ಪ್ರೀತಿ ಪ್ರೇಮದ ಅನುಭೂತಿ ಬಲು ರಮ್ಯವಾದುದು. ಅನ್ವಿತಾ ಪ್ರಸಾದ್ ರ ಈ ಆದರ್ಶ ಪ್ರೇಮ ಮುಂದೆ ಯಶಸ್ವಿ ವೈದ್ಯರಾಗಿ, ಉತ್ತಮ ಕೆರಿಯರ್ ರೂಪಿಸಿಕೊಂಡು ಮುಂದಿನ ಪೀಳಿಗೆಗೆ ಹೇಗೆ ಆದರ್ಶ ಜೋಡಿ ಎನಿಸಿದರು......?
``ಹಲೋ ಗುಡ್ ಮಾರ್ನಿಂಗ್ ಡಾಕ್ಟರ್,'' ಧ್ವನಿ ಕೇಳಿಸುತ್ತಲೇ ಸ್ವರಗಳು ತೇಲಿ ಬಂದಂತಹ ಮಧುರಾನುಭೂತಿಗೆ, ``ವೆರಿ ಗುಡ್ ಮಾರ್ನಿಂಗ್ ಡಾಕ್ಟರ್....'' ಎನ್ನುತ್ತ ಪರಸ್ಪರ ಕಣ್ಣೋಟಗಳು ಬೆರೆತವು.
ಅಬ್ಬಾ....! ಇಷ್ಟೊಂದು ವರ್ಷಗಳ ನಂತರ ಭೇಟಿಯಾದರೂ ಅದೇ ಮೋಹಕ ರೂಪ, ಸ್ನಿಗ್ಧ ಸೌಂದರ್ಯ! ಸಾವಿರಾರು ಜನರಲ್ಲಿಯೂ ಎದ್ದು ಕಾಣುವಂತಹ ಅಪರೂಪದ ಎತ್ತರದ ನಿಲುವು, ಮಾದಕತೆ ತುಂಬಿದ ಕಂಗಳು, ಜೀವನಕ್ಕೆ ಸ್ಛೂರ್ತಿ ನೀಡುವಂತಹ ಆತ್ಮವಿಶ್ವಾಸ ತುಂಬಿದ ನಡೆನುಡಿ...!
ವಿದ್ಯಾರ್ಥಿಗಳ ಚರ್ಚೆಗೆ ಮುಖ್ಯ ವಿಷಯವಾಗಿದ್ದ ಅನ್ವಿತಾಳ ನೇರ ನಡೆನುಡಿ ಇತರರಿಗೆ ಅಸೂಯೆ ಹುಟ್ಟಿಸುವಂತಿತ್ತು. ಮೊದಲ ವರ್ಷದ ವ್ಯಾಲೆಂಟೈನ್ ವೀಕ್ ನಲ್ಲಿ ಪ್ರಪೋಸ್ ಮಾಡಲು ಮುಂದಾದ ಅನೇಕ ಹುಡುಗ ಹುಡುಗಿಯರನ್ನು ತನ್ನ ಬೆರಗುಗಣ್ಣಿನಿಂದ ನೋಡುತ್ತಲೇ, ಅದು ಹೇಗೆ ಇವರಿಗೆಲ್ಲ ಇಷ್ಟು ಕಡಿಮೆ ಸಮಯದಲ್ಲಿ ಪ್ರೀತಿ ಹುಟ್ಟುತ್ತೆ....?! ಎಂದು ಯೋಚಿಸುತ್ತಿದ್ದಳು.
ಅದೆಷ್ಟು ಬೇಗ ಜೀವನದ ಇಂತಹ ಮಹತ್ತರ ನಿರ್ಧಾರಕ್ಕೆ ಬರ್ತಾರೋ....? ನನಗಂತೂ ಅರ್ಥವೇ ಆಗ್ತಿಲ್ಲ ಅಂತ ನಗುತ್ತ ಮುಂದೆ ನಡೆದ ಅನ್ವಿತಾಳಿಗೆ ಯಾರೊಬ್ಬರೂ ಪ್ರಪೋಸ್ ಮಾಡಲಿಚ್ಛಿಸಲಿಲ್ಲ. ಅದಕ್ಕಾಗಿ ಈ ಆ್ಯಟಿಟ್ಯೂಡ್ ಅಂತ ಎಲ್ಲರೂ ಗೇಲಿ ಮಾಡುತ್ತಿದ್ದರು.
