ಸರಸ್ವತಿ*
ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡಿರುವ ಡೈಲಾಗ್ “Congratulations ಬ್ರದರ್”. ಈಗ ಈ ಜನಪ್ರಿಯ ಡೈಲಾಗ್ ಸಿನಿಮಾ ಶೀರ್ಷಿಕೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ.
ಕಲ್ಲೂರ್ ಸಿನಿಮಾಸ್, ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಸ್ಕ್ರೀನ್ ಫಸ್ಟ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ಅವರು ನಿರ್ಮಿಸಿರುವ, ಪ್ರತಾಪ್ ಗಂಧರ್ವ ನಿರ್ದೇಶನದ, ಹೆಸರಾಂತ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವ ಹಾಗೂ ಯುವ ನಟ ರಕ್ಷಿತ್ ನಾಗ್ ನಾಯಕನಾಗಿ ಹಾಗೂ ಸಂಜನ್ ದಾಸ್ ನಾಯಕಿಯರಾಗಿ ನಟಿಸಿರುವ “congratulations ಬ್ರದರ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಹರೀಶ್ ರೆಡ್ಡಿ ಅವರ ಸಹ ನಿರ್ಮಾಣವಿರುವ ಈ ಚಿತ್ರ ನವೆಂಬರ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಗೂ ಪೂರ್ವದಲ್ಲಿ ಆಯೋಜಿಸಲಾಗಿದ್ದ ಪ್ರೀ ರಿಲೀಸ್ ಇವೆಂಟ್ ಗೆ ಡಾರ್ಲಿಂಗ್ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಅಗಮಿಸಿದ್ದರು.

ನನಗೆ ಚಿತ್ರದ ಶೀರ್ಷಿಕೆಯೇ ಬಹಳ ಇಷ್ಟವಾಯಿತು. ಟ್ರೇಲರ್ ಇನ್ನೂ ಇಷ್ಟವಾಯಿತು. ಸಿನಿಮಾ ಕೂಡ ಚೆನ್ನಾಗಿರುವ ಭರವಸೆ ಇದೆ. ನಾನು ಥಿಯೇಟರ್ ನಲ್ಲೇ ಸಿನಿಮಾ ನೋಡುತ್ತೇನೆ. ಹೊಸತಂಡಕ್ಕೆ ಹಾಗೂ ಆ ಹೊಸತಂಡದ ಮೇಲೆ ಭರವಸೆಯಿಟ್ಟು ಬಂಡವಾಳ ಹೂಡಿರುವ ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ಡಾರ್ಲಿಂಗ್ ಕೃಷ್ಣ ಹಾರೈಸಿದರು.
ಸರಿಯಾಗಿ ಒಂದು ವರ್ಷದ ಹಿಂದೆ ಈ ಚಿತ್ರ ಆರಂಭವಾಗಿದ್ದು. ಈಗ ಇದೇ 21 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಾವು ಬರಹದಲ್ಲಿ ಆಸಕ್ತಿವುಳ್ಳ ಒಂದಿಷ್ಟು ಗೆಳೆಯರು ಸೇರಿ ಪೆನ್ ಎನ್ ಪೇಪರ್ ಸ್ಟುಡಿಯೋಸ್ ಎಂಬ ಸಂಸ್ಥೆ ಶುರು ಮಾಡಿದ್ದೆವು. ಸಾಕಷ್ಟು ಕಥೆಗಳನ್ನು ಬರೆದ್ದೆವು. ಅದರೆ ಅದನ್ನು ಸಿನಿಮಾ ರೂಪಕ್ಕೆ ತರಲು ನಿರ್ಮಾಪಕರು ಬೇಕು. ಆಗ ನಮಗೆ ಪ್ರಶಾಂತ್ ಕಲ್ಲೂರ್ ಅವರು ಸಿಕ್ಕರು. ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದರು. ಹರೀಶ್ ರೆಡ್ಡಿ ಅವರು ಜೊತೆಯಾದರು. ನಾನು ಈ ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ಕ್ರಿಯೇಟಿವ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸಿದ್ದೇನೆ. ಈ ಉತ್ಸಾಹಿ ತಂಡದ ಹೊಸಪ್ರಯತ್ನ ಗೆಲ್ಲುವ ಎಲ್ಲಾ ಲಕ್ಷಣಗಳು ಇದೆ. ಈಗಾಗಲೇ ಪ್ರೀಮಿಯರ್ ಶೋನಲ್ಲಿ ಸಿನಿಮಾ ನೋಡಿರುವವರು ಮೆಚ್ಚಿಕೊಂಡಿದ್ದಾರೆ. ನನ್ನ ಬಳಿ 45 ಕಥೆಗಳಿದೆ. ಈ ಚಿತ್ರ ಗೆದ್ದರೆ, ಅಷ್ಟು ಚಿತ್ರಗಳನ್ನು ಈ ತಂಡದ ಜೊತೆಗೆ ಮಾಡುತ್ತೇನೆ ಎಂದರು ಕ್ರಿಯೇಟಿವ್ ಹೆಡ್ ಹರಿ ಸಂತೋಷ್.
ನಾನು ಹೇಳುವುದು ಏನು ಇಲ್ಲ. ಒಂದೊಳ್ಳೆ ಚಿತ್ರ ಮಾಡಿ ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಪ್ರೋತ್ಸಾಹ ನಮ್ಮ ಚಿತ್ರದ ಮೇಲಿರಲಿ ಎಂದು ನಿರ್ದೇಶಕ ಪ್ರತಾಪ್ ಗಂಧರ್ವ ಹೇಳಿದರು.
ನಮ್ಮ ತಂಡ ಪ್ರಚಾರದ ಸಲುವಾಗಿ ಇಡೀ ಕರ್ನಾಟಕ ಸುತ್ತಿದ್ದೇವೆ. ಹೋದ ಕಡೆ ಎಲ್ಲಾ ನಮ್ಮ ಚಿತ್ರಕ್ಕೆ ಸಿಕ್ಕ ಪ್ರಶಂಸೆಗೆ ಮನ ತುಂಬಿ ಬಂದಿದೆ. ನವೆಂಬರ್ 21 ರಂದು ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡುವ ಮೂಲಕ ಪ್ರೋತ್ಸಾಹ ನೀಡಿ ಎಂದರು ನಾಯಕ ರಕ್ಷಿತ್ ನಾಗ್.
ನಾಯಕಿಯರಾದ ಸಂಜನದಾಸ್, ಅನೂಷ, ಕಲಾವಿದ ರಕ್ಷಿತ್ ಕಾಪು, ಸುದರ್ಶನ್, ಚೇತನ್ ದುರ್ಗ ಮುಂತಾದವರು ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಹ ನಿರ್ಮಾಪಕ ಹರೀಶ್ ರೆಡ್ಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.





