ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹೆಚ್ಚಿನ ಸೇವೆ ಒದಗಿಸುವ ಉದ್ದೇಶದಿಂದ ಶೀಘ್ರದಲ್ಲೇ ಹೊಸ ಬ್ಲಾಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಹೆಚ್ಚುವರಿಯಾಗಿ 450 ಹಾಸಿಗೆ ಲಭ್ಯವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.
ವಿಕಾಸ ಸೌಧದಲ್ಲಿ ನಡೆದ ಕಿದ್ವಾಯಿ ಆಸ್ಪತ್ರೆಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹೊಸ ಯೋಜನೆ ಸಂಬಂಧ ನೀಲನಕ್ಷೆ ಸಲ್ಲಿಸುವಂತೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸ್ತುತ ಕಿದ್ವಾಯಿಯಲ್ಲಿ 720 ಹಾಸಿಗೆಗಳಿವೆ. ಆದರೆ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಹೊಸ ಬ್ಲಾಕ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ಖಾಸಗಿ ಕ್ಯಾನ್ಸರ್ ಆಸ್ಪತ್ರೆಗಳಿಗೆ ರೋಗಿಗಳು ಹೋಗುವುದು ತಪ್ಪುತ್ತದೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ನೀಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.“ಕಿದ್ವಾಯಿ ಆಸ್ಪತ್ರೆಗೆ ಬಹಳ ದೂರದೂರುಗಳಿಂದ ಆಗಮಿಸುತ್ತಾರೆ. ಆರ್ಥಿಕವಾಗಿ ಹಿಂದುಳಿದ ರೋಗಿಗಳು ಆರೈಕೆಗಾಗಿ ತಮ್ಮ ಭೂಮಿ ಅಥವಾ ಮನೆಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಎದುರಿಸುತ್ತಾರೆ. ಎಲ್ಲರಿಗೂ ಆರೋಗ್ಯ ನೀಡುವ ಉದ್ದೇಶದಿಂದ ಹೊಸ ಬ್ಲಾಕ್ ಕಟ್ಟಡ ನಿರ್ಮಾಣದ ವ್ಯವಸ್ಥೆ ಮಾಡುತ್ತಿದ್ದೇವೆ” ಎಂದು ಹೇಳಿದರು.
ರೋಗನಿರ್ಣಯಕ್ಕಾಗಿ ಬರುವವರಿಗೆ ಅಂತಿಮ ವರದಿಗಳು ದೊರೆಯುವವರೆಗೆ ಆಸ್ಪತ್ರೆ ವಾರ್ಡ್‌ಗಳಲ್ಲಿ ಒಳರೋಗಿಗಳಾಗಿ ಸೇರಿಸಿಕೊಳ್ಳಬೇಕೆಂದು ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂದಿನ ದಿನಗಳಲ್ಲಿ ತುಮಕೂರು, ಮೈಸೂರು, ಮಂಡ್ಯ ಹಾಗೂ ಕಾರವಾರದಲ್ಲಿ ಬಾಹ್ಯ ಕ್ಯಾನ್ಸರ್ ಕೇಂದ್ರಗಳನ್ನು (PCC ಗಳು) ಆರಂಭಿಸಲಾಗುತ್ತದೆ. ಪ್ರಸ್ತುತ 80 ಹಾಸಿಗೆಗಳನ್ನು ಹೊಂದಿರುವ ಕಲಬುರಗಿಯ ಪಿಸಿಸಿಯಲ್ಲಿ ಹೆಚ್ಚುವರಿಯಾಗಿ 210 ಹಾಸಿಗೆಗಳನ್ನು ಅಳವಡಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಾದ್ಯಂತ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಳ್ಳಾರಿ, ಶಿವಮೊಗ್ಗ, ರಾಯಚೂರು, ಬೀದರ್ ಮತ್ತು ಬೆಳಗಾವಿಯಲ್ಲಿ ಹೆಚ್ಚುವರಿ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ದಾದಿಯರಿಗೆ ಪರಿಹಾರ: 2021ರಿಂದಲೂ ಗುತ್ತಿಗೆ ಮತ್ತು ಹೊರಗುತ್ತಿಗೆ ದಾದಿಯರಿಗೆ ಪೂರ್ಣ ವೇತನ ನಿರಾಕರಿಸಲಾಗಿತ್ತು ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಕೈಗೊಂಡ ಸಚಿವರು, ಪೂರ್ಣ ವೇತನವನ್ನು ಬಿಡುಗಡೆ ಮಾಡುವಂತೆ ಸಂಸ್ಥೆಯ ನಿರ್ದೇಶಕ ಡಾ. ಟಿ. ನವೀನ್ ಅವರಿಗೆ ಸೂಚಿಸಿದರು.