ನಟಿ ವಿದ್ಯಾ ಬಾಲನ್ ಪ್ರೇಮಾನುಬಂಧದ ಗಾಢ ಸಂಬಂಧದ ಬಗ್ಗೆ ಏನು ಹೇಳುತ್ತಿದ್ದಾಳೆ ಎಂದು ತಿಳಿಯೋಣವೇ.....?
ಬಾಲಿವುಡ್ ನ ಬ್ಲಾಕ್ ಬಸ್ಟರ್ ಗಳಾದ `ಪರಿಣೀತಾ, ಲಗೆ ರಹೋ ಮುನ್ನಾಭಾಯಿ, ದಿ ಡರ್ಟಿ ಪಿಕ್ಚರ್, ಕಹಾನಿ, ಶಕುಂತಲಾ ದೇವಿ,' ಮುಂತಾದ ಚಿತ್ರಗಳಿಂದ ಹಿಂದಿ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ವಿದ್ಯಾ ಬಾಲನ್ ಬಲು ಹಸನ್ಮುಖಿ, ವಿನಮ್ರ, ಸ್ಪಷ್ಟಭಾಷಿಣಿ, ಖಂಡಿತವಾದಿ ಎನಿಸಿದ್ದಾಳೆ.
`ಲಗೇ ರಹೋ....' ಈಕೆಯ ಕೆರಿಯರ್ ನ ಟರ್ನಿಂಗ್ ಪಾಯಿಂಟ್. ಅದಾದ ಮೇಲೆ ಆಕೆ ಹಿಂದಿರುಗಿ ನೋಡಲೇ ಇಲ್ಲ. ತನ್ನ ಅತ್ಯುತ್ತಮ ನಟನೆಗಾಗಿ ಈಕೆ ಹಲವಾರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾಳೆ. 2014ರಲ್ಲಿ ಈಕೆಯನ್ನು ರಾಷ್ಟ್ರೀಯ ಖ್ಯಾತಿವೆತ್ತ ಪದ್ಮಶ್ರೀ ಪ್ರಶಸ್ತಿ ಸಹ ಅರಸಿ ಬಂತು. ಈಕೆ ಈಗಲೂ ಸಹ ನಿರ್ಮಾಪಕ ನಿರ್ದೇಶಕರ ಮೊದಲ ಆಯ್ಕೆ.
ತನ್ನ ಯಶಸ್ಸಿನಿಂದ ಗರ್ವ ತಲೆಗೇರಿಸಿಕೊಳ್ಳದ ವಿದ್ಯಾ, ಅದರಿಂದ ಸಂತೃಪ್ತಿ ಕಂಡುಕೊಂಡಿದ್ದಾಳೆ. ಒಂದು ಉತ್ತಮ ಕಥೆ ಇದ್ದಾಗ ಮಾತ್ರ ಆ ಚಿತ್ರ ಯಶಸ್ವಿಯಾಗಲು ಸಾಧ್ಯ ಎನ್ನುತ್ತಾಳೆ ವಿದ್ಯಾ. ಮಲೆಯಾಳಂ, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿರುವ ವಿದ್ಯಾ, ಎಲ್ಲಾ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡಬಲ್ಲಂಥ ಗಟ್ಟಿಗಿತ್ತಿ! ಆಕೆ ಎಲ್ಲಾ ಬಗೆಯ ಪಾತ್ರಗಳನ್ನೂ ಬಯಸುತ್ತಾಳೆ. ಆ್ಯಕ್ಷನ್, ಫೈಟಿಂಗ್ ಚಿತ್ರ ಬೇಡವಂತೆ. ಕಾಮಿಡಿ ಡ್ರಾಮಾ ಚಿತ್ರಗಳು ಆಕೆಯ ಮೊದಲ ಆಯ್ಕೆ.
ಅಮ್ಮನ ಮಾರ್ಗದರ್ಶನ
ವಿದ್ಯಾಳ ಯಶಸ್ವೀ ಜೀವನದಲ್ಲಿ ಅವಳ ತಾಯಿ ದೊಡ್ಡ ಪಾತ್ರ ವಹಿಸುತ್ತಾರೆ. ``ನಾನು ನನ್ನ ಬಗ್ಗೆ ಸರಿಯಾಗಿ ಯೋಚಿಸುವ ದಾರಿಯನ್ನು ಅಮ್ಮ ಕಲಿಸಿದರು. 2007-08ರಲ್ಲಿ ನನ್ನ ಡ್ರೆಸ್, ದೇಹ ತೂಕದ ಕುರಿತು ಎಲ್ಲರೂ ಟೀಕಿಸುತ್ತಿದ್ದಾಗ, ನಾನು ನಟಿಸುವುದನ್ನೇ ಬಿಟ್ಟುಬಿಡಬೇಕು ಅಂತ ನಿರ್ಧರಿಸಿದ್ದೆ. ಆಗ ಅಮ್ಮ ಮಾತ್ರವೇ ನನಗೆ ಸರಿ ದಾರಿ ತೋರಿಸಿದರು. ಹೆಚ್ಚು ಹೆಚ್ಚು ಶ್ರಮ ಪಡುವುದರಿಂದ ದೇಹ ತೂಕ ತಾನಾಗಿ ಕರಗುತ್ತದೆ ಎಂದು ಕಲಿಸಿದರು. ಯಾರೋ ಏನೋ ಹೇಳಿದರು ಅಂತ ನಾನೇಕೆ ಸಿನಿಮಾ ಬಿಟ್ಟುಬಿಡಬೇಕು ಎಂದು ಉತ್ಸಾಹ ತುಂಬಿದರು. ಆಕೆಯ ಮಾತು ಚಾಚೂ ಮೀರದೆ, ಅದನ್ನು ಪಾಲಿಸಿದ್ದರಿಂದ ಇಂದು ನಾನು ಈ ಸ್ಥಿತಿ ತಲುಪಿದ್ದೇನೆ.''
