– ರಾಘವೇಂದ್ರ ಅಡಿಗ ಎಚ್ಚೆನ್.
ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ಕಳೆದ ಮೂರು ದಿನಗಳಿಂದ ಕಸಕ್ಕೆ ಬೆಂಕಿ ಹಾಕಿ ಸುಡಲಾಗುತ್ತಿದ್ದು, ಇದರಿಂದ ಬರುತ್ತಿರುವ ಹೊಗೆಯಿಂದ ಮನೆಯಲ್ಲಿ ಉಸಿರಾಡುವುದಕ್ಕೆ ಆಗುತ್ತಿಲ್ಲ ಎಂದು ಚಿತ್ರ ನಟಿ ಐಂದ್ರಿತಾ ರೇ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ರಾಜರಾಜೇಶ್ವರಿ ನಗರ ಪ್ರದೇಶದಲ್ಲಿ ಮೂರು ದಿನಗಳಿಂದ ಕಸ ಸುಡುತ್ತಿದ್ದಾರೆ. ಏನಿದು ಸಮಸ್ಯೆ ಎಂದು ನೋಡಿದಾಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಿಬ್ಬಂದಿಯೇ ಕಸ ಸುಡುತ್ತಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಉಸಿರಾಡುವುದಕ್ಕೂ ಆಗುತ್ತಿಲ್ಲ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಾಯವಾಣಿಗೆ ಕರೆ ಮಾಡಿದರೂ ಸಂಪರ್ಕ ಆಗುತ್ತಿಲ್ಲ ಎಂದು ಹೇಳಿರುವ ಅವರು, ಕಸ ಸುಡುತ್ತಿರುವ ವಿಡಿಯೋ ಸಹ ಹಂಚಿಕೊಂಡಿದ್ದು, ಸರಿಯಾದ ರೀತಿಯಲ್ಲಿ ಕಸ ವಿಲೇವಾರಿ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟಿ ಐಂದ್ರಿತಾ ರೇ ಮನೆಗೆ ಈ ಜಾಗ ಒಂದು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಯವರೆಗೂ ದಟ್ಟ ಹೊಗೆ, ಕೆಟ್ಟ ವಾಸನೆ ಆವರಿಸಿಕೊಂಡಿದೆ. ಈ ಹೊಗೆಯಿಂದ ಉಸಿರಾಟಕ್ಕೆ ಸಮಸ್ಯೆಯಾಗಿದ್ದು, ಜಿಬಿಎಗೆ ಹಲವು ಸಲ ಕರೆ ಮಾಡಿದ್ರೂ ಸ್ಪಂದಿಸಿಲ್ಲ. ನಟಿ ಐಂದ್ರಿತಾ ರೈ ತಾಯಿ ಮನೆಗೆ ಹೋಗಿದ್ದು, ಆರೋಗ್ಯವನ್ನು ಕಾಪಾಡಿಕೊಳ್ತಿದ್ದಾರೆ. ಅದೇನೆ ಇರಲಿ ಊರವರಿಗೆಲ್ಲ ಬುದ್ಧಿ ಹೇಳುವ ಜಿಬಿಎನೇ, ಕಸಕ್ಕೆ ಬೆಂಕಿ ಹಾಕಿ, ಸಾರ್ವಜನಿಕರಿಗೆ ಸಮಸ್ಯೆ ಮಾಡಿದ್ದರ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.
ಕಸದ ಬೆಂಕಿಗೆ ನೀರು: ಸುಮನಹಳ್ಳಿಯ ಸತ್ವ ಅಪಾರ್ಟ್ಮೆಂಟ್ ಪಕ್ಕದ ಜಾಗದಲ್ಲಿಯೂ ಶುಕ್ರವಾರ ಕಸ ಸುರಿದು ಬೆಂಕಿ ಹಾಕಲಾಗಿದ್ದು, ಈ ಕುರಿತು ಸ್ಥಳೀಯರು ದೂರು ನೀಡಿದ ಬಳಿಕ ಅಧಿಕಾರಿಗಳು ಕಸದ ಬೆಂಕಿಗೆ ನೀರು ಹಾಕಿ ನಂದಿಸಿದ್ದಾರೆ.





