ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಆಹಾರ ಕಿಟ್ ನೀಡಲು ನಿರ್ಧರಿಸಿದೆ. ಇನ್ನು ಮುಂದೆ ಕುಟುಂಬ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ಜತೆಗೆ ಕುಟುಂಬಕ್ಕೆ ಒಂದು ಆಹಾರ ಕಿಟ್ ದೊರೆಯಲಿದೆ.
ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಕುಟುಂಬದ ತಲಾ ಒಬ್ಬರಿಗೆ 10 ಕೆಜಿ ಅಕ್ಕಿ ಘೋಷಿಸಿತ್ತು. ಆರಂಭದಲ್ಲಿ ಅಕ್ಕಿ ದಾಸ್ತಾನು ಲಭ್ಯವಿಲ್ಲದೆ 10 ಕೆಜಿ ಪೈಕಿ 5 ಕೆಜಿ ಅಕ್ಕಿ ನೀಡಿ, ಉಳಿದ 5 ಕೆಜಿ ಅಕ್ಕಿಯ ಹಣವನ್ನು ಫಲಾನುಭವಿ ಕುಟುಂಬದ ಯಜಮಾನರ ಖಾತೆಗೆ ಜಮೆ ಮಾಡುತ್ತಿತ್ತು. ಆ ಬಳಿಕ ಅಕ್ಕಿ ದಾಸ್ತಾನು ಲಭ್ಯವಾದ ಹಿನ್ನೆಲೆ ತಲಾ 10 ಕೆಜಿ ನೀಡುತ್ತಿತ್ತು. ಗುರುವಾರ ನಡೆದ ಸಚಿವ ಸಂಪುಟದಲ್ಲಿ ಆಹಾರ ಕಿಟ್ ನೀಡಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಸಚಿವ ಎಚ್ ಕೆ ಪಾಟೀಲ್ ಮಾಹಿತಿ ನೀಡಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ ಪರ್ಯಾಯವಾಗಿ ಇಂದಿರಾ ಆಹಾರ ಕಿಟ್ ವಿತರಿಸಲು ಅನುಮೋದನೆ ನೀಡಿದೆ. 61.19 ಕೋಟಿ ರೂ. ವೆಚ್ಚದಲ್ಲಿ ಈ ಪೌಷ್ಠಿಕ ಆಹಾರದ ಕಿಟ್ ವಿತರಿಸಲಾಗುವುದು ಎಂದು ತಿಳಿಸಿದರು.
ಈ ಕಿಟ್‌ನಲ್ಲಿ 2ಕೆ.ಜಿ ತೊಗರಿಬೇಳೆ, ತಲಾ 1 ಕೆ.ಜಿ. ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಇರಲಿದೆ ಎಂದ ಅವರು, 5 ಕೆ.ಜಿ ಅಕ್ಕಿಯ ಜೊತೆಗೆ ಈ ಕಿಟ್ ನೀಡಲಾಗುವುದು. ಈ ಹಿಂದೆ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲು ನೀಡಲಾಗುತ್ತಿದ್ದ ಹಣದ ಬದಲಿಗೆ ಈ ಕಿಟ್ ನೀಡಲಾಗುತ್ತದೆ. ಅಕ್ಕಿ ದುರ್ಬಳಕೆ ತಡೆಯುವುದು ಕೂಡ ಇದರ ಉದ್ದೇಶ. ಇತರೆ ದಿನಸಿ ಸಾಮಗ್ರಿ ಒಳಗೊಂಡ ಕಿಟ್ ನೀಡುತ್ತಿರುವುದು ಫಲಾನುಭವಿಗಳಿಗೂ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ಕಿಟ್‌ನಲ್ಲಿ 2 ಕೆಜಿ ತೊಗರಿಬೇಳೆ ಬರಲಿದೆ. ಬೇಳೆ ಪ್ರತಿ ಕೆಜಿಗೆ 110 ರೂ. ದರ ಇದ್ದು, 2 ಕೆಜಿಗೆ 220 ರೂ., 1 ಕೆಜಿ ಅಡುಗೆ ಎಣ್ಣೆ ಕನಿಷ್ಠ 100 ರೂ., ಸಕ್ಕರೆ 40 ರೂ., ಉಪ್ಪು 10 ರೂ. ಸೇರಿ ಕಿಟ್‌ನ ಮೌಲ್ಯ 350 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.