ತನ್ನ ಅಜ್ಜಿ ಹೇಳಿದ್ದನ್ನು ಸದಾ ನೆನಪಿಸಿಕೊಳ್ಳುತ್ತಾ, ಸಾಂಪ್ರದಾಯಿಕತೆಯೊಂದಿಗೆ ಇಂದಿನ ಆಧುನಿಕತೆ ಬೆರೆಸಿಕೊಂಡು, ಮಗಳ ಬಾಣಂತನಕ್ಕೆಂದು ವಿದೇಶಕ್ಕೆ ಬಂದಿಳಿದ ಭಾರತೀಯ ತಾಯಿ ತನ್ನ ಕರ್ತವ್ಯದಲ್ಲಿ ಯಶಸ್ಸು ಕಂಡಳೇ.........?
ಕಾರ್ಡು ಉಜ್ಜಿ ಮಣಭಾರದ ಬಾಗಿಲು ಹಿಂದೆ ತಳ್ಳಿ, ``ಅಮ್ಮಾ.... ಅಪ್ಪಾ.... ಬನ್ನಿ,'' ಎಂದ ಮಗಳ ಹಿಂದೆ ನಡೆದು ಅವಳ ಮನೆ ಅಪಾರ್ಟ್ ಮೆಂಟ್ ನ ಕಾಮನ್ ಏರಿಯಾಕ್ಕೆ ಕಾಲಿಟ್ಟು, ಅವಳು ಏರುತ್ತಿರುವ ಒಂದೇ ನೋಟದ ಹದಿನೆಂಟು ಮೆಟ್ಟಿಲ ಆ ಸ್ಟೇರ್ ಕೇಸ್ ನೋಡಿದೆ.
``ಮೈ ಗಾಡ್... ದಿನಾ ಹೀಗೆ ಎಷ್ಟು ಸಲ ಹತ್ತಿ ಇಳೀತೀಯೇ....?'' ಗಾಬರಿಯಲ್ಲಿ ಕೇಳಿದೆ, ``ಮೂರ್ನಾಲ್ಕು ಅಂತಸ್ತಿಗೆಲ್ಲ ಲಿಫ್ಟ್ ಕೂಡ ಇರಲ್ವಂತೆ, ಇಲ್ಲೂ ಇಲ್ಲ....''
``ಓ ಅಮ್ಮಾ..... ಇದೇನೂ ಸಮಸ್ಯೆ ಅಲ್ಲ. ಒಳ್ಳೆ ಎಕ್ಸರ್ ಸೈಜ್ ಆಗುತ್ತೆ. ಡಾಕ್ಟರ್ ಕೂಡ ಇದನ್ನೇ ಎನ್ಕರೇಜ್ ಮಾಡ್ತಾರೆ,'' ನಗುತ್ತಾ ಹೇಳಿದ ಮಗಳನ್ನೇ ನೋಡಿದೆ.
`ಇದೇನು ಅಜ್ಜಿಯೇ ಇವಳ ರೂಪದಲ್ಲಿ ಹುಟ್ಟಿದಳಾ....? ನಿಜ.... ನೇಹಾ ಅಜ್ಜಿಯಂತೆ ತುಂಬಾ ಚುರುಕಾಗಿದ್ದಾಳೆ. ಹೊಟ್ಟೆಯ ಭಾಗ ಬಿಟ್ಟರೆ ದೇಹ ದಪ್ಪವೇ ಇಲ್ಲ.'
`ಬಸಿರು ಕಾಯಿಲೆ ಅಲ್ಲ ಕಣೇ ರೆಸ್ಟ್ ತಗೊಳಕ್ಕೆ. ಕಡೇ ತನಕ ಚಟುವಟಿಕೆ ಇದ್ರೆ, ಸಲೀಸಾಗಿ ಹೆರ್ಗೆ ಆಗುತ್ತೆ.....' ಹೀಗೆ ಹೇಳ್ತಾ ಇದ್ದ ಅಜ್ಜಿ ಮತ್ತೆ ನೆನಪಾದಳು.
