ಸೈಬರ್ ವಂಚಕರು ಸಾಮಾನ್ಯರ ಜೊತೆಗೆ ಸೆಲೆಬ್ರೆಟಿಗಳಿಗೆ, ಅವರ ಮಕ್ಕಳಿಗೂ ಗಾಳ ಹಾಕುತ್ತಿದ್ದಾರೆ. ನಟ ಉಪೇಂದ್ರ, ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿ, ಆಪ್ತರಿಗೆ ಮೆಸೇಜ್ ಮಾಡಿ ಹಣ ಕೇಳಿದ್ದ ಘಟನೆಯೂ ನಡೆದಿತ್ತು. ಇದೀಗ ಗೇಮಿಂಗ್ ಹೆಸರಿನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪುತ್ರಿಯ ನಗ್ನ ಫೋಟೋ ಕೇಳಿದ್ದಾಗಿ ಸ್ವತಃ ಅಕ್ಷಯ್​ ಕುಮಾರ್​ ಹೇಳಿಕೊಂಡಿದ್ದಾರೆ.

13 ವರ್ಷದ ತಮ್ಮ ಮಗಳು ಎಂದಿನಂತೆ ಆನ್‌ಲೈನ್‌ನಲ್ಲಿ ಗೇಮ್ ಆಡುತ್ತಿದ್ದಳು. ಆಗ ದುಷ್ಕರ್ಮಿಯೊಬ್ಬ ನನ್ನ ಮಗಳ ನೂಡ್ (ನಗ್ನ) ಫೋಟೋ ಕಳುಹಿಸುವಂತೆ ಕೇಳಿದ್ದ ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ.

ಮುಂಬೈನಲ್ಲಿ ನಡೆದ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕೆಲವು ತಿಂಗಳ ಹಿಂದೆ ನನ್ನ ಮನೆಯಲ್ಲಿ ಒಂದು ಸಣ್ಣ ಘಟನೆ ನಡೆಯಿತು. ಅದನ್ನು ನಾನು ನಿಮ್ಮೆಲ್ಲರೆದುರು ಹೇಳಲು ಬಯಸುತ್ತೇನೆ. ಇಂದು ಆನ್‌ಲೈನ್‌ನಲ್ಲಿ ನೀವು ಯಾರೊಂದಿಗೆ ಬೇಕಾದರೂ ವಿಡಿಯೋ ಗೇಮ್ ಆಡಬಹುದು. ನೀವು ಅಪರಿಚಿತರ ಜೊತೆಗೆ ಆಟವಾಡುತ್ತಿರುವಾಗ ಕೆಲವೊಮ್ಮೆ ಅವರಿಂದ ಸಂದೇಶಗಳು ಬರಬಹುದು. ನನ್ನ ಮಗಳು ಅಡುವಾಗ ಅದೇ ರೀತಿ ಆಯಿತು.”

” ನನ್ನ ಮಗಳು ವಿಡಿಯೋ ಗೇಮ್ ಆಡುತ್ತಿದ್ದಳು. ಆಗ ಆ ಕಡೆಯಿಂದ ಒಂದು ಸಂದೇಶ ಬಂತು. ನೀವು ಗಂಡೋ? ಹೆಣ್ಣೋ? ಎಂದು ಕೇಳಲಾಯಿತು. ಅದಕ್ಕೆ ನನ್ನ ಮಗಳು ಹೆಣ್ಣು ಎಂದು ಉತ್ತರಿಸಿದ್ದಾಳೆ. ತದನಂತರ ಅತ್ತ ಕಡೆಯಿಂದ ಮತ್ತೊಂದು ಸಂದೇಶ ಕಳುಹಿಸಿದ್ದಾನೆ. ನಿಮ್ಮ ನಗ್ನ ಚಿತ್ರಗಳನ್ನು ನನಗೆ ಕಳುಹಿಸಬಹುದೇ? ಎಂದು. ಈ ಸಂದೇಶ ನೋಡುತ್ತಿದ್ದಂತೆ ನನ್ನ ಮಗಳು ವಿಡಿಯೋ ಗೇಮ್ಸ್ ಎಲ್ಲವನ್ನು ಆಫ್ ಮಾಡಿಟ್ಟು ತನ್ನ ತಾಯಿ ಬಳಿ ನಡೆದ ಸಂಗತಿ ವಿವರಿಸಿದ್ದಾಳೆ’ ಎಂದು ನಟ ಅಕ್ಷಯ್ ಕುಮಾರ್ ವಿವರಿಸಿದ್ದಾರೆ.

“ಇಂತಹ ಸಂಗತಿಗಳು ಈ ರೀತಿ ಆರಂಭವಾಗುತ್ತವೆ. ಸೈಬರ್ ಕ್ರೈಂ ಸಹ ಬೇರೆ ಬೇರೆ ರೀತಿಯಲ್ಲಿ ಆರಂಭಗೊಳ್ಳುತ್ತಿವೆ. ಗೇಮಿಂಗ್ಸ್ ಮೂಲಕ ಅನೇಕ ಮಹಿಳೆಯರಿಗೆ ಇಂತಹ ವಂಚನೆ, ತೊಂದರೆ ಆಗಿರಬಹುದು. ಇದೆಲ್ಲವು ಸೈಬರ್ ಅಪರಾಧದ ಒಂದು ಭಾಗವೂ ಆಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಏಳನೇ, ಎಂಟನೇ, ಒಂಬತ್ತನೇ ಮತ್ತು ಹತ್ತನೇ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ವಾರಕ್ಕೆ ಒಂದು ತರಗತಿ ಸೈಬರ್ ಅಪರಾಧ, ಹಾಗೆಂದರೇನು? ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ?, ಸೈಬರ್ ಕ್ರೈಂ ಆದಾಗ ಏನು ಮಾಡಬೇಕು? ‘ ಎಂಬುದರ ಕುರಿತು ಹೇಳಿಕೊಡಬೇಕು.

“ಈ ಬಗ್ಗೆ ನಾನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಲ್ಲಿ ವಿನಂತಿಸುತ್ತೇನೆ. ತರಗತಿಗಳಲ್ಲಿ ಮಕ್ಕಳಿಗೆ ಅದರ ಬಗ್ಗೆ ವಿವರಿಸಬೇಕು. ಈ ಅಪರಾಧವು ಬೀದಿ ಅಪರಾಧಕ್ಕಿಂತ ದೊಡ್ಡದಾಗುತ್ತಿದೆ. ಈ ಬಗ್ಗೆ ಎಲ್ಲರಿಗೂ ಅರಿವಿರಬೇಕು. ಇಂತಹ ಅಪರಾಧಗಳನ್ನು ತಡೆಯಬೇಕು. ಮಕ್ಕಳ ಭವಿಷ್ಯ ಕಾಪಾಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