ಸರಸ್ವತಿ*
ಕವೀಶ್ ಶೆಟ್ಟಿ ಮತ್ತು ಮೇಘ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಓ.ಎಲ್.ಸಿ'(ಆಪರೇಷನ್ ಲಂಡನ್ ಕೆಫೆ) ಚಿತ್ರ ನವೆಂಬರ್ 28ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಪೂರ್ವದಲ್ಲಿ ಆಯೋಜಿಸಲಾಗಿದ್ದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಹಿರಿಯ ನಿರ್ದೇಶಕ ಶಶಾಂಕ್ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ “ವೆಲ್ಕಮ್ ಟು ಜಂಗಲ್” ಹಾಡು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಮೊದಲು ಮಾತನಾಡಿದ ನಿರ್ದೇಶಕ ಸಡಗರ ರಾಘವೇಂದ್ರ, ನಾನು ಶಶಾಂಕ್ ಅವರ ಜೊತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. “ಓ.ಎಲ್.ಸಿ” ನನ್ನ ಮೊದಲ ನಿರ್ದೇಶನದ ಚಿತ್ರ. ಈ ಚಿತ್ರದ ನಾಯಕನಾಗಿ ನಟಿಸಿರುವ ಕವೀಶ್ ಶೆಟ್ಟಿ ನಟಿಸಿದ್ದಾರೆ. ನಾಯಕಿಯಾಗಿ ಮೇಘ ಶೆಟ್ಟಿ ಅಭಿನಯಿಸಿದ್ದಾರೆ. ಮರಾಠಿ ಭಾಷೆಯ ಶಿವಾನಿ ಪ್ರಮುಖಪಾತ್ರದಲ್ಲಿದ್ದಾರೆ. ಇನ್ನೂ, ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ಸಿನಿಮಾ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಬರಲು ಚಿತ್ರತಂಡದ ಸದಸ್ಯರು ಸಹಕಾರ ನೀಡಿದ್ದಾರೆ. ಇದೊಂದು ನಕ್ಸಲಿಸಂ ಬೇಸಾಗಿಟ್ಟಿಕೊಂಡು ಹೆಣೆದಿರುವ ಕಥೆ. ಹಾಗಂತ ನಕ್ಸಲಿಸಂನ ವೈಭವಿಕರಿಸಿಲ್ಲ. ಯಾವುದೇ ಒಬ್ಬ ವ್ಯಕ್ತಿಯ ಕುರಿತಾದ ಚಿತ್ರವೂ ಇದಲ್ಲ. ಇದು ಆಫ್ಟರ್ “ಆಪರೇಷನ್ ಲಂಡನ್ ಕೆಫೆ”. ಕನ್ನಡ ಹಾಗೂ ಮರಾಠಿ ಎರಡೂ ಭಾಷೆಯಲ್ಲಿ ನೇರವಾಗಿ ಚಿತ್ರೀಕರಣ ಮಾಡಲಾಗಿದೆ. ಉಳಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಕನ್ನಡ ಕಲಾವಿದರು ಮರಾಠಿ ಕಲಿತು, ಮರಾಠಿ ಕಲಾವಿದರು ಕನ್ನಡ ಕಲಿತು ಅಭಿನಯಿಸಿರುವುದು ಈ ಚಿತ್ರದ ವಿಶೇಷ. ಮೊದಲು ಕನ್ನಡದಲ್ಲಿ ನವೆಂಬರ್ 28 ರಂದು ಕನ್ನಡದಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗಲಿದೆ ಎಂದರು.

“ಮುಂಗಾರು ಮಳೆ 2” ಚಿತ್ರದಲ್ಲಿ ಶಶಾಂಕ್ ಅವರ ಜೊತೆಗೆ ನಾನು ಸಹಾಯಕ ನಿರ್ದೇಶಕನಾಗಿ ಹಾಗೂ ಸಡಗರ ರಾಘವೇಂದ್ರ ಅವರು ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೆವು. ಈ ಚಿತ್ರಕ್ಕೆ ನಾನೇ ಕಥೆ ಬರೆದು, ನಾಯಕನಾಗೂ ನಟಿಸಿದ್ದೇನೆ ಎಂದು ಕವೀಶ್ ಶೆಟ್ಟಿ ತಿಳಿಸಿದರು
ನಾನು ಈ ಚಿತ್ರದಲ್ಲಿ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸಡಗರ ರಾಘವೇಂದ್ರ ಅವರು ತಮ್ಮ ಮೊದಲ ನಿರ್ದೇಶನದಲ್ಲೇ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕವೀಶ್ ಶೆಟ್ಟಿ ಬರೆದಿರುವ ಕಥೆ ಚೆನ್ನಾಗಿದೆ. ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿರುವ ಖುಷಿಯಿದೆ ಎಂದರು ಮೇಘ ಶೆಟ್ಟಿ.
ಅಂದುಕೊಂಡ ಬಜೆಟ್ ಗಿಂತ ಸ್ವಲ್ಪ ಹೆಚ್ಚಾಗಿದೆ. ಆದರೆ ಸಿನಿಮಾ ನೋಡಿದಾಗ ಬಹಳ ಖುಷಿಯಾಗಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನವೆಂಬರ್ 28 ರಂದು ನಮ್ಮ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕರಾದ ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ವಿವೇಕ್ ಶೆಟ್ಟಿ ಬಾರ್ಕೂರ್ ಹಾಗೂ ವಿಜಯ್ ಪ್ರಕಾಶ್.
ಮರಾಠಿ ನಟಿ ಶಿವಾನಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಛಾಯಾಗ್ರಾಹಕ ನಾಗಾರ್ಜುನ್, ಕಲಾ ನಿರ್ದೇಶಕ ವರದರಾಜ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಾಂಶು ಝಾ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.





