ಪರಸ್ಪರ ಮನಸ್ಸುಗಳ ನಡುವೆ ಅಪಾರ್ಥ ತುಂಬಿದಾಗ ಎಲ್ಲರ ಮನೆಯಲ್ಲೂ ನಡೆಯುವುದು ಬರೀ ಅನರ್ಥವೇ! ಭವ್ಯಾ ಅನಿಕೇತ್ ರಂತೆ ಸಂಸಾರದಲ್ಲಿ ಸಾಮರಸ್ಯ ತಂದಕೊಂಡರೆ, ಸಮರ್ಥ್ನಂಥ ಮಗ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರದಿರಲು ಸಾಧ್ಯವೇ…..?

“ಅನೀಶ್‌ ಎಲ್ಲಿದ್ದಿಯೋ ಬೇಗ ಬಾರೋ….!”

“ಬಂದೆ ಬಂದೇ ಮಾರಾಯ….. ಅದೇನು ಬೆಳ್ಳಂಬೆಳಗ್ಗೆ ನಮ್ಮ ಮನೆಯತ್ತ ನಿನ್ನ ಸವಾರಿ…!?” ಎಂದು ಕೇಳಿದ ಅನೀಶ್‌.

“ಅದೇ ಕಣೋ…. ಸಮರ್ಥ್‌ ನದ್ದು ಐಎಎಸ್‌ ಪಾಸ್‌ ಆಯ್ತಂತೆ…..! ನಿನಗೆ ಗೊತ್ತಲ್ಲಾ…..!?” ಎಂದ ಭಾವಿಕ್‌.

“ಗೊತ್ತು ಕಣೋ…. ನಿನ್ನೇನೆ ಮನೆಯಲ್ಲಿ ಅಮ್ಮ ಅಪ್ಪನದ್ದು ದೊಡ್ಡ ರಾಮಾಯಣ…..! ಅವನನ್ನು ನೋಡಿ ಕಲಿ ಹಾಗೇ ಹೀಗೆ ಅಂತ ಕೇಳಿ ಕೇಳಿ…. ತಲೆ ಚಿಟ್ಟಂತಿದೆ. ಈಗ ನೀನೂ ಶುರು ಹಚ್ಕೊಂಡ್ಯಾ…..?”

“ಹ್ಞೂಂ ಅನೀಶ್‌…. ನೋಡ ನೋಡುತ್ತಿದ್ದಂತೆ ಆ ಸಮರ್ಥ್‌ ಹೇಗಿದ್ದ ಹೇಗಾದ ಅಲ್ವಾ…..?” ಎಂದು ಪೆಚ್ಚುವೋರೆ ಹಾಕಿದ ಭಾವಿಕ್‌.

ಮನೆಯಲ್ಲಿ ಅಮ್ಮ ಅಪ್ಪನ ಕಿರಿಕಿರಿಯಿಂದ ಬೇಸತ್ತ ಇವರ ಸಹಪಾಠಿಗಳಾದ ಸನ್ನಿಧಿ ಮತ್ತು ರಶ್ಮಿಕಾ ಇದೇ ವಿಷಯ ಮಾತನಾಡುತ್ತಾ, ಎದುರು ಬದಿರಾದಾಗ ಮತ್ತದೇ ಮಾತುಗಳ ಚರ್ಚೆಯಲ್ಲಿ ಎರಡು ಗಂಟೆ ಹರಟೆ ಹೊಡೆದು ತಮ್ಮ ತಮ್ಮ ಮನೆಯತ್ತ ನಡೆದರು.

ಸನ್ನಿಧಿ ಒಳಗಡಿ ಇಡುತ್ತಲೇ ಅಮ್ಮ ಅಪ್ಪನ ವಾದ ವಿವಾದ ಅದಾಗಲೇ ಪ್ರಾರಂಭವಾಗಿತ್ತು.

“ನೋಡು ಆ ಭವ್ಯಾರನ್ನು…… ಮಕ್ಕಳನ್ನು ಹೇಗೆ ಬೆಳೆಸಿದ್ದಾರೆ….. ಅದೇನು ನಯ, ವಿನಯ, ಸಂಸ್ಕಾರ! ಅದರಿಂದಲೇ ಮಕ್ಕಳು ಅಸಾಧ್ಯವಾದುದ್ದನ್ನು ಸಾಧಿಸೋಕೆ ಸಾಧ್ಯವಾಗಿರೋದು. ನಿನ್ನಂಥವಳನ್ನು ಕಟ್ಕೊಂಡು ನಾನಷ್ಟೇ ಅಲ್ಲ ನನ್ನ ಮಕ್ಕಳು ಅನುಭವಿಸುವಂತೆ ಆಯ್ತಲ್ಲ  ಥೂ… ನನ್ನದು ಒಂದು ಜನ್ಮನಾ….?” ಎಂದು ಮೋಹನರಾಯರು ರಾಧಾರ ಮೇಲೆ ಕಿರುಚುತಿದ್ದುದು ರಸ್ತೆಯವರೆಗೂ ಕೇಳಿಸುತಿತ್ತು.

