ನಟಿ ವಿದ್ಯಾ ಬಾಲನ್ ಪ್ರೇಮಾನುಬಂಧದ ಗಾಢ ಸಂಬಂಧದ ಬಗ್ಗೆ ಏನು ಹೇಳುತ್ತಿದ್ದಾಳೆ ಎಂದು ತಿಳಿಯೋಣವೇ…..?
ಬಾಲಿವುಡ್ ನ ಬ್ಲಾಕ್ ಬಸ್ಟರ್ ಗಳಾದ `ಪರಿಣೀತಾ, ಲಗೆ ರಹೋ ಮುನ್ನಾಭಾಯಿ, ದಿ ಡರ್ಟಿ ಪಿಕ್ಚರ್, ಕಹಾನಿ, ಶಕುಂತಲಾ ದೇವಿ,’ ಮುಂತಾದ ಚಿತ್ರಗಳಿಂದ ಹಿಂದಿ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ವಿದ್ಯಾ ಬಾಲನ್ ಬಲು ಹಸನ್ಮುಖಿ, ವಿನಮ್ರ, ಸ್ಪಷ್ಟಭಾಷಿಣಿ, ಖಂಡಿತವಾದಿ ಎನಿಸಿದ್ದಾಳೆ.
`ಲಗೇ ರಹೋ….’ ಈಕೆಯ ಕೆರಿಯರ್ ನ ಟರ್ನಿಂಗ್ ಪಾಯಿಂಟ್. ಅದಾದ ಮೇಲೆ ಆಕೆ ಹಿಂದಿರುಗಿ ನೋಡಲೇ ಇಲ್ಲ. ತನ್ನ ಅತ್ಯುತ್ತಮ ನಟನೆಗಾಗಿ ಈಕೆ ಹಲವಾರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾಳೆ. 2014ರಲ್ಲಿ ಈಕೆಯನ್ನು ರಾಷ್ಟ್ರೀಯ ಖ್ಯಾತಿವೆತ್ತ ಪದ್ಮಶ್ರೀ ಪ್ರಶಸ್ತಿ ಸಹ ಅರಸಿ ಬಂತು. ಈಕೆ ಈಗಲೂ ಸಹ ನಿರ್ಮಾಪಕ ನಿರ್ದೇಶಕರ ಮೊದಲ ಆಯ್ಕೆ.
ತನ್ನ ಯಶಸ್ಸಿನಿಂದ ಗರ್ವ ತಲೆಗೇರಿಸಿಕೊಳ್ಳದ ವಿದ್ಯಾ, ಅದರಿಂದ ಸಂತೃಪ್ತಿ ಕಂಡುಕೊಂಡಿದ್ದಾಳೆ. ಒಂದು ಉತ್ತಮ ಕಥೆ ಇದ್ದಾಗ ಮಾತ್ರ ಆ ಚಿತ್ರ ಯಶಸ್ವಿಯಾಗಲು ಸಾಧ್ಯ ಎನ್ನುತ್ತಾಳೆ ವಿದ್ಯಾ. ಮಲೆಯಾಳಂ, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿರುವ ವಿದ್ಯಾ, ಎಲ್ಲಾ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡಬಲ್ಲಂಥ ಗಟ್ಟಿಗಿತ್ತಿ! ಆಕೆ ಎಲ್ಲಾ ಬಗೆಯ ಪಾತ್ರಗಳನ್ನೂ ಬಯಸುತ್ತಾಳೆ. ಆ್ಯಕ್ಷನ್, ಫೈಟಿಂಗ್ ಚಿತ್ರ ಬೇಡವಂತೆ. ಕಾಮಿಡಿ ಡ್ರಾಮಾ ಚಿತ್ರಗಳು ಆಕೆಯ ಮೊದಲ ಆಯ್ಕೆ.
ಅಮ್ಮನ ಮಾರ್ಗದರ್ಶನ
ವಿದ್ಯಾಳ ಯಶಸ್ವೀ ಜೀವನದಲ್ಲಿ ಅವಳ ತಾಯಿ ದೊಡ್ಡ ಪಾತ್ರ ವಹಿಸುತ್ತಾರೆ. “ನಾನು ನನ್ನ ಬಗ್ಗೆ ಸರಿಯಾಗಿ ಯೋಚಿಸುವ ದಾರಿಯನ್ನು ಅಮ್ಮ ಕಲಿಸಿದರು. 2007-08ರಲ್ಲಿ ನನ್ನ ಡ್ರೆಸ್, ದೇಹ ತೂಕದ ಕುರಿತು ಎಲ್ಲರೂ ಟೀಕಿಸುತ್ತಿದ್ದಾಗ, ನಾನು ನಟಿಸುವುದನ್ನೇ ಬಿಟ್ಟುಬಿಡಬೇಕು ಅಂತ ನಿರ್ಧರಿಸಿದ್ದೆ. ಆಗ ಅಮ್ಮ ಮಾತ್ರವೇ ನನಗೆ ಸರಿ ದಾರಿ ತೋರಿಸಿದರು. ಹೆಚ್ಚು ಹೆಚ್ಚು ಶ್ರಮ ಪಡುವುದರಿಂದ ದೇಹ ತೂಕ ತಾನಾಗಿ ಕರಗುತ್ತದೆ ಎಂದು ಕಲಿಸಿದರು. ಯಾರೋ ಏನೋ ಹೇಳಿದರು ಅಂತ ನಾನೇಕೆ ಸಿನಿಮಾ ಬಿಟ್ಟುಬಿಡಬೇಕು ಎಂದು ಉತ್ಸಾಹ ತುಂಬಿದರು. ಆಕೆಯ ಮಾತು ಚಾಚೂ ಮೀರದೆ, ಅದನ್ನು ಪಾಲಿಸಿದ್ದರಿಂದ ಇಂದು ನಾನು ಈ ಸ್ಥಿತಿ ತಲುಪಿದ್ದೇನೆ.”
ವಿದ್ಯಾಳ `ದೋ ಔರ್ ದೋ ಪ್ಯಾರ್’ ಚಿತ್ರ ಇತ್ತೀಚೆಗೆ ಬಿಡುಗಡೆ ಆಗಿದೆ. ಇದರಲ್ಲಿ ಈಕೆಯ ಪಾತ್ರವನ್ನೂ ವೀಕ್ಷಕರು ಬಹಳ ಮೆಚ್ಚಿಕೊಂಡಿದ್ದಾರೆ.
ಪಾತ್ರ ಪೋಷಣೆಯೇ ಪ್ರಮುಖ
ದಿ ಮೋಸ್ಟ್ ಬ್ಯೂಟಿಫುಲ್ ಗ್ಲಾಮರಸ್ ನಟಿ ಎಂಬ ಹೆಗ್ಗಳಿಕೆಯೊಂದಿಗೆ, ತಾನು ಮಾಡಿದ ಎಲ್ಲಾ ಚಿತ್ರಗಳಲ್ಲೂ ಈಕೆ ಬಲು ಸ್ಟ್ರಾಂಗ್ ಗಟ್ಟಿಗಿತ್ತಿ ಹುಡುಗಿಯ ಪಾತ್ರವನ್ನೇ ನಿಭಾಯಿಸಿದ್ದಾಳೆ. `ಶೇರನಿ’ ಯಾ `ಕಹಾನಿ’ ಚಿತ್ರಗಳೇ ಇರಲಿ, ಈಕೆಯ ಲುಕ್ಸ್ ಬಲು ಸರಳ. ಇದಕ್ಕೆ ಕಾರಣ?
“ನನಗೆ ಅಂಥ ದೊಡ್ಡ ವ್ಯತ್ಯಾಸ ಏನೂ ಕಾಣ್ತಿಲ್ಲವಲ್ಲ. ಯಾವಾಗ ಎಂಥ ಆಫರ್ ಬಂದರೂ ನಾನು ಈ ಘಟ್ಟದ ಕುರಿತು ಎಂದೂ ಯಾವ ಡಿಸ್ಕವರಿ ಮಾಡಲಿಕ್ಕೂ ಹೋಗಲಿಲ್ಲ, ನಿಜವಾದ ಕಲಾವಿದರಿಗೆ ಅದರ ಅಗತ್ಯವಿಲ್ಲ ಎಂದೇ ಭಾವಿಸುತ್ತೇನೆ. ನಾನು ಯಾವುದೇ ಪಾತ್ರ ನಿರ್ವಹಿಸಿದರೂ, ಆ ಪಾತ್ರಕ್ಕೆ ನಾನು ಎಷ್ಟು ನ್ಯಾಯ ಒದಗಿಸಬಲ್ಲೆ ಎಂದು ನನ್ನ ಬಗ್ಗೆ ನಾನೇ ಹಲವು ಸಲ ಪ್ರಶ್ನಿಸಿಕೊಳ್ಳುತ್ತೇನೆ. ಈ ಪಾತ್ರ ನಾನು ಹಿಂದೆ ಮಾಡಿದ್ದೇನೆಯೇ? ಇದನ್ನು ನಾನು ನಿರ್ವಹಿಸಲು ಸಾಧ್ಯವೇ ಎಂದು ಹಲವು ಸಲ ಯೋಚಿಸುತ್ತೇನೆ. `ಜಲ್ಸಾ’ ಚಿತ್ರದಲ್ಲಿ ಹಾಗೇ ಆಯಿತು. ಪ್ರತಿ ಚಿತ್ರದಲ್ಲೂ ಹೊಸ ಹೊಸ ಆಯಾಮಗಳನ್ನು ಹುಡುಕುವ ಪ್ರಯತ್ನ ನಡೆಸುತ್ತೇನೆ. ನಿರ್ದೇಶಕರು ನನಗೆ ಸೂಕ್ತ ಅವಕಾಶ ನೀಡಲಿಲ್ಲ ಅಂತಲ್ಲ. ನಾನು ನನ್ನ ಬ್ಯೂಟಿಯನ್ನೇ ಬಂಡವಾಳವಾಗಿಟ್ಟು ನಟಿಸುವುದಿಲ್ಲ. ನೋಡೋಣ…. ಮುಂದೆ ಅಂಥ ಪಾತ್ರ ಬರಬಹುದೇನೋ…..?”
ಆ್ಯಕ್ಷನ್ ಫೈಟಿಂಗ್ ಚಿತ್ರ ಬೇಡ
“ನಾನು 10 ವರ್ಷಗಳ ನಂತರ ಮತ್ತೆ ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಈ ಅವಕಾಶ ಬಹಳ ಕಾಲದ ನಂತರ ಸಿಕ್ಕಿದೆ. ಇತ್ತೀಚೆಗಂತೂ ಲವ್ ಸ್ಟೋರೀಸ್‌ರೊಮ್ಯಾಂಟಿಕ್ ಚಿತ್ರಗಳು ಬರುತ್ತಲೇ ಇಲ್ಲ ಎನ್ನಬಹುದು. ಹಿಂದಿನ 80-90ರ ದಶಕದ ಲವ್ ಸ್ಟೋರಿಗಳು ಎಲ್ಲಿ ಮಾಯವಾದವೋ ಏನೋ….? ಇಂದಿನ ಮಾರಾಮಾರಿ ಕೊಲೆ, ಹತ್ಯಾಕಾಂಡಗಳ ಚಿತ್ರ ನೋಡಿ ನೋಡಿ ವಾಕರಿಕೆ ಬರುವಂತಾಗಿ ಹೋಗಿದೆ. ವೀಕ್ಷಕರ ಮಧ್ಯೆ ಕುಳಿತು ಇಂಥ ಚಿತ್ರ ನೋಡಲು ನಾನು ಖಂಡಿತಾ ಬಯಸುವುದಿಲ್ಲ. ಇಂದಿನ ಚಿತ್ರಗಳಲ್ಲಿ ಇಂಥ ವೈಲೆನ್ಸ್, ಭೀಭತ್ಸ ದೃಶ್ಯಗಳು ಬಿಟ್ಟರೆ ಮತ್ತೇನು ತಾನೇ ಇದೆ? ಖಂಡಿತಾ ಇಂಥ ಚಿತ್ರಗಳನ್ನು ನಾನು ಇಷ್ಟಪಡುವುದಿಲ್ಲ. ಹೀಗಿರುವಾಗ ನನಗೆ `ದೋ ಔರ್ ದೋ ಪ್ಯಾರ್’ನಂಥ ಕಾಮಿಡಿ, ರೊಮ್ಯಾಂಟಿಕ್ ಚಿತ್ರ ಸಿಕ್ಕಿತು, ನಾನು ಬಹಳ ಎಂಜಾಯ್ ಮಾಡಿ ನಟಿಸಿದ್ದೇನೆ.
