ್ರಿ : 1 ಕಪ್ ಅಕ್ಕಿಹಿಟ್ಟು, 1 ಕಪ್ ಬೆಲ್ಲದ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾರೆ ಅರ್ಧ ಕಪ್), 2 ಚಮಚ ಎಳ್ಳು, 1 ಗಿಟುಕು ಕೊಬ್ಬರಿ ತುರಿ, ಕರಿಯಲು ಎಣ್ಣೆ, 4 ಚಮಚ ತುಪ್ಪ.
ವಿಧಾನ : ಮೊದಲು ಬೆಲ್ಲವನ್ನು ತುಸು ಬೆಚ್ಚಗಿನ ನೀರಿನಲ್ಲಿ ಕರಗಿಸಿ, ಶೋಧಿಸಿ. ಈ ಬೆಲ್ಲದ ನೀರಿಗೆ ಮೇಲೆ ಹೇಳಲಾದ ಉಳಿದೆಲ್ಲ ಸಾಮಗ್ರಿ ಸೇರಿಸಿ ಮಿಶ್ರಣ ಕಲಸಿಡಿ. ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. 1-2 ಗಂಟೆ ಬಿಟ್ಟು, ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ ಪುಟ್ಟ ಪುಟ್ಟ ನಿಪ್ಪಟ್ಟು ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಮಕ್ಕಳಿಗೆ ಬೇಕಾದಾಗ ಸವಿಯಲು ಕೊಡಿ.





