ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತನ್ನ ಅಂತಾರಾಷ್ಟ್ರೀಯ ವೆಬ್‌ ಸೀರೀಸ್‌ `ಸಿಟಾಡೆಲ್‌’ ಕುರಿತಾಗಿ ಬಹಳ ಚರ್ಚೆಯಲ್ಲಿದ್ದಾಳೆ. ಸುಮಾರು 25 ಸಾವಿರ ಕೋಟಿ ಬಂಡವಾಳದಿಂದ ತಯಾರಾದ ಈ ವೆಬ್‌ ಸೀರೀಸ್‌, ಪ್ರದರ್ಶನಕ್ಕೆ ಮುಂಚೆಯೇ ಚರ್ಚೆಗೆ ಒಳಗಾಯಿತು. ಇದರ ಪ್ರಮೋಶನ್‌ ಗಾಗಿ ಪ್ರಿಯಾಂಕಾ ತನ್ನ ಪತಿ ನಿಕ್‌ ಜೋನ್ಸ್, ಮಗಳು ಮಾಲತಿ ಜೊತೆ ಮುಂಬೈಗೆ ಬಂದಿದ್ದಳು.

ಭಾರತ ತಲುಪುವ ಮೊದಲು ಪ್ರಿಯಾಂಕಾ ಒಂದು ಅಂತಾರಾಷ್ಟ್ರೀಯ ಚಾನೆಲ್ ‌ಗಾಗಿ ನೀಡಿದ್ದ ಸಂದರ್ಶನದಿಂದಲೂ ಹೆಚ್ಚು ಚರ್ಚೆಗೊಳಗಾಗಿದ್ದಳು. ಅವಳು ಬಾಲಿವುಡ್‌ ನಲ್ಲಿನ ತನ್ನ ಚಿತ್ರಗಳ ನಟನೆಯ ಕುರಿತಾಗಿ ಎಲ್ಲರಿಗೂ ಶಾಕ್‌ ತರಿಸುವಂಥ ಮಾತುಗಳನ್ನು ಹಂಚಿಕೊಂಡಿದ್ದಳು. ಬಾಲಿವುಡ್‌ ನಲ್ಲಿ ತುಂಬಿರುವ ನ್ಯಾಪೋಟಿಸಮ್, ಬಾಯ್‌ ಕಾಟ್‌ ಟ್ರೆಂಡ್‌, ಪುರುಷಪ್ರಧಾನ ಇಂಡಸ್ಟ್ರಿ ಕುರಿತು ಹಲವು ಟೀಕೆ ಮಾಡಿದ್ದಳು. `ಸಿಟಾಡೆಲ್‌’ನಲ್ಲಿ ಕಾಣಿಸಿಕೊಳ್ಳಲು ಅವಳ ಮುಖ್ಯ ಗುರಿಯೇನು? ಈ ಸೀರೀಸ್‌ ನಲ್ಲಿ ನಟಿಸಿದ ಅವಳ ಅನುಭವ ಹೇಗಿತ್ತು? ಇಂಥ ಹಲವು ಪ್ರಶ್ನೆಗಳನ್ನು ಪ್ರಿಯಾಂಕಾ ಗೃಹಶೋಭಾ ಜೊತೆ ಹಂಚಿಕೊಂಡಿದ್ದಾಳೆ.

ಬಹಳ ವರ್ಷಗಳ ನಂತರ ನೀನು ಮತ್ತೊಮ್ಮೆ ನಿನ್ನ ಅಂತಾರಾಷ್ಟ್ರೀಯ ವೆಬ್ಸೀರೀಸ್‌ `ಸಿಟಾಡೆಲ್‌’ ಪ್ರಮೋಶನ್ಗಾಗಿ ಮುಂಬೈಗೆ ಬಂದಿರುವೆ. ಇದರಲ್ಲಿ ಪಾಲ್ಗೊಳ್ಳಲು ನೀನು ಎಷ್ಟು ಉತ್ಸಾಹಿತಳಾಗಿದ್ದೆ? ಇದರಲ್ಲಿ ನಿನ್ನ ಪಾತ್ರವೇನು?

