ಕರ್ನಾಟಕ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಮಾಸಿಕ ಋತುಸ್ರಾವದ ರಜೆ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದ್ದು, ಈ ನೀತಿಯ ಅನ್ವಯ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನದ ವೇತನ ಸಹಿತ ರಜೆ ಸಿಗಲಿದೆ.

ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್ಲ ಉದ್ಯೋಗದಾತರು ಈ ನೀತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಗುರುವಾರ ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ, ಅನುಮೋದನೆ ನೀಡಲಾಗಿದೆ.

ಸಚಿವ ಸಂಪಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌ ಕೆ ಪಾಟೀಲ್‌, ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಎಂಎನ್‌ಸಿ, ಐಟಿ ಮತ್ತು ಇತರೆ ಖಾಸಗಿ ಸಂಸ್ಥೆ, ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ “ಋತುಚಕ್ರ ರಜೆ ನೀತಿ”ಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಮಾಹಿತಿ ನೀಡಿದರು.

ಲಿಂಗ ತಾರತಮ್ಯ ನಿವಾರಣೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ತಜ್ಞರ ವರದಿ ಆಧರಿಸಿ ಕಾರ್ಮಿಕ ಇಲಾಖೆ ಸಿದ್ಧಪಡಿಸಿದ್ದ ಈ ನೀತಿಯನ್ನು ಅನುಷ್ಠಾನ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಋತುಚಕ್ರ ಅವಧಿಯಲ್ಲಿ ಅಸಹನೀಯ ಭಾವನೆ ದೂರ ಮಾಡಿ ಮಹಿಳೆಯರ ಆರೋಗ್ಯಕ್ಕಾಗಿ ಈ ರಜಾ ಸೌಲಭ್ಯ ಜಾರಿ ಮಾಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಕಳೆದ ಜನವರಿ 10 ರಂದು ಸರ್ಕಾರಕ್ಕೆ ಮನವಿ ಮಾಡಿತ್ತು. ಸಂಪುಟದ ಈ ತೀರ್ಮಾನದಂತೆ ಒಂದು ವಾರದೊಳಗೆ ಅಧಿಕೃತ ಆದೇಶ ಹೊರಬೀಳಲಿದೆ.

ಕಾರ್ಮಿಕ ಇಲಾಖೆಯು 2025 ರ ಮಾಸಿಕ ಋತುಸ್ರಾವದ ರಜೆ ನೀತಿಗಾಗಿ ಆಡಳಿತಾತ್ಮಕ ಅನುಮೋದನೆ ಕೋರಿತ್ತು. ಈಗಾಗಲೇ ಕೇರಳವು ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ಗಳಲ್ಲಿನ ಮಹಿಳಾ ತರಬೇತಿದಾರರಿಗೆ ಎರಡು ದಿನಗಳ ಮಾಸಿಕ ಋತುಸ್ರಾವದ ರಜೆ ಪರಿಚಯಿಸಿದೆ. ಬಿಹಾರ ಮತ್ತು ಒಡಿಶಾದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ 12 ದಿನಗಳ ವಾರ್ಷಿಕ ಮಾಸಿಕ ಋತುಸ್ರಾವದ ರಜೆ ನೀತಿ ಜಾರಿಯಲ್ಲಿದೆ. ಆದರೆ, ಕರ್ನಾಟಕವು ಈ ನೀತಿಯನ್ನು ಸಮಗ್ರವಾಗಿ ಜಾರಿಗೆ ತರುವ ಮೊದಲ ರಾಜ್ಯವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದರು.

ಬೆಂಗಳೂರಿನಲ್ಲಿ ಐದು ಲಕ್ಷ ಕಾರ್ಮಿಕರನ್ನು ಹೊಂದಿರುವ ನೂರಾರು ಗಾರ್ಮೆಂಟ್ಸ್​ಗಳಿವೆ. ಇವರಲ್ಲಿ ಸುಮಾರು 90% ರಷ್ಟು ಮಹಿಳೆಯರೇ ಇದ್ದಾರೆ. ಅಲ್ಲದೆ, ಐಟಿ ಮತ್ತು ಇತರ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. “ಈ ನೀತಿ ಅನುಮೋದನೆಗೊಂಡರೆ, ದೊಡ್ಡ ಸಂಖ್ಯೆಯ ಮಹಿಳೆಯರಿಗೆ ಅನುಕೂಲವಾಗಲಿದೆ” ಎಂದು ಸಚಿವ ಸಂತೋಷ್‌ ಲಾಡ್ ಹೇಳಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