``ಇನ್ ಸರ್ಚ್ ಆಫ್ ಗೋಲ್ಡ್.... ದೆ ಲಾಸ್ಟ್ ಎ ಡೈಮಂಡ್,'' ಎನ್ನುತ್ತಲೇ ಹತ್ತಿರವಾದ ಒಬ್ಬ ಹುಡುಗ.``ವಿಲ್ ಯು ಬಿ ಮೈ ಬೆಸ್ಟ್ ಫ್ರೆಂಡ್...?'' ಎನ್ನುತ್ತಾ ಕೆಂಪು ಗುಲಾಬಿ ಹೂವನ್ನು ಕೈಗಿತ್ತ ಸುರ ಸುಂದರಾಂಗನನ್ನು ನೋಡುತ್ತಲೇ ಅವನ ನಯ, ವಿನಯ ಮತ್ತು ಆತ್ಮೀಯ ನಿವೇದನೆಗೆ ತಕ್ಷಣಕ್ಕೆ ಏನೆಂದು ಉತ್ತರಿಸಲು ತಿಳಿಯದಾದಳು ಅನ್ವಿತಾ. ಬೆಸ್ಟ್ ಫ್ರೆಂಡ್ ಎನ್ನುವ ಪದವಂತೂ ಆಗಾಗ ಪ್ರತಿಧ್ವನಿಸಿದಂತಾಗಲು `ಎಸ್' ಎಂದು ಕೈ ಕುಲುಕಿ ಹೂವನ್ನು ಸ್ವೀಕರಿಸಿ ತನ್ನ ರೂಮಿನತ್ತ ಹೆಜ್ಜೆ ಹಾಕಿದಳು.
ಹೀಗೆ ಪ್ರಾರಂಭವಾದ ಸ್ನೇಹ, ಪರಸ್ಪರ ಆಸೆ ಆಕಾಂಕ್ಷೆಗಳ ಬಗ್ಗೆ ಅರಿಯುತ್ತ ಈ ಏಳು ವರ್ಷಗಳಲ್ಲಿ ಅಮರ ಪ್ರೇಮವಾಗಿ ಮಾರ್ಪಾಡಾಗಿತ್ತು. ಸುಂದರ ಜೀವನದ ಬಗ್ಗೆ ತಮ್ಮದೇ ಆದಂತಹ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಮುನ್ನಡೆದ ಇಬ್ಬರಲ್ಲೂ ಮನೆ ಮಾಡಿದ್ದ ಆದರ್ಶದ ನಡೆನುಡಿ, ಪ್ರಬುದ್ಧ ಯೋಚನಾಲಹರಿ ಇಡೀ ಕಾಲೇಜಿನಲ್ಲಿ ಸುದ್ದಿಯಾಗಿತ್ತು. ಎಲ್ಲ ವಿದ್ಯಾರ್ಥಿಗಳು ಟೈಮ್ ಪಾಸ್ ಅಥವಾ ಶೋ ಆಫ್ ಗಾಗಿ ಅಂತಲೇ ಮಾಡಿಕೊಂಡ ತಾತ್ಕಾಲಿಕ ಒಪ್ಪಂದ ನೋಡುಗರ ದೃಷ್ಟಿಯಲ್ಲಿ ಪ್ರೀತಿಯ ರೂಪ ಪಡೆದಂತಿತ್ತು. ಈ ವರ್ಷ ಒಂದು ಜೋಡಿಯಾದರೆ ಮಾರನೇ ವರ್ಷ, ಮತ್ತೊಂದು, ಮಗದೊಂದು ಎನ್ನುವಂತಹ ಹುಡುಗಾಟಿಕೆಯ ಜೀವನಶೈಲಿಯು ವಿದ್ಯಾರ್ಥಿಗಳ ಮಧ್ಯದಲ್ಲಿ ಸರ್ವೇ ಸಾಮಾನ್ಯವಾದಂತಹ ಕಾಲಘಟ್ಟದಲ್ಲಿ ಇಂತಹ ಅಪರೂಪದ ಮಾದರಿ ಜೋಡಿ ಸಿಗೋದು ನಿಜಕ್ಕೂ ಅದೃಷ್ಟವೇ ಸರಿ!
ಮೊದಲ ವರ್ಷದ ವೈದ್ಯಕೀಯ ಕಾಲೇಜಿನ ಮೆಟ್ಟಿಲೇರಿದ ಅವಿಸ್ಮರಣೀಯ ದಿನದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದು ಈ ಜೋಡಿ ಕಂಗಳು ಎನ್ನುತ್ತ ಪ್ರೇಮದಿಂದ ಡಾ. ಅನ್ವಿತಾಳಿಗೆ ಕೆಂಪು ಗುಲಾಬಿ ಹೂವನ್ನಿತ್ತ ಡಾ. ಪ್ರಸಾದ್. ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ತನ್ನದೇ ಆದಂತಹ ಆಸ್ಪತ್ರೆ ಕಟ್ಟುವ ಕನಸಿಗೆ ಬಣ್ಣ ತುಂಬುವ ಮೂಲಕ ಇಂದಿನ ಯಶಸ್ಸಿಗೆ ಪ್ರೇರಣೆಯಾಗಿ ಪರಸ್ಪರ ಜೀವನ ಸಂಗಾತಿಯಾಗುವ ಅದಮ್ಯ ಆಸೆಯದು ಗರಿಗೆದರಿ ನಲಿಯುತ್ತಿತ್ತು.





