– ರಾಘವೇಂದ್ರ ಅಡಿಗ ಎಚ್ಚೆನ್.
ಚಲನಚಿತ್ರರಂಗದ ಹಿಟ್ ಜೋಡಿಯಾದ ನಟ ಡಾರ್ಲಿಂಗ್ ಕೃಷ್ಣ ಮತ್ತು ನಿರ್ದೇಶಕ ಶಶಾಂಕ್ ಅವರ ಹೊಸ ಸಿನಿಮಾ ‘‘ಬ್ರ್ಯಾಟ್’ ಟ್ರೇಲರ್ ಅನ್ನು ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಯಶಸ್ಸಿನ ನಂತರ ಮತ್ತೆ ಒಂದಾಗಿರುವ ಈ ತಂಡ, ಈ ಸಾರಿ ಪ್ರೇಕ್ಷಕರಿಗೆ ಸಂಪೂರ್ಣವಾಗಿ ವಿಭಿನ್ನ ಅನುಭವ ನೀಡಲಿದೆ.
‘ನಾನೇ ನೀನಂತೆ…’ ಮತ್ತು ‘ಗಂಗಿ ಗಂಗಿ…’ ಹಾಡುಗಳ ಮೂಲಕ ಈಗಾಗಲೇ ಸಂಗೀತ ಪ್ರೇಮಿಗಳನ್ನು ಮಾರ್ಪಡಿಸಿರುವ ಬ್ರ್ಯಾಟ್ ಚಿತ್ರದ ಟ್ರೇಲರ್, ಚಿತ್ರದ ಕಥೆಯ ಬಗ್ಗೆ ಆಸಕ್ತಿದಾಯಕ ಸುಳಿವು ನೀಡಿದೆ. ಟ್ರೇಲರ್ ಪ್ರಕಾರ, ಡಾರ್ಲಿಂಗ್ ಕೃಷ್ಣ ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನೆಗೆಟಿವ್ ಷೇಡ್ ನಿರ್ಮಿಸುವ ಒಂದು ಸಂಕೀರ್ಣ ಪಾತ್ರವನ್ನು ಮಾಡಿದ್ದಾರೆ. ಬ್ರ್ಯಾಟ್ ಎಂಬ ಶೀರ್ಷಿಕೆಗೆ ತಕ್ಕಂತೆ, ಹೇಗಾದರೂ ಸರಿ, ದುಡ್ಡು ಮಾಡಬೇಕು ಎಂಬ ಏಕೈಕ ಗುರಿಯುಳ್ಳ ಒಬ್ಬ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಅದನ್ನ ಸಾಧಿಸಲು ಅವರು ಕ್ರಿಕೆಟ್ ಬೆಟ್ಟಿಂಗ್ ಮತ್ತು ಇತರೆ ಬೆಟ್ಟಿಂಗ್‌ಗಳ ಜಾಲಕ್ಕೆ ಕೈ ಹಾಕುತ್ತಾರೆ ಎನ್ನುವುದು ಚಿತ್ರದ ಟ್ರೇಲರ್‌ನಲ್ಲಿ ಕಾಣಸಿಗುತ್ತವೆ.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸುದೀಪ್ , ನಿರ್ದೇಶಕ ಶಶಾಂಕ್ ಅವರ ಧೈರ್ಯವನ್ನು ಮೆಚ್ಚಿ, ನಿರ್ದೇಶಕ ಶಶಾಂಕ್ ಅವರು ಈ ಸಿನಿಮಾ ಮಾಡಲು ತುಂಬ ಒದ್ದಾಡಿರುತ್ತಾರೆ. ಯಾಕೆಂದರೆ ಬ್ರ್ಯಾಟ್ ಪಾತ್ರಕ್ಕೆ ಬೇಕಾದ ಅಂಶ ಡಾರ್ಲಿಂಗ್ ಕೃಷ್ಣ ಅವರಲ್ಲಿ ಇಲ್ಲ. ಅವರನ್ನು ನಾವು ಕ್ಲೀನ್ ಕೃಷ್ಣಪ್ಪ ಅಂತ ಕರೆಯುತ್ತೇವೆ. ಸಿಗರೇಟ್ ಇತ್ಯಾದಿ ಅವರಿಗೆ ಸೂಟ್ ಆಗಲ್ಲ. ಆದರೆ, ದುಡ್ಡನ್ನು ಅವರು ನೋಡುವ ರೀತಿ ಹೊಂದಿಕೆ ಆಗುತ್ತದೆ ಎಂದು ಹಾಸ್ಯಮಯ ಶೈಲಿಯಲ್ಲಿ ವಿವರಿಸಿದ ಸುದೀಪ್, ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರನ್ನು ಕೂಡಾ ಪ್ರಶಂಸಿಸಿದರು.
ನಿರ್ಮಾಪಕ ಮಂಜುನಾಥ್ ಕಂದಕೂರ್ ಮಾತನಾಡಿ, ಪ್ಲ್ಯಾನ್ ಮಾಡಿದ ಪ್ರಕಾರವೇ ಸಿನಿಮಾ ಮಾಡಿದ ಶಶಾಂಕ್ ಅವರಿಗೆ ಧನ್ಯವಾದ ಹೇಳುತ್ತೇನೆ. ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಸುದೀಪ್ ಅವರು ಉತ್ತಮ ಕ್ರಿಕೆಟರ್. ನಮ್ಮ ಸಿನಿಮಾದಲ್ಲಿ ಕೂಡ ಕ್ರಿಕೆಟ್ ಕಥೆ ಇದೆ. ಅವರು ಬಂದು ನಮ್ಮ ಟ್ರೇಲರ್ ಬಿಡುಗಡೆ ಮಾಡಿದ್ದು ಖುಷಿ ಆಯಿತು ಎಂದು ಹೇಳಿದರು.
ನಿರ್ದೇಶಕ ಶಶಾಂಕ್ ಮಾತನಾಡಿ, ನಮ್ಮ ಪಾಲಿಗೆ ಸುದೀಪ್ ಸರ್ ಲಕ್ಕಿ. ಅವರೇ ‘ಕೌಸಲ್ಯ ಸುಪ್ರಜಾ ರಾಮಾ’ ಸಿನಿಮಾದ ಟ್ರೇಲರ್ ಲಾಂಚ್ ಮಾಡಿದ್ದರು. ಆ ಚಿತ್ರ ಹಿಟ್ ಆಯಿತು. ಈಗ ‘ಬ್ರ್ಯಾಟ್ ಸಿನಿಮಾ ಅದಕ್ಕಿಂತ 10 ಪಟ್ಟು ದೊಡ್ಡ ಹಿಟ್ ಆಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಚಿತ್ರವು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ಮೊದಲು ಕನ್ನಡದಲ್ಲಿ ಬಿಡುಗಡೆಯಾಗಿ ನಂತರ ಇತರ ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದೂ ತಿಳಿಸಿದರು.