ಬಹಳ ದಿನಗಳ ನಂತರ ಮುಂಬೈಗೆ ಬಂದು ನಾನು ಬಲು ಖುಷಿಯಾಗಿದ್ದೀನಿ! ನಮ್ಮ ಮನೆಗೆ ಬರುವುದು ಅಂದ್ರೆ ಯಾರಿಗೆ ತಾನೇ ಖುಷಿ ಅನಿಸಲ್ಲ? ನಿಕ್‌ ಮತ್ತು ಮಾಲತಿಗೂ ಮುಂಬೈ ನಗರ ಬಹಳ ಹಿಡಿಸಿದೆ. ಈ ಸೀರೀಸ್‌ ನ ಪ್ರಮೋಶನ್‌ ಕುರಿತು ಹೇಳುವುದಾದರೆ, ಈ `ಸಿಟಾಡೆಲ್‌’ ಸೀರೀಸ್‌ ನನ್ನ ಪಾಲಿಗೆ ದೊಡ್ಡ ಟರ್ನಿಂಗ್‌ ಪಾಯಿಂಟ್‌. ಏಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಭವ್ಯ ವಿಧಾನದಲ್ಲಿ ತಯಾರಿಸಲಾದ ಸೀರೀಸ್‌ ಇದು. ಇದರಲ್ಲಿ ನಾನು ನಾಯಕಿ ಎಂಬುದು ಗಮನಾರ್ಹ! ಇದರಲ್ಲಿ ನನ್ನದು ನಾದಿಯಾ ಸಿನ್ಹಾಳ ಪಾತ್ರ. ಆಕೆ ಒಬ್ಬ ಸ್ತ್ರೀ ಪತ್ತೇದಾರಿಣಿ. ಇದೊಂದು ಭಯಂಕರ ಸ್ಪೈ ಥ್ರಿಲ್ಲರ್‌ ವೆಬ್‌ ಸೀರೀಸ್‌, ಇದರಲ್ಲಿ ನನ್ನ ಜೊತೆ ಹಾಲಿವುಡ್‌ ನ ನಟ ರಿಚರ್ಡ್‌ ಮ್ಯಾಡಿಸನ್‌ ನಾಯಕ ಆಗಿದ್ದಾನೆ. ನಾನು ಈ ಸೀರೀಸ್‌ ನಲ್ಲಿ ಬಹಳಷ್ಟು ಅಪಾಯಕಾರಿ ಸ್ಟಂಟ್‌ ಸೀನ್ಸ್ ಮಾಡಿದ್ದೇನೆ, ಈ ತರಹ ಹಿಂದೆ ಎಂದೂ ಮಾಡಿರಲಿಲ್ಲ.

ಸಿಟಾಡೆಲ್ ‌ಒಂದು ಅತಿ ದೊಡ್ಡ ಸರಣಿ ಧಾರಾವಾಹಿ. ಇದರಲ್ಲಿ ಹಲವಾರು ಸ್ಪೈ ಜಾಸೂಸ್‌ ಇರುತ್ತಾರೆ, ಇವರುಗಳು ಬೇರೆ ಬೇರೆ ನಗರಗಳಲ್ಲಿ ಬೇರೆ ಬೇರೆ ವೇಷಭೂಷಣಗಳಲ್ಲಿ ಮಾಮೂಲಿ ನಾಗರಿಕರಂತೆ ಹರಡಿ ಹೋಗಿರುತ್ತಾರೆ. ಇವರುಗಳ ಮುಖ್ಯ ಗುರಿ, ತಮ್ಮ ದೇಶ ರಕ್ಷಣೆ. ತಮ್ಮ ದೇಶದಲ್ಲೇ ಅಡಗಿರುವ ವಿರೋಧಿಗಳ ನಾಶ ಇವರ ಗುರಿ. ಇದಕ್ಕಾಗಿ ಇವರು ಯಾವ ಮಟ್ಟದ ಕೆಲಸಕ್ಕೂ ರೆಡಿ. ಹಲವಾರು ಸ್ಪೈಗಳ ಹಾಗೇ, ನಾನೂ ಒಬ್ಬಳಾಗಿದ್ದು, ಎಲ್ಲರಂತೆ ವೈವಾಹಿಕ ಜೀವನ ನಡೆಸುತ್ತಿರುತ್ತೇನೆ. ಇಲ್ಲಿ ನನ್ನ ಪತಿ ಸಹ ಸ್ಪೈ ಆಗಿರುತ್ತಾನೆ.

ಸಿಟಾಡೆಲ್ಗೆ ಮುಂಚೆ ನೀನು `ಬೇ ವಾಚ್‌’ನಲ್ಲೂ ಕಾಣಿಸಿಕೊಂಡಿದ್ದೆ. ಹಾಗಿರುವಾಗ ಅಲ್ಲಿಲ್ಲದ ವೈಶಿಷ್ಟ್ಯತೆ ಇಲ್ಲೇನಿದೆ?

`ಬೇ ವಾಚ್‌’ ಕೇವಲ ಒಂದು ರೊಮ್ಯಾಂಟಿಕ್‌ ವೆಬ್‌ ಸೀರೀಸ್‌ ಅಷ್ಟೆ. ಆದರೆ `ಸಿಟಾಡೆಲ್‌’ ಮಾತ್ರ ಆ್ಯಕ್ಷನ್‌, ಥ್ರಿಲ್ಲರ್‌ ಸೀನ್‌ ಗಳಿಂದ ತುಂಬಿ ಹೋಗಿದೆ. ಇದರಲ್ಲಿ ಕೆಲಸ ಮಾಡಿದ್ದಕ್ಕಾಗಿ ನಾನು ಬಹಳ ಹೆಮ್ಮೆ ಪಡುತ್ತೇನೆ. ಏಕೆಂದರೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ, ವಿಶ್ವದ ಬಹುತೇಕ ಭಾಷೆಗಳಲ್ಲಿ ಏಕಕಾಲಕ್ಕೆ ಡಬ್‌ ಆಗಿ ಪ್ರಸಾರವಾಗಲಿರುವ ಧಾರಾವಹಿ. ಇದು ನನಗೆ ಇನ್ನಷ್ಟು ಮಹತ್ವಪೂರ್ಣ ಆಗಲು ಕಾರಣವೆಂದರೆ, ರಿಚರ್ಡ್‌ ನಂಥ ಘಟಾನುಘಟಿ ಹಾಲಿವುಡ್‌ ನಟ ಇದರಲ್ಲಿ ನನಗೆ ನಾಯಕ ಆಗಿರುವುದು. ಅಷ್ಟಲ್ಲದೆ, ನನ್ನ ಕಳೆದ 22 ವರ್ಷಗಳ ನಟನೆಯ ಅನುಭವದಲ್ಲಿ, ಒಬ್ಬ ಹೀರೋಗೆ  ಸಮನಾದ ಸಂಭಾವನೆ ನನಗೆ ಸಿಕ್ಕಿದೆ! ಹೀಗೆ ನಮ್ಮ ಬಾಲಿವುಡ್‌ ನಲ್ಲಿ ಎಂದೂ ಆಗೋಲ್ಲ! ಆದ್ದರಿಂದಲೇ `ಸಿಟಾಡೆಲ್‌’ನಲ್ಲಿ ಕೆಲಸ ಮಾಡಿದ್ದು  ನನಗೆ ನಿಜಕ್ಕೂ ಬಲು ಹೆಮ್ಮೆಯ ವಿಷಯ.

PRIYANKA   4

ಸಿಟಾಡೆಲ್ ಮುಖ್ಯ ಹೀರೋ ರಿಚರ್ಡ್ಜೊತೆ ನಟಿಸಿದ ನಿನ್ನ ಅನುಭವ ಹೇಗಿತ್ತು?

ಬಹಳ ಚೆನ್ನಾಗಿತ್ತು! ಈ ವೆಬ್‌ ಸೀರೀಸ್‌ ಶುರುವಾಗುವ ಮೊದಲು ನಾನು ಒಮ್ಮೆ ಆತನನ್ನು ಡಿನ್ನರ್‌ ಪಾರ್ಟಿಯಲ್ಲಿ ಭೇಟಿಯಾಗಿದ್ದೆ. ಆಗಿನಿಂದ ನಾವಿಬ್ಬರೂ ವೆರಿ ಗುಡ್‌ ಫ್ರೆಂಡ್ಸ್. ಹಾಗಾಗಿ ನಾವಿಬ್ಬರೂ ನಮ್ಮ ಕೆಲಸಗಳಲ್ಲಿ ಸಂಪೂರ್ಣ ಸಮರ್ಪಿತರು, ಪರಿಶ್ರಮಿಗಳು ಹಾಗೂ ಪಂಕ್ಚುಯೆಲ್ ‌ಎನಿಸಿದೆ. ನಾವಿಬ್ಬರೂ ನಮ್ಮ ಪಾತ್ರಗಳಿಗೆ 100% ನ್ಯಾಯ ಒದಗಿಸಿದ್ದೇವೆ ಎಂದೇ ಅನಿಸುತ್ತದೆ. ಹೀಗಾಗಿ ಮುಂದೆಯೂ ನಾನು ಆತನ ಜೊತೆ ನಟಿಸ ಬಯಸುತ್ತೇನೆ.

ನಿನ್ನ ಕೆರಿಯರ್ಆರಂಭಿಸಿ 22 ವರ್ಷ ಕಳೆದಿರುವೆ. ಇದರಲ್ಲಿ ನೀನು ಬಾಲಿವುಡ್‌, ಹಾಲಿವುಡ್ನಟಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಗಾಯಕಿಯಾಗಿಯೂ ಹೆಸರು ಗಳಿಸಿರುವೆ. ಹಾಗಿರುವಾಗ ಯಾವ ಕಾರಣಗಳಿಂದ ನೀನು ಬಾಲಿವುಡ್ಬಿಟ್ಟು ಹಾಲಿವುಡ್ಮಾತ್ರ ಆರಿಸಿಕೊಂಡೆ?

ಇದಕ್ಕೆ ಹಲವಾರು ಕಾರಣಗಳಿವೆ….. ಬಾಲಿವುಡ್‌ ಸದಾ ಪುರುಷಪ್ರಧಾನ ಇಂಡಸ್ಟ್ರಿ. ನಮ್ಮ ನಟನೆ ಚೆನ್ನಾಗಿದ್ದರೂ ಹೆಂಗಸು ತಾನೇ…. ಏನು ಮಹಾ ಎಂದು ನಿರ್ಲಕ್ಷಿಸುತ್ತಾರೆ. ಹೀರೋಹೀರೋಯಿನ್‌ ಇಬ್ಬರಿಗೂ ಸಮಾನ ಪರಿಶ್ರಮ ಇರುತ್ತದೆ. ಆದರೂ…. ಹೀರೋಗೆ ಹೆಚ್ಚು, ಹೀರೋಯಿನ್‌ ಗೆ ಕಡಿಮೆ ಸಂಭಾವನೆ ನೀಡುತ್ತಾರೆ. ನಾನು 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಸುಮಾರು ಶೋಸ್‌ ನೀಡಿದ್ದೇನೆ. ಎಷ್ಟೋ ಯಶಸ್ವೀ ಚಿತ್ರಗಳ ನಂತರ ನಾನು ಖುಷಿಯಾಗಿರಲಿಲ್ಲ.

ಅದೇ ಸಂದರ್ಭದಲ್ಲಿ ನಾನು ಹಾಲಿವುಡ್‌ ಗೆ ಬಂದು, ಗಾಯಕಿಯಾಗಿಯೂ ಯಶಸ್ಸು ಕಂಡಾಗ, ಹಾಡುಗಾರಿಕೆಗಿಂತ ಹಾಲಿವುಡ್‌ ನಲ್ಲಿ ನಟನೆಯಲ್ಲೇ ನಾನು ಸೆಟಲ್ ಆಗಬೇಕು ಅಂದುಕೊಂಡೆ. ಹಾಗಾಗಿ ನಾನು ಅಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿದರೂ ಮುಂದೆ ನಾಯಕಿಯಾಗಿ ಗುರುತಿಸಲ್ಪಟ್ಟೆ. ಇಲ್ಲಿನ ಲೋಪದೋಷ ಅಲ್ಲಿ ಇಲ್ಲದ ಕಾರಣ, ನಾನು ಅಲ್ಲೇ ಉಳಿದುಬಿಟ್ಟೆ.

priyanka-chopra

ನೀನು ಸಣ್ಣ ಊರಿನಿಂದ ನಿನ್ನ ಕೆರಿಯರ್ಆರಂಭಿಸಿದೆ. ನಂತರ ಮಿಸ್ವರ್ಲ್ಡ್, ಬಾಲಿವುಡ್‌, ಇದೀಗ ಹಾಲಿವುಡ್ಹೀರೋಯಿನ್ಆಗಿರುವೆ. ನಿನ್ನ ಸುದೀರ್ಘ ಪ್ರಯಾಣದಲ್ಲಿ ಏನೆಲ್ಲ ಸವಾಲು ಎದುರಿಸಬೇಕಾಯಿತು?

ನಟನೆಯ ಜಗತ್ತು ಹೂವಿನ ಹಾಸಿಗೆಯಲ್ಲ, ಕಷ್ಟಗಳ ಮುಳ್ಳಿನಿಂದ ತುಂಬಿದೆ ಎಂಬುದಂತೂ ಕಹಿ ಸತ್ಯ. ನಮ್ಮವರು ಅನಿಸಿಕೊಂಡವರೇ ನಮ್ಮ ಮಾನಸಿಕ ಶಕ್ತಿ ಕುಗ್ಗಿಸಲು ಮುಂದಾಗುತ್ತಾರೆ. ನಾನು ನಟಿಸಲು ಆರಂಭಿಸಿದಾಗ, ನನ್ನ ಹತ್ತಿರದ ಗೊತ್ತಿದ್ದ ಜನರೇ ನನ್ನನ್ನು ಕಪ್ಪು ಎಂದು ಟೀಕಿಸಿದರು. ನನ್ನ ನಟನೆಗಿಂತ ಜನ ನನ್ನ ಮೈಬಣ್ಣದ ಕುರಿತಾಗಿ ಕೀಳಾಗಿ ಮಾತನಾಡಿ, ನನ್ನ ಮಾನಸಿಕ ಶಕ್ತಿ ಕುಗ್ಗಿಸಲು ಯತ್ನಿಸಿದರು. ಇದರಿಂದ ನಾನು ಒಳಗೊಳಗೇ ಬಹಳ ಕುಗ್ಗಿಹೋಗುತ್ತಿದ್ದೆ. ಆದರೆ ಆ ಸಂದರ್ಭದಲ್ಲಿ ನನ್ನ ಪರವಾಗಿ ನಿಂತು ನನ್ನ ಆತ್ಮವಿಶ್ವಾಸ ಹೆಚ್ಚಿಸಿದವರು ಅಂದ್ರೆ ನನ್ನ ತಾಯಿ ತಂದೆ!

ಪ್ರತಿಯೊಬ್ಬ ಹುಡುಗಿಯೂ ಸ್ವಾವಲಂಬಿ ಆಗಲೇಬೇಕು, ಯಾರು ಏನೇ ಹೇಳಲಿ, ನಿನ್ನ ಮನೋಬಲ ಕಳೆದುಕೊಳ್ಳಬೇಡ. ನಿನ್ನ ಆತ್ಮಸ್ಥೈರ್ಯದಿಂದ ಮುಂದುವರಿ, ಎಂದು ನನ್ನ ತಾಯಿ ಸದಾ ಹೇಳುತ್ತಿದ್ದರು. ಹೀಗೆ ನಿಮ್ಮ ಕುಟುಂಬದವರ ಸಹಕಾರ ನಿಮ್ಮೊಂದಿಗಿದ್ದರೆ ಯಾವ ದುಷ್ಟ ಶಕ್ತಿಯೂ ನಿಮ್ಮನ್ನೇನೂ ಮಾಡದು. ಮೆರಿಟ್‌ ಇದ್ದರೆ ಇಂಥವನ್ನು ನಿವಾರಿಸಿ ಮೇಲೇರಬಹುದು ಎಂಬುದಕ್ಕೆ ನನ್ನ ಕೆರಿಯರ್‌ ಗ್ರಾಫೇ ಸಾಕ್ಷಿ!

