ಖರ್ಜೂರದ ಮೋದಕ
ಸಾಮಗ್ರಿ : 1-1 ಕಪ್ ಮೈದಾ ಹಾಲು, ಅರ್ಧರ್ಧ ಕಪ್‌ಸಣ್ಣರವೆ, ತುಪ್ಪ, ಹಾಲಲ್ಲಿ ನೆನೆಸಿ ಪೇಸ್ಟ್ ಮಾಡಿದ ಹಸಿ ಖರ್ಜೂರ, ರುಚಿಗೆ ತಕ್ಕಷ್ಟು ಸಕ್ಕರೆ, ತುಪ್ಪದಲ್ಲಿ ಹುರಿದ ಡ್ರೈಫ್ರೂಟ್ಸ್, ಖೋವಾ, ಏಲಕ್ಕಿ ಪುಡಿ, ಹಾಲಲ್ಲಿ ನೆನೆಸಿದ ಕೇಸರಿ, ಕರಿಯಲು ರೀಫೈಂಡ್ ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ ಮೈದಾ, ಸಕ್ಕರೆ, ತುಸು ತುಸುವೇ ಹಾಲು ಚಿಮುಕಿಸುತ್ತಾ ಮೃದು ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಹದನಾಗಿ ನಾದಿಕೊಳ್ಳಿ, ನೆನೆಯಲು ಬಿಡಿ. ಒಂದು ಸಣ್ಣ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಇದಕ್ಕೆ ಮಸೆದ ಖೋವಾ, ಖರ್ಜೂರದ ಪೇಸ್ಟ್, ಸಕ್ಕರೆ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದಕ್ಕೆ ಏಲಕ್ಕಿ, ದ್ರಾಕ್ಷಿ, ಗೋಡಂಬಿ ಚೂರು, ಕೇಸರಿ ಬೆರೆಸಿಕೊಳ್ಳಿ. ಇದನ್ನು 2 ನಿಮಿಷ ಕೆದಕಿ ಕೆಳಗಿಳಿಸಿ ಆರಲು ಬಿಡಿ, ಇದೀಗ ಹೂರಣ ರೆಡಿ! ನೆನೆದ ಹಿಟ್ಟಿನಿಂದ ಸಣ್ಣ ಉಂಡೆಗಳಾಗಿಸಿ, ಪುಟ್ಟ ಪೂರಿ ಲಟ್ಟಿಸಿ. ಇದರ ಮಧ್ಯೆ 1-2 ಚಮಚ ಹೂರಣವಿರಿಸಿ, ಮೋದಕಕ್ಕೆ ಮಾಡುವಂತೆ ಎಲ್ಲಾ ಕಡೆಯಿಂದಲೂ ಕವರ್ ಮಾಡಿ, ಚಿತ್ರದಲ್ಲಿರುವಂತೆ ಡಿಸೈನ್ ಮಾಡಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಅರ್ಧ ಕಪ್ ನೀರನ್ನು ಬಿಸಿ ಮಾಡಿ, ಅದಕ್ಕೆ ಸಕ್ಕರೆ ಹಾಕಿ ಒಂದೆಳೆ ಗಟ್ಟಿ ಪಾಕ ಸಿದ್ಧಪಡಿಸಿ. ಅದನ್ನು ಇದರ ಮೇಲೆ ಲೈಟಾಗಿ ಸುರಿದು, ಪಾಕ ಮೆತ್ತಿಕೊಳ್ಳುವಂತೆ ಮಾಡಿ. ನಂತರ ಚಿತ್ರದಲ್ಲಿರುವಂತೆ ಬೆಳ್ಳಿ ರೇಕಿನಿಂದ ಅಲಂಕರಿಸಿ, ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ. ಹಬ್ಬಕ್ಕೆ 2 ದಿನ ಇರುವಾಗಲೇ ಇದನ್ನು ಸಿದ್ಧಪಡಿಸಿಕೊಳ್ಳಿ.

