ಶರತ್ ಚಂದ್ರ
ಇತ್ತೀಚಿನ ಕೆಲವು ವರ್ಷಗಳಲ್ಲಿ ಸೌತ್ ಸಿನಿಮಾಗಳ ಹೊಡೆತಕ್ಕೆ ಬಾಲಿವುಡ್ ಮಕಾಡೆ ಮಲಗಿತ್ತು. ಬಾಹುಬಲಿ,RRR,ಕೆ. ಜಿ. ಎಫ್,ಕಾಂತರದಂತಹ ದಕ್ಷಿಣದ ಡಬ್ಬಿಂಗ್ ಚಿತ್ರಗಳು ಬಾಲಿವುಡ್ ನ ಅಂಗಡಿಯನ್ನು ಪೆರ್ಮೆನೆಂಟ್ ಆಗಿ ಕ್ಲೋಸ್ ಮಾಡುತ್ತೇನೋ ಅಂತ ಭಾಸವಾಗುವ ಮಟ್ಟಿಗೆ ಜಯಭೇರಿ ಬಾರಿಸಿತ್ತು. ಹಿಂದಿ ಪ್ರೇಕ್ಷಕರು ಕೂಡ ಬಾಲಿವುಡ್ ನಾಯಕರಿಗೆ ನಿರ್ದೇಶಕರಿಗೆ ಸೌತ್ ಮಂದಿಯನ್ನು ನೋಡಿ ಕಲಿಯಿರಿ ಎಂದು ಪದೇ ಪದೇ ಸೋಶಿಯಲ್ ಮೀಡಿಯಾದ ಮೂಲಕ ಉಪದೇಶ ನೀಡುವ ಮಟ್ಟಿಗೆ ದಕ್ಷಿಣದ ಚಿತ್ರಗಳ ಹವಾ ಸಂಚಲನ ಸೃಷ್ಟಿ ಮಾಡಿತ್ತು.

ಆದರೆ 2025 ರಲ್ಲಿ ಬಾಲಿವುಡ್ ನಾವು ಸೋತಿದ್ದೇವೆ ಆದರೆ ಇನ್ನೂ ಸತ್ತಿಲ್ಲ ಅಂತ ಫೀನಿಕ್ಸ್ ನಂತೆ ಮತ್ತೆ ಮರಳಿ ಟ್ರ್ಯಾಕ್ ಗೆ ಬಂದಿದೆ.ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾದ 'ಛಾವ' ಚಿತ್ರ ಬಾಲಿವುಡ್ ನ ಯಶಸ್ಸಿಗೆ ಬುನಾದಿ ಹಾಕಿತ್ತು.ಛತ್ರಪತಿ ಶಿವಾಜಿಯವರ ಮಗ ಸಂಭಾಜಿ ಕುರಿತಾದ ದೇಶ ಭಕ್ತಿಯ ಕಥೆಯುಳ್ಳ ಈ ಚಿತ್ರದ ವಿಕ್ಕಿ ಕೌಶಲ್ ಅಭಿನಯ ಪ್ಲಸ್ ಪಾಯಿಂಟ್ ಆಗಿತ್ತು.130 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾದ ಈ ಚಿತ್ರ ಒಟ್ಟು 798 ಕೋಟಿ ಗಳಿಕೆ ಕಂಡಿದೆ. ಬಹುಷಃ ಇತ್ತೀಚೆಗೆ ಸುನಾಮಿ ರೀತಿ ಯ ಕಲೆಕ್ಷನ್ ಮಾಡುತ್ತಿರುವ ದುರಂದರ್ ಈ ಕಲೆಕ್ಷನ್ ಮುರಿಯುವ ಸಾಧ್ಯತೆ ಇದೆ.
ಇನ್ನೊಂದು ಅನಿರೀಕ್ಷಿತವಾಗಿ ಹಿಟ್ ಆಗಿರುವ ಸಿನಿಮಾ ಅಂದರೆ ಹೊಸ ನಾಯಕ ಮತ್ತು ನಾಯಕಿಯನ್ನು ಹಾಕಿಕೊಂಡು ಮೋಹಿತ್ ಸೂರಿ ನಿರ್ದೇಶನ ಮಾಡಿರುವ ಸಯ್ಯಾರ ಚಿತ್ರ.45 ಕೋಟಿ ಬಜೆಟ್ ನಲ್ಲಿ ತಯಾರಾದ ಈ ಚಿತ್ರ 579 ಕೋಟಿಗೂ ಮೀರಿ ಕಲೆಕ್ಷನ್ ಮಾಡಿ ಬಾಲಿವುಡ್ ನ 2ನೇ ಅತಿ ದೊಡ್ಡ ಕಲೆಕ್ಷನ್ ಮಾಡಿರುವ ಚಿತ್ರವಾಗಿದೆ.

ಇದೇ ತಿಂಗಳು ಬಿಡುಗಡೆಯಾದ ಉರಿ ಚಿತ್ರದ ನಿರ್ದೇಶಕ ಆದಿತ್ಯ ದರ್ ನಿರ್ದೇಶನದ 'ದುರಂದರ್' ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ನಾಗಾಲೋಟವನ್ನು ಗಮನಿಸಿದರೆ ಬಹುಶ ಈ ಚಿತ್ರ ಈ ವರ್ಷ ಅತೀ ಹೆಚ್ಚು ಗಳಿಗೆ ಕಂಡ ಕಾಂತಾರ ಚಾಪ್ಟರ್ 1 ಚಿತ್ರದ ಗಳಿಕೆಯನ್ನು ಮುರಿಯುವ ಸಾಧ್ಯತೆಗಳು ಕಂಡುಬರುತ್ತಿದೆ ಸುಮಾರು 280 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾದ ಈ ಚಿತ್ರ ಈಗಿನ ಟ್ರೆಂಡ್ ಗಮನಿಸಿದರೆ ಸಾವಿರ ಕ್ಲಬ್ ಗೆ ಸೇರುವುದಂತೂ ಖಚಿತ.

ಸತತ ಸೋಲಿನಿಂತ ಬಸವಳಿದಿದ್ದ ಅಮೀರ್ ಖಾನ್ ನಟಿಸಿದ್ದ' ಸಿತಾರೇ ಜಮೀನ್ ಪರ್' 122 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು 250 ಕೋಟಿ ಗಳಿಕೆ ಕಂಡಿದೆ ಉಳಿದಂತೆ ವಾರ್ 2, ಹೌಸ್ ಫುಲ್ 5,ತಮ್ಮ, ಜಾಲಿ ಎಲ್ ಎಲ್ ಬಿ 3, ತೆರೆ ಇಷ್ಕ್ ಮೇ, ಕೇಸರಿ ಚಾಪ್ಟರ್ 2 ಮುಂತಾದ ಚಿತ್ರಗಳು ಹಾಕಿದ ಬಂಡವಾಳಕ್ಕಿಂತ ಹೆಚ್ಚಿನ ಗಳಿಗೆಯನ್ನು ಕಂಡಿವೆ. ಒಟ್ಟಿನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್ ಮತ್ತೆ ಚೇತರಿಕೆ ಕಂಡಿದ್ದು ತನ್ನ ಹಳೆಯ ವೈಭವದ ದಿನಗಳನ್ನು ಕಾಣುತ್ತಿದೆ.





