ಮಧ್ಯಮ ವರ್ಗದ ಜೀವನವೇ ಹಾಗೇ! ದೈನಂದಿನ ಪ್ರತಿಯೊಂದು ಆಗುಹೋಗಿನ ಘಟನೆಗಳ ಕುರಿತಾಗಿ ಪತಿ ಪತ್ನಿಯರಲ್ಲಿ ಸಣ್ಣ ಪುಟ್ಟ ಸಿಟ್ಟು, ಅಸಮಾಧಾನ, ಕೋಪ ತಾಪ ಇದ್ದದ್ದೇ. ಇದನ್ನೆಲ್ಲಾ ದಾಟಿ ಬದುಕನ್ನು ಮುಂದುರಿಸಬೇಕಲ್ಲವೇ....?
ಅಲಾರಾಂ ಹೊಡೆದಾಗ ಕಣ್ಣು ಬಿಟ್ಟು ಎದ್ದೆ. ಬೆಳಗಿನ ಜಾವ ಐದು ಗಂಟೆ. ಹೊರಗಡೆ ಸಣ್ಣಗೆ ಸುರಿಯುತ್ತಿರುವ ಮಳೆ ಏಳಲು ಆಲಸ್ಯವನ್ನು ತಂದಿತು. ಬೆಚ್ಚಗೆ ಇನ್ನೂ ಸ್ವಲ್ಪ ಹೊತ್ತು ಹೊದ್ದು ಮಲಗಬೇಕು ಎನಿಸಿತು. ಚಳಿಗೆ ಅಸಾಧ್ಯವಾದ ಕಾಲು ನೋವು. ಆದರೆ ಮಾಡಬೇಕಾದ ಕೆಲಸಗಳನ್ನು ನೆನೆದು ಏಳಲೇಬೇಕು ಎನಿಸಿತು. 5 ಗಂಟೆಗೆ ಎದ್ದರೆ ಕೆಲಸಗಳು ಆಗುವುದು. ಇಲ್ಲದಿದ್ದರೆ ಶಾಲೆಯ ಬಸ್ ಮಿಸ್ ಆಗುವುದು ಖಂಡಿತ. ಬಸ್ ಮಿಸ್ ಆದರೆ ನಂತರ 40 ರೂ. ಬಸ್‌ಚಾರ್ಜ್ ಮತ್ತು 40 ರೂ. ಆಟೋ ಚಾರ್ಜ್ ಕೊಟ್ಟು ಹೋಗಬೇಕು. ಅದನ್ನು ನೆನೆಸಿಕೊಂಡರೆ ಏಳಲೇಬೇಕು.
ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಗೀಸರ್ ಸ್ವಿಚ್ ಹಾಕಿ ಅಡುಗೆಮನೆಗೆ ಹೋಗಿ ಅಂದಿನ ತಿಂಡಿ ತಯಾರಿ ನಡೆಸಿದೆ. ಸೋಮವಾರದ ದಿನ ಬೆಳಗ್ಗೆ ಬೇಗನೇ ಆಗುವ ತಿಂಡಿ ಮತ್ತು ನನ್ನಂತೆ ಕೆಲಸಕ್ಕೆ ಹೋಗುವ ಹೆಂಗಸರ ಕೈ ಹಿಡಿಯುವ ಆಪದ್ಬಾಂಧವ ಉಪ್ಪಿಟ್ಟು! ನಿನ್ನೆಯೆಲ್ಲ ದೋಸೆ, ಆಲೂಗಡ್ಡೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿ ಸಮಾರಾಧಾನೆ ಆಗಿತ್ತು. ಇವತ್ತು ಉಪ್ಪಿಟ್ಟೇ ಗತಿ. ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಅದಕ್ಕೆ ಒಂದಿಷ್ಟು ಕಾಯಿ ತುರಿದು ಹಾಕಿ, ಉಪ್ಪಿಟ್ಟು ಮಾಡಿ ಮುಗಿಸಿದೆ. ಅಡುಗೆಗೆ ಎಳೇ ಬದನೆಕಾಯಿ, ಬೇಳೆ ಹಾಕಿ ಹುಳಿ ಮಾಡಿಟ್ಟು, ರೈಸ್ ಕುಕ್ಕರ್ ನಲ್ಲಿ ಅನ್ನ ಮಾಡಿದೆ. ಅಷ್ಟರಲ್ಲಿ ಮಗರಾಯ ಎದ್ದು ನನ್ನ ಶೂ ಎಲ್ಲಿ, ಸಾಕ್ಸ್ ಎಲ್ಲಿ, ನಿನ್ನೆ ಹೋಂ ವರ್ಕ್ ಬುಕ್ ಇಲ್ಲೇ ಇಟ್ಟಿದ್ದೆ. ಈಗ ಕಾಣಿಸುತ್ತಾ ಇಲ್ಲ ಎನ್ನುವ ಅಡಾಉಡಿ ಶುರು ಮಾಡಿದ. ಎಲ್ಲವನ್ನೂ ಹುಡುಕಿ ಕೊಟ್ಟು ಸ್ನಾನಕ್ಕೆ ಹೋಗುವ ಹೊತ್ತಿಗೆ ನಾಟಕದ ಒಂದು ಅಂಕ ಮುಗಿಯುತ್ತದೆ. ಪತಿರಾಯರು ಎದ್ದು ಕಾಫಿ ಕುಡಿದು, ಟಿವಿ ಹಾಕಿಕೊಂಡು ಬೆಳಗಿನ ವಾರ್ತೆಗಳನ್ನು ನೋಡುತ್ತಿದ್ದರು. ಸಾಯಂಕಾಲ ನೋಡಬಾರದೇ ಎಂದರೆ ಏನಾದರೂ ಮುಖ್ಯ ವಿಷಯಗಳು ಇದ್ದರೆ ಗೊತ್ತಾಗುತ್ತದೆ ಎನ್ನುತ್ತಾರೆ. ಅದೂ ಒಂದು ರೀತಿಯಲ್ಲಿ ಅನುಕೂಲವೇ ಸರಿ. ಒಂದೆರಡು ಬಾರಿ ಯಾರೋ ಮಂತ್ರಿಗಳು ತೀರಿಕೊಂಡರು ಎಂದು ಇದ್ದಕ್ಕಿದ್ದಂತೆ ರಜೆ ಘೋಷಣೆಯಾದಾಗ ಈ ಟಿವಿ ನೋಡುವುದು ಸಹಾಯವಾಗಿತ್ತು. ಬೇಗ ಮೈಮೇಲೆ ನಾಲ್ಕು ತಂಬಿಗೆ ನೀರು ಸುರಿದುಕೊಂಡು ಸ್ನಾನದ ಶಾಸ್ತ್ರ ಮುಗಿಸಿದೆ. ಅಷ್ಟರಲ್ಲಿ ಏನು ತಿಂಡಿ ಉಪ್ಪಿಟ್ಟಾ.... ಎಂದು ಅಪ್ಪನ ಮಗನ ಗೊಣಗಾಟ ಕೇಳಿಸಿತು. ಅಂದು ದಸರಾ ಹಬ್ಬದ ದಿನ ನೋಡಲು ಬಂದಾಗ ಕೆಂಪಂಚಿನ ಜರಿ ಸೀರೆಯುಟ್ಟು, ಉದ್ದ ಜಡೆಯನ್ನು ಅಲ್ಲಾಡಿಸುತ್ತಾ ನಾಚಿಕೆಯಿಂದ ಉಪ್ಪಿಟ್ಟು ಕೇಸರಿ ಭಾತ್ ಪ್ಲೇಟ್ ಕೊಟ್ಟಾಗ ಚೆಂದದ ಮುಗುಳು ನಗೆ ಬೀರಿ ಉಪ್ಪಿಟ್ಟು ಬಾಯಲ್ಲಿ ಇಟ್ಟು, ಬಹಳ ಚೆನ್ನಾಗಿದೆ ಉಪ್ಪಿಟ್ಟು ಎಂದಿದ್ದರು. ನಮ್ಮ ಅಣ್ಣ ಇದು ಶುಭಾ ಮಾಡಿದ್ದು ಉಪ್ಪಿಟ್ಟು ಎಂದಾಗ ಇನ್ನೂ ಸ್ವಲ್ಪ ಹಾಕಿಸಿಕೊಂಡು ನನಗೆ ಉಪ್ಪಿಟ್ಟು ಅಂದರೆ ಬಹಳ ಇಷ್ಟ ಎಂದಿದ್ದರಲ್ಲವೇ? ಮುಖದಲ್ಲೊಂದು ಮಂದಹಾಸ ಮೂಡಿತು.





