ಮನೆಯವರೆಲ್ಲರ ಮುದ್ದಿನ ಕಣ್ಮಣಿಯಾಗಿ ಬೆಳೆದಿದ್ದ ಚೈತ್ರಾ, ಮುಂದೆ ಶೇಖರ್ ನನ್ನು ಪ್ರೀತಿಸಿ, ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ಅವನನ್ನೇ ಮದುವೆಯಾದಳು. ಮುಂದೆ ಅವಳು ತಾಯಿಯಾಗುವ ಸಂದರ್ಭದಲ್ಲಿ ತವರಿನವರನ್ನು ಬಹಳ ನೆನೆದಾಗ, ಅವರು ಅವಳನ್ನು ಸ್ವೀಕರಿಸಿದರೆ......?
ಉದಯಿಸುತ್ತಿರುವ ಬಾಲರವಿಯ ಆ ಸುಂದರ ಕಿರಣಗಳು, ಕಿಟಕಿಯ ಮೂಲಕ ಬಂದು ಗಂಡನ ಬಾಹು ಬಂಧನದಲ್ಲಿ ಮಲಗಿದ್ದ, ಚೈತ್ರಾಳನ್ನು ಎಚ್ಚರಿಸಿದವು. ಮೆಲ್ಲಗೆ ಗಂಡನಿಂದ ಬಿಡಿಸಿಕೊಂಡು ಹೊರಗೆ ಬಂದಳು. ಅದೇ ತಾನೇ ಅರಳುತ್ತಿರುವ ಬಣ್ಣ ಬಣ್ಣದ ಸುಂದರ ಗುಲಾಬಿ ಹೂಗಳನ್ನು ನೋಡುತ್ತಾ ನಿಂತಳು. ಕೆಂಪು, ಹಳದಿ, ಬಿಳಿ, ಕೇಸರಿ ಬಣ್ಣ ಬಣ್ಣದ ಹೂಗಳು. ಒಂದಕ್ಕಿಂತ ಒಂದು ಸುಂದರ, ಎಲ್ಲವನ್ನೂ ಕೈಯಿಂದ ಸವರುತ್ತಾ ಬಂದಳು.
ಅವಳಿಗೆ ಮುಂಜಾವಿನಲ್ಲಿ ಹೂ ಗಿಡಗಳನ್ನು ನೋಡುವುದೆಂದರೆ ತುಂಬಾ ಇಷ್ಟ. ಬೆಳದಿಂಗಳ ರಾತ್ರಿಯಂತೂ ಗಂಡನ ಜೊತೆಗೆ ಕುಳಿತು ಹೂವನ್ನು, ಚಂದ್ರನನ್ನು ನೋಡಿ ಮೈಮರೆಯುತ್ತಿದ್ದಳು. ಎಲ್ಲಾ ಹೂಗಳನ್ನು, ನೋಡಿದ ನಂತರ ದೃಷ್ಟಿ ಸೂರ್ಯನ ಕಡೆ ಹೊರಳಿತು. ಸೂರ್ಯನ ಸುತ್ತ ಕೆಂಪು ರಂಗಿನಿಂದ ಕೂಡಿದ ಆವಕಾಶ ತುಂಬಾ ಸುಂದರವಾಗಿತ್ತು. ಅದನ್ನು ನೋಡುತ್ತಾ ಮೈ ಮರೆತಳು.
ರೂಮಿನಿಂದ, ``ಚೈತೂ... ಚೈತೂ....'' ಎಂದು ಕೂಗಿದ ಗಂಡನ ಕರೆಯಿಂದ ಎಚ್ಚೆತ್ತ ಚೈತ್ರಾ ರೂಮಿಗೆ ಓಡಿಬಂದಳು.
ಅವಳ ಹೆಜ್ಜೆಯ ಸಪ್ಪಳ ಕೇಳಿದ್ದೇ.... ಶೇಖರ್ ಕಣ್ಣು ಮುಚ್ಚಿಕೊಂಡು, ``ಗುಡ್ ಮಾರ್ನಿಂಗ್ ಹೇಳುವವರೆಗೂ ಏಳೋಲ್ಲ......'' ಎಂದು ಕೂಗಿದ.
ಎಂದಿನಂತೆ ಹಾಗೇ ತಾನು ನಿಂತಲ್ಲೇ `ಗುಡ್ ಮಾರ್ನಿಂಗ್ ಸರ್' ಎಂದು ಕೀಟಲೆ ಮಾಡದೆ ಹತ್ತಿರ ಹೋಗಿ ಒಂದು ಹೂಮುತ್ತು ಕೊಟ್ಟಳು. ಅವನು ಅವಳ ಕೈ ಹಿಡಿದು ಎಳೆದುಕೊಳ್ಳುವಷ್ಟರಲ್ಲಿ ಅವಳು ಗಂಭೀರವಾಗಿ, ``ಬೇಗ ಮುಖ ತೊಳೆದು ಬನ್ನಿ. ಕಾಫಿ ತರ್ತೀನಿ,'' ಎನ್ನುತ್ತಾ ಎದ್ದು ಹೋದಳು.
ಮಲಗಿದ್ದಲ್ಲೇ ಶೇಖರ್ ಯೋಚಿಸಿದ, `ಚೈತ್ರಾ ಯಾಕೋ ಎಂದಿನಂತಿಲ್ಲ. ಮದುವೆಯಾದ ಆರು ತಿಂಗಳು ತುಂಬಾ ಚೆನ್ನಾಗಿದ್ದಳು. ಈಗೆಲ್ಲಾ ತಿಂಗಳು ಎರಡು ತಿಂಗಳಿಗೊಮ್ಮೆ ಹೀಗೆ ಎಲ್ಲರನ್ನೂ ನೆನೆಸಿಕೊಂಡು ಮನಸ್ಸು ಕೆಡಿಸಿಕೊಳ್ಳುತ್ತಾಳೆ. ನಿಜವಾಗಿಯೂ ಚೈತ್ರಾಳಂತಹ ಹುಡುಗಿ ಮಡದಿಯಾಗಿರುವುದು ನನಗೆ ಹೆಮ್ಮೆ,' ಹೀಗೆ ಅವಳ ಬಗ್ಗೆಯೇ ಯೋಚಿಸುತ್ತಾ ಎದ್ದು ಹೋಗಿ ಮುಖ ತೊಳೆದು ಬರುವಷ್ಟರಲ್ಲಿ ಚೈತ್ರಾ ಕಾಫಿ ತಂದಳು.
ಇಬ್ಬರೂ ಮಾತನಾಡುತ್ತಾ ಕಾಫಿ ಕುಡಿದರು. ನಂತರ ಅವನು ಸ್ನಾನ, ತಿಂಡಿ ಮಾಡುವಾಗ ಚೈತ್ರಾ ನಗುನಗುತ್ತಲೇ ಇದ್ದರೂ ಅವಳ ಮನಸ್ಸು ಸರಿಯಾಗಿಲ್ಲ ಎಂಬುದನ್ನು ಶೇಖರನ ಸೂಕ್ಷ್ಮ ಕಣ್ಣುಗಳು ಗುರುತಿಸಿದವು.
ಆಫೀಸಿಗೆ ಹೋಗುವಾಗಲೂ ಸಹ ಅವಳನ್ನು ಮುದ್ದುಗರೆಯುತ್ತಾ, ``ನನ್ನ ರಾಣಿ, ಯಾವುದಕ್ಕೂ ಯೋಚಿಸಬೇಡ. ಪುಸ್ತಕ ಓದು, ನಿನ್ನ ಗಿಡಗಳ ಜೊತೆಗೆ ಮಾತನಾಡುತ್ತಿರು, ಮಲಗಿ ನಿದ್ದೆ ಮಾಡು. ಬೇಗ ಬಂದು ಬಿಡ್ತೀನಿ....'' ಎನ್ನುತ್ತಾ ಹೊರಬಂದ.
ಅವನನ್ನೇ ಹಿಂಬಾಲಿಸಿ ಗೇಟಿನವರೆಗೂ ಬಂದು ಅವನು ಗಾಡಿಯಲ್ಲಿ ಹೋಗುವುದನ್ನು ನೋಡುತ್ತಾ ನಿಂತಳು. ಮತ್ತೊಮ್ಮೆ ಎಲ್ಲಾ ಗಿಡಗಳನ್ನೂ ಪರಿಶೀಲಿಸಿ, ಒಳಗೆ ಬಂದು ಪೇಪರ್ ಹಿಡಿದು ಕುಳಿತಳು. ಅಷ್ಟರಲ್ಲಿ ಮನೆ ಕೆಲಸ ಮಾಡುವ ಗೌರಮ್ಮ ಬಂದಳು. ಮಾಮೂಲಿನಂತೆ ಅವಳಿಗೆ ಪಾತ್ರೆ, ಬಟ್ಟೆ ಎಲ್ಲಾ ಹಾಕಿ ಅವಳು ಕೆಲಸ ಮುಗಿಸುವವರೆಗೂ ಪೇಪರ್ ನೋಡುತ್ತಾ ಕುಳಿತಳು.





