ಕುಟುಂಬದ ಕೇಂದ್ರಬಿಂದುವಾದ ಗೃಹಿಣಿ ಯಾವ ರೀತಿ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮನೆಯವರೊಂದಿಗೆ ತನ್ನನ್ನೂ ಸರ್ತೋಮುಖವಾಗಿ ಗಮನಿಸಿಕೊಳ್ಳಬೇಕು ಎಂದು ತಿಳಿಯೋಣವೇ.......?
`ಗೃಹಿಣಿ ಗೃಹ ಮುಚ್ಯತೆ' ಎಂಬ ಸಂಸ್ಕೃತ ನಾಣ್ಣುಡಿಯಂತೆ ಮನೆಗೆ ಗೃಹಿಣಿಯೇ ಭೂಷಣ. ಒಂದು ಮನೆ ಉತ್ತಮ ಗೃಹ ಎನಿಸಿಕೊಳ್ಳಬೇಕಾದರೆ ಆ ಮನೆಯಲ್ಲಿ ಶಾಂತಿ ನೆಮ್ಮದಿ ಪ್ರೀತಿ ಇರಬೇಕು. ಇದಕ್ಕೆ ಮಹಿಳೆಯ ಕೊಡುಗೆ ಹೆಚ್ಚಾಗಿರುತ್ತದೆ. ಒಂದು ಕುಟುಂಬದ ಆರೋಗ್ಯ ಕಾಪಾಡುವುದರಲ್ಲಿ ಮಹಿಳೆಯ ಪಾತ್ರ ಅಧಿಕವಾಗಿರುತ್ತದೆ. ಮನೆಯ ಎಲ್ಲಾ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆ, ತನ್ನನ್ನು ತಾನು ಮರೆತೇ ಬಿಟ್ಟಿರುತ್ತಾಳೆ. ಮಹಿಳೆಯರು ತಮ್ಮ ಕುಟುಂಬ ಕೆಲಸ ಹಾಗೂ ಮಕ್ಕಳ ಜವಾಬ್ದಾರಿಯನ್ನು ನಿರ್ವಹಿಸುತ್ತ ತಮ್ಮ ಆರೋಗ್ಯದ ಬಗ್ಗೆ, ಬೇಕು ಬೇಡಗಳ ಬಗ್ಗೆ ಗಮನ ಹರಿಸುವುದಿಲ್ಲ. ಮಹಿಳೆಯರು ನಿತ್ಯ ಸ್ವಲ್ಪ ಸಮಯವನ್ನು ತಮಗಾಗಿ ತಮ್ಮ ಆರೋಗ್ಯದ ಆರೈಕೆಗಾಗಿ ಮೀಸಲಿಟ್ಟರೆ, ಮನೆ ಜವಾಬ್ದಾರಿ ಹಾಗೂ ಕೆಲಸಗಳ ನಿರ್ವಹಣೆಯ ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲು ಸಾಧ್ಯವಾಗುತ್ತದೆ.
ಆಕಾಶದ ನೀಲಿಯಲ್ಲಿ ಚಂದ್ರ ತಾರೆ
ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ
ಎಂದು ಹಿರಿಯ ಕವಿ ಜಿ.ಎಸ್. ಶಿವರುದ್ರಪ್ಪ ತಮ್ಮ ಕವನದ ಮೂಲಕ ಮಹಿಳೆಯ ಶಕ್ತಿ ಸೂಕ್ಷ್ಮತೆಗಳನ್ನು ವಿವರಿಸಿದ್ದಾರೆ. ಮಹಿಳೆಯು ತನ್ನ ಜೀವನದ ಪ್ರತಿಯೊಂದು ಘಟ್ಟದಲ್ಲಿ ಮಗಳಾಗಿ, ಅಕ್ಕ, ತಂಗಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ ಹೀಗೆ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ.

ಕುಟುಂಬದ ಚುಕ್ಕಾಣಿ
ಈಕೆ ತನ್ನ ಸಂಸಾರದ ಸದಸ್ಯರಿಗೋಸ್ಕರ ವೈದ್ಯೆಯಂತೆ, ಶಿಕ್ಷಕಿಯಂತೆ, ಸಲಹೆಗಾರಳಂತೆ, ಸಹಾಯಕಳಂತೆ, ಕಾನೂನಿನ ಸಲಹೆಗಾರ್ತಿಯಂತೆ, ಸೇವಕಳಂತೆ ಹೀಗೆ ಬಹು ಕಾರ್ಯ ಪರಿಣತೆಯಾಗಿ ಒಬ್ಬಳೇ ಎಲ್ಲಾ ಕಾರ್ಯವನ್ನೂ ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾಳೆ. ತಾಳ್ಮೆ ಸಹನೆ ಸಂಬಂಧಗಳ ಮೌಲ್ಯಗಳನ್ನು ಹೆಚ್ಚಿಸುವ ಶಕ್ತಿ ಮಹಿಳೆಗೆ ಮಾತ್ರ ಇರುವುದು ಎಂದು ಹೇಳಿದರೆ ಅತಿಶಯೋಕ್ತಿ ಆಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಮಹಿಳೆಯು ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮನವಾಗಿ ಸಾಧನೆಗೈಯುತ್ತಿದ್ದಾಳೆ. ಮನೆಯ ಹೊರಗೂ ಒಳಗೂ ದುಡಿಯುವ ಮಹಿಳೆಗೆ ಸಹಜವಾಗಿ ಒತ್ತಡ ಆತಂಕ ಹೆಚ್ಚಾಗಿರುತ್ತದೆ. ಹಾಗಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕಾದುದು ಅಗತ್ಯ.
ಮಹಿಳೆಯು ತನ್ನ ಕುಟುಂಬದ ಎಲ್ಲಾ ಸದಸ್ಯರಿಗೂ ಅವರವರ ರುಚಿಗೆ ತಕ್ಕಂತೆ ಅಡುಗೆ ಮಾಡಿ ಬಡಿಸುತ್ತಾಳೆ. ಊಟದಲ್ಲಿ ಕೆಲವರಿಗೆ ಖಾರ, ಕೆಲವರಿಗೆ ಸಿಹಿ, ಮಕ್ಕಳಿಗೆ ಸಪ್ಪೆ ಹೀಗೆ ಎಲ್ಲರೂ ಇಷ್ಟಪಡುವಂತೆ ಅಡುಗೆಯನ್ನು ಮಾಡುತ್ತಾ ತನ್ನ ಇಷ್ಟವನ್ನೇ ಮರೆತಿರುತ್ತಾಳೆ. ಎಲ್ಲರಿಗೂ ಪೌಷ್ಟಿಕಾಂಶವುಳ್ಳ ಆಹಾರವನ್ನು ತಯಾರಿಸಿ ಕೊಟ್ಟು, ತಾನು ಮಾತ್ರ ಉಳಿದಿರುವ ಆಹಾರವನ್ನು ಸೇವಿಸಿ ಸುಮ್ಮನಾಗುತ್ತಾಳೆ. ಆಕೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ.
ಮಹಿಳೆಗೆ ಆರೋಗ್ಯದ ಅರಿವು
ಮಹಿಳೆಯರಿಗೆ ಆರೋಗ್ಯದ ಬಗ್ಗೆ ಅರಿವು ಇರುವುದು ಅವಶ್ಯಕವಾಗಿದೆ. ಬಹಳಷ್ಟು ಮಹಿಳೆಯರು ತಮ್ಮ ಕುಟುಂಬದ ಸದಸ್ಯರ ಆರೈಕೆಯನ್ನು ಮಾಡುತ್ತಾ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ.
ಸಾಮಾನ್ಯವಾಗಿ ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಕಾಲಿಟ್ಟ ಸಂದರ್ಭದಲ್ಲಿ ಹಾರ್ಮೋನ್ ಗಳ ವ್ಯತ್ಯಯದಿಂದಾಗಿ ಅವರ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಅವರು ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥವನ್ನು ಸೇವಿಸಿದರೆ ಈ ಬದಲಾವಣೆಯನ್ನು ಎದುರಿಸುವಲ್ಲಿ ಶಕ್ತರಾಗುತ್ತಾರೆ. ಅಪೌಷ್ಟಿಕತೆಯಿಂದಾಗಿ ಮಹಿಳೆಯರು ಕಡಿಮೆ ತೂಕದ ಸಮಸ್ಯೆ, ಅಧಿಕ ತೂಕದ ಸಮಸ್ಯೆ ಹಾಗೂ ಕಬ್ಬಿಣಾಂಶದ ಕೊರತೆಯಿಂದಾಗಿ ರಕ್ತಹೀನತೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಮಹಿಳೆಯರ ನಿಯಮಿತ ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ.





