ವಿಶಾಖಪಟ್ಟಣಂ-ದುವ್ವಾಡ ಮೂಲಕ ಎರ್ನಾಕುಲಂಗೆ ಹೋಗುತ್ತಿದ್ದ ಟಾಟಾನಗರ್-ಎರ್ನಾಕುಲಂ ಎಕ್ಸ್​ಪ್ರೆಸ್ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮಧ್ಯರಾತ್ರಿ ಸುಮಾರು 1.30ರ ಸುಮಾರಿಗೆ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ದುರ್ಘಟನೆಯಲ್ಲಿ ಒಬ್ಬ ವ್ಯಕ್ತಿ ಸಜೀವ ದಹನವಾಗಿದ್ದಾರೆ. ರೈಲಿನ ಪ್ಯಾಂಟ್ರಿ ಕಾರಿನ ಪಕ್ಕದಲ್ಲಿದ್ದ ಬಿ1 ಮತ್ತು ಎಂ2 ಎಸಿ ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಲೋಕೋ ಪೈಲಟ್‌ಗಳು ಎಲಮಂಚಿಲಿ ಬಳಿಯ ರೈಲ್ವೆ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗೆ ಕೂಡಲೇ ಮಾಹಿತಿ ನೀಡಲಾಯಿತು. ರಕ್ಷಣಾ ಸಿಬ್ಬಂದಿ ಅಲ್ಲಿಗೆ ತಲುಪುವ ಹೊತ್ತಿಗೆ ಎರಡು ಬೋಗಿಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದವು.

ಇಡೀ ನಿಲ್ದಾಣ ದಟ್ಟ ಹೊಗೆಯಿಂದ ಆವೃತವಾಗಿತ್ತು. ಅನಕಪಲ್ಲಿ, ಎಲಮಂಚಿಲಿ ಮತ್ತು ನಕ್ಕಪಲ್ಲಿಯಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದರು.

ಲೋಕೋ ಪೈಲೆಟ್‌ ಬ್ರೇಕ್‌ ಹಾಕಿದಾಗ ಬಿ1 ಎಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಿ1 ಬೋಗಿಯಲ್ಲಿದ್ದ ವಿಶಾಖಪಟ್ಟಣದ ಚಂದ್ರಶೇಖರ್ ಸುಂದರ್ (70) ಬೆಂಕಿಗೆ ಆಹುತಿಯಾಗಿದ್ದಾರೆ. ಇತರ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಾಗಿವೆ. ಪ್ರಯಾಣಿಕರ ವಸ್ತುಗಳು ಸುಟ್ಟುಹೋಗಿವೆ.

ದುರ್ಘಟನೆ ಹಿನ್ನೆಲೆಯಲ್ಲಿ ವಿಶಾಖಪಟ್ಟಣ-ವಿಜಯವಾಡ ಮಾರ್ಗದ ಎಲ್ಲಾ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿತ್ತು. ಬೆಳಗಿನ ಜಾವ 3.30 ರ ನಂತರ ಪ್ರಯಾಣಿಕರನ್ನು ಬೇರೆ ರೈಲಿನಲ್ಲಿ ಕರೆದೊಯ್ಯುವ ಪರ್ಯಾಯ ವ್ಯವಸ್ಥೆ ಮಾಡಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