“ಎಲ್ಲೆಲ್ಲಿ ನೋಡಲಿ… ನಿನ್ನನ್ನೇ ಕಾಣುವೆ……” ಎಂದು ಗುನುಗುತ್ತಾ ಭಾವಿಕ್‌ ಅಮ್ಮನ ಕೆರಳಿದ ಕೆಂಡದಂಥ ಕಣ್ಣುಗಳಿಗೆ ಹೆದರಿ ಅವುಡುಗಚ್ಚಿ ತನ್ನ ರೂಮಿನತ್ತ ನಡೆದ.

ಅವನ ಅಪ್ಪ ಕೊಳಲು ನುಡಿಸುತ್ತಾ ಹೊಸ ಹಾಡನ್ನು ಅಭ್ಯಾಸಿಸುತ್ತಿದ್ದುದನ್ನು ಕಂಡು ಪರಿಮಳಾ, “ನಿಮ್ಮ ಜನ್ಮಕ್ಕಿಷ್ಟು….. ನೀವೂ ರಾಗ ಹಾಕ್ತಾ ಇರಿ, ಮಕ್ಕಳು ಹಾಡು ಹೇಳುತ್ತಾ…. ಊರು ಕೇರಿ ಸುತ್ತಲಿ…. ನಿಮ್ಮ ಇಂತಹ ಕರ್ಮಕ್ಕೆ ಮದುವೆ, ಮನೆ, ಮಕ್ಕಳು ಯಾಕೆ ಬೇಕಿತ್ತು….? ಛೇ…. ಎಲ್ಲಾ ನನ್ನ ಕರ್ಮ ನಿಮ್ಮಂತಹ ಅಯೋಗ್ಯನ ಕೈ ಹಿಡಿದ ತಪ್ಪಿಗೆ ಆಡುವಂತಿಲ್ಲ… ಅನುಭವಿಸುವಂತಿಲ್ಲ….,” ಎಂದು ತಲೆ ಮೇಲೆ ಕೈ ಹೊತ್ತು ಕುಳಿತಳು.

“ಸಂಸಾರದಲ್ಲಿ ಸಾರವಿದ್ದರೆ ಮಕ್ಕಳು ಸರಿಯಾದ ಮಾರ್ಗದರ್ಶನ ಪಡೆದು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ನೀವಿಬ್ಬರೂ ಸಂಸಾರ ನಡೆಸುವ ರೀತಿ ನೀತಿ ನೋಡಿದರೆ ಅರ್ಥವಾಗುತ್ತೆ. ತಾಳವಿಲ್ಲ ತಂತಿಯಿಲ್ಲ,” ಎನ್ನುತ್ತಾ ಕಾಶೀಬಾಯಿ ಗೊಣಗುತ್ತಲೇ ಮಗ ಅಚ್ಯುತ ಸೊಸೆ ಭಾಮಿನಿಗೆ ಸಹಸ್ರನಾಮ ಹಾಕುತ್ತಿದ್ದುದನ್ನು ಕೇಳಿ ರಶ್ಮಿಕಾ ಕೋಪದಿಂದ ತನ್ನ ರೂಮಿಗೆ ಹೋಗಿ ಥಟ್ ಅಂತ ಬಾಗಿಲು ಮುಚ್ಚಿಕೊಂಡಳು.

ಇದೆಲ್ಲ ನಿನ್ನಿಂದಲೇ ಅಂತ ಅತ್ತೆ, ಮಗ, ಸೊಸೆ ಒಬ್ಬರ ಮುಖವನ್ನು ಇನ್ನೊಬ್ಬರು ನೋಡ್ತಾ ನಿಂತರು.