“ಈ ಚಿತ್ರದಲ್ಲಿ ವಿವಾಹೇತರ ಅಫೇರ್ ಕುರಿತ ಪ್ರಸ್ತಾಪವಿದೆ. ಇಲ್ಲಿ ಲವರ್ಸ್ ಸಹ ಪರಸ್ಪರ ಏಮಾರಿಸುತ್ತಾರೆ. ಇಂಥ ವಿಚಿತ್ರ ತಿರುವನ್ನು ಹಿಂದೆ ನಾನು ಕೇಳಿರಲಿಲ್ಲ. ಇದು ನಿಜಕ್ಕೂ ಡಿಫರೆಂಟ್ ಆಗಿದೆ. ಇಂಥ ಚಿತ್ರ ಬಲು ಹಾಸ್ಯಭರಿತ ಎನಿಸುತ್ತದೆ. ಆದರೆ ಹೀಗೆ ಯಾರದಾದರೂ ಜೀವನದಲ್ಲಿ ನಡೆದರೆ, ಅದು ಖಂಡಿತಾ ಅವರಿಗೆ ಒಳ್ಳೆಯದಲ್ಲ. ಜನ ಅನಾದಿ ಕಾಲದಿಂದಲೂ ಇಂಥ ಅಫೇರ್ ನಡೆಸುತ್ತಲೇ ಬಂದಿದ್ದಾರೆ ಅದರಲ್ಲಿ ಎಂದಿದ್ದರೂ ಹೊರಗಿನವರು ಹೊರಗೇ ಉಳಿದು, ಹತ್ತಿರದ ಮನೆಯವರು ಮಾತ್ರವೇ ಶಾಶ್ವತವಾಗಿ ನಿಮ್ಮವರಾಗಿ ಉಳಿಯುತ್ತಾರೆ!
ವೈವಾಹಿಕ ಬಾಂಧವ್ಯ ಮುಖ್ಯ
“ಪತಿ ಪತ್ನಿ ಪರಸ್ಪರರಿಗಾಗಿ ಸಾಧ್ಯವಾದಷ್ಟೂ ಹೆಚ್ಚಿನ ಕ್ವಾಲಿಟಿ ಟೈಂ ಕೊಡಬೇಕು. ಪರಸ್ಪರರ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದರ ಚರ್ಚೆ ಅತ್ಯಗತ್ಯ. ನೀವು ಜೊತೆ ಜೊತೆಯಾಗಿ ಊಟ ಮಾಡಬಹುದು, ಸಿನಿಮಾ ನೋಡಬಹುದು, ಲಾಂಗ್ ಡ್ರೈವ್ ಗೆ ಹೋಗಲೂಬಹುದು….. ಆದರೂ ಅತ್ಯಧಿಕ ಸಮಯ ಪರಸ್ಪರರ ಜೊತೆಯಲ್ಲೇ ಕಳೆಯುವುದು ಮುಖ್ಯ. ದೇಹ ಇಲ್ಲಿದ್ದು ಮನಸ್ಸು ಇನ್ನೆಲ್ಲೋ ನೆಟ್ಟಿದ್ದರೆ ಲಾಭವೇನು? ಪರಸ್ಪರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಎಲ್ಲಕ್ಕಿಂತ ಅತಿ ಮುಖ್ಯ.
“ನಾನಂತೂ ಪರ್ಸನಲ್ ಲೈಫ್ ನಲ್ಲಿ ಸದಾ ಹೀಗೇ ಮಾಡುತ್ತೇನೆ. ನಾನು ಯಾವುದೇ ವಿಷಯವನ್ನು ಪತಿಯಿಂದ ಮುಚ್ಚಿಟ್ಟು ಮಾಡಬಯಸುವುದಿಲ್ಲ, ಅವರೂ ನನ್ನೊಂದಿಗೆ ಹಾಗೆಯೇ ಓಪನ್ ಮೈಂಡೆಡ್ ಆಗಿರುತ್ತಾರೆ. ನನ್ನ ಮನಸ್ಸಿನಲ್ಲಿ ಅನಿಸಿದ್ದನ್ನು ಬಡಬಡ ಒದರಿಬಿಡುತ್ತೇನೆ. ನನ್ನ ಪತಿ ಸಿದ್ದಾರ್ಥ್ ರಾಯ್ ಕಪೂರ್ ಸಹ ಹೀಗೇ ನಡೆದುಕೊಳ್ಳುತ್ತಾರೆ. ನನಗೆ ತಮ್ಮ 100% ಟೈಂ ನೀಡುತ್ತಾರೆ. ಇದರಿಂದ ದಾಂಪತ್ಯ ಸದಾ ಮಧುರವಾಗಿರುತ್ತದೆ, ಹೊಸ ಹೊಸತನ್ನು ಟ್ರೈ ಮಾಡಬಹುದಾಗಿದೆ.
“ಯಾರೇ ಆಗಲಿ, ಯಾವ ಸಂಬಂಧವನ್ನೇ ಆಗಲಿ ಶಾಶ್ವತವಾಗಿ ಇರಿಸಿಕೊಳ್ಳ ಬಯಸಿರೆ, ಅದನ್ನು ಸದಾ ಬಳಸಿಕೊಳ್ಳಲಿಕ್ಕಾಗಿ ಕೌನ್ಸೆಲರ್ ಸಹಾಯ ಪಡೆಯುವುದು ಬಹಳ ಮುಖ್ಯ. ಅವರು ಹೇಳಿದಂತೆ ಆ ಸಲಹೆಗಳನ್ನು ಅಳವಡಿಸಿಕೊಳ್ಳುವುದು ಮೇಲು. ಆದರೆ ನೀವು ಈ ದಾಂಪತ್ಯ ಬಂಧನದಿಂದ ಹೊರಬರಲು ಬಯಸಿದರೆ, ನಿಮ್ಮ ಸಮಯ ಹಾಳು ಮಾಡಿಕೊಳ್ಳದೆ, ಅನಗತ್ಯವಾಗಿ ಸಂಗಾತಿಯ ಜೀವನವನ್ನು ಎಳೆದಾಡದೆ, ಅದರಿಂದ ಹೊರಬರುವ ದೃಢ ನಿರ್ಧಾರ ಕೈಗೊಳ್ಳಿ. ಇದು ಒಬ್ಬರಿಗೂ ಒಳ್ಳೆಯದು. ಮುಂದೆ ಇಬ್ಬರಿಗೂ ಅವರವರಿಗೆ ಬೇಕಾದಂಥ ಪ್ರೀತಿಪ್ರೇಮ ಖಂಡಿತಾ ಸಿಕ್ಕೇ ಸಿಗುತ್ತದೆ. ಈ ರೀತಿ ನೀವು ಸುಖವಾಗಿರಲು ಮತ್ತೊಂದು ಅವಕಾಶ ಸಿಗುತ್ತದೆ.”
ಗೊಂದಲಗೊಂಡಿರುವ ಯುವಜನತೆ
ಇಂದಿನ ಯುವ ಪೀಳಿಗೆ ಯಾವುದೇ ಸಂಬಂಧವನ್ನೂ ಬೇರೆಯೇ ದೃಷ್ಟಿಕೋನದಿಂದ ಅಳೆಯುತ್ತದೆ, ಇದನ್ನೇ ವಿದ್ಯಾ ಕನ್ ಪ್ಯೂಸಿಂಗ್ ಎನ್ನುತ್ತಾಳೆ.