ಬಾಳೆಹಣ್ಣಿನ ಸಿಹಿಪಡ್ಡು
ಸಾಮಗ್ರಿ : 50 ಗ್ರಾಂ ಬೀಜ ಬೇರ್ಪಡಿಸಿದ ನೇರಳೆ ಹಣ್ಣಿನ ತಿರುಳು, 2-3 ಮಾಗಿದ ಬಾಳೆಹಣ್ಣು, 100 ಗ್ರಾಂ ಮೈದಾ, ಅಗತ್ಯವಿದ್ದಷ್ಟು ಹಾಲು, ಬೆಣ್ಣೆ, ಸಕ್ಕರೆ, ಬೇಕಿಂಗ್ ಪೌಡರ್, ಅಲಂಕರಿಸಲು ಒಂದಿಷ್ಟು ಸೀಡ್ ಲೆಸ್ ದಾಳಿಂಬೆ ಹರಳು.
ವಿಧಾನ : ಒಂದು ಸಣ್ಣ ಬಟ್ಟಲಲ್ಲಿ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿಟ್ಟುಕೊಳ್ಳಿ. ಮತ್ತೊಂದು ತುಸು ದೊಡ್ಡ ಬಟ್ಟಲಿಗೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಇದಕ್ಕೆ ಬಾಳೆಹಣ್ಣು ಹಾಕಿ ಚೆನ್ನಾಗಿ ಗೊಟಾಯಿಸಿ. ಇದನ್ನು 10 ನಿಮಿಷ ನೆನೆಯಲು ಬಿಡಿ. ನಂತರ ಪಡ್ಡು ಬಾಣಲೆ ಒಲೆ ಮೇಲಿರಿಸಿ, ಅದರ ಪ್ರತಿಯೊಂದು ಕುಳಿಗೂ ತುಸು ತುಪ್ಪ ಹಾಕಿ. ಅದರ ಮುಕ್ಕಾಲು ಭಾಗ ತುಂಬುವಷ್ಟು ಬಾಳೆ ಮಿಶ್ರಣ ಹಾಕಿಡಿ. ಇದಕ್ಕೆ ಮುಚ್ಚಳ ಮುಚ್ಚಿರಿಸಿ ಬೇಯಿಸಿ. ನಂತರ ಅದನ್ನು ತಿರುವಿಹಾಕಿ, ತುಸು ತುಪ್ಪ ಬಿಟ್ಟು, ಮತ್ತೊಂದು ಬದಿ ಬೇಯಿಸಿ. ಇವನ್ನು ತಟ್ಟೆಯಲ್ಲಿ ಜೋಡಿಸಿ, ಚಿತ್ರದಲ್ಲಿರುವಂತೆ ದಾಳಿಂಬೆಯಿಂದ ಅಲಂಕರಿಸಿ ಸವಿಯಲು ಕೊಡಿ.

ಜಾಮೂನಿನ ಆನ್ ಶಾರ್ಟ್ ಕ್ರಸ್ಟ್ ಬೋಟ್
ಸಾಮಗ್ರಿ : 100-100 ಗ್ರಾಂ ಬೆಣ್ಣೆ, ಐಸಿಂಗ್ ಶುಗರ್, ಮೈದಾ, ಫ್ರೆಶ್ ರಬಡೀ, 1 ಮೊಟ್ಟೆ, ಮಧ್ಯಮ ಗಾತ್ರದ 7-8 ಗುಲಾಬ್ ಜಾಮೂನು ಯಾ ರಸಗುಲ್ಲ, ತುಪ್ಪದಲ್ಲಿ ಹುರಿದ ಒಂದಿಷ್ಟು ಡ್ರೈಫ್ರೂಟ್ಸ್, 1 ಕಪ್ ಕೆನೆಭರಿತ ಕಾದಾರಿದ ಗಟ್ಟಿ ಹಾಲು, ಅರ್ಧ ಕಪ್ ಸಕ್ಕರೆ, ತುಸು ಏಲಕ್ಕಿ ಪುಡಿ.