“ಅಮ್ಮ ಅಪ್ಪ ಕುಲ ದೇವರಿಗೆ ಪೂಜೆ ಮಾಡಿಸೋಣಾಂತ ಸಮರ್ಥನ ಆಸೆ. ನೀವಿಬ್ಬರೂ ನಾಳೆ ಬೆಳಗ್ಗೆ ಬೇಗ ವೆಂಕಟೇಶ್ವರನ ದೇವಸ್ಥಾನಕ್ಕೆ ಬಂದ್ಬಿಡಿ,” ಅಂತ ಹೇಳಿದಾಗ ಅತ್ತೆ ಭಾಗ್ಯಮ್ಮ, “ಕೊಡಮ್ಮ ಭವ್ಯಾ ನಾನೂ ಮಾತಾಡ್ತೀನಿ,” ಎಂದು ಅವರ ಕೈಯಿಂದ ಪೇನ್‌ ತೆಗೆದುಕೊಂಡು ಗೌರಪೂರ್ವಕವಾಗಿ ಬೀಗರನ್ನು ಆಹ್ವಾನಿಸಿದರು.

ಅಪ್ಪ ಅನಿಕೇತ್‌ ಮತ್ತು ಮಗ ಸಮರ್ಥ್‌ ಪೂಜೆಗೆ ಬೇಕಾಗುವ ಸಾಮಾನುಗಳ ಪಟ್ಟಿ ಮಾಡುತ್ತಾ ಅಜ್ಜ ಗೋಪಾಲರಾಯರೊಂದಿಗೆ ಹರಟೆಗೆ ಕುಳಿತರು. ಭವ್ಯಾ ಮತ್ತು ಭಾಗ್ಯಮ್ಮ ರಾತ್ರಿ ಅಡುಗೆಯ ತಯಾರಿಗಾಗಿ ಅಡುಗೆ ಮನೆಯತ್ತ ನಡೆದರು.

“ಅತ್ತೆ, ನಿಮ್ಮ ಮತ್ತು ಮಾವನವರ ಮಾರ್ಗದರ್ಶನದಿಂದ ಸಮರ್ಥ್‌ ಈ ಯಶಸ್ಸು ಪಡೆಯುವಂತಾಗಿದ್ದು,” ಎಂದು ಮನಃಪೂರ್ವಕವಾಗಿ ಒಪ್ಪಿಕೊಂಡಳು.

“ಅದರಲ್ಲಿ ನಿನ್ನ ಶ್ರಮಾನೂ ತುಂಬಾನೇ ಇದೆ ಕಣಮ್ಮ,” ಎನ್ನುತ್ತಾ ಭಾಗ್ಯಮ್ಮ ಕಣ್ಣಂಚಿನ ಆನಂದಬಾಷ್ಪವನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ, ಮೊಮ್ಮಗ ಸಮರ್ಥ್‌ ನನ್ನು ಮನದಲ್ಲೇ ಮೆಚ್ಚಿಕೊಂಡರು.

“ಆಗೆಲ್ಲಾ ನಿಮ್ಮ ಜೋಡಿಯನ್ನು ಎಲ್ಲರೂ ಅದೆಷ್ಟು ರೀತಿಯಲ್ಲಿ ಹೀಯಾಳಿಸಿ ನಕ್ಕಿದ್ದರೂ ಕೂಡ ನೀನು ಮಾತ್ರ, `ತಾಳಿದವನು ಬಾಳಿಯಾನು’ ಎನ್ನುವಂತೆಯೇ ಎಲ್ಲವನ್ನೂ ಸಹಿಸುತ್ತಾ ನನ್ನ ಮನೆಗೆ ಸೊಸೆಯಾಗದೇ ಮಗಳಾಗಿ ಬಂದು ಸಮಾಧಾನದಿಂದ ನನ್ನ ಮಗನ ಸರಿ ತಪ್ಪುಗಳನ್ನು ತಿದ್ದಿ ತೀಡಿ ಒಂದು ಹಂತಕ್ಕೆ ತಂದಿದ್ದಕ್ಕೆ ನಮ್ಮ ಸಂಸಾರವನ್ನು ಇವತ್ತು ಎಲ್ಲರೂ ಕಣ್ಣೆತ್ತಿ ನೋಡುವಂತಾಗಿದೆ. ಅಂದು ಹೀಯಾಳಿಸಿದವರೇ ಇಂದು ಹೊಗಳುವಂತಾಗಿದೆ,” ಎಂದು ಭಾಗ್ಯಮ್ಮ ಸೊಸೆ ಭವ್ಯಾರನ್ನು ಹೊಗಳಿದರು.

“ಅಂದು ನೀನೇ ಹೇಳಿದೆಯಲ್ಲಾ…. `ಈ ಎಲ್ಲಾ ಅವಮಾನಗಳನ್ನು ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಆಕಾಶಕ್ಕೆ ಏಣಿ ಹಾಕುವೆ,’ ಎಂದು ಆ ಮಾತು ನಿಜವಾಯ್ತು ಭವ್ಯಾ. ನೀನು ಸ್ವಲ್ಪ ತಾಳ್ಮೆ ತೆಗೆದುಕೊಂಡು ಸಂಸಾರದ ಭಾರವನ್ನು ಹೊರಲು ತಯಾರಾಗಿ ಹಗಲು ರಾತ್ರಿ ಕಷ್ಟಪಟ್ಟು ಬಿ.ಎಡ್‌ ಓದಿ ಸರ್ಕಾರಿ ಕೆಲಸ ಪಡೆದು, ನನ್ನ ಮಗನೊಟ್ಟಿಗೆ ಈ ಸಂಸಾರದ ನೊಗ ಹೊತ್ತು ಮುನ್ನಡೆಸಿದ್ದರಿಂದ ಇದೆಲ್ಲಾ ಸಾಧ್ಯವಾಯಿತು,” ಎಂದು ಮನದುಂಬಿ ಸೊಸೆಯನ್ನು ಹರಸಿದರು.

ಅಜ್ಜ, ಮಗ ಮತ್ತು ಮೊಮ್ಮಗ ಒಬ್ಬರಿಗೊಬ್ಬರು ಸ್ನೇಹಿತರಂತೆ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ, ಕುಳಿತಿದ್ದನ್ನು ಕಂಡು ಭವ್ಯಾಳಿಗೆ ತನ್ನ ಸಂಸಾರದಲ್ಲಿ ಸಾರವನ್ನು ತುಂಬಲು ತಾವಿಬ್ಬರು ಇಷ್ಟು ವರ್ಷ ಪಟ್ಟ ಕಷ್ಟವೆಲ್ಲಾ ಸಾರ್ಥಕವಾದಂತೆ ಮನ ಧನ್ಯತೆಯಿಂದ ಕೂಡಿತು.

ಒಬ್ಬರ ತಪ್ಪನ್ನು ಇನ್ನೊಬ್ಬರು ಎತ್ತಿ ಆಡದೇ ತಿದ್ದಿ ತೀಡುವ ಮೂಲಕ ತಮ್ಮ ತಮ್ಮ ನಡೆನುಡಿ ಜವಾಬ್ದಾರಿಯನ್ನು ಅರಿತು ಬೆರೆತು ಮುನ್ನಡೆಯುವುದನ್ನು ಪ್ರತಿದಿನ ಕಾಣುತ್ತಲೇ ಬೆಳೆದ ಮಗ ಸಮರ್ಥ್‌ ನಯ, ವಿನಯ ಮತ್ತು ಸಂಸ್ಕಾರ ಮೈಗೂಡಿಸಿಕೊಂಡು ಸೌಹಾರ್ದಯುತ ವಾತಾವರಣದಲ್ಲಿ ಬೆಳೆದು ತನ್ನ ಯಶಸ್ಸಿನ ಮೆಟ್ಟಿಲೇರಿದ್ದು ಕಂಡು ಮಗನ ಬಗ್ಗೆ ಹೆಮ್ಮೆ ಮತ್ತು ಅಭಿಮಾನದಿಂದ ಭವ್ಯಾ ನೋಡಿದರು.

“ಅಮ್ಮಾ…..! ಯಾಕಮ್ಮ ಕಣ್ಣೀರು?” ಎಂದು ಸಮರ್ಥ್‌ ಹತ್ತಿರ ಬಂದ.

ಪತಿ ಅನಿಕೇತ್‌ ಕೂಡ ಬಂದು ಮಡದಿಯ ಭುಜದ ಮೇಲೆ ಕೈ ಇರಿಸಿ, “ಇದೆಲ್ಲ ನಿನ್ನ ಪರಿಶ್ರಮದ ಫಲ,” ಎಂದರು.

“ಇಲ್ಲ….. ಇದೆಲ್ಲ ನಿಮ್ಮ ಶ್ರಮ!” ಎಂದು ಗೋಣಾಡಿಸುತ್ತಾ ಭವ್ಯಾ ನಾಚಿದರು.

ಭಾಗ್ಯಮ್ಮ ಮತ್ತು ಗೋಪಾಲರಾಯರು, “ಸುಖ ಸಂಸಾರಕ್ಕೆ ಎಲ್ಲರೂ ಆಧಾರಸ್ತಂಭದಂತೆ ನಿಂತರೆ ಅಸಾಧ್ಯವಾದದ್ದು ಯಾವುದೂ ಇಲ್ಲ,” ಎನ್ನುತ್ತಲೇ ಇದೆಲ್ಲ ಪರಮಾತ್ಮನ ಅಸೀಮ ಕೃಪಾಕಟಾಕ್ಷವೆಂದು ತಮ್ಮ ಕುಲದೇವರಿಗೆ ಕೈ ಮುಗಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