“ನಾನು ಈ ನಿಟ್ಟಿನಲ್ಲಿ ಖಂಡಿತಾ ಸಿಂಗಲ್ ಅಲ್ಲ. ಇಂದಿನ ಯುವಜನತೆ, ಆನ್ ಲೈನ್ ನಲ್ಲಿ ಏನೇ ಸಾಮಗ್ರಿ ಖರೀದಿಸಿದರೂ, ಸರಿಬರದಿದ್ದರೆ ಅದನ್ನು ವಾಪಸ್ಸು ಮಾಡಿಬಿಡುವಂತೆ, ಅಂತೆಯೇ ಅವರು ಸಂಬಂಧಗಳಿಗೂ ಅಷ್ಟೇ ಬೆಲೆ ಕೊಡುತ್ತಾರೆ. ಸಂಗಾತಿ ಸರಿಹೋಗಲಿಲ್ಲ ಎನಿಸಿದರೆ, ಅವರನ್ನು ಬಿಟ್ಟು ಹೊಸತನ್ನು ಟ್ರೈ ಮಾಡಬಯಸುತ್ತಾರೆ. ಈ ರೀತಿ ಅವರು ನಿಜಕ್ಕೂ ಕನ್ ಪ್ಯೂಸ್ಡ್ ಆಗಿದ್ದಾರೆ!
ಹೆಂಗಸರಿಗೆ ಹೆಚ್ಚಿನ ಸ್ವಾತಂತ್ರ್ಯ ಬೇಕು!
“ಇಲ್ಲಿ ಒಂದು ವಿಷಯವನ್ನೂ ನಾನು ನೇರವಾಗಿ ಹಂಚಿಕೊಳ್ಳ ಬಯಸುತ್ತೇನೆ. ಪ್ರತಿ ಪತ್ರಿಕೆಯ ಮುಖಪುಟದಲ್ಲೂ ಹೆಂಗಸರ ಸೆಕ್ಸಿ ಫೋಟೋ ಪ್ರಕಟಿಸುತ್ತಾರೆ, ಇದನ್ನು ಗಂಡಸರು ಬಾಯಿ ಬಿಟ್ಟುಕೊಂಡು ನೋಡುತ್ತಾರೆ. ಅದೇ ತರಹ ಗಂಡಸರ ಸೆಕ್ಸಿ ಫೋಟೋಗಳನ್ನು ಪ್ರಕಟಿಸಲು ಏಕೆ ಹಿಂಜರಿಯುತ್ತಾರೆ? ಇದಂತೂ ನನಗೆ ಕೆಂಡದಂಥ ಸಿಟ್ಟು ತರಿಸುತ್ತದೆ. ಗಂಡಸರು ನೋಡುವಂತೆಯೇ ಹೆಂಗಸರೂ ಹೀಗೆ ನೋಡಿ ಎಂಜಾಯ್ ಮಾಡಬಾರದೇಕೆ? ಹಿಂದೆ ರಣವೀರ್ ಸಿಂಗ್ ನ ಸೆಕ್ಸಿ ಫೋಟೋ ಹೀಗೆ ಮುಖಪುಟದಲ್ಲಿ ಪಬ್ಲಿಶ್ ಆಗಿದ್ದು ನನಗೆ ಬಹಳ ಇಷ್ಟ ಆಗಿತ್ತು. ಅದಕ್ಕೆ ಆ ಪತ್ರಿಕೆಗೆ ನಾನು ಕಮೆಂಟ್ಸ್ ಸಹ ಕಳಿಸಿಕೊಟ್ಟಿದ್ದೆ. ಕೇವಲ ಹೆಂಗಸರನ್ನು ಮಾತ್ರ ಪ್ರದರ್ಶನಕ್ಕಿಟ್ಟ ವಸ್ತು ಎಂಬಂತೆ ಫೋಟೋಗಳಲ್ಲಿ ತೋರಿಸದೆ, ಗಂಡಸರನ್ನೂ ದೇಹಸಿರಿ ತೋರುವಂಥ ಫೋಟೋ ಪ್ರಕಟಿಸಬೇಕು.”
ತನ್ನ ಮುಂದಿನ ಚಿತ್ರವಾದ `ಭೂಲ್ ಭುಲೈಯಾ-3’ನಲ್ಲಿ ಈಕೆ ಮಂಜುಳಿಕಾಳ ಪಾತ್ರ ಮುಂದುವರಿಸಿದ್ದಾಳೆ. ಪ್ರೇಕ್ಷಕರು ಸಹ ಅದನ್ನು ಇಷ್ಟಪಟ್ಟು ಮೆಚ್ಚುತ್ತಾರೆ ಎಂಬ ಅನಿಸಿಕೆ ವಿದ್ಯಾಳದು.
– ಪ್ರತಿನಿಧಿ