ಜಗತ್ತಿನ ಮಹಾನಗರದ ಡಾಕ್ಟರ್ ಎಂಬಿಬಿಎಸ್, ಸ್ಪೆಷಲೈಸೇಷನ್ ಅಂತ ಅದೇನೋ ಡಿಗ್ರಿ ಮಾಡಿ ಈಗ ಹೇಳ್ತಿರೋ ಮಾತು. ಐವತ್ತು ವರ್ಷಗಳ ಹಿಂದೇ ಸ್ಕೂಲಿನ ಮೆಟ್ಟಿಲೂ ಹತ್ತದ ಮಲೆನಾಡ ಮೂಲೆಯ ನನ್ನಜ್ಜಿ ಹೇಳ್ತಿದ್ದು, ನನ್ನೂರಲ್ಲಿ ಅದೆಷ್ಟು ಹೆರಿಗೆಗಳನ್ನೂ ಮಾಡಿಸಿದ್ದಳು ಒಂದಾದರೂ ಫೇಲಾಗದಂತೆ. ಬಸುರಿಯರಿಗೆಲ್ಲ ಅವಳು ಹೇಳುತ್ತಿದ್ದುದು ಇದೇ ಮಾತು.
``ಇವೆಲ್ಲ ತಲೆತಲಾಂತರದಿಂದ ಹರಿದುಬಂದ ನಮ್ಮ ಜೀವನಾನುಭವ ಅಲ್ವಾ, ಅದಕ್ಕೆ ಯಾವ ಡಿಗ್ರಿ ಬೇಕಿತ್ತು.....?'' ನಸುನಕ್ಕೆ.
ಬಂದಾಗ ಮನೆ ಮುಂದೆಯೇ ಕಂಡ ದೊಡ್ಡದಾದ ಅಂಗಳ, ಅಂಗಳದ ತುಂಬಾ ಮರಗಳು, ಮರಗಳಲ್ಲಿ `ಆಟಂ'ನ ಆಟಕ್ಕೆ ಹಳದಿ. ಕೆಂಪು ಬಣ್ಣ ಹೊತ್ತ ಎಲೆಗಳು ಹಾರ್ದಿಕ ಸ್ವಾಗತ ಕೋರಿದಂತೆ ಭಾಸವಾಗಿತ್ತು. ಇವು ಎಲೆಯೋ, ಹೂವೋ ಎಂದು ಅನುಮಾನ ಹುಟ್ಟಿಸುವಷ್ಟು ಅಂದವಿತ್ತು. ಇವು ಉದುರುವ ಹಣ್ಣೆಲೆಗಳಂತೆ, ನನ್ನಜ್ಜಿಯ ಕೊನೆ ದಿನಗಳಂತೆ....ಯಾಕೋ ಪುಟ್ಟಜ್ಜಿ ಇಲ್ಲಿ ಗಟ್ಟಿಯಾಗಿ ನನ್ನಲ್ಲಿ....? ಮೊಟ್ಟ ಮೊದಲಿಗೆ ಮರಗಳ ಇಂಥ ವರ್ಣಮಯ ದೃಶ್ಯ ನೋಡಿದ್ದ ಬೆನ್ನ ಹಿಂದೇ ಪ್ರೀತಿಯ ಅಜ್ಜಿಯ ನೆನಪೂ ಹಿಂಬಾಲಿಸಿದಾಗ ನನ್ನ ಮುಖ ಬೀಗಿದ್ದು ನನಗೇ ಅನುಭವಕ್ಕೆ ಬಂದಿತು.
ಮೆಟ್ಟಿಲು ಹತ್ತಿ ಸುತ್ತಲೂ ಕಣ್ಣಾಡಿಸಿದೆ. ಎಡಕ್ಕೊಂದು, ಬಲಕ್ಕೊಂದು, ಹಿಂದೆಯೂ ಎರಡು ಮನೆಗಳು ಕಂಡಿತು. ಎಡಬದಿಯ ಬಾಗಿಲನ್ನು ತೆರೆದ ಮಗಳು, ಅಳಿಯ ``ಅಪ್ಪ ಅಮ್ಮ ವೆಲ್ ಕಂ,'' ಎಂದರು.
ಮನೆ ಬಹಳ ಅಚ್ಚುಕಟ್ಟಾಗಿತ್ತು. ಜರ್ಮನ್ ಮಾದರಿಯ ಅಡುಗೆಮನೆ, ಬಾತ್ ರೂಂ, ಹಾಲ್, ಎಲ್ಲವೂ ಬಿಳಿಯ ಬಣ್ಣದಲ್ಲಿ ವುಡನ್ ಫ್ಲೋರಿಂಗ್, ಕೂತರೆ ಹತ್ತಿಯಷ್ಟು ಮೃದುವಾದ ಸೋಫಾಸೆಟ್. ಎಲ್ಲಿ ನೋಡಿದರೂ ಗೋಡೆಯುದ್ದಕ್ಕೂ ನಿಂತ ಫಳಗುಟ್ಟುವ ಕಿಟಕಿ, ಬಾಗಿಲು. ಎಲ್ಲವೂ ಗಾಜು....