ನಿನ್ನ ಕುರಿತು ಒಂದು ಆರೋಪ ಇದೆ. ಭಾರತಕ್ಕೆ ಬರುವ ಮುನ್ನ ಅಲ್ಲಿನ ಒಂದು ಅಂತಾರಾಷ್ಟ್ರೀಯ ಚಾನೆಲ್ ಸಂದರ್ಶನ ಒಂದರಲ್ಲಿ ಹಿಗ್ಗಾಮುಗ್ಗಾ ಬಾಲಿವುಡ್ ಡೌನ್ಮಾಡಿದ್ದೀಯಂತೆ……?

ಇಲ್ಲ….. ಹಾಗೇನೂ ಇಲ್ಲ! ನನಗೆ ಅಂಥ ಧೋರಣೆ ಏನೂ ಇರಲಿಲ್ಲ. ಆದರೆ, ನಾನಿಂದು ತಲುಪಿರುವ ಘಟ್ಟದಿಂದ ನಿಂತು ವೀಕ್ಷಿಸಿದಾಗ, ನಾನು ಅನುಭವಿಸಿದ ಎಲ್ಲಾ ಹತಾಶೆಗಳೂ ಮಾತುಗಳಲ್ಲಿ ಸಿಡಿದು ಬಂದಿರಬಹುದು. ಈ ಸಂದರ್ಶನ ನನ್ನ ನಟನೆಯ ಜರ್ನಿ ಬಗ್ಗೆ ಇತ್ತು, ಇದರಲ್ಲಿ ಆರಂಭದಿಂದ ಇಲ್ಲಿಯವರೆಗೂ ನಾನು ಅನುಭವಿಸಿದ ಏಳುಬೀಳುಗಳನ್ನು ಹೇಳಲೇಬೇಕಾಯಿತು. ಅದೇ ರೀತಿ ಬಾಲಿವುಡ್‌ ನ ಧೋರಣೆಯನ್ನೂ ಖಂಡಿಸಬೇಕಾಯಿತು, ಖಂಡಿತವಾದಿ ಲೋಕವಿರೋಧಿ ತಾನೇ? ಬಾಲಿವುಡ್‌ ನಲ್ಲಿ ತುಂಬಿರುವ ನ್ಯಾಪೋಟಿಸಮ್, ಕೊಳಕು ರಾಜಕೀಯ, ಯಶಸ್ವೀ ಚಿತ್ರಗಳನ್ನು ಬೇಕೆಂದೇ ಥಿಯೇಟರ್ ನಿಂದ ಎತ್ತಂಗಡಿ ಮಾಡಿಸುವುದು, ಬೇಕೆಂದೇ ನಟಿಯರನ್ನು ಗೋಳುಗುಟ್ಟಿಸುವ ನಿರ್ಮಾಪಕರು…. ನಾನು ಪಟ್ಟ ಪಾಡನ್ನು ಹೇಳಿಕೊಂಡೆ ಅಷ್ಟೆ, ಬಾಲಿವುಡ್‌ ಗೆ ಮರ್ಮಾಘಾತವಾದರೆ ಅದಕ್ಕೆ ನಾನು ಹೊಣೆಯೇ?

ನನ್ನ ಮಗಳು ಹೈಸ್ಕೂಲಿಗೆ ಬಂದಾಗ, ನನ್ನ ನಟನೆಯ `ಬರ್ಫಿಚಿತ್ರ ತೋರಿಸುತ್ತೇನೆ ಅಂತ ಇತ್ತೀಚೆಗೆ ರಣಬೀರ್ಕಪೂರ್ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ. ಹೀಗಿರುವಾಗ ಮುಂದೆ ನೀನು ನಿನ್ನ ಮಗಳಿಗೆ ನಿನ್ನ ಯಾವ ಚಿತ್ರ ತೋರಿಸ ಬಯಸುತ್ತೀಯಾ?

ನಾನು ನನ್ನ ಮಗಳ ಮೇಲೆ ನನ್ನ ಇಷ್ಟಾನಿಷ್ಟಗಳ ಹೊರೆ ಹೊರಿಸಲಾರೆ! ಅವಳಿಗೆ ಹೇಗೆ ಇಷ್ಟವೋ ಅವಳು ತನ್ನ ಜೀವನವನ್ನು ಹಾಗೇ ರೂಪಿಸಿಕೊಳ್ಳಲಿ. ಅವಳಿಗೆ ತನ್ನದೇ ಆದ ಬೇರೆ ಐಡೆಂಟಿಟಿ ಇರಲಿ, ಅವಳು ಇಷ್ಟಪಟ್ಟು ನನ್ನ ಚಿತ್ರಗಳನ್ನು ಆರಿಸಿಕೊಂಡು ನೋಡಲಿ. ನಾನಂತೂ ನನ್ನದೇ ಚಿತ್ರ ನೋಡಬೇಕು ಅಂತೆಲ್ಲ ಹೇಳಲಾರೆ.

ಸದ್ಯದ ಬಾಲಿವುಡ್ಪರಿಸ್ಥಿತಿ ಬಗ್ಗೆ ಏನು ಹೇಳ್ತೀಯಾ? ಮುಂದೆ ಬಾಲಿವುಡ್ಚಿತ್ರಗಳಲ್ಲಿ ನಟಿಸೋದು ಉಂಟೋ ಇಲ್ಲವೋ?

ಬಾಲಿವುಡ್‌ ನನ್ನ ಹೋಂ ಟೌನ್‌, ನನ್ನ ತವರುಮನೆ ಎಂದರೂ ಉತ್ಪ್ರೇಕ್ಷೆಯಲ್ಲ! ಹಾಗಿರುವಾಗ ಮುಂದೆ ನಾನು ಹಿಂದಿ ಚಿತ್ರಗಳಲ್ಲಿ ನಟಿಸೋದಿಲ್ಲ ಅಂತ ಹೇಗೆ ಹೇಳಲಿ? ಮುಂದೆ ನನಗೆ ಯಾವುದಾದರೂ ಉತ್ತಮ ಆಫರ್‌ ಬಂದಾಗ, ಅದು ನನ್ನ ಇಷ್ಟದ ಪಾತ್ರವಾಗಿದ್ದು, ಅದರಲ್ಲಿ ನನಗೆ ಪ್ರಾಮುಖ್ಯತೆ ಇದ್ದಾಗ ಮಾತ್ರ ನಾನು ಖಂಡಿತಾ ಆ ಚಿತ್ರ ಒಪ್ಪಿಕೊಳ್ಳುವೆ. ಇನ್ನು ಬಾಲಿವುಡ್‌ ನ ಸದ್ಯದ ಸ್ಥಿತಿ…. ಇದರ ಬಾಯ್‌ ಕಾಟ್‌ ಟ್ರೆಂಡ್‌, OTT ಬೂಮ್, ಸೆನ್ಸಾರ್‌ ಬೋರ್ಡ್‌ ನ ಇಬ್ಬಗೆಯ ನೀತಿ, ದೊಡ್ಡ ಸ್ಟಾರ್‌ ಗಳ ಬಾಕ್ಸ್ ಆಫೀಸ್‌ ಫ್ಲಾಪ್‌, ವಿವಾದಗಳ ನೆರಳಲ್ಲಿ ಪಬ್ಲಿಸಿಟಿ…. ಇಂಥವು ಸಿಕ್ಕುಗಳು ಯಾವಾಗ ಮುಕ್ತವಾಗುತ್ತೋ ಗೊತ್ತಿಲ್ಲ. ಇಂಥಿಲ್ಲ ಆದಷ್ಟು ಬೇಗ ಸರಿಹೋಗಲಿ ಎಂದೇ ಹಾರೈಸುತ್ತೇನೆ!

ಪ್ರತಿನಿಧಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