ವಿದ್ಯಾಳ `ದೋ ಔರ್ ದೋ ಪ್ಯಾರ್' ಚಿತ್ರ ಇತ್ತೀಚೆಗೆ ಬಿಡುಗಡೆ ಆಗಿದೆ. ಇದರಲ್ಲಿ ಈಕೆಯ ಪಾತ್ರವನ್ನೂ ವೀಕ್ಷಕರು ಬಹಳ ಮೆಚ್ಚಿಕೊಂಡಿದ್ದಾರೆ.
ಪಾತ್ರ ಪೋಷಣೆಯೇ ಪ್ರಮುಖ
ದಿ ಮೋಸ್ಟ್ ಬ್ಯೂಟಿಫುಲ್ ಗ್ಲಾಮರಸ್ ನಟಿ ಎಂಬ ಹೆಗ್ಗಳಿಕೆಯೊಂದಿಗೆ, ತಾನು ಮಾಡಿದ ಎಲ್ಲಾ ಚಿತ್ರಗಳಲ್ಲೂ ಈಕೆ ಬಲು ಸ್ಟ್ರಾಂಗ್ ಗಟ್ಟಿಗಿತ್ತಿ ಹುಡುಗಿಯ ಪಾತ್ರವನ್ನೇ ನಿಭಾಯಿಸಿದ್ದಾಳೆ. `ಶೇರನಿ' ಯಾ `ಕಹಾನಿ' ಚಿತ್ರಗಳೇ ಇರಲಿ, ಈಕೆಯ ಲುಕ್ಸ್ ಬಲು ಸರಳ. ಇದಕ್ಕೆ ಕಾರಣ?
``ನನಗೆ ಅಂಥ ದೊಡ್ಡ ವ್ಯತ್ಯಾಸ ಏನೂ ಕಾಣ್ತಿಲ್ಲವಲ್ಲ. ಯಾವಾಗ ಎಂಥ ಆಫರ್ ಬಂದರೂ ನಾನು ಈ ಘಟ್ಟದ ಕುರಿತು ಎಂದೂ ಯಾವ ಡಿಸ್ಕವರಿ ಮಾಡಲಿಕ್ಕೂ ಹೋಗಲಿಲ್ಲ, ನಿಜವಾದ ಕಲಾವಿದರಿಗೆ ಅದರ ಅಗತ್ಯವಿಲ್ಲ ಎಂದೇ ಭಾವಿಸುತ್ತೇನೆ. ನಾನು ಯಾವುದೇ ಪಾತ್ರ ನಿರ್ವಹಿಸಿದರೂ, ಆ ಪಾತ್ರಕ್ಕೆ ನಾನು ಎಷ್ಟು ನ್ಯಾಯ ಒದಗಿಸಬಲ್ಲೆ ಎಂದು ನನ್ನ ಬಗ್ಗೆ ನಾನೇ ಹಲವು ಸಲ ಪ್ರಶ್ನಿಸಿಕೊಳ್ಳುತ್ತೇನೆ. ಈ ಪಾತ್ರ ನಾನು ಹಿಂದೆ ಮಾಡಿದ್ದೇನೆಯೇ? ಇದನ್ನು ನಾನು ನಿರ್ವಹಿಸಲು ಸಾಧ್ಯವೇ ಎಂದು ಹಲವು ಸಲ ಯೋಚಿಸುತ್ತೇನೆ. `ಜಲ್ಸಾ' ಚಿತ್ರದಲ್ಲಿ ಹಾಗೇ ಆಯಿತು. ಪ್ರತಿ ಚಿತ್ರದಲ್ಲೂ ಹೊಸ ಹೊಸ ಆಯಾಮಗಳನ್ನು ಹುಡುಕುವ ಪ್ರಯತ್ನ ನಡೆಸುತ್ತೇನೆ. ನಿರ್ದೇಶಕರು ನನಗೆ ಸೂಕ್ತ ಅವಕಾಶ ನೀಡಲಿಲ್ಲ ಅಂತಲ್ಲ. ನಾನು ನನ್ನ ಬ್ಯೂಟಿಯನ್ನೇ ಬಂಡವಾಳವಾಗಿಟ್ಟು ನಟಿಸುವುದಿಲ್ಲ. ನೋಡೋಣ.... ಮುಂದೆ ಅಂಥ ಪಾತ್ರ ಬರಬಹುದೇನೋ.....?''





